ಬಡ ರೋಗಿಗಳ ಪಾಲಿಗೆ ವರದಾನವಾದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ

Hospital-Blog
ಸದಾ ಜನಪರ ಹಾಗೂ ಜನಹಿತ ಕಾಪಾಡುವ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗುತ್ತಿರುವ ಕರ್ನಾಟಕ ರಾಜ್ಯ ಸರ್ಕಾರ, ಈ ಬಾರಿ ರಾಜ್ಯದ ಸಕಲ ನಾಗರಿಕರೂ ಹೆಮ್ಮೆ ಪಡುವಂತಹ ಒಂದು ಮಹತ್ತರ ಬದಲಾವಣೆಗೆ ಮುಂದಾಗಿದೆ. ಒಂದು ವೇಳೆ ಅಂದುಕೊಂಡಂತೆ ವಿಧೇಯಕ ಜಾರಿಯಾದಲ್ಲಿ ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಇನ್ನು ಮುಂದೆ ಎಲ್ಲ ವರ್ಗಗಳ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಶುಲ್ಕವನ್ನು ಪಡೆಯುವಾಗ ರಾಜ್ಯ ಸರ್ಕಾರ ನಿಗದಿ ಮಾಡಿದಷ್ಟೇ ಪಡೆಯಬೇಕಾಗುತ್ತದೆ. ಇದು ಬಡ ರೋಗಿಗಳ ಪಾಲಿಗೆ ವರದಾನವಾಗಿ ಪರಿಣಮಿಸಲಿದೆ ಎಂದರೆ ತಪ್ಪಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ರೋಗಿಗಳ ಸುಲಿಗೆಗೆ ಇಳಿದಿದ್ದವು, ಈ ಬಗ್ಗೆ ಹಲವಾರು ಬಾರಿ ಜನರು ಹಾಗೂ ಸರ್ಕಾರದಿಂದ ವಿರೋಧ ಕೂಡ ವ್ಯಕ್ತವಾಗಿತ್ತು, ಆದರೆ ಅವುಗಳು ಇಂತಹ ವಿರೋಧಗಳಿಗೆ ಮತ್ತು ಸರ್ಕಾರದ ಎಚ್ಚರಿಕೆಗಳಿಗೆ ಬಗ್ಗದೆ ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದವು. ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಹೊಸದಾಗಿ ‘ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕ’ವನ್ನು ಜಾರಿಗೆ ತರಲು ನಿರ್ಧರಿಸಿದೆ.
ಈ ಯೋಜನೆಯ ಪ್ರಮುಖ ಆಶಯಗಳೆಂದರೆ: ಎಲ್ಲಾ ಬಗೆಯ ವೈದ್ಯಕೀಯ ಚಿಕಿತ್ಸೆಗಳಿಗೆ ಇನ್ನು ಮುಂದೆ ಸರ್ಕಾರ ನಿಗದಿ ಮಾಡಿರುವ ದರವನ್ನೇ ಆಸ್ಪತ್ರೆಗಳು ವಸೂಲಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರ ನಿಗದಿ ಮಾಡಿರುವ ದರ ಕುರಿತಂತೆ ಆಸ್ಪತ್ರೆಯ ಪ್ರಮುಖ ಸ್ಥಳಗಳಲ್ಲಿ ಅಥವಾ ಸ್ವಾಗತ ಕೋಣೆಯಲ್ಲಿ ಸೂಚನಾಫಲಕ ಅಳವಡಿಸಬೇಕು. ತಪಾಸಣೆ, ಹಾಸಿಗೆ ವೆಚ್ಚ, ಶಸ್ತ್ರ ಚಿಕಿತ್ಸೆ, ಕೊಠಡಿ ವೆಚ್ಚ, ತೀವ್ರ ನಿಗಾಘಟಕದ ವೆಚ್ಚ, ರೋಗಿಗೆ ವೆಂಟಿಲೇಟರ್ ಮತ್ತು ಯಾವುದೇ ಹೆಚ್ಚುವರಿ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರವನ್ನೆ ಪಡೆಯಬೇಕು. ವಿವಿಧ ತಪಾಸಣೆಗಳ ಪ್ಯಾಕೇಜ್ ದರಗಳಿಗೂ ಇದು ಅನ್ವಯಿಸುತ್ತದೆ. ಇನ್ನು ಅಪಘಾತ, ಹೃದಯಾಘಾತ ಇಂತಹ ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಯು ರೋಗಿ ಅಥವಾ ರೋಗಿಯ ಸಂಬಂಧಿಕರಿಂದ ಮುಂಗಡ ಹಣ ಕಟ್ಟುವಂತೆ ಒತ್ತಾಯಿಸುವಂತಿಲ್ಲ. ಅಲ್ಲದೆ ಮುಂಗಡ ಹಣಕ್ಕಾಗಿ ಚಿಕಿತ್ಸೆ ನಿರಾಕರಿಸುವಂತಿಲ್ಲ. ಒಂದು ವೇಳೆ ಚಿಕಿತ್ಸೆ ಫಲಿಸದೆ ರೋಗಿ ಮೃತಪಟ್ಟಲ್ಲಿ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸದೆ ಮೃತ ದೇಹವನ್ನು ಹಸ್ತಾಂತರ ಮಾಡಬೇಕು ಮತ್ತು ಕಾಲಕ್ರಮದಲ್ಲಿ ಅದನ್ನು ಮೃತನ ಸಂಬಂಧಿಕರಿಂದ ವಸೂಲಿ ಮಾಡಿಕೊಳ್ಳಬೇಕು.

