ಮಾನವೀಯತೆಯ ಹತ್ಯೆ

lnksh.png

ಸೈದ್ಧಾಂತಿಕ ಭಿನ್ನಾಭಿಪ್ರಾಯದ ಜ್ವಾಲೆ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಖ್ಯಾತ ಪತ್ರಕರ್ತೆ, ಪ್ರಗತಪರ ಚಿಂತಕಿ ಗೌರಿ ಲಂಕೇಶ್‍ರನ್ನು ನೆನ್ನೆ ಬೆಂಗಳೂರಿನ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಸರ್ವಧರ್ಮ ಸಾಮರಸ್ಯದ ನೆಲ ಎಂದು ಹೆಸರಾಗಿದ್ದ ಕರ್ನಾಟಕದಲ್ಲಿ ಇಂಥ ಒಂದು ಹೇಯ ಕೃತ್ಯ ನಡೆದಿರುವುದು ಮಾನವ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ತಮ್ಮ ತಂದೆಯವರಿಂದ ಬಳುವಳಿ ಪಡೆದ ದಿಟ್ಟತನದ ಬರವಣಿಗೆಯನ್ನು ಮುಂದುವರೆಸಿಕೊಂಡು ಬಂದಂತಹ ಓರ್ವ ಹಿರಿಯ ಚಿಂತಕಿಯನ್ನು ಎದುರಿಸಲಾಗದ ಹೇಡಿ ಪಡೆ ಆಕೆಯನ್ನು ಬಲಿ ಪಡೆದು ಬೀಗುತ್ತಿದೆ.
ಹಲವಾರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಇವರ ಶ್ರಮ ಅವಿಸ್ಮರಣೀಯ. ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡುವುದರ ಜೊತೆಗೆ ತಮ್ಮದೇ ಆದ ಶೈಲಿಯಲ್ಲಿ ನೂರಾರು ಹೋರಾಟಗಳನ್ನು ಹಮ್ಮಿಕೊಂಡು, ಸಾಮಾಜಿಕ ಸಮಾನತೆಯೆಡೆಗೆ ಸದಾ ಕಾರ್ಯತತ್ಪರರಾಗಿದ್ದವರು. ಅವರ ಮುಂದಾಳತ್ವದಲ್ಲಿ ಹೊರಬರುತ್ತಿದ್ದ ಪತ್ರಿಕೆ ಎಲ್ಲೋ ನಾಲ್ಕು ಗೋಡೆಗಳ ನಡುವೆ ಕುಳಿತು ಬರೆಯುತ್ತಿದ್ದುದ್ದಲ್ಲ, ಅವುಗಳೆಲ್ಲ ಅವರ ಅನುಭವಕ್ಕೆ ಬಂದಂತಹ ಸಂಗತಿಗಳು. ನೊಂದವರಿಗೆ ನ್ಯಾಯ ಸಿಗಬೇಕು, ದುಷ್ಟರಿಗೆ ಶಿಕ್ಷೆಯಾಗಬೇಕು ಎಂಬ ಕಳಕಳಿಯ ಬರಹಗಳಾಗಿದ್ದವು. ಸಮಾಜದಲ್ಲಿ ಕಂಡುಬಂದಂತಹ ಡೊಂಕುಗಳನ್ನು ನೇರವಾಗಿ, ದಿಟ್ಟವಾಗಿ ಪ್ರಕಟಿಸುವ ಮೂಲಕ ಸಮಾಜಘಾತುಕರಿಗೆ ಸಿಂಹಸ್ವಪ್ನವಾಗಿದ್ದರು. ಇಂತಹ ಕಾರಣಗಳಿಂದಾಗಿಯೇ ಇವರ ವಿರುದ್ಧ ನ್ಯಾಯಲಯದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುವುದು. ಹಿಂದೊಂಮ್ಮೆ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಕಾರಣಕ್ಕೆ ಹುಬ್ಬಳಿಯ ನ್ಯಾಯಾಲಯ ಇವರಿಗೆ 6 ತಿಂಗಳ ಜೈಲುಶಿಕ್ಷೆಯನ್ನು ಸಹಾ ವಿಧಿಸಿತ್ತು. ಇದಾವುದಕ್ಕೂ ಎದೆಗುಂದದೆ ತಮ್ಮ ಹಳೆಯ ನೇರ, ನಿಷ್ಠೂರ ಶೈಲಿಯ ಬರಹಗಳನ್ನೇ ಮುಂದುವರೆಸಿಕೊಂಡು ಬಂದಿದ್ದರು. ಅದೆ ಬರಹ ಇಂದು ಅವರ ಜೀವವನ್ನು ಬಲಿ ಪಡೆದಿದೆ ಎಂದರೆ ತಪ್ಪಿಲ್ಲ.
