ರೈತರ ಕಷ್ಟಕ್ಕೆ ಬಂದೂಕಿನ ಉತ್ತರ

Police-gun
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ರೈತರನ್ನೆ ಗುಂಡಿಟ್ಟು ಕೊಲ್ಲುತ್ತಿರುವ ಪ್ರಕರಣಗಳು, ದಲಿತ, ಅಲ್ಪಸಂಖ್ಯಾತ ಜನಾಂಗದ ಮೇಲಿನ ಹಲ್ಲೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮೊನ್ನೆ ಮಧ್ಯಪ್ರದೇಶದಲ್ಲಿ ವಿವಿಧ ಬೆಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಏಕಾಏಕಿ ಗೋಲಿಬಾರ್ ನಡೆಸಲಾಯಿತು. ಈ ಘಟನೆಯಲ್ಲಿ ಐವರು ರೈತರು ಸಾವನ್ನಪ್ಪಿದರು. ಹಲವಾರು ರೈತರು ಗಂಭೀರ ಗಾಯಗಳಿಂದ ಇನ್ನೂ ಆಸ್ಪತ್ರೆಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಅವರು ಬದುಕುಳಿದರೂ ದುಡಿದು ತಿನ್ನುವಷ್ಟು ದೇಹಸ್ಥಿತಿ ಸಮರ್ಪಕವಾಗಿರುವುದು ಕೂಡ ಅನುಮಾನವೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಲ್ಲಿನ ಗೃಹ ಸಚಿವರಾದ ಭೂಪೆಂದರ್ ಸಿಂಗ್‍ರವರ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಕೊನೆಗೆ ತಾವು ಮೊದಲು ನೀಡಿದ ಹೇಳಿಕೆಗೆ ಯೂಟರ್ನ್ ಹೊಡೆದಿರುವುದು. ಈ ಪ್ರಕರಣದಲ್ಲಿ ರೈತರ ಸಾವು ಪೊಲೀಸರ ಗೋಲಿಬಾರ್‍ನಿಂದ ಸಂಭವಿಸಿಲ್ಲ, ಅವು ಪೊಲೀಸರ ಬಂದೂಕಿನಿಂದ ಹಾರಿದ ಗುಂಡುಗಳಲ್ಲ ಎಂದು ಹೇಳಿಕೆ ನೀಡಿದ್ದ ಅವರು, ನಂತರದಲ್ಲಿ ಇದರ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್ ಕೈವಾಡವಿದೆ ಎಂದು ಘಟನೆಗೆ ರಾಜಕೀಯ ಬಣ್ಣ ಬಳಿಯುವ ವಿಫಲಯತ್ನ ನಡೆಸಿದರು. ಕೊನೆಗೆ ಎಲ್ಲೆಡೆಯಿಂದ ಸರ್ಕಾರದ ಬಗ್ಗೆ ವಿರೋಧ ವ್ಯಕ್ತವಾದಾಗ ರೈತರ ಸಾವಿಗೆ ಪೊಲೀಸರ ಗೋಲಿಬಾರ್ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ದೊಡ್ಡ ಹೋರಾಟ ಆರಂಭವಾಗುವ ಮುನ್ಸೂಚನೆ ದೊರೆತು, ಗೋಲಿಬಾರ್‍ನಲ್ಲಿ ಮೃತಪಟ್ಟ ರೈತರ ಪ್ರತಿ ಕುಟುಂಬಗಳಿಗೆ ಭರ್ಜರಿ ರೂ. 1 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಪಡೆದ ಕುಟುಂಬ ಸರ್ಕಾರದ ವಿರುದ್ಧ ಉಸಿರೆತ್ತಲು ಸಾಧ್ಯವೇ ಇಲ್ಲ, ಇದು ಹಣದಿಂದ ಜೀವಗಳನ್ನು ಕೊಂಡಂತೆಯೇ ಸರಿ.