ರಾಜ್ಯದ ಪ್ರತಿಯೊಂದು ಖಾಸಗಿ ಆಸ್ಪತ್ರೆಯ ಗುಣಮಟ್ಟ, ಸಿಬ್ಬಂದಿ, ಸಾಮಥ್ರ್ಯಗಳ ಆಧಾರದ ಮೇಲೆ ಆಯಾ ಆಸ್ಪತ್ರೆಗಳ ದರವನ್ನು ನಿಗದಿಪಡಿಸಲು ಈ ಕಾಯ್ದೆಯಡಿ ತಜ್ಞರ ಸಮಿತಿ ರಚಿಸಲಾಗುತ್ತದೆ. ಆಯಾ ಆಸ್ಪತ್ರೆಗಳ ದರ ನಿಗದಿಮಾಡುವುದು ಆಸ್ಪತ್ರೆಯ ಮೂಲ ಸೌಕರ್ಯ, ಸಿಬ್ಬಂದಿ, ಆಡಿಟ್ ಮುಂತಾದವುಗಳನ್ನು ಪರಿಶೀಲಿಸಿ ದರ ನಿಗದಿಗೆ ಪರಿಗಣಿಸುವುದು ಸಮಿತಿಯ ಕೆಲಸವಾಗಿದೆ. ಹೀಗೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ರೋಗಿಯಿಂದ ಪಡೆದಿದ್ದೆ ಆದಲ್ಲಿ ಅಥವಾ ಕೆಲವು ನಿರ್ಧಿಷ್ಟ ನಿಯಮಗಳÀನ್ನು ಆಸ್ಪತ್ರೆಗಳು ಮೀರಿದ್ದೆ ಆದಲ್ಲಿ ಸಂಬಂಧಪಟ್ಟವರು ರೂ.25 ಸಾವಿರದಿಂದ ರೂ.5 ಲಕ್ಷದವರೆಗೆ ದಂಡ ತೆರುವುದು ಮತ್ತು ಆರು ತಿಂಗಳಿಂದ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇಂತಹ ಹಲವು ಸುಧಾರಣೆಗಳನ್ನು ಒಳಗೊಂಡಿರುವುದರಿಂದ ದೇಶದ ಇತಿಹಾಸದಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆಯಾಗಿದೆ. ನಿತ್ಯ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಣ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಅಥವಾ ಹಣ ನೀಡಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ದೊರೆಯದೆ ಕಂಗಾಲಾಗಿ ಮನೆಯ ದಾರಿ ಹಿಡಿಯಬೇಕಾಗಿದ್ದ ರೋಗಿಗಳಿಗೆ ಇದು ಹೊಸ ಭರವಸೆಯನ್ನು ಹುಟ್ಟಿಸಿದೆ. ಇಂತಹದೊಂದು ಮಹತ್ತರ ಬದಲಾವಣೆಗೆ ಅಣಿಯಾಗಿರುವ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸೋಣ.

