ಬಡ ರೋಗಿಗಳ ಪಾಲಿಗೆ ವರದಾನವಾದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ

Hospital-Blog
ಸದಾ ಜನಪರ ಹಾಗೂ ಜನಹಿತ ಕಾಪಾಡುವ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ, ಈ ಬಾರಿ ರಾಜ್ಯದ ಸಕಲ ನಾಗರಿಕರೂ ಹೆಮ್ಮೆ ಪಡುವಂತಹ ಒಂದು ಮಹತ್ತರ ಬದಲಾವಣೆಗೆ ಮುಂದಾಗಿದೆ. ಒಂದು ವೇಳೆ ಅಂದುಕೊಂಡಂತೆ ವಿಧೇಯಕ ಜಾರಿಯಾದಲ್ಲಿ ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಇನ್ನು ಮುಂದೆ ಎಲ್ಲ ವರ್ಗಗಳ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಶುಲ್ಕವನ್ನು ಪಡೆಯುವಾಗ ರಾಜ್ಯ ಸರ್ಕಾರ ನಿಗದಿ ಮಾಡಿದಷ್ಟೇ ಪಡೆಯಬೇಕಾಗುತ್ತದೆ. ಇದು ಬಡ ರೋಗಿಗಳ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ ಎಂದರೆ ತಪ್ಪಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ರೋಗಿಗಳ ಸುಲಿಗೆಗೆ ಇಳಿದಿದ್ದವು, ಈ ಬಗ್ಗೆ ಹಲವಾರು ಬಾರಿ ಜನರು ಹಾಗೂ ಸರ್ಕಾರದಿಂದ ವಿರೋಧ ಕೂಡ ವ್ಯಕ್ತವಾಗಿತ್ತು, ಆದರೆ ಅವುಗಳು ಇಂತಹ ವಿರೋಧಗಳಿಗೆ ಮತ್ತು ಸರ್ಕಾರದ ಎಚ್ಚರಿಕೆಗಳಿಗೆ ಬಗ್ಗದೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದವು. ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹೊಸದಾಗಿ ‘ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ’ವನ್ನು ಜಾರಿಗೆ ತರಲು ನಿರ್ಧರಿಸಿದೆ.
ಈ ಯೋಜನೆಯ ಪ್ರಮುಖ ಆಶಯಗಳೆಂದರೆ: ಎಲ್ಲಾ ಬಗೆಯ ವೈದ್ಯಕೀಯ ಚಿಕಿತ್ಸೆಗಳಿಗೆ ಇನ್ನು ಮುಂದೆ ಸರ್ಕಾರ ನಿಗದಿ ಮಾಡಿರುವ ದರವನ್ನೇ ಆಸ್ಪತ್ರೆಗಳು ವಸೂಲಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ದರ ಕುರಿತಂತೆ ಆಸ್ಪತ್ರೆಯ ಪ್ರಮುಖ ಸ್ಥಳಗಳಲ್ಲಿ ಅಥವಾ ಸ್ವಾಗತ ಕೋಣೆಯಲ್ಲಿ ಸೂಚನಾಫಲಕ ಅಳವಡಿಸಬೇಕು. ತಪಾಸಣೆ, ಹಾಸಿಗೆ ವೆಚ್ಚ, ಶಸ್ತ್ರ ಚಿಕಿತ್ಸೆ, ಕೊಠಡಿ ವೆಚ್ಚ, ತೀವ್ರ ನಿಗಾಘಟಕದ ವೆಚ್ಚ, ರೋಗಿಗೆ ವೆಂಟಿಲೇಟರ್ ಮತ್ತು ಯಾವುದೇ ಹೆಚ್ಚುವರಿ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರವನ್ನೆ ಪಡೆಯಬೇಕು. ವಿವಿಧ ತಪಾಸಣೆಗಳ ಪ್ಯಾಕೇಜ್ ದರಗಳಿಗೂ ಇದು ಅನ್ವಯಿಸುತ್ತದೆ. ಇನ್ನು ಅಪಘಾತ, ಹೃದಯಾಘಾತ ಇಂತಹ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಯು ರೋಗಿ ಅಥವಾ ರೋಗಿಯ ಸಂಬಂಧಿಕರಿಂದ ಮುಂಗಡ ಹಣ ಕಟ್ಟುವಂತೆ ಒತ್ತಾಯಿಸುವಂತಿಲ್ಲ. ಅಲ್ಲದೆ ಮುಂಗಡ ಹಣಕ್ಕಾಗಿ ಚಿಕಿತ್ಸೆ ನಿರಾಕರಿಸುವಂತಿಲ್ಲ. ಒಂದು ವೇಳೆ ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟಲ್ಲಿ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸದೆ ಮೃತ ದೇಹವನ್ನು ಹಸ್ತಾಂತರ ಮಾಡಬೇಕು ಮತ್ತು ಕಾಲಕ್ರಮದಲ್ಲಿ ಅದನ್ನು ಮೃತನ ಸಂಬಂಧಿಕರಿಂದ ವಸೂಲಿ ಮಾಡಿಕೊಳ್ಳಬೇಕು.

ರಾಜ್ಯದ ಪ್ರತಿಯೊಂದು ಖಾಸಗಿ ಆಸ್ಪತ್ರೆಯ ಗುಣಮಟ್ಟ, ಸಿಬ್ಬಂದಿ, ಸಾಮಥ್ರ್ಯಗಳ ಆಧಾರದ ಮೇಲೆ ಆಯಾ ಆಸ್ಪತ್ರೆಗಳ ದರವನ್ನು ನಿಗದಿಪಡಿಸಲು ಈ ಕಾಯ್ದೆಯಡಿ ತಜ್ಞರ ಸಮಿತಿ ರಚಿಸಲಾಗುತ್ತದೆ. ಆಯಾ ಆಸ್ಪತ್ರೆಗಳ ದರ ನಿಗದಿಮಾಡುವುದು ಆಸ್ಪತ್ರೆಯ ಮೂಲ ಸೌಕರ್ಯ, ಸಿಬ್ಬಂದಿ, ಆಡಿಟ್ ಮುಂತಾದವುಗಳನ್ನು ಪರಿಶೀಲಿಸಿ ದರ ನಿಗದಿಗೆ ಪರಿಗಣಿಸುವುದು ಸಮಿತಿಯ ಕೆಲಸವಾಗಿದೆ. ಹೀಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ರೋಗಿಯಿಂದ ಪಡೆದಿದ್ದೆ ಆದಲ್ಲಿ ಅಥವಾ ಕೆಲವು ನಿರ್ಧಿಷ್ಟ ನಿಯಮಗಳÀನ್ನು ಆಸ್ಪತ್ರೆಗಳು ಮೀರಿದ್ದೆ ಆದಲ್ಲಿ ಸಂಬಂಧಪಟ್ಟವರು ರೂ.25 ಸಾವಿರದಿಂದ ರೂ.5 ಲಕ್ಷದವರೆಗೆ ದಂಡ ತೆರುವುದು ಮತ್ತು ಆರು ತಿಂಗಳಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇಂತಹ ಹಲವು ಸುಧಾರಣೆಗಳನ್ನು ಒಳಗೊಂಡಿರುವುದರಿಂದ ದೇಶದ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ನಿತ್ಯ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಅಥವಾ ಹಣ ನೀಡಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ದೊರೆಯದೆ ಕಂಗಾಲಾಗಿ ಮನೆಯ ದಾರಿ ಹಿಡಿಯಬೇಕಾಗಿದ್ದ ರೋಗಿಗಳಿಗೆ ಇದು ಹೊಸ ಭರವಸೆಯನ್ನು ಹುಟ್ಟಿಸಿದೆ. ಇಂತಹದೊಂದು ಮಹತ್ತರ ಬದಲಾವಣೆಗೆ ಅಣಿಯಾಗಿರುವ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸೋಣ.

ಮರುಜೀವ ಪಡೆದ ನ್ಯಾಷನಲ್ ಹೆರಾಲ್ಡ್

National-herald-3

ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಗೊಂಡು, ದೇಶದ ಜನತೆಯನ್ನು ಸ್ವಾತಂತ್ರ್ಯದೆಡೆಗೆ ಹುರಿದುಂಬಿಸುವ ಮೂಲಕ, ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ದ್ಯೋತಕವಾಗಿದ್ದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಇಂದು ಮತ್ತೊಮ್ಮೆ ತನ್ನ ಹಳೆಯ ವೈಭವಕ್ಕೆ ಮರುಳುತ್ತಿದೆ. ಇದು ಸಹಜವಾಗಿಯೇ ಬಲಪಂಥೀಯ ವಲಯದಲ್ಲಿ ನಡುಕವುಂಟುಮಾಡಿದೆ. ಈಗಾಗಲೇ ಪತ್ರಿಕೆ ವಿರುದ್ಧ ಭಕ್ತಗಣ ಅಪಪ್ರಚಾರಕ್ಕೆ ನಿಂತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಅವರು ಕುಣಿಸಿದಂತೆ ಕುಣಿಯುತ್ತಾ, ‘ಶೂನ್ಯ’ವನ್ನೇ ಸಾಧೆನೆಯೆಂಬಂತೆ ಬಿಂಬಿಸುತ್ತಿರುವ ಉಳಿದ ಮಾಧ್ಯಮಗಳ ನಿಜ ಬಣ್ಣ ಬಯಲಾಗಬಹುದು ಎಂಬ ಭಯ. ಒಂದು ವೇಳೆ ಯಾವುದಾದರೊಂದು ಮಾಧ್ಯಮ ಸರ್ಕಾರದ ವೈಫಲ್ಯಗಳನ್ನು ತೋರಿಸಿತು ಎಂದಾದರೆ, ಅದರ ಮೇಲೆ ಸರ್ಕಾರಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ದಾಳಿ ಮಾಡಿಸುವುದು ಕಟ್ಟಿಟ್ಟ ಬುತ್ತಿ, ಮೊನ್ನೆ ಮೊನ್ನೆ ಎನ್‍ಡಿ ಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲಿನ ಸಿಬಿಐ ದಾಳಿ ಇದಕ್ಕೆ ಸ್ಪಷ್ಟ ಉದಾಹರಣೆ.

