ನೋಟ್ ಬ್ಯಾನ್ ಸಾಧಕ ಬಾಧಕ

Demonetisation---Blog
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿನ ಮಹತ್ತರ ಸಾಧನೆ ಎಂದು ಬಿಂಬಿಸಲಾಗುತ್ತಿರುವ ದೊಡ್ಡ ಮುಖ ಬೆಲೆಯ ನೋಟ್ ರದ್ದತಿಯ ಹಿಂದಿನ ಉದ್ದೇಶಗಳ ಈಡೇರಿಕೆಯ ಬಗ್ಗೆ ಚರ್ಚೆಗಿದು ಸೂಕ್ತ ಸಮಯ. ಯಾಕೆಂದರೆ ನೋಟು ರದ್ದತಿಯ ನಂತರದ ದಿನಗಳಿಂದ ಇದುವರೆಗೂ ದೇಶಾದ್ಯಂತ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳಾಗಲಿ ಅಥವಾ ನಕ್ಸಲ್ ದಾಳಿಗಳಾಗಲಿ ನಡೆದಿರಲಿಲ್ಲ ಹಾಗಾಗಿ ನೋಟು ರದ್ದತಿ ನಿಯಮವನ್ನು ದೊಡ್ಡ ಮಟ್ಟದ ಯಶಸ್ವಿ ಯೋಜನೆ ಎಂಬಂತೆ ಬಿಂಬಿಸಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ.

ಮೋದಿಯವರ ಹೇಳಿಕೆಯಂತೆ ದೇಶದಲ್ಲಿರುವ ಕಪ್ಪುಹಣದ ಶೇ.90 ಭಾಗ ನೋಟು ರದ್ದತಿಯ ನಂತರದ 50 ದಿನಗಳಲ್ಲಿ ಹೊರಬಂದು, ದೇಶದ ಭ್ರಷ್ಟರೆಲ್ಲ ಬೀದಿಗೆ ಬರಬಹುದು ಎಂದು ಜನರು ಕಾಯುತ್ತಾ ಕುಳಿತರು, ಆದರೆ ವಾಸ್ತವದಲ್ಲಿ ಅಂದುಕೊಂಡಂತೆ ಆಗಲಿಲ್ಲ, ಬೇರೆ ದಾರಿ ಕಾಣದೆ ಅದರ ವೈಫಲ್ಯವನ್ನು ಮುಚ್ಚಲು ತಮ್ಮ ಹೇಳಿಕೆಯನ್ನು ಬದಲಿಸಿದ ಕೇಂದ್ರ ಸರ್ಕಾರ ನೋಟು ರದ್ದತಿಯು ದೇಶದ ನಗದು ರಹಿತ ವಹಿವಾಟಿಗೆ ಬೆಂಬಲವಾಗುವ ಮೂಲಕ ಭಾರತ ನಗದು ರಹಿತ ವಹಿವಾಟು ದೇಶವಾಗಲಿದೆ ಎಂದು ಬಿಂಬಿಸಿತು. ಇದನ್ನೂ ಕೂಡ ಜನತೆ ಒಪ್ಪಿ ಆ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದರು, ಆದರೆ ದೇಶದ ಬ್ಯಾಂಕುಗಳು ದಿನಕ್ಕೊಂದು ನಿಯಮವನ್ನು ತನ್ನ ಗ್ರಾಹಕರ ಮೇಲೆ ಹೇರುವ ಮೂಲಕ ಜನರು ಬ್ಯಾಂಕ್ ಬಳಿ ಓಡಾಡುವುದಕ್ಕೂ ಭಯ ಪಡುವಂತಾಗಿ ಆ ಹೇಳಿಕೆಯನ್ನೂ ಕೂಡ ಕೈಬಿಡುವಂತಾಯಿತು.
ಕೊನೆಗೆ ಮೋದಿ ಸರ್ಕಾರಕ್ಕೆ ಹೊಳೆದ ಹೊಸ ಉಪಾಯ ನೋಟು ರದ್ದತಿಯ ನಂತರ ದೇಶದಲ್ಲಿರುವ ಭಯೋತ್ಪಾದಕರು ಹಾಗೂ ನಕ್ಸಲೈಟ್‍ಗಳು ತಮ್ಮ ಬಳಿ ಇರುವ ಹಣ ಬದಲಾಯಿಸಲು ಆಗದೆ, ಮದ್ದು ಗುಂಡುಗಳಿಗೆ ಹಾಗೂ ಆಹಾರಕ್ಕೂ ಪರದಾಡುವಂತಾಗಿದೆ, ಮುಂದೆ ದೇಶದಲ್ಲಿ ಇಂತಹ ದಾಳಿಗಳು ನಡೆಯುವುದಿಲ್ಲ ಎಂದರು. ಕಾಕತಾಳೀಯ ಎಂಬಂತೆ ನೋಟು ರದ್ದತಿಯ ನಂತರದ ಕೆಲವಾರು ತಿಂಗಳು ದೇಶದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿಗಳಾಗಲೀ ಅಥವಾ ನಕ್ಸಲ್ ದಾಳಿಗಳಾಗಲೀ ನಡೆಯದೆ ಇದ್ದುದು.