ಮರುಜೀವ ಪಡೆದ ನ್ಯಾಷನಲ್ ಹೆರಾಲ್ಡ್

National-herald-3

ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪನೆಗೊಂಡು, ದೇಶದ ಜನತೆಯನ್ನು ಸ್ವಾತಂತ್ರ್ಯದೆಡೆಗೆ ಹುರಿದುಂಬಿಸುವ ಮೂಲಕ, ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ದ್ಯೋತಕವಾಗಿದ್ದ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆ ಇಂದು ಮತ್ತೊಮ್ಮೆ ತನ್ನ ಹಳೆಯ ವೈಭವಕ್ಕೆ ಮರುಳುತ್ತಿದೆ. ಇದು ಸಹಜವಾಗಿಯೇ ಬಲಪಂಥೀಯ ವಲಯದಲ್ಲಿ ನಡುಕವುಂಟುಮಾಡಿದೆ. ಈಗಾಗಲೇ ಪತ್ರಿಕೆ ವಿರುದ್ಧ ಭಕ್ತಗಣ ಅಪಪ್ರಚಾರಕ್ಕೆ ನಿಂತಿದೆ. ಇದಕ್ಕೆಲ್ಲ ಮುಖ್ಯ ಕಾರಣ ಅವರು ಕುಣಿಸಿದಂತೆ ಕುಣಿಯುತ್ತಾ, ‘ಶೂನ್ಯ’ವನ್ನೇ ಸಾಧೆನೆಯೆಂಬಂತೆ ಬಿಂಬಿಸುತ್ತಿರುವ ಉಳಿದ ಮಾಧ್ಯಮಗಳ ನಿಜ ಬಣ್ಣ ಬಯಲಾಗಬಹುದು ಎಂಬ ಭಯ. ಒಂದು ವೇಳೆ ಯಾವುದಾದರೊಂದು ಮಾಧ್ಯಮ ಸರ್ಕಾರದ ವೈಫಲ್ಯಗಳನ್ನು ತೋರಿಸಿತು ಎಂದಾದರೆ, ಅದರ ಮೇಲೆ ಸರ್ಕಾರಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡು ದಾಳಿ ಮಾಡಿಸುವುದು ಕಟ್ಟಿಟ್ಟ ಬುತ್ತಿ, ಮೊನ್ನೆ ಮೊನ್ನೆ ಎನ್‍ಡಿ ಟಿವಿ ಸಂಸ್ಥಾಪಕ ಪ್ರಣಯ್ ರಾಯ್ ಮನೆ ಮೇಲಿನ ಸಿಬಿಐ ದಾಳಿ ಇದಕ್ಕೆ ಸ್ಪಷ್ಟ ಉದಾಹರಣೆ.

ದೇಶದಲ್ಲಿ ಮೋದಿ ಆಡಳಿತಕ್ಕೆ ಬಂದ ನಂತರದಲ್ಲಿ ಮಾಧ್ಯಮಗಳು ಬಲಪಂಥೀಯ ವಿಚಾರಧಾರೆಯನ್ನು ವೈಭವೀಕರಿಸುತ್ತಾ, ಅದನ್ನೇ ಬಲವಂತವಾಗಿ ಜನತೆಯಲ್ಲಿ ತುಂಬುವ ಕಾರ್ಯದಲ್ಲಿ ನಿರತವಾಗಿವೆ. ಇನ್ನು ಬಿಜೆಪಿ ಹಿಂದುತ್ವವನ್ನೇ ತಮ್ಮ ಬಂಡವಾಳ ಮಾಡಿಕೊಂಡು, ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಬಿಂಬಿಸುವ ಕಾರ್ಯದಲ್ಲಿ ಮುಳುಗಿದೆ. ಇಂತಹ ಒಂದು ವ್ಯವಸ್ಥೆಯನ್ನು ವಿರೋಧಿಸಲು ಸಮರ್ಥ ಮತ್ತು ಪ್ರಭಾವಶಾಲಿ ವೇದಿಕೆಯೊಂದರ ಕೊರತೆ ದೇಶವನ್ನು ಕೆಲವು ವರ್ಷಗಳಿಂದ ಕಾಡುತ್ತಿತ್ತು, ಅದನ್ನೇ ಬಿಜೆಪಿ ಮತ್ತದರ ಮಿತ್ರ ಪಕ್ಷಗಳು ದುರುಪಯೋಗ ಪಡಿಸಿಕೊಂಡು, ದೇಶವನ್ನು ಭ್ರಮಾ ಲೋಕದಲ್ಲಿ ಮುಳುಗಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಫಲವಾದವು. ಬಹಳಷ್ಟು ಮಾಧ್ಯಮಗಳಲ್ಲಿ ಉನ್ನತ ಹುದ್ದೆಗಳಲ್ಲಿರುವವರು ಸಮಾಜದ ಮೇಲು ವರ್ಗದ ಜನರು, ಅವರು ಕೂಡ ಅಧಿಕಾರದ ವಿಕೇಂದ್ರೀಕರಣವನ್ನಾಗಲೀ, ಪ್ರಜಾಪ್ರಭುತ್ವದ ಆಶಯಗಳನ್ನಾಗಲೀ ಒಪ್ಪುವ ಮನಃಸ್ಥಿತಿಯವರಲ್ಲ. ಮೋದಿಯವರಂತೂ ಸಂವಿಧಾನದ ನಿಯಮಗಳನ್ನೇ ಗಾಳಿಯಲ್ಲಿ ತೂರಿ ತಮಗೆ ಬೇಕಾದಂತೆ ನಿಯಮಗಳನ್ನು ರೂಪಿಸುತ್ತಾ, ಭಾವನಾತ್ಮಕ ವಿಚಾರಗಳನ್ನೆ ಹೆಚ್ಚು ಪ್ರಚಾರಕ್ಕೆ ತಂದು ತನ್ಮೂಲಕ ಜನತೆಯನ್ನು ಮತಗಳಾಗಿ ಪರಿವರ್ತಿಸುವ ನಿಪುಣರು. ಹಾಗಾಗಿ ಮೋದಿಗೆ ಬಹುಪರಾಕ್ ಹೇಳುತ್ತಲೇ, ಮಿಥ್ಯವನ್ನೇ ನೂರು ಬಾರಿ ಪ್ರಚಾರ ಮಾಡಿ, ಕೊನೆಗೊಮ್ಮೆ ಸತ್ಯವೇ ಜನರ ಕಣ್ಣ ಮುಂದೆ ಬಂದರೂ ಜನರು ಅದನ್ನು ಸ್ವೀಕರಿಸದಂತೆ ಮಾಡಿವೆ.

