ವೃತ್ತಿಧರ್ಮ ಮರೆತ ಖಾಸಗಿ ವೈದ್ಯಕೀಯ ವಲಯ

Private Hospital

ಖಾಸಗಿ ಆಸ್ಪತ್ರೆಗಳ ಮುಷ್ಕರ ತಾರಕಕ್ಕೇರುತ್ತಿದೆ. ವೈದ್ಯರು ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಮರೆತು ಸಮಾಜದ ಜೊತೆ ಕದನಕ್ಕಿಳಿದಿದ್ದಾರೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ ಇನ್ನೂ ಜಾರಿಯಾಗಿಲ್ಲ. ಜಾರಿಯಾದ ಮೇಲೂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿಕ್ಕೆ ಅವಕಾಶವಿದೆ. ಅಂಥಾದ್ದರಲ್ಲಿ ತಮ್ಮ ಮೂಲಭೂತ ಹಕ್ಕುಗಳಿಗೆ ಸರ್ಕಾರ ಚ್ಯುತಿ ತರುತ್ತಿದೆ ಎಂದು ಖಾಸಗಿ ವೈದ್ಯವಲಯ ಬೊಬ್ಬೆ ಹೊಡೆಯುತ್ತಿದೆ. ಆಶ್ಚರ್ಯ ಎಂದರೆ ಈ ವೈದ್ಯರಿಗೆ ಖಾಸಗಿ ಲ್ಯಾಬ್‍ನವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತಿರುವುದು. ಅಂದರೆ ಖಾಸಗಿ ವೈದ್ಯರಿಂದ ಇವರಿಗೆ ಇರುವ ಲಾಭದ ಪ್ರಮಾಣ ಎಷ್ಟು ಎನ್ನುವುದನ್ನು ಇದು ಹೇಳುತ್ತದೆಯಲ್ಲವೇ?

ಒಂದು ಆಸ್ಪತ್ರೆಯಲ್ಲಿ ರೋಗಿ ಮಾಡಿಸಿದ ಪರೀಕ್ಷಾ ಫಲಿತಾಂಶವನ್ನು ಇನ್ನೊಂದು ಆಸ್ಪತ್ರೆಯವರೇ ಒಪ್ಪುವುದಿಲ್ಲ, ನಮ್ಮಲ್ಲಿಯೂ ಇನ್ನೊಮ್ಮೆ ಮಾಡಿಸಿ ಎಂದು ಮತ್ತೆ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಅವರ ಆಸ್ಪತ್ರೆಯ ಲ್ಯಾಬ್‍ಗಳಲ್ಲಿ ಮಾಡಿಸಿದ ಪರೀಕ್ಷೆಯನ್ನು ನೀವು ಯಾಕೆ ಒಪ್ಪಲ್ಲ ಅಂತ ಅವರನ್ನು ಕೇಳಿದರೆ, ಅವರ ಯಂತ್ರೋಪಕರಣಗಳ ಬಗ್ಗೆ ನಮಗೆ ನಂಬಿಕೆ ಇಲ್ಲ ಎನ್ನುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಬಳಸುವ ಯಂತ್ರೋಪಕರಣಗಳ ಬಗ್ಗೆ ಪರಸ್ಪರ ನಂಬಿಕೆ ಇಲ್ಲದವರು ಈಗ ಹೇಗೆ ಒಂದಾಗಿದ್ದಾರೆ? ಯಾವ ನಂಬಿಕೆಯ ಸೂತ್ರ ಇವರನ್ನು ಒಂದು ಗೂಡಿಸಿದೆ?