ಆದರೆ ಕೆಲವು ವಾರದಿಂದ ಈಚೆಗೆ ಕಾಶ್ಮೀರದಲ್ಲಿ ನಿತ್ಯ ಭಯೋತ್ಪಾದಕ ಪ್ರಚೋದಿತ ದಾಳಿಗಳು ನಡೆಯುತ್ತಿವೆ, ಜನ ಸೈನಿಕರ ಮೇಲೆ ಕಲ್ಲು ತೂರುತ್ತಿದ್ದಾರೆ, ಇವೆಲ್ಲದರ ಜೊತೆಗೆ ಛತ್ತೀಸ್‍ಗಢದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಕ್ಸಲರು ದಾಳಿ ಮಾಡಿ ಇಪ್ಪತ್ತೈದು ಯೋಧರನ್ನು ಹತ್ಯೆ ಮಾಡಿದ್ದಾರೆ. ಹಾಗಾದರೆ ನೋಟು ರದ್ದತಿ ಒಂದು ನಿರುಪಯುಕ್ತ ನಿರ್ಧಾರವಾಯಿತೇ? ಎಲ್ಲೋ ನಾಲ್ಕಾರು ಕಡೆ ಐಟಿ ದಾಳಿ ಮಾಡಿ ಒಂದಷ್ಟು ಕಪ್ಪು ಹಣ ವಶಪಡಿಸಿಕೊಂಡ ಉದಾಹರಣೆಗಳು ಬಿಟ್ಟರೆ ಬೇರಾವ ಪ್ರಯೋಜನಗಳೂ ಇಲ್ಲವೇ? ಆ ಅಲ್ಪಸ್ವಲ್ಪ ಹಣ ವಶಪಡಿಸಿಕೊಳ್ಳಲು ನೋಟು ರದ್ದತಿ ಎಂಬ ನಿಯಮ ಅಗತ್ಯವಿತ್ತೇ? ಹಾಗೇಯೇ ಐಟಿ ದಾಳಿಗಳು ಮಾಡಿದರೂ ಕೂಡ ಅದೇ ಪ್ರಮಾಣದ ಹಣ ದೊರೆತ ಉದಾಹರಣೆಗಳು ಸಾಕಷ್ಟಿವೆ, ಅತ್ಯಲ್ಪ ಸಾಧನೆಯ ಯೋಜನೆಗೆ ನೂರಾರು ಅಮಾಯಕರ ಬಲಿ ಅಗತ್ಯವಿತ್ತೆ? ಹಾಗಾದರೆ ನೋಟು ರದ್ದತಿಯ ಹಿಂದಿನ ನಿಜವಾದ ಉದ್ದೇಶವಾದರೂ ಏನು? ಇಂತಹ ನೂರಾರು ಪ್ರಶ್ನೆಗಳು ಇಂದು ನಮ್ಮ ಮುಂದೆ ಉತ್ತರಿಸುವವರಿಲ್ಲದೆ ನರಳುತ್ತಿವೆ.
Advertisements