ಇಂತಹದ್ದೊಂದು ಭ್ರಮೆಯ ಪರದೆ ಕಳಚಿ, ಸತ್ಯದ ಬೆಳಕು ಹರಿಯಬೇಕಾದರೆ ಸ್ವತಂತ್ರ ಮತ್ತು ಸದೃಢ ಮಾಧ್ಯಮವೊಂದರ ಅಗತ್ಯವಿತ್ತು. ಆ ಕೊರತೆಯನ್ನು ನ್ಯಾಷನಲ್ ಹೆರಾಲ್ಡ್ ನೀಗಿಸಲಿದೆ ಎಂಬುದು ಸದ್ಯದ ಅಭಿಪ್ರಾಯ.

ರೈತರ ಕಷ್ಟಕ್ಕೆ ಬಂದೂಕಿನ ಉತ್ತರ

Police-gun
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ ರೈತರನ್ನೆ ಗುಂಡಿಟ್ಟು ಕೊಲ್ಲುತ್ತಿರುವ ಪ್ರಕರಣಗಳು, ದಲಿತ, ಅಲ್ಪಸಂಖ್ಯಾತ ಜನಾಂಗದ ಮೇಲಿನ ಹಲ್ಲೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮೊನ್ನೆ ಮಧ್ಯಪ್ರದೇಶದಲ್ಲಿ ವಿವಿಧ ಬೆಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದ ರೈತರ ಮೇಲೆ ಏಕಾಏಕಿ ಗೋಲಿಬಾರ್ ನಡೆಸಲಾಯಿತು. ಈ ಘಟನೆಯಲ್ಲಿ ಐವರು ರೈತರು ಸಾವನ್ನಪ್ಪಿದರು. ಹಲವಾರು ರೈತರು ಗಂಭೀರ ಗಾಯಗಳಿಂದ ಇನ್ನೂ ಆಸ್ಪತ್ರೆಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಅವರು ಬದುಕುಳಿದರೂ ದುಡಿದು ತಿನ್ನುವಷ್ಟು ದೇಹಸ್ಥಿತಿ ಸಮರ್ಪಕವಾಗಿರುವುದು ಕೂಡ ಅನುಮಾನವೆ.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಲ್ಲಿನ ಗೃಹ ಸಚಿವರಾದ ಭೂಪೆಂದರ್ ಸಿಂಗ್‍ರವರ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಕೊನೆಗೆ ತಾವು ಮೊದಲು ನೀಡಿದ ಹೇಳಿಕೆಗೆ ಯೂಟರ್ನ್ ಹೊಡೆದಿರುವುದು. ಈ ಪ್ರಕರಣದಲ್ಲಿ ರೈತರ ಸಾವು ಪೊಲೀಸರ ಗೋಲಿಬಾರ್‍ನಿಂದ ಸಂಭವಿಸಿಲ್ಲ, ಅವು ಪೊಲೀಸರ ಬಂದೂಕಿನಿಂದ ಹಾರಿದ ಗುಂಡುಗಳಲ್ಲ ಎಂದು ಹೇಳಿಕೆ ನೀಡಿದ್ದ ಅವರು, ನಂತರದಲ್ಲಿ ಇದರ ಹಿಂದೆ ವಿರೋಧ ಪಕ್ಷ ಕಾಂಗ್ರೆಸ್ ಕೈವಾಡವಿದೆ ಎಂದು ಘಟನೆಗೆ ರಾಜಕೀಯ ಬಣ್ಣ ಬಳಿಯುವ ವಿಫಲಯತ್ನ ನಡೆಸಿದರು. ಕೊನೆಗೆ ಎಲ್ಲೆಡೆಯಿಂದ ಸರ್ಕಾರದ ಬಗ್ಗೆ ವಿರೋಧ ವ್ಯಕ್ತವಾದಾಗ ರೈತರ ಸಾವಿಗೆ ಪೊಲೀಸರ ಗೋಲಿಬಾರ್ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ದೊಡ್ಡ ಹೋರಾಟ ಆರಂಭವಾಗುವ ಮುನ್ಸೂಚನೆ ದೊರೆತು, ಗೋಲಿಬಾರ್‍ನಲ್ಲಿ ಮೃತಪಟ್ಟ ರೈತರ ಪ್ರತಿ ಕುಟುಂಬಗಳಿಗೆ ಭರ್ಜರಿ ರೂ. 1 ಕೋಟಿ ಪರಿಹಾರವನ್ನು ಘೋಷಿಸಿದ್ದಾರೆ. ಇಷ್ಟು ದೊಡ್ಡ ಮೊತ್ತವನ್ನು ಪಡೆದ ಕುಟುಂಬ ಸರ್ಕಾರದ ವಿರುದ್ಧ ಉಸಿರೆತ್ತಲು ಸಾಧ್ಯವೇ ಇಲ್ಲ, ಇದು ಹಣದಿಂದ ಜೀವಗಳನ್ನು ಕೊಂಡಂತೆಯೇ ಸರಿ.
ಇನ್ನು ಗೋಲಿಬಾರ್ ನಡೆದ ಕೆಲವೇ ಕ್ಷಣಗಳಲ್ಲಿ ಮಂಡಸೌರ್, ರತ್ಲಂ ಮತ್ತು ಉಜ್ಜಯಿನಿಯಲ್ಲಿ ಇಂಟರ್‍ನೆಟ್ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ಮೊಬೈಲ್ ಸಂದೇಶ ರವಾನೆಗೂ ಕೂಡ ನಿರ್ಬಂಧ ವಿಧಿಸಲಾಯಿತು. ಜನರಿಗೆ ತಮ್ಮ ಸುತ್ತ ಏನಾಗುತ್ತಿದೆ ಎಂಬುದೇ ತಿಳಿಯದಂತೆ ಮಾಡಿ ಆ ಮೂಲಕ ಅಂಧಕಾರಕ್ಕೆ ತಳ್ಳಿ, ಗಲಭೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಯಿತು. ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಬಂಧಿಸಲಾಯಿತು. ಹೀಗೆ ಬೇಡಿಕೆಯಿಟ್ಟ ರೈತರನ್ನು ಗುಂಡಿಕ್ಕುವುದು, ವಿಚಾರ ವಿನಿಮಯ ಮಾಡದಂತೆ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸುವುದು, ಸಾಂತ್ವನ ಹೇಳಲು ತೆರಳುತ್ತಿದ್ದ ನಾಯಕನ ಬಂಧನ ಇವೆಲ್ಲವನ್ನು ನೋಡಿದರೆ ಅಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆಯೇ ಎಂಬ ಅನುಮಾನ ಎಂತಹವರನ್ನೂ ಕಾಡದೆ ಇರದು.

