ಕರ್ನಾಟಕದ ಹೆಮ್ಮೆಯ ನಾಯಕ ಸಿದ್ದರಾಮಯ್ಯ

01a (2)ಅದಾಗ ತಾನೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ ತುಂಬಿತ್ತು. ಸಮಾಜದಲ್ಲಿ ಶೋಷಣೆಗೊಳಗಾದ ಹಾಗೂ ಹಿಂದುಳಿದ ಜನರ ಪರವಾಗಿ ಪರಿಣಾಮಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯನವರನ್ನು ಹಾಗೂ ಸರ್ಕಾರವನ್ನು ಪ್ರತಿಪಕ್ಷಗಳು ‘ಅಹಿಂದ ಪರ ಸರ್ಕಾರ’ ಎಂದು ಟೀಕೆಯಲ್ಲಿ ತೊಡಗಿದ್ದವು. ಮಾಧ್ಯಮಗಳು ಅದನ್ನೇ ಪ್ರಮುಖವಾಗಿಟ್ಟುಕೊಂಡು ಸಿದ್ದರಾಮಯ್ಯನವರತ್ತ ಕುಹಕದ ಪ್ರಶ್ನೆ ಎಸೆದವು.

   “ಹೌದು ನಾನು ಅಹಿಂದ ಪರ. ನನ್ನ ಸರ್ಕಾರವನ್ನು ಹಾಗೆ ಕರೆದರೆ ನನಗೇನೂ ಮುಜುಗರವಾಗಲ್ಲ. ನಾಚಿಕೆ ಪಟ್ಟುಕೊಳ್ಳುವುದೂ ಇಲ್ಲ. ಅಹಿಂದ ವರ್ಗಗಳಿಗೆ ಆದ್ಯತೆ ಕೊಟ್ಟರೂ ಇತರ ವರ್ಗಗಳನ್ನು ನಾನೆಂದೂ ಕಡೆಗಣಿಸಿಲ್ಲ.” ಎಂದು ದಿಟ್ಟವಾಗಿ-ಸ್ಪಷ್ಟವಾಗಿ ಉತ್ತರ ಕೊಟ್ಟವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು.

   ಹೌದು, ಸಿದ್ದರಾಮಯ್ಯನವರು ಇಷ್ಟವಾಗುವುದು ತಮ್ಮ ನೇರ ನಡೆ-ನುಡಿಗಳಿಂದಾಗಿ. ಯಾರದೋ ಓಲೈಕೆಗೊ ಅಥವಾ ಇನ್ಯಾರಿಗೋ ಖುಷಿಯಾಗಲೆಂದೊ ರಾಜಕಾರಣವನ್ನು ಬಳಸಿಕೊಂಡವರಲ್ಲ ಅವರು. ಕೌಟುಂಬಿಕ ಹಿನ್ನೆಲೆಯ ರಾಜಕಾರಣದ ನೆರಳಿನಿಂದ ಉದಯಿಸಿದವರಲ್ಲ ಸಿದ್ದರಾಮಯ್ಯ. ವೈಚಾರಿಕ ಬದ್ಧತೆಯ ಜನನಾಯಕ ಅವರು.

   ಸಿದ್ದರಾಮಯ್ಯನವರು ಕನ್ನಡ ನಾಡಿಗೆ ದಕ್ಕಿದ ಅಪ್ಪಟ ಕನ್ನಡದ ಮುಖ್ಯಮಂತ್ರಿ ಎಂದರೆ ಅತಿಶಯೋಕ್ತಿಯಾಗಲಾರದು. ಯಾಕೆಂದರೆ ಉಳಿದೆಲ್ಲವರಿಗಿಂತ ಕನ್ನಡದ ಬಗ್ಗೆ ವಿಶೇಷ ಕಾಳಜಿ ಉಳ್ಳವರು ಅವರು. ತುಸು ಭಿನ್ನಶೈಲಿಯಲ್ಲಿದ್ದ ರಾಜ್ಯದ 12 ಜಿಲ್ಲೆಗಳ ಹೆಸರನ್ನು ಕನ್ನಡದ ಪ್ರಾದೇಶಿಕತೆಗೆ ಒಪ್ಪುವಂತೆ ಬದಲಾಯಿಸಿದ್ದೇ ಅದಕ್ಕೆ ಸಾಕ್ಷಿ. ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣವಾಗಬೇಕು, ಆಡಳಿತ ಯಂತ್ರವೂ ಕನ್ನಡದಲ್ಲಿರಬೇಕು ಎಂಬುದು ಸಿದ್ದರಾಮಯ್ಯನವರ ನಿಲುವು.