ದೇಶದಲ್ಲಿ ಮೋದಿ ಆಡಳಿತಕ್ಕೆ ಬಂದ ನಂತರದಲ್ಲಿ ಮಾಧ್ಯಮಗಳು ಬಲಪಂಥೀಯ ವಿಚಾರಧಾರೆಯನ್ನು ವೈಭವೀಕರಿಸುತ್ತಾ, ಅದನ್ನೇ ಬಲವಂತವಾಗಿ ಜನತೆಯಲ್ಲಿ ತುಂಬುವ ಕಾರ್ಯದಲ್ಲಿ ನಿರತವಾಗಿವೆ. ಇನ್ನು ಬಿಜೆಪಿ ಹಿಂದುತ್ವವನ್ನೇ ತಮ್ಮ ಬಂಡವಾಳ ಮಾಡಿಕೊಂಡು, ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕಾರ್ಯದಲ್ಲಿ ಮುಳುಗಿದೆ. ಇಂತಹ ಒಂದು ವ್ಯವಸ್ಥೆಯನ್ನು ವಿರೋಧಿಸಲು ಸಮರ್ಥ ಮತ್ತು ಪ್ರಭಾವಶಾಲಿ ವೇದಿಕೆಯೊಂದರ ಕೊರತೆ ದೇಶವನ್ನು ಕೆಲವು ವರ್ಷಗಳಿಂದ ಕಾಡುತ್ತಿತ್ತು, ಅದನ್ನೇ ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ದುರುಪಯೋಗ ಪಡಿಸಿಕೊಂಡು, ದೇಶವನ್ನು ಭ್ರಮಾ ಲೋಕದಲ್ಲಿ ಮುಳುಗಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಫಲವಾದವು. ಬಹಳಷ್ಟು ಮಾಧ್ಯಮಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಸಮಾಜದ ಮೇಲು ವರ್ಗದ ಜನರು, ಅವರು ಕೂಡ ಅಧಿಕಾರದ ವಿಕೇಂದ್ರೀಕರಣವನ್ನಾಗಲೀ, ಪ್ರಜಾಪ್ರಭುತ್ವದ ಆಶಯಗಳನ್ನಾಗಲೀ ಒಪ್ಪುವ ಮನಃಸ್ಥಿತಿಯವರಲ್ಲ. ಮೋದಿಯವರಂತೂ ಸಂವಿಧಾನದ ನಿಯಮಗಳನ್ನೇ ಗಾಳಿಯಲ್ಲಿ ತೂರಿ ತಮಗೆ ಬೇಕಾದಂತೆ ನಿಯಮಗಳನ್ನು ರೂಪಿಸುತ್ತಾ, ಭಾವನಾತ್ಮಕ ವಿಚಾರಗಳನ್ನೆ ಹೆಚ್ಚು ಪ್ರಚಾರಕ್ಕೆ ತಂದು ತನ್ಮೂಲಕ ಜನತೆಯನ್ನು ಮತಗಳಾಗಿ ಪರಿವರ್ತಿಸುವ ನಿಪುಣರು. ಹಾಗಾಗಿ ಮೋದಿಗೆ ಬಹುಪರಾಕ್ ಹೇಳುತ್ತಲೇ, ಮಿಥ್ಯವನ್ನೇ ನೂರು ಬಾರಿ ಪ್ರಚಾರ ಮಾಡಿ, ಕೊನೆಗೊಮ್ಮೆ ಸತ್ಯವೇ ಜನರ ಕಣ್ಣ ಮುಂದೆ ಬಂದರೂ ಜನರು ಅದನ್ನು ಸ್ವೀಕರಿಸದಂತೆ ಮಾಡಿವೆ.

ಇಂತಹದ್ದೊಂದು ಭ್ರಮೆಯ ಪರದೆ ಕಳಚಿ, ಸತ್ಯದ ಬೆಳಕು ಹರಿಯಬೇಕಾದರೆ ಸ್ವತಂತ್ರ ಮತ್ತು ಸದೃಢ ಮಾಧ್ಯಮವೊಂದರ ಅಗತ್ಯವಿತ್ತು. ಆ ಕೊರತೆಯನ್ನು ನ್ಯಾಷನಲ್ ಹೆರಾಲ್ಡ್ ನೀಗಿಸಲಿದೆ ಎಂಬುದು ಸದ್ಯದ ಅಭಿಪ್ರಾಯ.

ರೈತರ ಕಷ್ಟಕ್ಕೆ ಬಂದೂಕಿನ ಉತ್ತರ

Police-gun
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ರೈತರನ್ನೆ ಗುಂಡಿಟ್ಟು ಕೊಲ್ಲುತ್ತಿರುವ ಪ್ರಕರಣಗಳು, ದಲಿತ, ಅಲ್ಪಸಂಖ್ಯಾತ ಜನಾಂಗದ ಮೇಲಿನ ಹಲ್ಲೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮೊನ್ನೆ ಮಧ್ಯಪ್ರದೇಶದಲ್ಲಿ ವಿವಿಧ ಬೆಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಏಕಾಏಕಿ ಗೋಲಿಬಾರ್ ನಡೆಸಲಾಯಿತು. ಈ ಘಟನೆಯಲ್ಲಿ ಐವರು ರೈತರು ಸಾವನ್ನಪ್ಪಿದರು. ಹಲವಾರು ರೈತರು ಗಂಭೀರ ಗಾಯಗಳಿಂದ ಇನ್ನೂ ಆಸ್ಪತ್ರೆಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಅವರು ಬದುಕುಳಿದರೂ ದುಡಿದು ತಿನ್ನುವಷ್ಟು ದೇಹಸ್ಥಿತಿ ಸಮರ್ಪಕವಾಗಿರುವುದು ಕೂಡ ಅನುಮಾನವೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಲ್ಲಿನ ಗೃಹ ಸಚಿವರಾದ ಭೂಪೆಂದರ್ ಸಿಂಗ್‍ರವರ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಕೊನೆಗೆ ತಾವು ಮೊದಲು ನೀಡಿದ ಹೇಳಿಕೆಗೆ ಯೂಟರ್ನ್ ಹೊಡೆದಿರುವುದು. ಈ ಪ್ರಕರಣದಲ್ಲಿ ರೈತರ ಸಾವು ಪೊಲೀಸರ ಗೋಲಿಬಾರ್‍ನಿಂದ ಸಂಭವಿಸಿಲ್ಲ, ಅವು ಪೊಲೀಸರ ಬಂದೂಕಿನಿಂದ ಹಾರಿದ ಗುಂಡುಗಳಲ್ಲ ಎಂದು ಹೇಳಿಕೆ ನೀಡಿದ್ದ ಅವರು, ನಂತರದಲ್ಲಿ ಇದರ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್ ಕೈವಾಡವಿದೆ ಎಂದು ಘಟನೆಗೆ ರಾಜಕೀಯ ಬಣ್ಣ ಬಳಿಯುವ ವಿಫಲಯತ್ನ ನಡೆಸಿದರು. ಕೊನೆಗೆ ಎಲ್ಲೆಡೆಯಿಂದ ಸರ್ಕಾರದ ಬಗ್ಗೆ ವಿರೋಧ ವ್ಯಕ್ತವಾದಾಗ ರೈತರ ಸಾವಿಗೆ ಪೊಲೀಸರ ಗೋಲಿಬಾರ್ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ದೊಡ್ಡ ಹೋರಾಟ ಆರಂಭವಾಗುವ ಮುನ್ಸೂಚನೆ ದೊರೆತು, ಗೋಲಿಬಾರ್‍ನಲ್ಲಿ ಮೃತಪಟ್ಟ ರೈತರ ಪ್ರತಿ ಕುಟುಂಬಗಳಿಗೆ ಭರ್ಜರಿ ರೂ. 1 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಪಡೆದ ಕುಟುಂಬ ಸರ್ಕಾರದ ವಿರುದ್ಧ ಉಸಿರೆತ್ತಲು ಸಾಧ್ಯವೇ ಇಲ್ಲ, ಇದು ಹಣದಿಂದ ಜೀವಗಳನ್ನು ಕೊಂಡಂತೆಯೇ ಸರಿ.
ಇನ್ನು ಗೋಲಿಬಾರ್ ನಡೆದ ಕೆಲವೇ ಕ್ಷಣಗಳಲ್ಲಿ ಮಂಡಸೌರ್, ರತ್ಲಂ ಮತ್ತು ಉಜ್ಜಯಿನಿಯಲ್ಲಿ ಇಂಟರ್‍ನೆಟ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಮೊಬೈಲ್ ಸಂದೇಶ ರವಾನೆಗೂ ಕೂಡ ನಿರ್ಬಂಧ ವಿಧಿಸಲಾಯಿತು. ಜನರಿಗೆ ತಮ್ಮ ಸುತ್ತ ಏನಾಗುತ್ತಿದೆ ಎಂಬುದೇ ತಿಳಿಯದಂತೆ ಮಾಡಿ ಆ ಮೂಲಕ ಅಂಧಕಾರಕ್ಕೆ ತಳ್ಳಿ, ಗಲಭೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಂಧಿಸಲಾಯಿತು. ಹೀಗೆ ಬೇಡಿಕೆಯಿಟ್ಟ ರೈತರನ್ನು ಗುಂಡಿಕ್ಕುವುದು, ವಿಚಾರ ವಿನಿಮಯ ಮಾಡದಂತೆ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವುದು, ಸಾಂತ್ವನ ಹೇಳಲು ತೆರಳುತ್ತಿದ್ದ ನಾಯಕನ ಬಂಧನ ಇವೆಲ್ಲವನ್ನು ನೋಡಿದರೆ ಅಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆಯೇ ಎಂಬ ಅನುಮಾನ ಎಂತಹವರನ್ನೂ ಕಾಡದೆ ಇರದು.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ವೇಳೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳೇ ಖುದ್ದಾಗಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಬರ ಕೇವಲ ಉತ್ತರ ಪ್ರದೇಶದ ಸಮಸ್ಯೆಯಲ್ಲ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ತೆಲಂಗಾಣಗಳು ಕೂಡ ಬರದಿಂದ ಕಂಗಾಲಾಗಿವೆ. ಉತ್ತರ ಪ್ರದೇಶದಲ್ಲಿ ಪ್ರಧಾನಿಗಳ ಹೇಳಿಕೆ ಸಹಜವಾಗಿಯೇ ಈ ರಾಜ್ಯಗಳ ರೈತರಲ್ಲೂ ಸಾಲ ಮನ್ನಾ ಮಾಡುವಂತೆ ಪ್ರತಿಭಟಿಸಲು ಪ್ರಚೋದನೆ ನೀಡಿತು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸಾಲ ಮನ್ನಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿತು. ಕೃಷಿ ಕೇವಲ ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವೇ? ಹಾಗಾದರೆ ರೈತರ ಸಂಕಷ್ಟಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲವೇ? ಆದ್ದರಿಂದ ದೇಶದಲ್ಲಿ ತುರ್ತಾಗಿ ಕೃಷಿ ವಿಚಾರದಲ್ಲಿ ಕೇಂದ್ರದ ಜವಾಬ್ದಾರಿಗಳೇನು ಎಂಬ ಒಂದು ಸ್ಪಷ್ಟ ಚಿತ್ರಣದ ಅಗತ್ಯವಿದೆ. ರೈತರ ಸಮಸ್ಯೆಗಳ ಸ್ಪಂದನೆಯಲ್ಲಿ ಕೇಂದ್ರದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿಯಬೇಕಾಗಿದೆ.

ಇದುವರೆಗೂ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಅಷ್ಟೇನು ತೃಪ್ತಿಕರವಾಗಿಲ್ಲ. ಕೃಷಿ ವಸ್ತುಗಳ ಉತ್ಪಾದನೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಇದಕ್ಕೆ ಸಮಾನಾಂತರವಾಗಿ ಕೃಷಿ ರಫ್ತು ನೆಲಕಚ್ಚಿದೆ. 2013-14ನೇ ಸಾಲಿನಲ್ಲಿ 3,295 ದಶಲಕ್ಷ ಯು.ಎಸ್ ಡಾಲರ್‍ನಷ್ಟಿದ್ದ ಕೃಷಿ ರಫ್ತು, 2016-17ನೇ ಸಾಲಿನಲ್ಲಿ 1,957 ದಶಲಕ್ಷ ಡಾಲರ್‍ಗೆ ಇಳಿಕೆ ಕಂಡಿದೆ. ಭೀಕರ ಬರದ ನಡುವೆಯೂ ಫಸಲ್ ಬಿಮಾ ಯೋಜನೆ ರೈತರ ನೆರವಿಗೆ ನಿಂತಿಲ್ಲ. ಖಾರಿಫ್ ಬೆಳೆಗೆ ಸಂಬಂಧಿಸಿದಂತೆ    2016-17ನೇ ಸಾಲಿನಲ್ಲಿ ಸುಮಾರು ರೂ. 34,00,000 ಕೋಟಿ ವಿಮಾ ಮೊತ್ತವನ್ನು ರೈತರು ಪಾವತಿಸಿದ್ದರೆ, ವಿಮಾ ಕಂಪನಿಗಳು ಸರಿಸುಮಾರು ರೂ. 13,00,000 ವಿಮಾ ಹಣವನ್ನು ರೈತರಿಗೆ ಪಾವತಿಸಿವೆ. ವಿಮಾ ಕಂಪೆನಿಗಳು ಇದರಿಂದ ಭರ್ಜರಿ ಲಾಭ ಗಳಿಸಿವೆಯೇ ವಿನಃ ರೈತರಿಗೆ ಇದು ಸಹಕಾರಿಯಾಗಿಲ್ಲ. 2014-15ನೇ ಸಾಲಿನಲ್ಲಿ  ಕೇಂದ್ರ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್‍ಗೆ ರೂ. 1796 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ.998 ಕೋಟಿಗೆ ಇಳಿಕೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ 2014-15ರಲ್ಲಿ ರೂ. 8363 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ. 3559 ಕೋಟಿಗೆ ಇಳಿಕೆ ಕಂಡಿದೆ. ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್‍ಗೆ 2014-15ರಲ್ಲಿ ರೂ. 1068 ಕೋಟಿ ಅನುದಾನ ನೀಡಲಾಗಿದ್ದು, 2016-17ನೇ ಸಾಲಿಗೆ ರೂ. 915 ಕೋಟಿಗೆ ಇಳಿಕೆ ಕಂಡಿದೆ. ದೇಶದಲ್ಲಿ ನಿತ್ಯ ಸಾಲಭಾದೆಯಿಂದ ಅಂದಾಜು 35 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಆಹಾರಧಾನ್ಯಗಳ ಬೆಲೆ ಕೆ.ಜಿ.ಯೊಂದಕ್ಕೆ ರೂ.44 ಇದ್ದರೆ, ಅದನ್ನು ರೂ. 230ಕ್ಕೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ದೇಶೀಯ ಕೃಷಿ ಇದರಿಂದ ಆಪಾರ ನಷ್ಟದಲ್ಲಿದೆ. ಇನ್ನೊಂದೆಡೆ ರೈತರಿಗೆ ಕೇಂದ್ರದಿಂದ ಸಮರ್ಪಕ ಬೆಂಬಲ ಬೆಲೆ ದೊರೆಯುತ್ತಿಲ್ಲ. ಇದನ್ನು ವಿರೋಧಿಸಿದರೆ ಲಾಠಿ ಮತ್ತು ಮದ್ದುಗುಂಡುಗಳು ಎದುರಾಗಿ ನಿಲ್ಲುತ್ತವೆ. ಬಂದೂಕುಗಳಡಿಯಲ್ಲಿ ಶಾಶ್ವತವಾಗಿ ಧ್ವನಿಯನ್ನು ಹುದುಗಿಡಲು ಸಾಧ್ಯವಿಲ್ಲ, ಜನರು ಬೇಸತ್ತು  ದೇಶಾದ್ಯಂತ ಸರ್ಕಾರದ ವಿರುದ್ಧ ದಂಗೆ ಎದ್ದಲ್ಲಿ ಪ್ರಜಾ ಶಕ್ತಿಯ ಮುಂದೆ ಯಾವ ಬಂದೂಕುಗಳು ನಿಲ್ಲಲಾರವು ಎಂಬುದನ್ನು ಮಾನ್ಯ ಪ್ರಧಾನಿಗಳು ಅರಿತು, ಕೃಷಿ ವಿಚಾರದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ವರ್ತಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕು, ಇದು ಅದರ ಕರ್ತವ್ಯ ಕೂಡ.

ಹಿಂದುಳಿದ ವರ್ಗಗಳ ಕಲ್ಯಾಣದ ಹರಿಕಾರ ಡಿ. ದೇವರಾಜ ಅರಸ್

Dev-Ursಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರು ಗ್ರಾಮೀಣಾಭಿವೃದ್ಧಿಯ ಹರಿಕಾರರು ಕೂಡ ಹೌದು. ಗ್ರಾಮೀಣ ಜನತೆಯಲ್ಲಿ ಜೀವನೋಲ್ಲಾಸ ಹೆಚ್ಚಿಸಲು ಜೀವನದುದ್ದಕ್ಕೂ ಶ್ರಮಿಸಿದರು. ತಮ್ಮ ಆಡಳಿತಾವಧಿಯಲ್ಲಿ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೊಡ್ಡ ಮಟ್ಟದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರು.