ಉತ್ತರ ಪ್ರದೇಶದ ಚುನಾವಣಾ ಪ್ರಚಾರ ವೇಳೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳೇ ಖುದ್ದಾಗಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಬರ ಕೇವಲ ಉತ್ತರ ಪ್ರದೇಶದ ಸಮಸ್ಯೆಯಲ್ಲ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ತೆಲಂಗಾಣಗಳು ಕೂಡ ಬರದಿಂದ ಕಂಗಾಲಾಗಿವೆ. ಉತ್ತರ ಪ್ರದೇಶದಲ್ಲಿ ಪ್ರಧಾನಿಗಳ ಹೇಳಿಕೆ ಸಹಜವಾಗಿಯೇ ಈ ರಾಜ್ಯಗಳ ರೈತರಲ್ಲೂ ಸಾಲ ಮನ್ನಾ ಮಾಡುವಂತೆ ಪ್ರತಿಭಟಿಸಲು ಪ್ರಚೋದನೆ ನೀಡಿತು. ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಸಾಲ ಮನ್ನಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದು ಜವಾಬ್ದಾರಿಯಿಂದ ನುಣುಚಿಕೊಂಡಿತು. ಕೃಷಿ ಕೇವಲ ರಾಜ್ಯಗಳಿಗೆ ಸಂಬಂಧಪಟ್ಟ ವಿಚಾರವೇ? ಹಾಗಾದರೆ ರೈತರ ಸಂಕಷ್ಟಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲವೇ? ಆದ್ದರಿಂದ ದೇಶದಲ್ಲಿ ತುರ್ತಾಗಿ ಕೃಷಿ ವಿಚಾರದಲ್ಲಿ ಕೇಂದ್ರದ ಜವಾಬ್ದಾರಿಗಳೇನು ಎಂಬ ಒಂದು ಸ್ಪಷ್ಟ ಚಿತ್ರಣದ ಅಗತ್ಯವಿದೆ. ರೈತರ ಸಮಸ್ಯೆಗಳ ಸ್ಪಂದನೆಯಲ್ಲಿ ಕೇಂದ್ರದ ಪಾಲೆಷ್ಟು ಎಂಬುದು ಎಲ್ಲರಿಗೂ ತಿಳಿಯಬೇಕಾಗಿದೆ.

