ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಡುತ್ತಿರುವವರು ಅವರಲ್ಲ, ನೀವು!

ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪ್ರಶ್ನೆಪತ್ರಿಕೆಗೆ ಉತ್ತರಿಸಬೇಕಾದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ದ್ವಿತೀಯ ಪಿಯು ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಯ ಸೋರಿಕೆ ಹಿನ್ನೆಲೆಯಲ್ಲಿ ಈ ಮೊದಲೇ ಮುನಿಸಿಕೊಂಡಿದ್ದ ವಿದ್ಯಾರ್ಥಿಗಳು, ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯೂ ಸೋರಿಕೆಯಾಗಿದೆ ಎಂಬ ವಿಷಯದಿಂದಾಗಿ ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಪದೇ ಪದೇ ಹೀಗಾಗುತ್ತಿದ್ದರೆ ನಮ್ಮ ಭವಿಷ್ಯದ ಗತಿಯೇನು ಎಂದು ಪ್ರಶ್ನಿಸುತ್ತಿದ್ದಾರೆ. ಇದೆಲ್ಲವೂ ನಿಜ, ಆದರೆ ವಿದ್ಯಾರ್ಥಿಗಳ ಆಕ್ರೋಶದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹರಸಾಹಸ ಪಡುತ್ತಿರುವವರು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿರುವುದು ವಿಪರ್ಯಾಸ.

   ಪಿಯು ಪರೀಕ್ಷೆಯ ಪ್ರಶ್ನೆಪತ್ರಿಕೆ ಬಹಿರಂಗವಾಗುತ್ತಿರುವುದು ಇದು ಮೊದಲನೆ ಬಾರಿಯೇನೂ ಅಲ್ಲ. ಪ್ರತಿವರ್ಷವೂ ಈ ಗೋಳು ಇದ್ದದ್ದೆ. ಆದರೆ ಈ ಬಾರಿ ಮರುಪರೀಕ್ಷೆಯ ಸಮಯದಲ್ಲೂ ಮತ್ತೆ ಸೋರಿಕೆಯಾಗಿರುವುದು ದೊಡ್ಡ ಸುದ್ದಿಯಾಗಿದೆ. ಮತ್ತು ಇದನ್ನು ಯಾವ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆಯೆಂದರೆ, ‘ಸ್ವತಃ ಸರ್ಕಾರವೇ ನಿಂತು ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದೆ’ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮೂಡುವಂತೆ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವಂತೆ ಮಾಡಿದರೆ ಸರ್ಕಾರಕ್ಕೆ ಆಗುವ ಲಾಭವೇನು? ಎನ್ನುವಂತಹ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸುತ್ತಿರುವ ವಿರೋಧಪಕ್ಷದವರನ್ನು ನೋಡಿದರೆ ವಿಚಿತ್ರ ಎನಿಸುತ್ತಿದೆ.

   ಮೊಟ್ಟಮೊದಲನೆಯದಾಗಿ ತಿಳಿದಿರಬೇಕಾದ ಅಂಶವೆಂದರೆ, ಸಚಿವರು ಸ್ವತಃ ಪ್ರಶ್ನೆಪತ್ರಿಕೆಗಳನ್ನು ಕಾಯುವ ಕೆಲಸ ಮಾಡುವುದಿಲ್ಲ. ಅದಕ್ಕೆ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ನೇಮಿಸಿರಲಾಗುತ್ತದೆ. ಪ್ರಶ್ನೆ ಪತ್ರಿಕೆ ತಯಾರಾಗುವ ಸಂದರ್ಭದಿಂದ ಹಿಡಿದು, ಅದು ಮುದ್ರಣಗೊಳ್ಳುವವರೆಗಿನ ಪ್ರಕ್ರಿಯೆಯಲ್ಲಿ ಹಲವಾರು ಜನ ಭಾಗಿಯಾಗಿರುತ್ತಾರೆ. ಅದರಲ್ಲಿ ಯಾರೋ ಮಾಡುವ ಕಿತಾಪತಿಗೆ ಸರ್ಕಾರ ಉತ್ತರ ಕೊಡಬೇಕಾಗುತ್ತದೆ. ಇದೀಗ ನಡೆದಿರುವ ಅನಾಹುತಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. 40 ಅಧಿಕಾರಿಗಳನ್ನು ಈ ಸಂಬಂಧ ಅಮಾನತು ಮಾಡಲಾಗಿದೆ. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