ವೈದ್ಯರಿಗಿರಬೇಕಾದ ನೈತಿಕ ಎಚ್ಚರವನ್ನು ಬದಿಗಿರಿಸಿ ರೋಗಿಗಳ ಜೊತೆ ನಡೆದುಕೊಳ್ಳುವ ಇವರು ತಾವು ಜೀವ ರಕ್ಷಕರು ಎನ್ನುವುದನ್ನೂ ಮರೆತು ಹಣಗಳಿಸುವ ದಂಧೆಗೆ ಇಳಿದಿರುವುದು ಶೋಚನೀಯ. ಹಲವು ಸಾವಿರಗಳಲ್ಲಿ ನಡೆಯುತ್ತಿದ್ದ ಇವರ ದಂಧೆ ವಿಮಾ ಯೋಜನೆಗಳಿಂದ ಲಕ್ಷಗಳಿಗೆ ಏರಿದ್ದು ಏನೂ ಅರಿಯದ ಮಧ್ಯಮವರ್ಗದ ಜನತೆ ಬಲಿಯಾಗುತ್ತಿದೆ. ವೈದ್ಯೋ ನಾರಾಯಣೋ ಹರಿಃ ಎಂದು ಗೌರವಿಸಿ ದೈವತ್ವವನ್ನು ಕೊಟ್ಟ ಈ ಸಮಾಜವನ್ನು ನಿರಂತರವಾಗಿ ಶೋಷಣೆ ಮಾಡುತ್ತಲೆ ಬಂದಿರುವುದಲ್ಲದೆ, ನಾವಿರುವುದೇ ಶೋಷಣೆ ಮಾಡಲಿಕ್ಕೆ, ನಮ್ಮನ್ನು ಕಾನೂನಿನ ಅಡಿ ನಿಯಂತ್ರಣಕ್ಕೆ ತರಲೇಬಾರದು ಎಂದು ಒತ್ತಾಯಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ಡಾಕ್ಟರ್‍ಗಳೆಲ್ಲಾ ಕೆಟ್ಟವರು ಅಂತ ಅಲ್ಲ. ಒಬ್ಬ ಡಾಕ್ಟರ್ ಆಪರೇಷನ್ ಮಾಡಿಸಿ ಅಂತ ಹೇಳಿದ್ದಕ್ಕೆ ಇನ್ನೊಬ್ಬರು ಡಾಕ್ಟರ್ ಸರಳವಾದ ವೈದ್ಯೋಪಚಾರದಿಂದ ಪರಿಹಾರ ಮಾಡಿರುವುದೂ ಇದೆ. ಆದರೆ ನಾವ್ಯಾರೂ ಈ ದೇಶದ ಕಾನೂನಿಗೆ ಉತ್ತರಿಸಬೇಕಿಲ್ಲ ಎಂದು ನಿರ್ಧರಿಸಿ ವಿಧೇಯಕ ಜಾರಿಯಾಗುವ ಮೊದಲೇ ಹೀಗೆ ಮುಷರಕ್ಕೆ ತೊಡಗಿ ತಮ್ಮ ಸೇವೆಯನ್ನೆ ಅವಮಾನಿಸುತ್ತಿರುವುದು ದುರಾದೃಷ್ಟದ ಸಂಗತಿ. ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಇಲ್ಲಿ ಎಲ್ಲ ವೃತ್ತಿಗಳಂತೆ ವೈದ್ಯವೃತ್ತಿಯಲ್ಲೂ ವ್ಯಾವಹಾರಿಕ ಸಂಗತಿಗಳು ಸರಳ ಮತ್ತು ಪಾರದರ್ಶಕವಾಗಿರಬೇಕು. ಇದು ತುಂಬಾ ನಿಖರವಾದ ಮತ್ತು ತಾರ್ಕಿಕವಾದ ಸಂಗತಿ. ಇದಕ್ಕೆ ಇಷ್ಟು ಉಗ್ರವಾಗಿ ಪ್ರತಿಭಟನೆ ತೋರುತ್ತಿರುವುದನ್ನು ನೋಡಿದರೆ ತಮ್ಮ ಹುಳುಕೇನಾದರೂ ಬಯಲಿಗೆ ಬಂದುಬಿಟ್ಟರೆ ಎನ್ನುವ ಭಯ ಇದೆ ಎನ್ನಿಸುತ್ತಿದೆ.