ಇದುವರೆಗೂ ಕೃಷಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದ ಕೊಡುಗೆ ಅಷ್ಟೇನು ತೃಪ್ತಿಕರವಾಗಿಲ್ಲ. ಕೃಷಿ ವಸ್ತುಗಳ ಉತ್ಪಾದನೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಇದಕ್ಕೆ ಸಮಾನಾಂತರವಾಗಿ ಕೃಷಿ ರಫ್ತು ನೆಲಕಚ್ಚಿದೆ. 2013-14ನೇ ಸಾಲಿನಲ್ಲಿ 3,295 ದಶಲಕ್ಷ ಯು.ಎಸ್ ಡಾಲರ್‍ನಷ್ಟಿದ್ದ ಕೃಷಿ ರಫ್ತು, 2016-17ನೇ ಸಾಲಿನಲ್ಲಿ 1,957 ದಶಲಕ್ಷ ಡಾಲರ್‍ಗೆ ಇಳಿಕೆ ಕಂಡಿದೆ. ಭೀಕರ ಬರದ ನಡುವೆಯೂ ಫಸಲ್ ಬಿಮಾ ಯೋಜನೆ ರೈತರ ನೆರವಿಗೆ ನಿಂತಿಲ್ಲ. ಖಾರಿಫ್ ಬೆಳೆಗೆ ಸಂಬಂಧಿಸಿದಂತೆ    2016-17ನೇ ಸಾಲಿನಲ್ಲಿ ಸುಮಾರು ರೂ. 34,00,000 ಕೋಟಿ ವಿಮಾ ಮೊತ್ತವನ್ನು ರೈತರು ಪಾವತಿಸಿದ್ದರೆ, ವಿಮಾ ಕಂಪನಿಗಳು ಸರಿಸುಮಾರು ರೂ. 13,00,000 ವಿಮಾ ಹಣವನ್ನು ರೈತರಿಗೆ ಪಾವತಿಸಿವೆ. ವಿಮಾ ಕಂಪೆನಿಗಳು ಇದರಿಂದ ಭರ್ಜರಿ ಲಾಭ ಗಳಿಸಿವೆಯೇ ವಿನಃ ರೈತರಿಗೆ ಇದು ಸಹಕಾರಿಯಾಗಿಲ್ಲ. 2014-15ನೇ ಸಾಲಿನಲ್ಲಿ  ಕೇಂದ್ರ ಸರ್ಕಾರ ನ್ಯಾಷನಲ್ ಫುಡ್ ಸೆಕ್ಯುರಿಟಿ ಮಿಷನ್‍ಗೆ ರೂ. 1796 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ.998 ಕೋಟಿಗೆ ಇಳಿಕೆಯಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಗೆ 2014-15ರಲ್ಲಿ ರೂ. 8363 ಕೋಟಿ ಅನುದಾನ ನೀಡಿದ್ದು, 2016-17ನೇ ಸಾಲಿಗೆ ರೂ. 3559 ಕೋಟಿಗೆ ಇಳಿಕೆ ಕಂಡಿದೆ. ನ್ಯಾಷನಲ್ ಹಾರ್ಟಿಕಲ್ಚರ್ ಮಿಷನ್‍ಗೆ 2014-15ರಲ್ಲಿ ರೂ. 1068 ಕೋಟಿ ಅನುದಾನ ನೀಡಲಾಗಿದ್ದು, 2016-17ನೇ ಸಾಲಿಗೆ ರೂ. 915 ಕೋಟಿಗೆ ಇಳಿಕೆ ಕಂಡಿದೆ. ದೇಶದಲ್ಲಿ ನಿತ್ಯ ಸಾಲಭಾದೆಯಿಂದ ಅಂದಾಜು 35 ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ವಿದೇಶದಿಂದ ಆಮದು ಮಾಡಿಕೊಳ್ಳುವ ಆಹಾರಧಾನ್ಯಗಳ ಬೆಲೆ ಕೆ.ಜಿ.ಯೊಂದಕ್ಕೆ ರೂ.44 ಇದ್ದರೆ, ಅದನ್ನು ರೂ. 230ಕ್ಕೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ದೇಶೀಯ ಕೃಷಿ ಇದರಿಂದ ಆಪಾರ ನಷ್ಟದಲ್ಲಿದೆ. ಇನ್ನೊಂದೆಡೆ ರೈತರಿಗೆ ಕೇಂದ್ರದಿಂದ ಸಮರ್ಪಕ ಬೆಂಬಲ ಬೆಲೆ ದೊರೆಯುತ್ತಿಲ್ಲ. ಇದನ್ನು ವಿರೋಧಿಸಿದರೆ ಲಾಠಿ ಮತ್ತು ಮದ್ದುಗುಂಡುಗಳು ಎದುರಾಗಿ ನಿಲ್ಲುತ್ತವೆ. ಬಂದೂಕುಗಳಡಿಯಲ್ಲಿ ಶಾಶ್ವತವಾಗಿ ಧ್ವನಿಯನ್ನು ಹುದುಗಿಡಲು ಸಾಧ್ಯವಿಲ್ಲ, ಜನರು ಬೇಸತ್ತು  ದೇಶಾದ್ಯಂತ ಸರ್ಕಾರದ ವಿರುದ್ಧ ದಂಗೆ ಎದ್ದಲ್ಲಿ ಪ್ರಜಾ ಶಕ್ತಿಯ ಮುಂದೆ ಯಾವ ಬಂದೂಕುಗಳು ನಿಲ್ಲಲಾರವು ಎಂಬುದನ್ನು ಮಾನ್ಯ ಪ್ರಧಾನಿಗಳು ಅರಿತು, ಕೃಷಿ ವಿಚಾರದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ವರ್ತಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕು, ಇದು ಅದರ ಕರ್ತವ್ಯ ಕೂಡ.