ಉಪಚುನಾವಣಾ ಫಲಿತಾಂಶದ ಸುತ್ತ

election-result
ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣಾ ಫಲಿತಾಂಶ ಕಡೆಗೂ ಹೊರಬಿದ್ದಿದೆ. ಮೋದಿ ಹೆಸರು ಬಳಸಿಕೊಂಡು ಕರ್ನಾಟಕದಲ್ಲಿಯೂ ಗೆಲುವು ಪಡೆಯಬಹುದು ಎಂಬ ಭ್ರಮೆಯಲ್ಲಿದ್ದ ಕೋಮುವಾದಿ ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಅಭಿವೃದ್ಧಿ ಪರ ಆಡಳಿತಕ್ಕೆ ಈ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತಿದೆ. ಸರ್ಕಾರದ ಯೋಜನೆಗಳು ಫಲಾನುಭವಿಗಳನ್ನು ಸಮರ್ಪಕವಾಗಿ ತಲುಪುತ್ತಿವೆ ಎಂಬುದಕ್ಕೆ ಚುನಾವಣಾ ಫಲಿತಾಂಶ ಸ್ಪಷ್ಟ ನಿದರ್ಶನವಾಗಿದೆ.

ಈ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂಬುದು ಹಲವು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ, ಇದಕ್ಕೆ ಮುಖ್ಯ ಕಾರಣ ಸರ್ಕಾರದ ಕಾರ್ಯಕ್ರಮಗಳು ಅಭಿವೃದ್ಧಿ ಪರವಾಗಿರುವುದು ಹಾಗೂ ಅವು ಸಮಾಜದ ಎಲ್ಲಾ ವರ್ಗದ ಜನರನ್ನೂ ಯಾವ ಭೇದ ಭಾವಗಳಿಲ್ಲದೆ ತಲುಪುವಂತೆ ನಿಷ್ಪಕ್ಷಪಾತವಾಗಿ ಯೋಜನೆಗಳನ್ನು ರೂಪಿಸುತ್ತಿರುವುದು. ಇದರಿಂದ ಜಾಗೃತರಾದ ಜನರು ಅಭಿವೃದ್ಧಿಪರ ಆಡಳಿತಕ್ಕೆ ಮಣೆ ಹಾಕಿರುವುದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆ.

ನಂಜನಗೂಡು ಉಪಚುನಾವಣೆಯ ಕಣದಲ್ಲಿದ್ದ ಶ್ರೀನಿವಾಸ ಪ್ರಸಾದ್‍ರವರು ಸ್ವಾಭಿಮಾನಿ ಸಮಾವೇಶಗಳನ್ನು ನಡೆಸಿ ಆ ಮೂಲಕ ಜನರನ್ನು ಸರ್ಕಾರದ ವಿರುದ್ಧವಾಗಿ ಸಂಘಟಿಸುವ ಪ್ರಯತ್ನವನ್ನು ಮಾಡಿ, ಇದು ತಮ್ಮ ಸ್ವಾಭಿಮಾನಕ್ಕಾಗಿ ನಡೆಸುತ್ತಿರುವ ಸಂಗ್ರಾಮ ಎಂಬಂತೆ ಬಿಂಬಿಸಿದರು. ವಾಸ್ತವದಲ್ಲಿ ಅವರ ರಾಜೀನಾಮೆಯ ಹಿಂದಿನ ಉದ್ದೇಶವೇನೇ ಇರಬಹುದು ಆದರೆ ವ್ಯಕ್ತಿಯೊಬ್ಬನ ಸ್ವಪ್ರತಿಷ್ಠೆಗೆ ಉಪಚುನಾವಣೆಗಳು ನಡೆಯುವುದನ್ನು ಕ್ಷೇತ್ರದ ಪ್ರಜ್ಞಾವಂತ ಮತದಾರರು ಒಪ್ಪಲಿಲ್ಲ್ಲ. ಒಟ್ಟಿನಲ್ಲಿ ಪ್ರತಿಷ್ಠೆ ಹಾಗೂ ಅಭಿವೃದ್ಧಿಯ ನಡುವೆ ನಡೆದ ಸಂಘರ್ಷದಲ್ಲಿ ಅಭಿವೃದ್ಧಿ ಗೆಲುವು ಸಾಧಿಸಿದ್ದು ಜನತೆಯ ತಾರ್ಕಿಕ ಮನೋಬಾವಕ್ಕೆ ಹಿಡಿದ ಕನ್ನಡಿಯಾಗಿದೆ.
ಇನ್ನು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್‍ರವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅವರ ಪತಿ ದಿವಂಗತ ಮಹಾದೇವ ಪ್ರಸಾದ್‍ರವರ ಜನಪರ ಕಾಳಜಿ ಹಾಗೂ ರಾಜ್ಯ ಸರ್ಕಾರದ ಪಾರದರ್ಶಕ ಹಾಗೂ ಸರ್ವರನ್ನೂ ಒಳಗೊಳ್ಳುವ ಆಡಳಿತ ಶೈಲಿ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಈ ಎಲ್ಲಾ ಅಂಶಗಳು ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಪೂರಕವಾಗಿವೆ. ಜನತೆ ಸುಳ್ಳು ಭರವಸೆಗಳಿಗೆ ಮರುಳಾಗದೆ, ಕೋಮುವಾದಕ್ಕೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಜತೆಗೆ ಇದ್ದಾರೆ ಎಂಬುದು ಸರ್ಕಾರ ಗಮನಿಸಲಿ. ಇದು ಮುಂದೆಯೂ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಒತ್ತು ನೀಡಲು ಪ್ರೇರಣೆಯಾಗಲಿ.

