ಹಿಂದುಳಿದ ವರ್ಗಗಳ ಕಲ್ಯಾಣದ ಹರಿಕಾರ ಡಿ. ದೇವರಾಜ ಅರಸ್

Dev-Ursಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರು ಗ್ರಾಮೀಣಾಭಿವೃದ್ಧಿಯ ಹರಿಕಾರರು ಕೂಡ ಹೌದು. ಗ್ರಾಮೀಣ ಜನತೆಯಲ್ಲಿ ಜೀವನೋಲ್ಲಾಸ ಹೆಚ್ಚಿಸಲು ಜೀವನದುದ್ದಕ್ಕೂ ಶ್ರಮಿಸಿದರು. ತಮ್ಮ ಆಡಳಿತಾವಧಿಯಲ್ಲಿ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೊಡ್ಡ ಮಟ್ಟದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರು.

ಹಳೇ ಮೈಸೂರು ಭಾಗದ ರಾಜಕೀಯ ಹುಲಿ ಎಂದೇ ಚರಿತ್ರೆಯಲ್ಲಿ ಗುರುತಿಸಿಕೊಂಡಿರುವ ಸಾಹುಕಾರ್ ಚೆನ್ನಯ್ಯನವರ ಒಂದೇ ಒಂದು ಮಾತಿನ ಮೇರೆಗೆ 24 ವರ್ಷ ಪ್ರಾಯದಲ್ಲೇ ರಾಜಕೀಯ ರಂಗ ಪ್ರವೇಶ ಮಾಡಿದ ದೇವರಾಜ ಅರಸರು, ರಾಜವಂಶದ ಎದುರು ಚುನಾವಣೆಯಲ್ಲಿ ಸ್ಪರ್ಧಿಸುವ ಗಂಡೆದೆ ಪ್ರದರ್ಶಿಸಿದರು. ಈ ಚುನಾವಣೆಯಲ್ಲಿ ದೇವರಾಜ ಅವರು ಶಾಸಕರಾಗಿ ಆಯ್ಕೆಯಾದರು. ಇದು ಅವರ ರಾಜಕೀಯ ಬದುಕಿನ ಆರಂಭದ ಹೆಜ್ಜೆ. ನಂತರದಲ್ಲಿ ಅವರು ರಾಜಕೀಯ ರಂಗದಲ್ಲಿ ಯಾರು ಏರದ ಎತ್ತರಕ್ಕೆ ಏರಿದರು. ಜನೋತ್ಕರ್ಷಕ್ಕಾಗಿ ಕಾನೂನು ಅಡ್ಡಿ ಬಂದಾಗ ಅದನ್ನು ಧಿಕ್ಕರಿಸಿದರು. ನಿರ್ಗತಿಕರಿಗೆ ಬೆಳಕಾದರು. ಇದು ಅವರ ಜನರ ಬಗೆಗಿನ ಅಭಿಮಾನದ ಬಗ್ಗೆ ಚಿಕ್ಕ ಉದಾಹರಣೆಯಷ್ಟೆ.

1969ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬಾಗವಾಯಿತು. ಒಂದೆಡೆ ಇಂದಿರಾಗಾಂಧಿ ಹಾಗೂ ಇನ್ನೊಂದೆಡೆ ಎಸ್.ನಿಜಲಿಂಗಪ್ಪ ಬಣ. ಯಾರ ಗುಂಪಿಗೆ ಹೋಗಬೇಕು ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ಇಂದಿರಾಗಾಂಧಿ ಬಣವನ್ನು ಸೇರಿದರು. ಮುಂದೆ ಎಲ್ಲವೂ ಇತಿಹಾಸ. ದೇವರಾಜ ಅರಸುರವರು ರಾಜ್ಯದ ಏಕಮೇವಾದ್ವಿತೀಯ ನಾಯಕರಾಗಿ ವಿಜೃಂಭಿಸಿದರು. ಸಮಾಜವಾದವನ್ನು ನಿಜವಾದ ಅರ್ಥದಲ್ಲಿ ಕೃತಿಯಲ್ಲಿ ಇಳಿಸಿದರು. ಅವರ ಆದೇಶಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಮರುಮಾತಿಲ್ಲದೆ ಜಾರಿಗೆ ತಂದರು. ಎಲ್ಲಾ ವರ್ಗದ ಜನ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸತೊಡಗಿದರು.

1972 ರಾಜ್ಯದ ಸುವರ್ಣಯುಗ. ಇಂದಿರಾಗಾಂಧಿಯವರ ಆಶಯದಂತೆ ಅರಸುರವರು ನಾಡಿನ ಮುಖ್ಯಂತ್ರಿಯಾದರು. ಬಡವರ ಪರವಾಗಿ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತರತೊಡಗಿದರು. ಸಮಯಪ್ರಜ್ಞೆ ಅವರಲ್ಲಿದ್ದ ಧೀಮಂತಶಕ್ತಿ. ಸಮಾಜಕ್ಕೆ ಅನುಕೂಲವಾಗುವಂತಹಾ ಯಾವುದೇ ಕೆಲಸವನ್ನು ಸಣ್ಣ ಅಧಿಕಾರಿ ಹೇಳಿದರೂ ಅದನ್ನು ಜಾರಿಗೆ ತರುತ್ತಿದ್ದರು. ಅಂದಿನ ಕಾಲದಲ್ಲಿ ಕಾಡನ್ನು ಜನರು ಲೂಟಿ ಮಾಡುತ್ತಿದ್ದರು, ಇದನ್ನು ರಕ್ಷಿಸಲು ಸೂಕ್ತ ಕಾನೂನು ಕೂಡ ಇರಲಿಲ್ಲ. ಅರಸರು ಆಗ ಮುಖ್ಯಮಂತ್ರಿ, ಕೆ.ಎಚ್.ಪಾಟೀಲ್ ಅರಣ್ಯ ಸಚಿವರಾಗಿದ್ದರು, ಇಬ್ಬರೂ ಸೇರಿ ಕೂಡಲೇ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಈ ರೀತಿಯ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಅರಸರಿಗೆ ಸಲ್ಲುತ್ತದೆ. ನಂತರ ಉಳುವವನೇ ಭೂಮಿಯ ಒಡೆಯ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವ ಮೂಲಕ ಇವರು ಶಾಶ್ವತವಾಗಿ ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದರು. ಜೀತದಾಳು ಪದ್ದತಿಗೆ ಮುಕ್ತಿ ನೀಡಿದ್ದು ಕೂಡ ಇವರ ದೊಡ್ಡ ಸಾಧನೆ. ಅರಸರು ಮುಖ್ಯಮಂತ್ರಿಯಾಗುವವರೆಗೂ ಇಲ್ಲಿ ಲಿಂಗಾಯಯ ಮತ್ತು ಒಕ್ಕಲಿಗರೇ ರಾಜ್ಯಸೂತ್ರದ ವಾರಸುದಾರರಾಗಿದ್ದರು, ಮಿಕ್ಕುಳಿದ ಜನರನ್ನು ರಾಜಕೀಯವಾಗಿ ಕೇಳುವವರು ದಿಕ್ಕಿರಲಿಲ್ಲ. ಎಲ್ಲಾ ಹಿಂದುಳಿದ ವರ್ಗಕ್ಕೆ ಜೀವವಾಹಿನಿಯಾದ ಅರಸರು ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸ್ಥಾಪಿತ ನಂಬಿಕೆಯನ್ನು ಛಿದ್ರಗೊಳಿಸಿದರು. ಎಲ್ಲಾ ಹಿಂದುಳಿದ ವರ್ಗಗಳು ವಿಧಾನಸಭೆಗೆ ಪ್ರವೇಶಿಸಲು ಮುಕ್ತ ಅವಕಾಶ ನೀಡಿದರು. ಗೇಣಿ ಶಾಸನ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗದಂತಹ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಜನತೆಗೆ ದೊರೆಯುತ್ತಿದೆ.

ದೇವರಾಜ ಅರಸರದ್ದು ವರ್ಣಮಯ ಬದುಕು. ಜೀವನದುದ್ದಕ್ಕೂ ಆನಂದವನ್ನು ಸೂರೆ ಮಾಡುತ್ತಲೇ ಅಂತಃಕರಣದ ಪ್ರತಿರೂಪವಾದ ಅತ್ಯಂತ ಅಪರೂಪದ ಮನುಷ್ಯ. ಅರಸರು
ಇಂದು ಇಲ್ಲವಾದರೂ ಅವರ ತೇಜೋವಲಯ ನಮ್ಮ ಸುತ್ತಲೂ ಹರಡಿಕೊಂಡಿದೆ. ನಿಜಕ್ಕೂ ಅವರದು ಸಾರ್ಥಕ ಬದುಕು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s