ಹಿಂದುಳಿದ ವರ್ಗಗಳ ಕಲ್ಯಾಣದ ಹರಿಕಾರ ಡಿ. ದೇವರಾಜ ಅರಸ್

Dev-Ursಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಪಂಗಡಗಳ ಮೂಕ ಬಾಯಿಗೆ ದನಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರು ಗ್ರಾಮೀಣಾಭಿವೃದ್ಧಿಯ ಹರಿಕಾರರು ಕೂಡ ಹೌದು. ಗ್ರಾಮೀಣ ಜನತೆಯಲ್ಲಿ ಜೀವನೋಲ್ಲಾಸ ಹೆಚ್ಚಿಸಲು ಜೀವನದುದ್ದಕ್ಕೂ ಶ್ರಮಿಸಿದರು. ತಮ್ಮ ಆಡಳಿತಾವಧಿಯಲ್ಲಿ ಭೂಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ದೊಡ್ಡ ಮಟ್ಟದ ಕ್ರಾಂತಿಕಾರಕ ಬದಲಾವಣೆಗೆ ಕಾರಣರಾದರು.

ಹಳೇ ಮೈಸೂರು ಭಾಗದ ರಾಜಕೀಯ ಹುಲಿ ಎಂದೇ ಚರಿತ್ರೆಯಲ್ಲಿ ಗುರುತಿಸಿಕೊಂಡಿರುವ ಸಾಹುಕಾರ್ ಚೆನ್ನಯ್ಯನವರ ಒಂದೇ ಒಂದು ಮಾತಿನ ಮೇರೆಗೆ 24 ವರ್ಷ ಪ್ರಾಯದಲ್ಲೇ ರಾಜಕೀಯ ರಂಗ ಪ್ರವೇಶ ಮಾಡಿದ ದೇವರಾಜ ಅರಸರು, ರಾಜವಂಶದ ಎದುರು ಚುನಾವಣೆಯಲ್ಲಿ ಸ್ಪರ್ಧಿಸುವ ಗಂಡೆದೆ ಪ್ರದರ್ಶಿಸಿದರು. ಈ ಚುನಾವಣೆಯಲ್ಲಿ ದೇವರಾಜ ಅವರು ಶಾಸಕರಾಗಿ ಆಯ್ಕೆಯಾದರು. ಇದು ಅವರ ರಾಜಕೀಯ ಬದುಕಿನ ಆರಂಭದ ಹೆಜ್ಜೆ. ನಂತರದಲ್ಲಿ ಅವರು ರಾಜಕೀಯ ರಂಗದಲ್ಲಿ ಯಾರು ಏರದ ಎತ್ತರಕ್ಕೆ ಏರಿದರು. ಜನೋತ್ಕರ್ಷಕ್ಕಾಗಿ ಕಾನೂನು ಅಡ್ಡಿ ಬಂದಾಗ ಅದನ್ನು ಧಿಕ್ಕರಿಸಿದರು. ನಿರ್ಗತಿಕರಿಗೆ ಬೆಳಕಾದರು. ಇದು ಅವರ ಜನರ ಬಗೆಗಿನ ಅಭಿಮಾನದ ಬಗ್ಗೆ ಚಿಕ್ಕ ಉದಾಹರಣೆಯಷ್ಟೆ.

1969ನೇ ಇಸವಿಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬಾಗವಾಯಿತು. ಒಂದೆಡೆ ಇಂದಿರಾಗಾಂಧಿ ಹಾಗೂ ಇನ್ನೊಂದೆಡೆ ಎಸ್.ನಿಜಲಿಂಗಪ್ಪ ಬಣ. ಯಾರ ಗುಂಪಿಗೆ ಹೋಗಬೇಕು ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ಇಂದಿರಾಗಾಂಧಿ ಬಣವನ್ನು ಸೇರಿದರು. ಮುಂದೆ ಎಲ್ಲವೂ ಇತಿಹಾಸ. ದೇವರಾಜ ಅರಸುರವರು ರಾಜ್ಯದ ಏಕಮೇವಾದ್ವಿತೀಯ ನಾಯಕರಾಗಿ ವಿಜೃಂಭಿಸಿದರು. ಸಮಾಜವಾದವನ್ನು ನಿಜವಾದ ಅರ್ಥದಲ್ಲಿ ಕೃತಿಯಲ್ಲಿ ಇಳಿಸಿದರು. ಅವರ ಆದೇಶಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಮರುಮಾತಿಲ್ಲದೆ ಜಾರಿಗೆ ತಂದರು. ಎಲ್ಲಾ ವರ್ಗದ ಜನ ಅವರನ್ನು ಅಪ್ಪಾಜಿ ಎಂದೇ ಸಂಬೋಧಿಸತೊಡಗಿದರು.