ಸಮಾಜದ ಪ್ರತಿಷ್ಠಿತ ವರ್ಗ ಮಾನವೀಯತೆಯ ಹರಿಕಾರರು ಸಾಂತ್ವಾನದಲ್ಲಿ ತಾಯಿಯ ಹಾಗೆ ಇರಬೇಕಾದವರು, ಎಲ್ಲಕ್ಕೂ ಮಿಗಿಲಾಗಿ ಓದಿನ ಸಂಸ್ಕಾರ ಪಡೆದಿರುವರು ಬಳಸುತ್ತಿರುವ ಭಾಷೆ ನೋಡಿದರೆ ಆಶ್ಚರ್ಯವೆನ್ನಿಸುತ್ತದೆ. ನಮ್ಮ ತಂಟೆಗೆ ಬಂದರೆ…  ಎಂದು ರೌಡಿಗಳಿಗಿಂತ ಮಿಗಿಲಾಗಿ ರಸ್ತೆಯಲ್ಲಿ ನಿಂತು ಆಡುತ್ತಿರುವ ಮಾತುಗಳಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅಲ್ಪ ಸ್ವಲ್ಪ ಹಣವಲ್ಲ ಇಳಿದಿದ್ದು ಕೋಟಿ ಕೋಟಿ ವಸೂಲಿಗೆ. ಜನರ ಅಸಮಾಧಾನವಾಗಲಿ, ಗೋಳಾಗಲೀ ಯಾವುದಕ್ಕೂ ಯಾವತ್ತೂ ಖಾಸಗಿ ವೈದ್ಯ ಕ್ಷೇತ್ರ ಕಿವಿಗೊಳಲಿಲ್ಲ. ಸ್ವಲ್ಪ ಕಿವಿಗೊಟ್ಟಿದ್ದರೂ ಈ ಪರಿಸ್ಥಿತಿಗೆ ಎದುರಾಗುತ್ತಿರಲಿಲ್ಲ. ಏಕ ದರ ನೀತಿಗೆ ತಾವೇ ಬದ್ಧರಾಗಿದ್ದಿದ್ದರೆ ಬೀದಿಗಿಳಿದು ಪ್ರತಿಭಟಿಸುವ ಪ್ರಮೇಯವೂ ಬರುತ್ತಿರಲಿಲ್ಲ.

ರಾಜ್ಯದ ಜನರ ಹಿತವನ್ನು ಕಣ್ಣ ಮುಂದಿರಿಸಿಕೊಂಡು ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದನ್ನು ನಾಗರೀಕರು ಯಾರೂ ತಪ್ಪು ಎಂದು ಹೇಳುತ್ತಿಲ್ಲ. ಬದಲಿಗೆ ಸಂತೋಷ ಪಡುತ್ತಿದ್ದಾರೆ. ಆ ಸಂತೋಷದ ಹಿಂದೆ ತಾವು ಅನುಭವಿಸಿದ ಯಾತನಾಮಯ ಕ್ಷಣಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ಈ ವಿಷಯದ ಚರ್ಚೆಯಿಂದ ಖಾಸಗಿ ವಲಯದ ದೊಡ್ಡ ದೊಡ್ಡ ಆಸ್ಪತ್ರೆಗಳು ಮಾಡುತ್ತಾ ಬಂದಿರುವ ಮೋಸದ ಬಗ್ಗೆ ಮಾತಾಡುವ ಧೈರ್ಯ ಈಗ ಎಲ್ಲರಿಗೂ ಬಂದಿದೆ. ನಿರಂತರವಾಗಿ ಜನತೆಯ ಜೊತೆಗೆ  ವ್ಯವಹರಿಸುವ ಖಾಸಗಿ ವೈದ್ಯಕೀಯವಲಯ ಎಚ್ಚತ್ತು ಇನ್ನಾದರೂ ತನ್ನ ಪಟ್ಟುಗಳನ್ನು ಬಿಡದಿದ್ದರೆ ಜನತೆಯ ಆಕ್ರೋಶಕ್ಕೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s