ಹಳೇ ಮೈಸೂರು ಭಾಗದ ರಾಜಕೀಯ ಹುಲಿ ಎಂದೇ ಚರಿತ್ರೆಯಲ್ಲಿ ಗುರುತಿಸಿಕೊಂಡಿರುವ ಸಾಹುಕಾರ್ ಚೆನ್ನಯ್ಯನವರ ಒಂದೇ ಒಂದು ಮಾತಿನ ಮೇರೆಗೆ 24 ವರ್ಷ ಪ್ರಾಯದಲ್ಲೇ ರಾಜಕೀಯ ರಂಗ ಪ್ರವೇಶ ಮಾಡಿದ ದೇವರಾಜ ಅರಸರು, ರಾಜವಂಶದ ಎದುರು ಚುನಾವಣೆಯಲ್ಲಿ ಸ್ಪರ್ಧಿಸುವ ಗಂಡೆದೆ ಪ್ರದರ್ಶಿಸಿದರು. ಈ ಚುನಾವಣೆಯಲ್ಲಿ ದೇವರಾಜ ಅವರು ಶಾಸಕರಾಗಿ ಆಯ್ಕೆಯಾದರು. ಇದು ಅವರ ರಾಜಕೀಯ ಬದುಕಿನ ಆರಂಭದ ಹೆಜ್ಜೆ. ನಂತರದಲ್ಲಿ ಅವರು ರಾಜಕೀಯ ರಂಗದಲ್ಲಿ ಯಾರು ಏರದ ಎತ್ತರಕ್ಕೆ ಏರಿದರು. ಜನೋತ್ಕರ್ಷಕ್ಕಾಗಿ ಕಾನೂನು ಅಡ್ಡಿ ಬಂದಾಗ ಅದನ್ನು ಧಿಕ್ಕರಿಸಿದರು. ನಿರ್ಗತಿಕರಿಗೆ ಬೆಳಕಾದರು. ಇದು ಅವರ ಜನರ ಬಗೆಗಿನ ಅಭಿಮಾನದ ಬಗ್ಗೆ ಚಿಕ್ಕ ಉದಾಹರಣೆಯಷ್ಟೆ.

1969ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬಾಗವಾಯಿತು. ಒಂದೆಡೆ ಇಂದಿರಾಗಾಂಧಿ ಹಾಗೂ ಇನ್ನೊಂದೆಡೆ ಎಸ್.ನಿಜಲಿಂಗಪ್ಪ ಬಣ. ಯಾರ ಗುಂಪಿಗೆ ಹೋಗಬೇಕು ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ಇಂದಿರಾಗಾಂಧಿ ಬಣವನ್ನು ಸೇರಿದರು. ಮುಂದೆ ಎಲ್ಲವೂ ಇತಿಹಾಸ. ದೇವರಾಜ ಅರಸುರವರು ರಾಜ್ಯದ ಏಕಮೇವಾದ್ವಿತೀಯ ನಾಯಕರಾಗಿ ವಿಜೃಂಭಿಸಿದರು. ಸಮಾಜವಾದವನ್ನು ನಿಜವಾದ ಅರ್ಥದಲ್ಲಿ ಕೃತಿಯಲ್ಲಿ ಇಳಿಸಿದರು. ಅವರ ಆದೇಶಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಮರುಮಾತಿಲ್ಲದೆ ಜಾರಿಗೆ ತಂದರು. ಎಲ್ಲಾ ವರ್ಗದ ಜನ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸತೊಡಗಿದರು.

1972 ರಾಜ್ಯದ ಸುವರ್ಣಯುಗ. ಇಂದಿರಾಗಾಂಧಿಯವರ ಆಶಯದಂತೆ ಅರಸುರವರು ನಾಡಿನ ಮುಖ್ಯಂತ್ರಿಯಾದರು. ಬಡವರ ಪರವಾಗಿ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತರತೊಡಗಿದರು. ಸಮಯಪ್ರಜ್ಞೆ ಅವರಲ್ಲಿದ್ದ ಧೀಮಂತಶಕ್ತಿ. ಸಮಾಜಕ್ಕೆ ಅನುಕೂಲವಾಗುವಂತಹಾ ಯಾವುದೇ ಕೆಲಸವನ್ನು ಸಣ್ಣ ಅಧಿಕಾರಿ ಹೇಳಿದರೂ ಅದನ್ನು ಜಾರಿಗೆ ತರುತ್ತಿದ್ದರು. ಅಂದಿನ ಕಾಲದಲ್ಲಿ ಕಾಡನ್ನು ಜನರು ಲೂಟಿ ಮಾಡುತ್ತಿದ್ದರು, ಇದನ್ನು ರಕ್ಷಿಸಲು ಸೂಕ್ತ ಕಾನೂನು ಕೂಡ ಇರಲಿಲ್ಲ. ಅರಸರು ಆಗ ಮುಖ್ಯಮಂತ್ರಿ, ಕೆ.ಎಚ್.ಪಾಟೀಲ್ ಅರಣ್ಯ ಸಚಿವರಾಗಿದ್ದರು, ಇಬ್ಬರೂ ಸೇರಿ ಕೂಡಲೇ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಈ ರೀತಿಯ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಅರಸರಿಗೆ ಸಲ್ಲುತ್ತದೆ. ನಂತರ ಉಳುವವನೇ ಭೂಮಿಯ ಒಡೆಯ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವ ಮೂಲಕ ಇವರು ಶಾಶ್ವತವಾಗಿ ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದರು. ಜೀತದಾಳು ಪದ್ದತಿಗೆ ಮುಕ್ತಿ ನೀಡಿದ್ದು ಕೂಡ ಇವರ ದೊಡ್ಡ ಸಾಧನೆ. ಅರಸರು ಮುಖ್ಯಮಂತ್ರಿಯಾಗುವವರೆಗೂ ಇಲ್ಲಿ ಲಿಂಗಾಯಯ ಮತ್ತು ಒಕ್ಕಲಿಗರೇ ರಾಜ್ಯಸೂತ್ರದ ವಾರಸುದಾರರಾಗಿದ್ದರು, ಮಿಕ್ಕುಳಿದ ಜನರನ್ನು ರಾಜಕೀಯವಾಗಿ ಕೇಳುವವರು ದಿಕ್ಕಿರಲಿಲ್ಲ. ಎಲ್ಲಾ ಹಿಂದುಳಿದ ವರ್ಗಕ್ಕೆ ಜೀವವಾಹಿನಿಯಾದ ಅರಸರು ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸ್ಥಾಪಿತ ನಂಬಿಕೆಯನ್ನು ಛಿದ್ರಗೊಳಿಸಿದರು. ಎಲ್ಲಾ ಹಿಂದುಳಿದ ವರ್ಗಗಳು ವಿಧಾನಸಭೆಗೆ ಪ್ರವೇಶಿಸಲು ಮುಕ್ತ ಅವಕಾಶ ನೀಡಿದರು. ಗೇಣಿ ಶಾಸನ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗದಂತಹ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಜನತೆಗೆ ದೊರೆಯುತ್ತಿದೆ.

ದೇವರಾಜ ಅರಸರದ್ದು ವರ್ಣಮಯ ಬದುಕು. ಜೀವನದುದ್ದಕ್ಕೂ ಆನಂದವನ್ನು ಸೂರೆ ಮಾಡುತ್ತಲೇ ಅಂತಃಕರಣದ ಪ್ರತಿರೂಪವಾದ ಅತ್ಯಂತ ಅಪರೂಪದ ಮನುಷ್ಯ. ಅರಸರು
ಇಂದು ಇಲ್ಲವಾದರೂ ಅವರ ತೇಜೋವಲಯ ನಮ್ಮ ಸುತ್ತಲೂ ಹರಡಿಕೊಂಡಿದೆ. ನಿಜಕ್ಕೂ ಅವರದು ಸಾರ್ಥಕ ಬದುಕು.

ನೋಟ್ ಬ್ಯಾನ್ ಸಾಧಕ ಬಾಧಕ

Demonetisation---Blog
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿನ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿರುವ ದೊಡ್ಡ ಮುಖ ಬೆಲೆಯ ನೋಟ್ ರದ್ದತಿಯ ಹಿಂದಿನ ಉದ್ದೇಶಗಳ ಈಡೇರಿಕೆಯ ಬಗ್ಗೆ ಚರ್ಚೆಗಿದು ಸೂಕ್ತ ಸಮಯ. ಯಾಕೆಂದರೆ ನೋಟು ರದ್ದತಿಯ ನಂತರದ ದಿನಗಳಿಂದ ಇದುವರೆಗೂ ದೇಶಾದ್ಯಂತ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳಾಗಲಿ ಅಥವಾ ನಕ್ಸಲ್ ದಾಳಿಗಳಾಗಲಿ ನಡೆದಿರಲಿಲ್ಲ ಹಾಗಾಗಿ ನೋಟು ರದ್ದತಿ ನಿಯಮವನ್ನು ದೊಡ್ಡ ಮಟ್ಟದ ಯಶಸ್ವಿ ಯೋಜನೆ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.