1972 ರಾಜ್ಯದ ಸುವರ್ಣಯುಗ. ಇಂದಿರಾಗಾಂಧಿಯವರ ಆಶಯದಂತೆ ಅರಸುರವರು ನಾಡಿನ ಮುಖ್ಯಂತ್ರಿಯಾದರು. ಬಡವರ ಪರವಾಗಿ ಕಂಡ ಕನಸುಗಳನ್ನು ಕಾರ್ಯರೂಪಕ್ಕೆ ತರತೊಡಗಿದರು. ಸಮಯಪ್ರಜ್ಞೆ ಅವರಲ್ಲಿದ್ದ ಧೀಮಂತಶಕ್ತಿ. ಸಮಾಜಕ್ಕೆ ಅನುಕೂಲವಾಗುವಂತಹಾ ಯಾವುದೇ ಕೆಲಸವನ್ನು ಸಣ್ಣ ಅಧಿಕಾರಿ ಹೇಳಿದರೂ ಅದನ್ನು ಜಾರಿಗೆ ತರುತ್ತಿದ್ದರು. ಅಂದಿನ ಕಾಲದಲ್ಲಿ ಕಾಡನ್ನು ಜನರು ಲೂಟಿ ಮಾಡುತ್ತಿದ್ದರು, ಇದನ್ನು ರಕ್ಷಿಸಲು ಸೂಕ್ತ ಕಾನೂನು ಕೂಡ ಇರಲಿಲ್ಲ. ಅರಸರು ಆಗ ಮುಖ್ಯಮಂತ್ರಿ, ಕೆ.ಎಚ್.ಪಾಟೀಲ್ ಅರಣ್ಯ ಸಚಿವರಾಗಿದ್ದರು, ಇಬ್ಬರೂ ಸೇರಿ ಕೂಡಲೇ ವೃಕ್ಷ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರು. ಈ ರೀತಿಯ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಕೀರ್ತಿ ಅರಸರಿಗೆ ಸಲ್ಲುತ್ತದೆ. ನಂತರ ಉಳುವವನೇ ಭೂಮಿಯ ಒಡೆಯ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ಜಾರಿಗೆ ತರುವ ಮೂಲಕ ಇವರು ಶಾಶ್ವತವಾಗಿ ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದರು. ಜೀತದಾಳು ಪದ್ದತಿಗೆ ಮುಕ್ತಿ ನೀಡಿದ್ದು ಕೂಡ ಇವರ ದೊಡ್ಡ ಸಾಧನೆ. ಅರಸರು ಮುಖ್ಯಮಂತ್ರಿಯಾಗುವವರೆಗೂ ಇಲ್ಲಿ ಲಿಂಗಾಯಯ ಮತ್ತು ಒಕ್ಕಲಿಗರೇ ರಾಜ್ಯಸೂತ್ರದ ವಾರಸುದಾರರಾಗಿದ್ದರು, ಮಿಕ್ಕುಳಿದ ಜನರನ್ನು ರಾಜಕೀಯವಾಗಿ ಕೇಳುವವರು ದಿಕ್ಕಿರಲಿಲ್ಲ. ಎಲ್ಲಾ ಹಿಂದುಳಿದ ವರ್ಗಕ್ಕೆ ಜೀವವಾಹಿನಿಯಾದ ಅರಸರು ಎಲ್ಲರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸ್ಥಾಪಿತ ನಂಬಿಕೆಯನ್ನು ಛಿದ್ರಗೊಳಿಸಿದರು. ಎಲ್ಲಾ ಹಿಂದುಳಿದ ವರ್ಗಗಳು ವಿಧಾನಸಭೆಗೆ ಪ್ರವೇಶಿಸಲು ಮುಕ್ತ ಅವಕಾಶ ನೀಡಿದರು. ಗೇಣಿ ಶಾಸನ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗದಂತಹ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಜನತೆಗೆ ದೊರೆಯುತ್ತಿದೆ.

ದೇವರಾಜ ಅರಸರದ್ದು ವರ್ಣಮಯ ಬದುಕು. ಜೀವನದುದ್ದಕ್ಕೂ ಆನಂದವನ್ನು ಸೂರೆ ಮಾಡುತ್ತಲೇ ಅಂತಃಕರಣದ ಪ್ರತಿರೂಪವಾದ ಅತ್ಯಂತ ಅಪರೂಪದ ಮನುಷ್ಯ. ಅರಸರು
ಇಂದು ಇಲ್ಲವಾದರೂ ಅವರ ತೇಜೋವಲಯ ನಮ್ಮ ಸುತ್ತಲೂ ಹರಡಿಕೊಂಡಿದೆ. ನಿಜಕ್ಕೂ ಅವರದು ಸಾರ್ಥಕ ಬದುಕು.