ಇನ್ನು ಗೋಲಿಬಾರ್ ನಡೆದ ಕೆಲವೇ ಕ್ಷಣಗಳಲ್ಲಿ ಮಂಡಸೌರ್, ರತ್ಲಂ ಮತ್ತು ಉಜ್ಜಯಿನಿಯಲ್ಲಿ ಇಂಟರ್‍ನೆಟ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಮೊಬೈಲ್ ಸಂದೇಶ ರವಾನೆಗೂ ಕೂಡ ನಿರ್ಬಂಧ ವಿಧಿಸಲಾಯಿತು. ಜನರಿಗೆ ತಮ್ಮ ಸುತ್ತ ಏನಾಗುತ್ತಿದೆ ಎಂಬುದೇ ತಿಳಿಯದಂತೆ ಮಾಡಿ ಆ ಮೂಲಕ ಅಂಧಕಾರಕ್ಕೆ ತಳ್ಳಿ, ಗಲಭೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಂಧಿಸಲಾಯಿತು. ಹೀಗೆ ಬೇಡಿಕೆಯಿಟ್ಟ ರೈತರನ್ನು ಗುಂಡಿಕ್ಕುವುದು, ವಿಚಾರ ವಿನಿಮಯ ಮಾಡದಂತೆ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವುದು, ಸಾಂತ್ವನ ಹೇಳಲು ತೆರಳುತ್ತಿದ್ದ ನಾಯಕನ ಬಂಧನ ಇವೆಲ್ಲವನ್ನು ನೋಡಿದರೆ ಅಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆಯೇ ಎಂಬ ಅನುಮಾನ ಎಂತಹವರನ್ನೂ ಕಾಡದೆ ಇರದು.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ವೇಳೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳೇ ಖುದ್ದಾಗಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಬರ ಕೇವಲ ಉತ್ತರ ಪ್ರದೇಶದ ಸಮಸ್ಯೆಯಲ್ಲ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ತೆಲಂಗಾಣಗಳು ಕೂಡ ಬರದಿಂದ ಕಂಗಾಲಾಗಿವೆ. ಉತ್ತರ ಪ್ರದೇಶದಲ್ಲಿ ಪ್ರಧಾನಿಗಳ ಹೇಳಿಕೆ ಸಹಜವಾಗಿಯೇ ಈ ರಾಜ್ಯಗಳ ರೈತರಲ್ಲೂ ಸಾಲ ಮನ್ನಾ ಮಾಡುವಂತೆ ಪ್ರತಿಭಟಿಸಲು ಪ್ರಚೋದನೆ ನೀಡಿತು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸಾಲ ಮನ್ನಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿತು. ಕೃಷಿ ಕೇವಲ ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವೇ? ಹಾಗಾದರೆ ರೈತರ ಸಂಕಷ್ಟಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲವೇ? ಆದ್ದರಿಂದ ದೇಶದಲ್ಲಿ ತುರ್ತಾಗಿ ಕೃಷಿ ವಿಚಾರದಲ್ಲಿ ಕೇಂದ್ರದ ಜವಾಬ್ದಾರಿಗಳೇನು ಎಂಬ ಒಂದು ಸ್ಪಷ್ಟ ಚಿತ್ರಣದ ಅಗತ್ಯವಿದೆ. ರೈತರ ಸಮಸ್ಯೆಗಳ ಸ್ಪಂದನೆಯಲ್ಲಿ ಕೇಂದ್ರದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿಯಬೇಕಾಗಿದೆ.

ಇದುವರೆಗೂ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಅಷ್ಟೇನು ತೃಪ್ತಿಕರವಾಗಿಲ್ಲ. ಕೃಷಿ ವಸ್ತುಗಳ ಉತ್ಪಾದನೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಇದಕ್ಕೆ ಸಮಾನಾಂತರವಾಗಿ ಕೃಷಿ ರಫ್ತು ನೆಲಕಚ್ಚಿದೆ. 2013-14ನೇ ಸಾಲಿನಲ್ಲಿ 3,295 ದಶಲಕ್ಷ ಯು.ಎಸ್ ಡಾಲರ್‍ನಷ್ಟಿದ್ದ ಕೃಷಿ ರಫ್ತು, 2016-17ನೇ ಸಾಲಿನಲ್ಲಿ 1,957 ದಶಲಕ್ಷ ಡಾಲರ್‍ಗೆ ಇಳಿಕೆ ಕಂಡಿದೆ. ಭೀಕರ ಬರದ ನಡುವೆಯೂ ಫಸಲ್ ಬಿಮಾ ಯೋಜನೆ ರೈತರ ನೆರವಿಗೆ ನಿಂತಿಲ್ಲ. ಖಾರಿಫ್ ಬೆಳೆಗೆ ಸಂಬಂಧಿಸಿದಂತೆ    2016-17ನೇ ಸಾಲಿನಲ್ಲಿ ಸುಮಾರು ರೂ. 34,00,000 ಕೋಟಿ ವಿಮಾ ಮೊತ್ತವನ್ನು ರೈತರು ಪಾವತಿಸಿದ್ದರೆ, ವಿಮಾ ಕಂಪನಿಗಳು ಸರಿಸುಮಾರು ರೂ. 13,00,000 ವಿಮಾ ಹಣವನ್ನು ರೈತರಿಗೆ ಪಾವತಿಸಿವೆ. ವಿಮಾ ಕಂಪೆನಿಗಳು ಇದರಿಂದ ಭರ್ಜರಿ ಲಾಭ ಗಳಿಸಿವೆಯೇ ವಿನಃ ರೈತರಿಗೆ ಇದು ಸಹಕಾರಿಯಾಗಿಲ್ಲ. 2014-15ನೇ ಸಾಲಿನಲ್ಲಿ  ಕೇಂದ್ರ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್‍ಗೆ ರೂ. 1796 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ.998 ಕೋಟಿಗೆ ಇಳಿಕೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ 2014-15ರಲ್ಲಿ ರೂ. 8363 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ. 3559 ಕೋಟಿಗೆ ಇಳಿಕೆ ಕಂಡಿದೆ. ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್‍ಗೆ 2014-15ರಲ್ಲಿ ರೂ. 1068 ಕೋಟಿ ಅನುದಾನ ನೀಡಲಾಗಿದ್ದು, 2016-17ನೇ ಸಾಲಿಗೆ ರೂ. 915 ಕೋಟಿಗೆ ಇಳಿಕೆ ಕಂಡಿದೆ. ದೇಶದಲ್ಲಿ ನಿತ್ಯ ಸಾಲಭಾದೆಯಿಂದ ಅಂದಾಜು 35 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಆಹಾರಧಾನ್ಯಗಳ ಬೆಲೆ ಕೆ.ಜಿ.ಯೊಂದಕ್ಕೆ ರೂ.44 ಇದ್ದರೆ, ಅದನ್ನು ರೂ. 230ಕ್ಕೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ದೇಶೀಯ ಕೃಷಿ ಇದರಿಂದ ಆಪಾರ ನಷ್ಟದಲ್ಲಿದೆ. ಇನ್ನೊಂದೆಡೆ ರೈತರಿಗೆ ಕೇಂದ್ರದಿಂದ ಸಮರ್ಪಕ ಬೆಂಬಲ ಬೆಲೆ ದೊರೆಯುತ್ತಿಲ್ಲ. ಇದನ್ನು ವಿರೋಧಿಸಿದರೆ ಲಾಠಿ ಮತ್ತು ಮದ್ದುಗುಂಡುಗಳು ಎದುರಾಗಿ ನಿಲ್ಲುತ್ತವೆ. ಬಂದೂಕುಗಳಡಿಯಲ್ಲಿ ಶಾಶ್ವತವಾಗಿ ಧ್ವನಿಯನ್ನು ಹುದುಗಿಡಲು ಸಾಧ್ಯವಿಲ್ಲ, ಜನರು ಬೇಸತ್ತು  ದೇಶಾದ್ಯಂತ ಸರ್ಕಾರದ ವಿರುದ್ಧ ದಂಗೆ ಎದ್ದಲ್ಲಿ ಪ್ರಜಾ ಶಕ್ತಿಯ ಮುಂದೆ ಯಾವ ಬಂದೂಕುಗಳು ನಿಲ್ಲಲಾರವು ಎಂಬುದನ್ನು ಮಾನ್ಯ ಪ್ರಧಾನಿಗಳು ಅರಿತು, ಕೃಷಿ ವಿಚಾರದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ವರ್ತಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕು, ಇದು ಅದರ ಕರ್ತವ್ಯ ಕೂಡ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s