ಮಹದೇವ ಪ್ರಸಾದ್ ಎಂಬ ಸರಳ ಸಜ್ಜನ ರಾಜಕಾರಣಿ

mahadev-prasad_2ಸುಧೀರ್ಘ ರಾಜಕೀಯ ಜೀವನದಲ್ಲಿ ಹಗರಣ ಮುಕ್ತ ಪಯಣ ನಡೆಸಿ, ಸಕಲ ವರ್ಗದ ಜನರ ಕಷ್ಟಗಳಿಗೂ ಸಕಾಲದಲ್ಲಿ ನೆರವಿಗೆ ಧಾವಿಸುತ್ತಿದ್ದ ರಾಜಕಾರಣಿಯಾಗಿದ್ದ ಶ್ರೀಯುತ ಮಹದೇವ ಪ್ರಸಾದ್‍ರವರ ಮರಣ ಬರಸಿಡಿಲಿನಂತೆ ಬಂದೆರಗಿತು. ಅವರೊಬ್ಬ ನಿಷ್ಠಾವಂತ ರಾಜಕಾರಣಿ ಮಾತ್ರವಾಗಿರದೆ, ಜನಪರ ಚಿಂತಕ, ಸ್ನೇಹಮಯಿಯೂ ಆಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ದುಡಿಯುತ್ತಾ, ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಇಂತಹ ಹಿರಿಯ ನಾಯಕರೊಬ್ಬರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ಆರಿಸಬೇಕಾಗಿದ್ದು, ಹಾಗಾಗಿ ಈ ಸಂದರ್ಭದಲ್ಲಿ ವಿವೇಚನೆಯಿಂದ ಮತ ಚಲಾಯಿಸಬೇಕಾಗಿದೆ.

ಮಹದೇವ ಪ್ರಸಾದ್‍ರವರ ಸಾಧನೆಗಳೇ ಇಂದು ಅವರ ಪತ್ನಿಗೆ ಕ್ಷೇತ್ರದಲ್ಲಿ ಶ್ರೀರಕ್ಷೆಯಾಗಿದೆ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸದೃಢ ಪ್ರಜೆಗಳ ಅಗತ್ಯವಿದೆ ಎಂದು ಅರಿತಿದ್ದ ಮಹದೇವ ಪ್ರಸಾದ್ ಅವರು, ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಗಮನವನ್ನು ನೀಡಿದ್ದರು. ಹಾಗಾಗಿ ಇಂದು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಜನತೆಗೆ ಲಭ್ಯವಾಗುತ್ತಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಿಂದೆ ಮಹದೇವ ಪ್ರಸಾದ್ ಅವರ ನಿರಂತರ ಪ್ರಯತ್ನವಿದೆ. ಕಬ್ಬಳ್ಳಿ ಹಾಗೂ ಬೇಗೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳ ಹಂತಕ್ಕೆ ಮೇಲ್ದರ್ಜೆಗೇರಿಸಿ, ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗುತ್ತಿದೆ.