ಮೋದಿಯವರ ಹೇಳಿಕೆಯಂತೆ ದೇಶದಲ್ಲಿರುವ ಕಪ್ಪುಹಣದ ಶೇ.90 ಭಾಗ ನೋಟು ರದ್ದತಿಯ ನಂತರದ 50 ದಿನಗಳಲ್ಲಿ ಹೊರಬಂದು, ದೇಶದ ಭ್ರಷ್ಟರೆಲ್ಲ ಬೀದಿಗೆ ಬರಬಹುದು ಎಂದು ಜನರು ಕಾಯುತ್ತಾ ಕುಳಿತರು, ಆದರೆ ವಾಸ್ತವದಲ್ಲಿ ಅಂದುಕೊಂಡಂತೆ ಆಗಲಿಲ್ಲ, ಬೇರೆ ದಾರಿ ಕಾಣದೆ ಅದರ ವೈಫಲ್ಯವನ್ನು ಮುಚ್ಚಲು ತಮ್ಮ ಹೇಳಿಕೆಯನ್ನು ಬದಲಿಸಿದ ಕೇಂದ್ರ ಸರ್ಕಾರ ನೋಟು ರದ್ದತಿಯು ದೇಶದ ನಗದು ರಹಿತ ವಹಿವಾಟಿಗೆ ಬೆಂಬಲವಾಗುವ ಮೂಲಕ ಭಾರತ ನಗದು ರಹಿತ ವಹಿವಾಟು ದೇಶವಾಗಲಿದೆ ಎಂದು ಬಿಂಬಿಸಿತು. ಇದನ್ನೂ ಕೂಡ ಜನತೆ ಒಪ್ಪಿ ಆ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು, ಆದರೆ ದೇಶದ ಬ್ಯಾಂಕುಗಳು ದಿನಕ್ಕೊಂದು ನಿಯಮವನ್ನು ತನ್ನ ಗ್ರಾಹಕರ ಮೇಲೆ ಹೇರುವ ಮೂಲಕ ಜನರು ಬ್ಯಾಂಕ್ ಬಳಿ ಓಡಾಡುವುದಕ್ಕೂ ಭಯ ಪಡುವಂತಾಗಿ ಆ ಹೇಳಿಕೆಯನ್ನೂ ಕೂಡ ಕೈಬಿಡುವಂತಾಯಿತು.
ಕೊನೆಗೆ ಮೋದಿ ಸರ್ಕಾರಕ್ಕೆ ಹೊಳೆದ ಹೊಸ ಉಪಾಯ ನೋಟು ರದ್ದತಿಯ ನಂತರ ದೇಶದಲ್ಲಿರುವ ಭಯೋತ್ಪಾದಕರು ಹಾಗೂ ನಕ್ಸಲೈಟ್‍ಗಳು ತಮ್ಮ ಬಳಿ ಇರುವ ಹಣ ಬದಲಾಯಿಸಲು ಆಗದೆ, ಮದ್ದು ಗುಂಡುಗಳಿಗೆ ಹಾಗೂ ಆಹಾರಕ್ಕೂ ಪರದಾಡುವಂತಾಗಿದೆ, ಮುಂದೆ ದೇಶದಲ್ಲಿ ಇಂತಹ ದಾಳಿಗಳು ನಡೆಯುವುದಿಲ್ಲ ಎಂದರು. ಕಾಕತಾಳೀಯ ಎಂಬಂತೆ ನೋಟು ರದ್ದತಿಯ ನಂತರದ ಕೆಲವಾರು ತಿಂಗಳು ದೇಶದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳಾಗಲೀ ಅಥವಾ ನಕ್ಸಲ್ ದಾಳಿಗಳಾಗಲೀ ನಡೆಯದೆ ಇದ್ದುದು.

ಆದರೆ ಕೆಲವು ವಾರದಿಂದ ಈಚೆಗೆ ಕಾಶ್ಮೀರದಲ್ಲಿ ನಿತ್ಯ ಭಯೋತ್ಪಾದಕ ಪ್ರಚೋದಿತ ದಾಳಿಗಳು ನಡೆಯುತ್ತಿವೆ, ಜನ ಸೈನಿಕರ ಮೇಲೆ ಕಲ್ಲು ತೂರುತ್ತಿದ್ದಾರೆ, ಇವೆಲ್ಲದರ ಜೊತೆಗೆ ಛತ್ತೀಸ್‍ಗಢದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ಮಾಡಿ ಇಪ್ಪತ್ತೈದು ಯೋಧರನ್ನು ಹತ್ಯೆ ಮಾಡಿದ್ದಾರೆ. ಹಾಗಾದರೆ ನೋಟು ರದ್ದತಿ ಒಂದು ನಿರುಪಯುಕ್ತ ನಿರ್ಧಾರವಾಯಿತೇ? ಎಲ್ಲೋ ನಾಲ್ಕಾರು ಕಡೆ ಐಟಿ ದಾಳಿ ಮಾಡಿ ಒಂದಷ್ಟು ಕಪ್ಪು ಹಣ ವಶಪಡಿಸಿಕೊಂಡ ಉದಾಹರಣೆಗಳು ಬಿಟ್ಟರೆ ಬೇರಾವ ಪ್ರಯೋಜನಗಳೂ ಇಲ್ಲವೇ? ಆ ಅಲ್ಪಸ್ವಲ್ಪ ಹಣ ವಶಪಡಿಸಿಕೊಳ್ಳಲು ನೋಟು ರದ್ದತಿ ಎಂಬ ನಿಯಮ ಅಗತ್ಯವಿತ್ತೇ? ಹಾಗೇಯೇ ಐಟಿ ದಾಳಿಗಳು ಮಾಡಿದರೂ ಕೂಡ ಅದೇ ಪ್ರಮಾಣದ ಹಣ ದೊರೆತ ಉದಾಹರಣೆಗಳು ಸಾಕಷ್ಟಿವೆ, ಅತ್ಯಲ್ಪ ಸಾಧನೆಯ ಯೋಜನೆಗೆ ನೂರಾರು ಅಮಾಯಕರ ಬಲಿ ಅಗತ್ಯವಿತ್ತೆ? ಹಾಗಾದರೆ ನೋಟು ರದ್ದತಿಯ ಹಿಂದಿನ ನಿಜವಾದ ಉದ್ದೇಶವಾದರೂ ಏನು? ಇಂತಹ ನೂರಾರು ಪ್ರಶ್ನೆಗಳು ಇಂದು ನಮ್ಮ ಮುಂದೆ ಉತ್ತರಿಸುವವರಿಲ್ಲದೆ ನರಳುತ್ತಿವೆ.

ಉಪಚುನಾವಣಾ ಫಲಿತಾಂಶದ ಸುತ್ತ

election-result
ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣಾ ಫಲಿತಾಂಶ ಕಡೆಗೂ ಹೊರಬಿದ್ದಿದೆ. ಮೋದಿ ಹೆಸರು ಬಳಸಿಕೊಂಡು ಕರ್ನಾಟಕದಲ್ಲಿಯೂ ಗೆಲುವು ಪಡೆಯಬಹುದು ಎಂಬ ಭ್ರಮೆಯಲ್ಲಿದ್ದ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಅಭಿವೃದ್ಧಿ ಪರ ಆಡಳಿತಕ್ಕೆ ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತಿದೆ. ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ಸಮರ್ಪಕವಾಗಿ ತಲುಪುತ್ತಿವೆ ಎಂಬುದಕ್ಕೆ ಚುನಾವಣಾ ಫಲಿತಾಂಶ ಸ್ಪಷ್ಟ ನಿದರ್ಶನವಾಗಿದೆ.