   ಇಷ್ಟೆಲ್ಲ ಕ್ರಮ ಕೈಗೊಂಡು, ಮುಂದಿನ ದಿನಗಳಲ್ಲಿ ಸೂಕ್ತ ನಡೆಗಳನ್ನು ಇಡುವ ಭರವಸೆ ಇತ್ತ ಮೇಲೂ ತೀವ್ರ ಸ್ವರೂಪದ ಪ್ರತಿಭಟನೆಗಳು ನಡೆಯುತ್ತಿವೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನೆಯಲ್ಲೂ ಎರಡು ಗುಂಪುಗಳು ಗೋಚರಿಸುತ್ತಿವೆ. ಒಂದು ಗುಂಪು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಧರಣಿ ನಡೆಸುತ್ತಿದ್ದರೆ, ಇನ್ನೊಂದು ಗುಂಪು ಪಕ್ಕಾ ರಾಜಕೀಯ ಲೆಕ್ಕಾಚಾರದ ಪ್ರತಿಭಟನೆ ನಡೆಸುತ್ತಿದೆ. ಎಬಿವಿಪಿ, ಜೆಡಿಎಸ್ ವಿದ್ಯಾರ್ಥಿ ಘಟಕ ಸೇರಿದಂತೆ ಹಲವಾರು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿವೆ. ವಿದ್ಯಾರ್ಥಿಗಳನ್ನು ಉಪಯೋಗಿಸಿಕೊಂಡು ರಾಜಕೀಯ ಮಾಡುತ್ತಿರುವ ಪ್ರತಿಪಕ್ಷಗಳು, ‘ಅಧಿಕಾರದ ಆಸೆಗಾಗಿ ತಾವು ಎಂತಹ ಕೆಲಸವನ್ನಾದರೂ ಮಾಡಲು ಸೈ’ ಎಂಬುದನ್ನು ಪರೋಕ್ಷವಾಗಿ ಸಾರಿ ಹೇಳುತ್ತಿವೆ.

   ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಪ್ರವೇಶಪರೀಕ್ಷೆಗಳಿವೆ. ಅವುಗಳಿಗೆ ತಯಾರಿ ನಡೆಸಬೇಕಾದ ಒತ್ತಡ ವಿದ್ಯಾರ್ಥಿಗಳ ಮೇಲಿದೆ. ಆದರೆ ಇದೇ ಸಮಯದಲ್ಲಿ ಪ್ರತಿಭಟನೆಗೆ ಪ್ರಚೋದಿಸುತ್ತ, ಪ್ರತಿಭಟನೆ ನಡೆಸುತ್ತ ವಿದ್ಯಾರ್ಥಿಗಳ ಜೀವನದ ಜೊತೆ ಆಟವಾಡುತ್ತಿರುವ ವಿರೋಧಪಕ್ಷಗಳಿಗೆ ಏನನ್ನೋಣ? ಮೊದಲ ಬಾರಿ ಪ್ರಶ್ನೆ ಪತ್ರಿಕೆ ಬಹಿರಂಗವಾದಾಗ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಎರಡನೇ ಬಾರಿ ಸೋರಿಕೆಯಾಗಿದ್ದು ಹೇಗೆ? ಆಡಳಿತಾರೂಢ ಕಾಂಗ್ರೆಸ್ ಅನ್ನು ಹಣಿಯಲೆಂದೇ ವಿರೋಧಪಕ್ಷದವರು ಸೋರಿಕೆಯಾಗುವ ಹಾಗೆ ದುಷ್ಕøತ್ಯ ಎಸಗಿರುವ ಸಾಧ್ಯತೆಯಿಲ್ಲವೆ? ಇದನ್ನೇ ನೆಪವಾಗಿಟ್ಟುಕೊಂಡು, ವಿದ್ಯಾರ್ಥಿಗಳನ್ನು ಬಳಸಿಕೊಂಡು ತಮ್ಮ ರಾಜಕೀಯ ಚದುರಂಗದಾಟ ಆಡುತ್ತಿವೆಯೇ? ಈ ಎಲ್ಲ ಪ್ರಶ್ನೆಗಳು ಪ್ರತಿಪಕ್ಷದ ನಡೆಯನ್ನು ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡುತ್ತಿವೆ.

   ಈಗಾಗಲೇ ಸರ್ಕಾರ ತಪ್ಪಿತಸ್ಥರ ವಿರುದ್ಧದ ತನಿಖೆಗೆ ಆದೇಶಿಸಿದೆ. ಅದಕ್ಕೆ ಪೂರಕವಾದ ಕ್ರಮಗಳನ್ನೂ ಕೈಗೊಂಡಿದೆ. ಪ್ರತಿಭಟನೆಯನ್ನು ಇನ್ನೂ ಮುಂದುವರೆಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾಕೆ ಆಟವಾಡುತ್ತಿದ್ದೀರಿ? ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ನಿಮ್ಮ ದಾಹಕ್ಕೆ ದಯವಿಟ್ಟು ವಿದ್ಯಾರ್ಥಿಗಳನ್ನು ಬಳಸಿಕೊಳ್ಳದಿರಿ. ಸದನದಲ್ಲೂ ಗದ್ದಲವೆಬ್ಬಿಸಿ ಸಮಯ ತಿನ್ನುತ್ತಿದ್ದೀರಿ, ಆದರೆ ವಿದ್ಯಾರ್ಥಿಗಳ ಸಮಯ ಹಾಳುಮಾಡಿ ಅವರ ಭವಿಷ್ಯಕ್ಕೆ ಕೊಳ್ಳಿಯಿಡದಿರಿ.