ಇನ್ನು ಕ್ಷೇತ್ರದ ಮೂಲ ಸೌಲಭ್ಯದ ಅಭಿವೃದ್ಧಿ ವಿಚಾರಕ್ಕೆ ಬಂದರೆ, ಮಹದೇವ ಪ್ರಸಾದ್‍ರವರಿಗೆ ಮಹದೇವ ಪ್ರಸಾದ್‍ರವರೇ ಸಾಟಿ. ಕ್ಷೇತ್ರದಲ್ಲಿ ಸುಗಮ ಸಂಚಾರಕ್ಕೆ ಅಗತ್ಯವಿರುವ ಗುಣಮಟ್ಟದ ರಸ್ತೆ ನಿರ್ಮಾಣದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಉಡಿಗಾಲ-ಕಬ್ಬಹಳ್ಳಿ, ವೀರನಪುರ-ಹೆಗ್ಗಡಹಳ್ಳಿ, ಹೆಮ್ಮರಗಾಲ-ಸೋಮಹಳ್ಳಿ, ಮುಕುಡಹಳ್ಳಿ-ಹರವೆ, ಹರವೆ-ಸಾಗಡೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕ್ಷೇತ್ರದ ಜನತೆಯ ಸುಗಮ ಸಂಚಾರಕ್ಕೆ, ಆರ್ಥಿಕ ಚಟುವಟಿಕೆಗಳಿಗೆ ಅವರು ಬೆನ್ನುಲುಬಾಗಿ ನಿಂತರು. ಹಾಗೆಯೇ ಗ್ರಾಮೀಣ ರಸ್ತೆಗಳಾದ ಮಲೆಯೂರು, ಹಿರಿಬೇಗೂರು, ಭುಜಗಪುರ-ಹೆಗ್ಗವಾಡಿ, ಲಕ್ಕೂರು – ತಮ್ಮಡಹಳ್ಳಿ, ಕೆರೆಹಳ್ಳಿ-ಜೋಗಿ ಕಾಲನಿ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಗ್ರಾಮೀಣ ಭಾಗಗಳನ್ನು ಪಟ್ಟಣ ಪ್ರದೇಶಗಳೊಂದಿಗೆ ಬೆಸೆದರು.
ಹೀಗೆ ನಿರಂತರವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಶ್ರೀಯುತರು ಇಂದು ನಮ್ಮೊಂದಿಗಿಲ್ಲ. ಅವರ ಸ್ಥಾನಕ್ಕೆ ಅರ್ಹರನ್ನು ತರಬೇಕಾದದ್ದು ನಮ್ಮೆಲ್ಲರ ಜವಬ್ದಾರಿ ಕೂಡ. ಅವರ ಉದ್ದೇಶಗಳನ್ನು ಈಡೇರಿಸಲು ಅವರಂತೆ ಜನಪರ ಕಾಳಜಿ ಹೊಂದಿರುವ ಗೀತಾ ಮಹದೇವ ಪ್ರಸಾದ್‍ರವರು ಉತ್ತಮ ಆಯ್ಕೆಯಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ನಿಮ್ಮ ಆಯ್ಕೆಯಾಗಲಿ.