ಭಿನ್ನ ವಿಚಾರಧಾರೆಗಳನ್ನು ಕೊಂದು ಹಾಕಿದರೆ ತಾವು ಜಯಗಳಿಸಿದಂತೆ ಎಂದು ನಂಬಿ, ಇಂದು ಗೌರಿಯವರ ಸಾವನ್ನು ಕಂಡು ಬೀಗುತ್ತಿರುವ ಜನರಿಗೆ ವಾಸ್ತವದ ಅರಿವಿಲ್ಲ. ತಾವು ಗೌರಿಯವರನ್ನು ಕೊಂದು ನೀವು ಸೈದ್ಧಾಂತಿಕವಾಗಿ ಸೋಲೊಪ್ಪಿಕೊಂಡಿದ್ದೇವೆ ಎಂದು. ಇತರರ ವಿಚಾರಗಳನ್ನು ಆಲಿಸುವ, ಚರ್ಚಿಸುವ ಸಹನಶೀಲತೆ ಇಲ್ಲದೆ ಹೋದರೆ ಇಂಥ ಅನಾಹುತಗಳು ಸಂಭವಿಸುತ್ತಲೇ ಹೋಗುತ್ತವೆ. ಎರಡು ವರ್ಷಗಳ ಹಿಂದೆ ಖ್ಯಾತ ಸಂಶೋಧಕ, ವಿಚಾರವಾದಿ ಎಂ.ಎಂ.ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿತ್ತು. ಹೆಚ್ಚು ಕಡಿಮೆ ಅದೇ ಮಾದರಿಯಲ್ಲಿಯೇ ಗೌರಿಯವರನ್ನು ಸಹ ಹತ್ಯೆಗೈಯ್ಯಲಾಗಿದೆ. ಮಹಾರಾಷ್ಟ್ರದಲ್ಲಿಯೂ ವಿಚಾರವಾದಿಗಳಾದ ನರೇಂದ್ರ ದಾಂಬೋಲ್ಕರ್, ಗೋವಿಂದ ಪಾನ್ಸರೆಯವರ ಹತ್ಯೆ ನಡೆದಿದೆ. ಅದೇ ರೀತಿ ವಿವಿಧ ರಾಜ್ಯಗಳಲ್ಲಿ ಭಿನ್ನ ಕೋಮಿನವರ ಹತ್ಯೆಗಳು ನಡೆದಿವೆ, ಅದೆಷ್ಟೋ ಮಂದಿ ಹಲ್ಲೆಗೊಳಗಾಗಿದ್ದಾರೆ. ಹಲ್ಲೆಗೊಳಗಾದವರು ಮತ್ತು ಇತರೆ ಪ್ರಗತಿಪರರ ಸಾವನ್ನು ಕಂಡವರು ಜೀವಭಯದಿಂದ ಮೂಲೆಗೆ ಸರಿದಿದ್ದಾರೆ ಎಂದು ಭಾವಿಸಿದರೆ ಅದು ಮೂರ್ಖತನ. ವಿಚಾರವಾದಿಯನ್ನು ಓರೆಗೆ ಹಚ್ಚಿ ನೋಡಿದಷ್ಟು ಪ್ರಕಾಶಿಸಬಲ್ಲ, ಎಲ್ಲಿಯವರೆಗೂ ತಾನು ಪ್ರತಿಪಾದಿಸುತ್ತಿರುವ ವಿಚಾರ ಸತ್ಯ ಮತ್ತು ವಾಸ್ತವತೆಯನ್ನು ಹೊಂದಿರುತ್ತದೆಯೋ ಅಲ್ಲಿಯವರೆಗೆ ಯಾವ ಮದ್ದು ಗುಂಡುಗಳಾಗಲೀ, ಕತ್ತಿಗಳಾಗಲೀ ವಿಚಾರಧಾರೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ.
ಇಂದು ನೀವು ಒಬ್ಬ ಗೌರಿಯನ್ನು ನಮ್ಮಿಂದ ದೂರ ಮಾಡಿದ ಮಾತ್ರಕ್ಕೆ ನಾವು ಕೈಸೋತು ಮೂಲೆ ಸೇರುವವರಲ್ಲ. ನಮ್ಮ ಮನದಲ್ಲಿ ಹಚ್ಚಿರುವ ಬೆಂಕಿ ಆರುವ ಮುನ್ನ ನಮ್ಮ ನಡುವೆ ನೂರು ಗೌರಿಯರು ಹುಟ್ಟಬಲ್ಲರು.

ಗೌರಿಯವರೇ,
“ನಾವೀಗ ನಿಮ್ಮ ಶವದೆದುರು ಮೂಕ ಪ್ರೇಕ್ಷಕರಾಗಿರಬಹುದು, ಆದರೆ ನಿಮ್ಮ ವಿಚಾರಗಳನ್ನು ನಮ್ಮ ಉಸಿರಿರುವವರೆಗೆ ಸೋಲಲು ಬಿಡುವುದಿಲ್ಲ”.

Advertisements