ಈ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂಬುದು ಹಲವು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ, ಇದಕ್ಕೆ ಮುಖ್ಯ ಕಾರಣ ಸರ್ಕಾರದ ಕಾರ್ಯಕ್ರಮಗಳು ಅಭಿವೃದ್ಧಿ ಪರವಾಗಿರುವುದು ಹಾಗೂ ಅವು ಸಮಾಜದ ಎಲ್ಲಾ ವರ್ಗದ ಜನರನ್ನೂ ಯಾವ ಭೇದ ಭಾವಗಳಿಲ್ಲದೆ ತಲುಪುವಂತೆ ನಿಷ್ಪಕ್ಷಪಾತವಾಗಿ ಯೋಜನೆಗಳನ್ನು ರೂಪಿಸುತ್ತಿರುವುದು. ಇದರಿಂದ ಜಾಗೃತರಾದ ಜನರು ಅಭಿವೃದ್ಧಿಪರ ಆಡಳಿತಕ್ಕೆ ಮಣೆ ಹಾಕಿರುವುದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ನಂಜನಗೂಡು ಉಪಚುನಾವಣೆಯ ಕಣದಲ್ಲಿದ್ದ ಶ್ರೀನಿವಾಸ ಪ್ರಸಾದ್‍ರವರು ಸ್ವಾಭಿಮಾನಿ ಸಮಾವೇಶಗಳನ್ನು ನಡೆಸಿ ಆ ಮೂಲಕ ಜನರನ್ನು ಸರ್ಕಾರದ ವಿರುದ್ಧವಾಗಿ ಸಂಘಟಿಸುವ ಪ್ರಯತ್ನವನ್ನು ಮಾಡಿ, ಇದು ತಮ್ಮ ಸ್ವಾಭಿಮಾನಕ್ಕಾಗಿ ನಡೆಸುತ್ತಿರುವ ಸಂಗ್ರಾಮ ಎಂಬಂತೆ ಬಿಂಬಿಸಿದರು. ವಾಸ್ತವದಲ್ಲಿ ಅವರ ರಾಜೀನಾಮೆಯ ಹಿಂದಿನ ಉದ್ದೇಶವೇನೇ ಇರಬಹುದು ಆದರೆ ವ್ಯಕ್ತಿಯೊಬ್ಬನ ಸ್ವಪ್ರತಿಷ್ಠೆಗೆ ಉಪಚುನಾವಣೆಗಳು ನಡೆಯುವುದನ್ನು ಕ್ಷೇತ್ರದ ಪ್ರಜ್ಞಾವಂತ ಮತದಾರರು ಒಪ್ಪಲಿಲ್ಲ್ಲ. ಒಟ್ಟಿನಲ್ಲಿ ಪ್ರತಿಷ್ಠೆ ಹಾಗೂ ಅಭಿವೃದ್ಧಿಯ ನಡುವೆ ನಡೆದ ಸಂಘರ್ಷದಲ್ಲಿ ಅಭಿವೃದ್ಧಿ ಗೆಲುವು ಸಾಧಿಸಿದ್ದು ಜನತೆಯ ತಾರ್ಕಿಕ ಮನೋಬಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್‍ರವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ಪತಿ ದಿವಂಗತ ಮಹಾದೇವ ಪ್ರಸಾದ್‍ರವರ ಜನಪರ ಕಾಳಜಿ ಹಾಗೂ ರಾಜ್ಯ ಸರ್ಕಾರದ ಪಾರದರ್ಶಕ ಹಾಗೂ ಸರ್ವರನ್ನೂ ಒಳಗೊಳ್ಳುವ ಆಡಳಿತ ಶೈಲಿ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈ ಎಲ್ಲಾ ಅಂಶಗಳು ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಪೂರಕವಾಗಿವೆ. ಜನತೆ ಸುಳ್ಳು ಭರವಸೆಗಳಿಗೆ ಮರುಳಾಗದೆ, ಕೋಮುವಾದಕ್ಕೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಜತೆಗೆ ಇದ್ದಾರೆ ಎಂಬುದು ಸರ್ಕಾರ ಗಮನಿಸಲಿ. ಇದು ಮುಂದೆಯೂ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಒತ್ತು ನೀಡಲು ಪ್ರೇರಣೆಯಾಗಲಿ.

ಮಹದೇವ ಪ್ರಸಾದ್ ಎಂಬ ಸರಳ ಸಜ್ಜನ ರಾಜಕಾರಣಿ

mahadev-prasad_2ಸುಧೀರ್ಘ ರಾಜಕೀಯ ಜೀವನದಲ್ಲಿ ಹಗರಣ ಮುಕ್ತ ಪಯಣ ನಡೆಸಿ, ಸಕಲ ವರ್ಗದ ಜನರ ಕಷ್ಟಗಳಿಗೂ ಸಕಾಲದಲ್ಲಿ ನೆರವಿಗೆ ಧಾವಿಸುತ್ತಿದ್ದ ರಾಜಕಾರಣಿಯಾಗಿದ್ದ ಶ್ರೀಯುತ ಮಹದೇವ ಪ್ರಸಾದ್‍ರವರ ಮರಣ ಬರಸಿಡಿಲಿನಂತೆ ಬಂದೆರಗಿತು. ಅವರೊಬ್ಬ ನಿಷ್ಠಾವಂತ ರಾಜಕಾರಣಿ ಮಾತ್ರವಾಗಿರದೆ, ಜನಪರ ಚಿಂತಕ, ಸ್ನೇಹಮಯಿಯೂ ಆಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ದುಡಿಯುತ್ತಾ, ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಇಂತಹ ಹಿರಿಯ ನಾಯಕರೊಬ್ಬರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ಆರಿಸಬೇಕಾಗಿದ್ದು, ಹಾಗಾಗಿ ಈ ಸಂದರ್ಭದಲ್ಲಿ ವಿವೇಚನೆಯಿಂದ ಮತ ಚಲಾಯಿಸಬೇಕಾಗಿದೆ.

ಮಹದೇವ ಪ್ರಸಾದ್‍ರವರ ಸಾಧನೆಗಳೇ ಇಂದು ಅವರ ಪತ್ನಿಗೆ ಕ್ಷೇತ್ರದಲ್ಲಿ ಶ್ರೀರಕ್ಷೆಯಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸದೃಢ ಪ್ರಜೆಗಳ ಅಗತ್ಯವಿದೆ ಎಂದು ಅರಿತಿದ್ದ ಮಹದೇವ ಪ್ರಸಾದ್ ಅವರು, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಗಮನವನ್ನು ನೀಡಿದ್ದರು. ಹಾಗಾಗಿ ಇಂದು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಜನತೆಗೆ ಲಭ್ಯವಾಗುತ್ತಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಿಂದೆ ಮಹದೇವ ಪ್ರಸಾದ್ ಅವರ ನಿರಂತರ ಪ್ರಯತ್ನವಿದೆ. ಕಬ್ಬಳ್ಳಿ ಹಾಗೂ ಬೇಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಹಂತಕ್ಕೆ ಮೇಲ್ದರ್ಜೆಗೇರಿಸಿ, ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗುತ್ತಿದೆ.

ಇನ್ನು ಕ್ಷೇತ್ರದ ಮೂಲ ಸೌಲಭ್ಯದ ಅಭಿವೃದ್ಧಿ ವಿಚಾರಕ್ಕೆ ಬಂದರೆ, ಮಹದೇವ ಪ್ರಸಾದ್‍ರವರಿಗೆ ಮಹದೇವ ಪ್ರಸಾದ್‍ರವರೇ ಸಾಟಿ. ಕ್ಷೇತ್ರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಗುಣಮಟ್ಟದ ರಸ್ತೆ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಉಡಿಗಾಲ-ಕಬ್ಬಹಳ್ಳಿ, ವೀರನಪುರ-ಹೆಗ್ಗಡಹಳ್ಳಿ, ಹೆಮ್ಮರಗಾಲ-ಸೋಮಹಳ್ಳಿ, ಮುಕುಡಹಳ್ಳಿ-ಹರವೆ, ಹರವೆ-ಸಾಗಡೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕ್ಷೇತ್ರದ ಜನತೆಯ ಸುಗಮ ಸಂಚಾರಕ್ಕೆ, ಆರ್ಥಿಕ ಚಟುವಟಿಕೆಗಳಿಗೆ ಅವರು ಬೆನ್ನುಲುಬಾಗಿ ನಿಂತರು. ಹಾಗೆಯೇ ಗ್ರಾಮೀಣ ರಸ್ತೆಗಳಾದ ಮಲೆಯೂರು, ಹಿರಿಬೇಗೂರು, ಭುಜಗಪುರ-ಹೆಗ್ಗವಾಡಿ, ಲಕ್ಕೂರು – ತಮ್ಮಡಹಳ್ಳಿ, ಕೆರೆಹಳ್ಳಿ-ಜೋಗಿ ಕಾಲನಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಭಾಗಗಳನ್ನು ಪಟ್ಟಣ ಪ್ರದೇಶಗಳೊಂದಿಗೆ ಬೆಸೆದರು.
ಹೀಗೆ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಶ್ರೀಯುತರು ಇಂದು ನಮ್ಮೊಂದಿಗಿಲ್ಲ. ಅವರ ಸ್ಥಾನಕ್ಕೆ ಅರ್ಹರನ್ನು ತರಬೇಕಾದದ್ದು ನಮ್ಮೆಲ್ಲರ ಜವಬ್ದಾರಿ ಕೂಡ. ಅವರ ಉದ್ದೇಶಗಳನ್ನು ಈಡೇರಿಸಲು ಅವರಂತೆ ಜನಪರ ಕಾಳಜಿ ಹೊಂದಿರುವ ಗೀತಾ ಮಹದೇವ ಪ್ರಸಾದ್‍ರವರು ಉತ್ತಮ ಆಯ್ಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ನಿಮ್ಮ ಆಯ್ಕೆಯಾಗಲಿ.

