ದಕ್ಷಿಣ ಕನ್ನಡ ಗಲಭೆ ಹಿಂದಿನ ರಾಜಕೀಯ ಕೈಗಳು

Daksina kanada
ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಕನ್ನಡ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಬಿ.ಸಿ.ರೋಡ್‍ಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಜನರು ಮನೆಯಿಂದ ಹೊರಬರುವುದಕ್ಕೂ ಯೋಚನೆ ಮಾಡುವಂತಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದ್ದರೆ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾಡಿನ ಸೌಹಾರ್ದತೆಯನ್ನು ಬೆಳೆಸುವತ್ತ ಗಮನ ಹರಿಸಬೇಕಾದ ಬಿಜೆಪಿ ನಾಯಕರು ಜನರಲ್ಲಿ ದ್ವೇಷದ ಜ್ವಾಲೆಯನ್ನು ಹತ್ತಿಸುವ ಮೂಲಕ ರಾಜಕೀಯ ಲಾಭ ಪಡೆಯುವಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ. ಹೀಗಾದರೆ ಶಾಂತಿ ನೆಲೆಸುವುದಾದರೂ ಎಂತು?
ಇಲ್ಲಿನ ಗಲಭೆಗಳು ಕಲ್ಲಡ್ಕವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವುದು ಗಮನಿಸಬೇಕಾದ ಪ್ರಮುಖ ಅಂಶ. ಇದು ಆರ್‍ಎಸ್‍ಎಸ್ ಮುಖಂಡ ಪ್ರಭಾಕರ ಭಟ್ಟರ ಭದ್ರಕೋಟೆಯಾಗಿರುವುದೇ ಇದರ ಹಿಂದಿನ ರಹಸ್ಯ. ಪ್ರಭಾಕರ ಭಟ್ಟರು ಇಲ್ಲಿನ ಗಲಭೆಗಳ ತೆರೆಮರೆಯ ಸೂತ್ರಧಾರ. ಮೇ.26 ರಂದು ಕಲ್ಲಡ್ಕದಲ್ಲಿ ಆರಂಭವಾದ ಕೋಮು ಸಂಘರ್ಷ ಸಾಗಿ ಬಂದ ಹಾದಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹುದು. ಅಂದಿನಿಂದ ಇಂದಿನವರೆಗೂ 2 ಅಮಾಯಕ ಜೀವಗಳು ಬಲಿಯಾಗಿವೆ, ಆದರೂ ಕೂಡ ಕೋಮುವಾದಿಗಳ ರಕ್ತದ ದಾಹ ತಣಿದಂತೆ ಕಾಣುತ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಭದ್ರತೆಯಲ್ಲಿ ನಿರತವಾಗಿರುವ ಪೊಲೀಸರ ಕಣ್ಣುತಪ್ಪಿಸಿ ದಾಳಿಗಳು ನಡೆಯುತ್ತಿವೆ. ಇದುವರೆಗೂ 2 ಮಾರಕಾಸ್ತ್ರಗಳಿಂದ ಹಲ್ಲೆ, 3 ಚೂರಿ ಇರಿತ, ಕೆಲವು ಮಾರಕಾಸ್ತ್ರ ರಹಿತ ಹಲ್ಲೆ ಪ್ರಕರಣಗಳು ನಡೆದಿವೆ. ಈ ಘಟನೆಗಳಲ್ಲಿ ದಾಳಿಗೊಳಗಾದವರ್ಯಾರು ಸಮಾಜಘಾತುಕರಾಗಲೀ, ಹಾಲಿ ಅಥವಾ ಮಾಜಿ ರೌಡಿಗಳಾಗಲೀ ಅಲ್ಲ. ಎಲ್ಲರೂ ಅಮಾಯಕ ಜನರು. ಯಾರದೋ ಕುತಂತ್ರದಿಂದ ಮನೆಯ ಆಧಾರವಾಗಬೇಕಾಗಿದ್ದ ಜೀವಗಳು ಬೀದಿ ಹೆಣವಾಗಿವೆ.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಘಟನೆಯನ್ನು ಸರ್ಕಾರಕ್ಕೆ ಮಸಿ ಬಳಿಯುವ ಉದ್ದೇಶದಿಂದ ಕೆಲವು ಮತೀಯ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಲಿರುವುದು ದುರದೃಷ್ಟಕರ. ಈಗಿನ ಪರಿಸ್ಥಿತಿಯಲ್ಲಿ ನಿಜಕ್ಕೂ ಎಲ್ಲಾ ಪಕ್ಷದ ನಾಯಕರು ಒಂದಾಗಿ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಮೂಡಿಸುವತ್ತ ಗಮನ ಹರಿಸಬೇಕಾಗಿದೆ. ಇನ್ನೇನು ದಕ್ಷಿಣ ಕನ್ನಡ ಶಾಂತ ಸ್ಥಿತಿಗೆ ಮರಳುತ್ತಿದೆ ಎನ್ನುವ ಹೊತ್ತಿಗೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆಯವರು ಜುಲೈ 10ರ ಬೆಳಗ್ಗೆ ಕಲಬುರಗಿಯಲ್ಲಿ ಮತ್ತೊಮ್ಮೆ ಉರಿವ ಬೆಂಕಿಗೆ ತುಪ್ಪ ಸುರಿಯುವಂತಹ ಹೇಳಿಕೆಯನ್ನು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯವರೇನು ನಾಮರ್ದರೇ? ಎಂದು ಪ್ರಶ್ನಿಸುವ ಮೂಲಕ ತಿಳಿಗೊಳ್ಳುತ್ತಿರುವ ಪರಿಸ್ಥಿತಿಯನ್ನು ಮತ್ತೊಮ್ಮೆ ಕದಡುವ ಯತ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು ಈ ಸಂದರ್ಭಕ್ಕೆ ಎಷ್ಟು ಸೂಕ್ತ ಎಂಬುದನ್ನು ಬಿಜೆಪಿ ಅರಿತು ಮಾತನಾಡಬೇಕಿದೆ. ಪೊಲೀಸ್ ಇಲಾಖೆ ಮತ್ತು ಸರ್ಕಾರ ಶಾಂತಿ ಸೌಹಾರ್ದತೆಯನ್ನು ಕಾಪಾಡುವತ್ತ ಎಷ್ಟೇ ಪ್ರಯತ್ನ ಮಾಡಿದರೂ, ಸಾರ್ವಜನಿಕರು ಆ ಬಗ್ಗೆ ಕೈಜೋಡಿಸದ ಹೊರತು ಪ್ರಯತ್ನದಲ್ಲಿ ಯಶಸ್ಸು ಕಾಣುವುದು ಕಷ್ಟ.
ಇನ್ನಾದರೂ ಕೋಮು ಸೌಹಾರ್ದತೆ ಹಾಳುಮಾಡುವವರ ಉದ್ರೇಕಕಾರಿ ಮಾತುಗಳಿಂದ ಪ್ರಭಾವಿತರಾಗದೆ, ಸ್ವಸ್ಥ ಮತ್ತು ಶಾಂತಿಯುತ ಸಮಾಜ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಾ, ಬುದ್ಧ, ಬಸವ, ಕಬೀರರಂತಹ ಮಹಾನ್ ಚೇತನಗಳ ಆಶಯಗಳನ್ನು ಸಕಾರಗೊಳಿಸೋಣ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s