   ಮುಖ್ಯಮಂತ್ರಿಯಾಗಿ ಯಶಸ್ಸಿನತ್ತ ಮುನ್ನಡೆಯುತ್ತಿರುವ ಅವರು, ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕದಡಲು ಸಮಾಜವಿರೋಧಿ ಶಕ್ತಿಗಳು ಒಟ್ಟಾಗಿ ನಿಂತಾಗಲೆಲ್ಲ ದಿಟ್ಟತನದ ಮೂಲಕ ಉತ್ತರ ನೀಡಿದ್ದಾರೆ. ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಹಾಗೂ ಅಕ್ರಮ ಲಾಟರಿ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ ನ್ಯಾಯಪರತೆಯನ್ನು ಮೆರೆದಿದ್ದಾರೆ. ಹಸಿದವರ, ನೊಂದವರ ನೋವುನುರಿಗಳನ್ನು ಬಲ್ಲ ಸಿದ್ದರಾಮಯ್ಯನವರು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವ ಪಣ ತೊಟ್ಟರು. ಅದರ ಫಲವಾಗಿ ಘೋಷಣೆಯಾದದ್ದೇ ‘ಅನ್ನಭಾಗ್ಯ’. ಹಸಿದವನ ಸಂಕಟ ಅನುಭವಿಸಿದವನಿಗೇ ಗೊತ್ತು ಎನ್ನುವ ಮಾತು ‘ಅನ್ನಭಾಗ್ಯ’ದ ಟೀಕಾಕಾರರಿಗೆ ಉತ್ತರವಾಗಬಲ್ಲದು.

   ನಂತರದ ದಿನಗಳಲ್ಲಿ ಅವರು ನಾಡಿನ ಜನತೆಗೆ ಕೊಡಮಾಡಿದ ಯೋಜನೆಗಳು ಸಿದ್ದರಾಮಯ್ಯನವರ ದೂರದೃಷ್ಟಿಯನ್ನು ತೋರಿಸುತ್ತದೆ. ಇನ್ನು ಅವರು ಮಂಡಿಸಿದ ಬಜೆಟ್‍ಗಳು ರಾಜ್ಯದ ಆರ್ಥಿಕತೆಯನ್ನು ಬಲಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ದೇಶದ ಆರ್ಥಿಕ ಪರಿಸ್ಥಿತಿಗಿಂತಲೂ, ಕರ್ನಾಟಕದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ ಎಂದರೆ ಸಿದ್ದರಾಮಯ್ಯನವರ ಹಣಕಾಸು ನಿರ್ವಹಣೆಯ ಬಿಗಿ ಅರ್ಥವಾಗುತ್ತದೆ.

   ಮೂಢನಂಬಿಕೆ-ಕಂದಾಚಾರಗಳಿಗೆ ಸೊಪ್ಪು ಹಾಕದ ಸಿದ್ದರಾಮಯ್ಯನವರು ರಾಹುಕಾಲದಲ್ಲಿ ಬಜೆಟ್ ಮಂಡಿಸಿ ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ. ಚಾಮರಾಜನಗರಕ್ಕೆ ಭೇಟಿ ನೀಡುವ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆಯನ್ನು ಬದಿಗೊತ್ತಿ, ಅದನ್ನು ಹುಸಿಗೊಳಿಸಿದ ದಿಟ್ಟ ನಾಯಕ ಅವರು. ತಳಸಮುದಾಯದ ದನಿಯಾಗಿ, ಸರ್ವಜನಾಂಗದ ಏಳಿಗೆಗೆ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರು ಕರ್ನಾಟಕ ಕಂಡ ಕೆಲವೇ ಕೆಲವು ಜನಪರ ಆಡಳಿತಗಾರರಲ್ಲಿ ಒಬ್ಬರು. ಮಾತಿನಲ್ಲೇ ಆಕಾಶ ತೋರಿಸುವವರ ನಡುವೆ ‘ಮಾತಿಗಿಂತ ಕೃತಿ ಮೇಲು’ ಎನ್ನುವುದನ್ನು ತೋರಿಸಿಕೊಡುತ್ತಿರುವ ಅವರು, ಕರ್ನಾಟಕದ ಹೆಮ್ಮೆಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.