ರಾಜಕೀಯ ರಂಗದ ಅಜಾತಶತ್ರು ಮಹದೇವ ಪ್ರಸಾದ್

mahadev prasad_1
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ವ್ಯಕ್ತಿ ಶ್ರೀಯುತ ಮಹದೇವ ಪ್ರಸಾದ್‍ರವರು ಇಂದು ನಮ್ಮ ನಡುವೆ ಇಲ್ಲ ಎಂಬುದೆ ಅತ್ಯಂತ ದುಃಖದ ಸಂಗತಿ. ಅವರು ನಮ್ಮ ನಿಮ್ಮೆಲ್ಲರ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಕಣ್ಣು ಮುಂದೆ ಜೀವಂತವಾಗಿವೆ. ಸದಾಕಾಲ ಪರೋಪಕಾರಕ್ಕಾಗಿ ಮಿಡಿಯುತ್ತಿದ್ದ ನಿಸ್ವಾರ್ಥ ವ್ಯಕ್ತಿಯನ್ನು ಕಳೆದುಕೊಂಡಿರುವುದು ಗುಂಡ್ಲುಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟವೇ ಸರಿ.
ಶಿಕ್ಷಣ ಕ್ಷೇತ್ರಕ್ಕೆ ಮಹದೇವ ಪ್ರಸಾದ್‍ರವರ ಅವಧಿಯಲ್ಲಿ ನೀಡಿದ ಕೊಡುಗೆಗಳು ಗಣನೀಯವಾಗಿದೆ. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ಶಾಲೆಗಳನ್ನು ಅವರ ಅವಧಿಯಲ್ಲಿ ತೆರೆಯಲಾಯಿತು. ಬೇಗೂರು, ಹಂಗಳ ಹಾಗೂ ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾಲೇಜುಗಳನ್ನು ತೆರೆಯಲಾಯಿತು. ಗುಂಡ್ಲುಪೇಟೆ ಪಟ್ಟಣ ಹಾಗೂ ಕಬ್ಬಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲಾಯಿತು. ಇದಲ್ಲದೆ ಗುಂಡ್ಲುಪೇಟೆಯಲ್ಲಿ ಮುಂದಿನ ವರ್ಷ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಮಂಜೂರಾತಿ ದೊರಕಿಸುವಲ್ಲಿ ಹಾಗೂ ಬರಗಿ ಫಾರಂನಲ್ಲಿ ಹೈನುಗಾರಿಕೆ ಡಿಪ್ಲೊಮಾ ಕಾಲೇಜು ಈ ವರ್ಷದಿಂದ ಆರಂಭವಾಗುವಂತೆ ಮಾಡುವಲ್ಲಿ ಮಹದೇವ ಪ್ರಸಾದ್ ಅವರ ಶ್ರಮ ಗಣನೀಯವಾದುದು.

ಇನ್ನು ಜನತೆಯ ನಿತ್ಯ ಜೀವನಕ್ಕೆ ಅಗತ್ಯವಾದ ನೀರಿನ ಸೌಲಭ್ಯದ ಕಡೆಗೆ ದಿವಂಗತರು ಹೆಚ್ಚಿನ ಗಮನ ಹರಿಸಿದ್ದರು, ಗುಂಡ್ಲುಪೇಟೆ ಪಟ್ಟಣ ಹಾಗೂ ಮಾರ್ಗ ಮಧ್ಯದ 27 ಹಳ್ಳಿಗಳಿಗೆ ಕಬಿನಿ ನದಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಅದೇ ರೀತಿ, ಗುಂಡ್ಲುಪೇಟೆ ತಾಲ್ಲೂಕಿನ 133 ಹಾಗೂ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ನದಿ ಮೂಲದ ನೀರನ್ನು ಒದಗಿಸಲು ರೂ.450 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಲಭ್ಯವಾಗುವಂತೆ ಮಾಡಿದರು. ಸದಾಕಾಲ ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದ ಮಹದೇವ ಪ್ರಸಾದ್ ಅವರು ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿದ್ದರು. ಈಗ ಅವರ ಅಗಲಿಕೆಯಿಂದ ಅನಿವಾರ್ಯವಾಗಿ ಮತ್ತೊಬ್ಬರನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆರಿಸಬೇಕಾಗಿದ ಸನ್ನಿವೇಶ ನಿರ್ಮಾಣವಾಗಿದೆ. ಮಹದೇವ ಪ್ರಸಾದ್‍ರವರ ನೆರಳಿನಲ್ಲಿಯೇ, ಅವರೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಂಡು, ಅವರ ಬದುಕಿನ ಆಶಯಗಳನ್ನು ತಮ್ಮದಾಗಿಸಿಕೊಂಡು ಜೀವನ ಸಾಗಿಸುತ್ತ ಬಂದಿರುವ ಅವರ ಧರ್ಮ ಪತ್ನಿ ಗೀತಾ ಮಹದೇವ ಪ್ರಸಾದ್‍ರವರೆ ತಮ್ಮ ಪತಿಯ ಉದ್ದೇಶಗಳನ್ನು ಈಡೇರಿಸಲು ಸೂಕ್ತ ಆಯ್ಕೆ.

ಉತ್ತರಪ್ರದೇಶದಲ್ಲಿ ಸಂವಿಧಾನ ವಿರೋಧಿ ಯುಗಾರಂಭ

Yogi-adityanath---Blog
ಸ್ವಯಂಘೋಷಿಯ ಧರ್ಮರಕ್ಷಕ, ಮಹಿಳಾ ವಿರೋಧಿ ಹಾಗೂ ಅಲ್ಪಸಂಖ್ಯಾತ ವಿರೋಧಿಯಾದ ಯೋಗಿ ಆದಿತ್ಯನಾಥ್‍ರವರು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದು ದೇಶದಲ್ಲಿ ಸಂವಿಧಾನ ವಿರೋಧಿ ಆಡಳಿತ ಪರ್ವಕ್ಕೆ ನಾಂದಿ ಹಾಡಲಿದೆಯೇ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಅವರು ಈಗಾಗಲೇ ಹಲವಾರು ಹೇಳಿಕೆಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.
• ಮುಸ್ಲೀಂ ವಿರೋಧಿ ಹೇಳಿಕೆ: ಕಳೆದ ಎರಡೂವರೆ ವರ್ಷಗಳಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ 450 ಕ್ಕೂ ಹೆಚ್ಚು ಮತೀಯ ಗಲಭೆಗಳು ಸಮಾಜವಾದಿ ಆಡಳಿತದಲ್ಲಿ ನಡೆದಿದ್ದು, ಪೂರ್ವ ಉತ್ತರಪ್ರದೇಶದಲ್ಲಿ ಏಕೆ ಗಲಭೆಗಳಾಗುತ್ತಿಲ್ಲ? ಎಂದು ಯೋಚಿಸಿ. ಎಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಹೆಚ್ಚು ಇದೆಯೋ ಅಲ್ಲಿ ಅತಿ ಹೆಚ್ಚು ಗಲಭೆಗಳಾಗಿವೆ. ಪಶ್ಚಿಮ ಉತ್ತರಪ್ರದೇಶದಲ್ಲಿ ವಲಸಿಗರ ಪ್ರಮಾಣ ಹೆಚ್ಚುತ್ತಿರುವುದು ಉತ್ತರಪ್ರದೇಶದ ಭವಿಷ್ಯದ ಮೇಲೆ ಮಾರಕವಾಗಲಿದೆ. ಬಿಜೆಪಿ ಉತ್ತರಪ್ರದೇಶವನ್ನು ಮತ್ತೊಂದು ಕಾಶ್ಮೀರವಾಗಲು ಬಿಡುವುದಿಲ್ಲ.
• ಕ್ರಿಶ್ಚಿಯನ್ ವಿರೋಧಿ ಹೇಳಿಕೆ: ಮದರ್ ಥೆರೆಸಾರವರು ಭಾರತದ ಕ್ರಿಶ್ಚಿಯನೀಕರಣವಾಗಿಸುವ ಷಡ್ಯಂತ್ರದ ಒಂದು ಭಾಗವಾಗಿದ್ದರು. ಹಿಂದೂಗಳ ಬಳಿ ಸೇವೆ ಮಾಡುವ ನೆಪದಲ್ಲಿ ಬಂದು ಅವರನ್ನು ಕ್ರಿಶ್ಚಿಯನ್ನರಾಗಿ ಮತಾಂತರ ಮಾಡಲಾಗುತ್ತಿತ್ತು.
• ವೈಯಕ್ತಿಕ ನಿಲುವನ್ನು ಬಲವಂತವಾಗಿ ಹೇರುವ ಯತ್ನ: ಶಿವನೇ ಯೋಗವನ್ನು ಪರಿಚಯಿಸಿದ್ದು, ಆತ ಅಣು ಅಣುವಿನಲ್ಲಿದ್ದಾನೆ. ಆತನನ್ನು ಒಪ್ಪಿಕೊಳ್ಳುವುದು ಯಾರಿಗೆ ಬೇಡವಾಗಿದೆಯೋ, ಅವರು ಹಿಂದುತ್ವವನ್ನು ತೊರೆಯಬಹುದು.
• ನಟನೊಬ್ಬನ ವಾಕ್‍ಸ್ವಾತಂತ್ರ್ಯವನ್ನು ಭಯೋತ್ಪಾಕನ ಮಾತಿನೊಂದಿಗೆ ಹೋಲಿಕೆ: ಬಾಲಿವುಡ್ ನಟ ಶಾರುಖ್ ಖಾನ್‍ನನ್ನು ಬೆಂಬಲಿಸಿದ್ದೇ ಭಾರತೀಯ ಬಹುಸಂಖ್ಯಾತರು. ಅವರು ಆತನ ಚಿತ್ರಗಳನ್ನು ನೋಡದೆ ಇದ್ದಿದ್ದರೆ, ಆತ ಇಂದು ಭಾರತದ ಬೀದಿಗಳಲ್ಲಿ ಸಾಮಾನ್ಯ ಮುಸ್ಲೀಮನಂತೆ ಅಡ್ಡಾಡುತ್ತಾ ಕಾಲ ಕಳೆಯುತ್ತಿದ್ದ. ಶಾರುಖ್ ಖಾನ್ ಒಬ್ಬ ಉಗ್ರ ಹಾಗೂ ಆತನ ಮಾತುಗಳು ಉಗ್ರ ಹಫೀಜ್ ಸಯೀದ್‍ನ ಮಾತುಗಳು ಎರಡೂ ಒಂದೇ ರೀತಿ ಇವೆ ಎಂದಿದ್ದರು.
• ಮಹಿಳಾ ವಿರೋಧಿ ನಿಲುವು: 2010ರಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸಮ್ಮತಿ ಸೂಚಿಸಬೇಕೆಂದು ಭಾರತೀಯ ಜನತಾ ಪಾರ್ಟಿ ತನ್ನೆಲ್ಲಾ ಸಂಸದರಿಗೆ ಸೂಚನೆ ನೀಡಿತ್ತು. ಆದರೆ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಸಂಸದರು ಅದನ್ನು ವಿರೋಧಿಸಿದ್ದರು.
• ಮುಸ್ಲೀಂಮರ ಮೇಲಿನ ಹಿಂಸೆಗೆ ಪ್ರಚೋದನೆ: 2011ರ ಸರ್ವಾಜನಿಕ ಕಾರ್ಯಕ್ರಮವೊಂದರಲ್ಲಿ ಮುಸ್ಲೀಂ ಮಹಿಳೆಯರ ಶವಗಳನ್ನು ಘೋರಿಯಿಂದ ಅಗೆದು ತೆಗೆದು ರೇಪ್ ಮಾಡಿ ಎಂದು ಒಬ್ಬ ಭಾಷಣಕಾರರು ಕರೆ ನೀಡಿದ್ದರು. ಆ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಕೂಡ ಸ್ಟೇಜ್ ಮೇಲಿದ್ದರು, ಆತನ ಹೇಳಿಕೆಯನ್ನು ವಿರೋಧಿಸದೆ ಮೌನಕ್ಕೆ ಶರಣಾಗಿದ್ದರು.
• ದೇಶದ ಯುವ ಜನತೆಯ ಧ್ವನಿಯನ್ನು ಹತ್ತಿಕ್ಕುವ ಯತ್ನ: ಜೆಎನ್‍ಯು ವಿವಾದ ಕುರಿತಂತೆ ಹೇಳಿಕೆ ನೀಡಿದ್ದ ಯೋಗಿ ಆದಿತ್ಯನಾಥ್, ಜೆಎನ್‍ಯು.ನಲ್ಲಿ ಮಹಮ್ಮದ್ ಆಲಿ ಜಿನ್ನಾರಂತಹಾ ಮತ್ತೊಬ್ಬ ನಾಯಕನನ್ನು ಹುಟ್ಟಲು ಬಿಡುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.
ಈ ರೀತಿ ಸಂವಿಧಾನ ವಿರೋಧಿ ಹಾಗೂ ರಾಷ್ಟ್ರೀಯ ಐಕ್ಯತೆಯ ತತ್ವಗಳಿಗೆ ವಿರುದ್ಧ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಯೊಬ್ಬನನ್ನು ಸರ್ವಧರ್ಮೀಯರು ನೆಲೆಸಿರುವ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ, ಆತನ ಮೂಲಕ ಅಲ್ಲಿನ ಅಲ್ಪಸಂಖ್ಯಾತರನ್ನು ಅಡಗಿಸುವ ಹುನ್ನಾರ ನಡೆದಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ಇಂತಹ ಮನೋಸ್ಥಿತಿಯ ನಾಯಕರಿಗೆ ಅಧಿಕಾರ ನೀಡುವುದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ.