ರಾಜಕೀಯ ರಂಗದ ಅಜಾತಶತ್ರು ಮಹದೇವ ಪ್ರಸಾದ್

mahadev prasad_1
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ ವ್ಯಕ್ತಿ ಶ್ರೀಯುತ ಮಹದೇವ ಪ್ರಸಾದ್‍ರವರು ಇಂದು ನಮ್ಮ ನಡುವೆ ಇಲ್ಲ ಎಂಬುದೆ ಅತ್ಯಂತ ದುಃಖದ ಸಂಗತಿ. ಅವರು ನಮ್ಮ ನಿಮ್ಮೆಲ್ಲರ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆಗಳು ಇಂದಿಗೂ ನಮ್ಮ ಕಣ್ಣು ಮುಂದೆ ಜೀವಂತವಾಗಿವೆ. ಸದಾಕಾಲ ಪರೋಪಕಾರಕ್ಕಾಗಿ ಮಿಡಿಯುತ್ತಿದ್ದ ನಿಸ್ವಾರ್ಥ ವ್ಯಕ್ತಿಯನ್ನು ಕಳೆದುಕೊಂಡಿರುವುದು ಗುಂಡ್ಲುಪೇಟೆ ಕ್ಷೇತ್ರಕ್ಕೆ ದೊಡ್ಡ ನಷ್ಟವೇ ಸರಿ.
ಶಿಕ್ಷಣ ಕ್ಷೇತ್ರಕ್ಕೆ ಮಹದೇವ ಪ್ರಸಾದ್‍ರವರ ಅವಧಿಯಲ್ಲಿ ನೀಡಿದ ಕೊಡುಗೆಗಳು ಗಣನೀಯವಾಗಿದೆ. ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಸರ್ಕಾರಿ ಶಾಲೆಗಳನ್ನು ಅವರ ಅವಧಿಯಲ್ಲಿ ತೆರೆಯಲಾಯಿತು. ಬೇಗೂರು, ಹಂಗಳ ಹಾಗೂ ಗುಂಡ್ಲುಪೇಟೆಯಲ್ಲಿ ಸರ್ಕಾರಿ ಕಾಲೇಜುಗಳನ್ನು ತೆರೆಯಲಾಯಿತು. ಗುಂಡ್ಲುಪೇಟೆ ಪಟ್ಟಣ ಹಾಗೂ ಕಬ್ಬಳ್ಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲಾಯಿತು. ಇದಲ್ಲದೆ ಗುಂಡ್ಲುಪೇಟೆಯಲ್ಲಿ ಮುಂದಿನ ವರ್ಷ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಮಂಜೂರಾತಿ ದೊರಕಿಸುವಲ್ಲಿ ಹಾಗೂ ಬರಗಿ ಫಾರಂನಲ್ಲಿ ಹೈನುಗಾರಿಕೆ ಡಿಪ್ಲೊಮಾ ಕಾಲೇಜು ಈ ವರ್ಷದಿಂದ ಆರಂಭವಾಗುವಂತೆ ಮಾಡುವಲ್ಲಿ ಮಹದೇವ ಪ್ರಸಾದ್ ಅವರ ಶ್ರಮ ಗಣನೀಯವಾದುದು.

ಇನ್ನು ಜನತೆಯ ನಿತ್ಯ ಜೀವನಕ್ಕೆ ಅಗತ್ಯವಾದ ನೀರಿನ ಸೌಲಭ್ಯದ ಕಡೆಗೆ ದಿವಂಗತರು ಹೆಚ್ಚಿನ ಗಮನ ಹರಿಸಿದ್ದರು, ಗುಂಡ್ಲುಪೇಟೆ ಪಟ್ಟಣ ಹಾಗೂ ಮಾರ್ಗ ಮಧ್ಯದ 27 ಹಳ್ಳಿಗಳಿಗೆ ಕಬಿನಿ ನದಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಅದೇ ರೀತಿ, ಗುಂಡ್ಲುಪೇಟೆ ತಾಲ್ಲೂಕಿನ 133 ಹಾಗೂ ಚಾಮರಾಜನಗರ ತಾಲ್ಲೂಕಿನ 166 ಗ್ರಾಮಗಳಿಗೆ ನದಿ ಮೂಲದ ನೀರನ್ನು ಒದಗಿಸಲು ರೂ.450 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಿದರು. ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಲಭ್ಯವಾಗುವಂತೆ ಮಾಡಿದರು. ಸದಾಕಾಲ ಜನರ ಸಂಕಷ್ಟಗಳಿಗೆ ಮಿಡಿಯುತ್ತಿದ್ದ ಮಹದೇವ ಪ್ರಸಾದ್ ಅವರು ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿದ್ದರು. ಈಗ ಅವರ ಅಗಲಿಕೆಯಿಂದ ಅನಿವಾರ್ಯವಾಗಿ ಮತ್ತೊಬ್ಬರನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆರಿಸಬೇಕಾಗಿದ ಸನ್ನಿವೇಶ ನಿರ್ಮಾಣವಾಗಿದೆ. ಮಹದೇವ ಪ್ರಸಾದ್‍ರವರ ನೆರಳಿನಲ್ಲಿಯೇ, ಅವರೊಂದಿಗೆ ಕಷ್ಟ ಸುಖಗಳನ್ನು ಹಂಚಿಕೊಂಡು, ಅವರ ಬದುಕಿನ ಆಶಯಗಳನ್ನು ತಮ್ಮದಾಗಿಸಿಕೊಂಡು ಜೀವನ ಸಾಗಿಸುತ್ತ ಬಂದಿರುವ ಅವರ ಧರ್ಮ ಪತ್ನಿ ಗೀತಾ ಮಹದೇವ ಪ್ರಸಾದ್‍ರವರೆ ತಮ್ಮ ಪತಿಯ ಉದ್ದೇಶಗಳನ್ನು ಈಡೇರಿಸಲು ಸೂಕ್ತ ಆಯ್ಕೆ.