ನಕಲಿ ಡೈರಿ ವಿರುದ್ಧದ ಪ್ರತಿಭಟನೆಯಲ್ಲಿ ರಾಜ್ಯದ ಸಮಸ್ಯೆಗಳ ಚರ್ಚೆಯ ಅವಧಿ ಬಲಿ

Fake-Diary
ರಾಜ್ಯ ರಾಜಕೀಯದಲ್ಲಿ ಬಜೆಟ್ ಮಂಡನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರ್ಚಸ್ಸು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ, ವಿರೋಧ ಪಕ್ಷಗಳು ಬಜೆಟ್ ಅನ್ನು ವಿರೋಧಿಸಲು ದೋಷ ಸಿಗದೆ ತಿಣುಕಾಡುವಂತಾಗಿದೆ. ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ವಿರೋಧ ಪಕ್ಷ ಬಿಜೆಪಿ, ನಕಲಿ ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ವಿಧಾನಸಭೆಯಲ್ಲಿ ಗಂಭೀರ ವಿಚಾರಗಳ ಚರ್ಚೆಯಾಗಬೇಕಿದ್ದ ಅಮೂಲ್ಯ ಸಮಯವನ್ನು ಹಾಳು ಮಾಡಿದೆ.
ಭೀಕರ ಬರ ಆವರಿಸಿರುವ ಈ ಸನ್ನಿವೇಶದಲ್ಲಿ ರೈತರ ಪರಿಸ್ಥಿತಿ ಸುಧಾರಣೆಯ ಬಗ್ಗೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಚರ್ಚೆ ಮಾಡಬೇಕು. ಜೊತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಪಕ್ಷದ ನಾಯಕರಿಗೆ ಅಗತ್ಯ ಪ್ರಮಾಣದ ಬರ ಪರಿಹಾರ ಅನುದಾನವನ್ನು ತುರ್ತು ಬಿಡುಗಡೆ ಮಾಡುವಂತೆ ಒತ್ತಡವನ್ನು ಹೇರಬೇಕು. ಆ ಮೂಲಕ ರಾಜ್ಯದ ಜನತೆಗೆ ನೆರವಾಗಿ, ತಮ್ಮನ್ನು ಆರಿಸಿ ಕಳುಹಿಸಿದ ಮತದಾರರ ಋಣ ತೀರಿಸಬೇಕು. ಅದನ್ನು ಬಿಟ್ಟು ಯಾವುದೋ ನಕಲಿ ಡೈರಿಯನ್ನು ಹಿಡಿದು ನಿತ್ಯ ಜಗ್ಗಾಡುವುದರಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ.
ಜಾನುವಾರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆ ಇದೆ, ಈ ಪರಿಸ್ಥಿತಿಯನ್ನು ಯಾವ ಮಾರ್ಗಗಳ ಮೂಲಕ ಇನ್ನೂ ಉತ್ತಮವಾಗಿ ನಿರ್ವಹಿಸಬಹುದು ಎಂಬುದನ್ನು ಸ್ವತಃ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವಿರುವ ಜಗದೀಶ್ ಶೆಟ್ಟರ್ ಅವರಂಥ ಹಿರಿಯ ನಾಯಕರು ಸಲಹೆ ನೀಡಬೇಕು. ಸರ್ಕಾರದ ಬರ ಪರಿಹಾರ ಕಾಮಗಾರಿಗಳ ಹೊರತಾಗಿಯೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ, ಅದನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ವಿರೋಧ ಪಕ್ಷದವರು ಚರ್ಚಿಸಿ, ತಮ್ಮಿಂದ ಸಾಧ್ಯವಾಗುವ ಸಹಕಾರ ನೀಡಬೇಕು. ಹೀಗೆ ವಿರೋಧ ಪಕ್ಷಗಳು ಸಂಕಷ್ಟ ಸಮಯದಲ್ಲಿ ಆಡಳಿತ ಪಕ್ಷದ ನೆರವಿಗೆ ನಿಂತಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಪೂರ್ಣವಾಗಿರುತ್ತದೆ.
ಸುಪ್ರೀಂ ಕೋರ್ಟ್ ಕೂಡ ವೈಯಕ್ತಿಕ ಡೈರಿಯನ್ನು ಸಾಕ್ಷಿಯಾಗಿ ಪರಿಗಣಿಸಿ, ಅದರ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲು ಸಾದ್ಯವಿಲ್ಲ ಎಂದು ನರೇಂದ್ರ ಮೋದಿಯವರ ಸಹರಾ ಡೈರಿ ಪ್ರಕರಣದಲ್ಲಿ ಹೇಳಿರುವಾಗ, ನಿತ್ಯ ನಕಲಿ ಡೈರಿ ಬಗ್ಗೆ ಪ್ರತಿಭಟನೆ ನಡೆಸುವುದನ್ನು ನೋಡಿದರೆ ಇವರಿಗೆ ರಾಜ್ಯದ ರೈತರ ಮತ್ತು ಜನರ ಬಗ್ಗೆ ಇರುವ ಕಾಳಜಿ ಎಂಥದ್ದು ಎನ್ನುವುದು ತಿಳಿಯುತ್ತದೆ. ಕಷ್ಟ ಪಟ್ಟು ಸೃಷ್ಟಿಸಿದ ನಕಲಿ ಡೈರಿಯನ್ನು ಇನ್ನೂ ಒಂದಾರು ತಿಂಗಳು ಉಪಯೋಗಪಡಿಸಿಕೊಳ್ಳುವ ಜಿದ್ದಿಗೆ ಬಿದ್ದಿರುವುದು ಇವರ ನಡವಳಿಕೆಯಿಂದ ವ್ಯಕ್ತವಾಗುತ್ತಿದೆ.