ಭಾರತೀಯ ರಿವರ್ಸ್ ಬ್ಯಾಂಕ್

Banks
ದೊಡ್ಡ ಮುಖ ಬೆಲೆಯ ನೋಟು ರದ್ದತಿಯ ನಂತರ ಭಾರತದಲ್ಲಿ ಕಪ್ಪು ಹಣದ ಹೊಳೆಯೇ ಬ್ಯಾಂಕಿಗೆ ಹರಿದು ಬರುತ್ತದೆ, ಚಲಾವಣೆಯಲ್ಲಿರುವ ಖೋಟಾ ನೋಟುಗಳ ದೊಡ್ಡ ಭಂಡಾರವೇ ಪತ್ತೆಯಾಗುತ್ತದೆ, ಭಯೋತ್ಪಾದನೆಗೆ ರವಾನೆಯಾಗುತ್ತಿರುವ ಅನಧಿಕೃತ ನಗದು ನಾಶವಾಗುತ್ತದೆ ಎಂದೆಲ್ಲಾ ಕೇಂದ್ರ ಸರ್ಕಾರ ದೊಡ್ಡದಾಗಿ ಬಿಂಬಿಸಿತ್ತು. ಹಾಗಾಗಿ ಜನಸಾಮಾನ್ಯರು ತಮಗೆ ನೋಟು ರದ್ದತಿಯಿಂದ ಉಂಟಾದ ಎಲ್ಲಾ ನೋವನ್ನು ನುಂಗಿಕೊಂಡು ಕೆಲವೇ ದಿನಗಳಲ್ಲಿ ದೇಶದ ಸಂಕಷ್ಟಗಳು ದೂರಾಗುತ್ತವೆ ಅದರಿಂದ ತಮಗೂ ಅನುಕೂಲವಾಗಬಹುದು ಎಂಬ ಕಲ್ಪನೆಯಿಂದಾಗಿ ನೋಟು ರದ್ದತಿಗೆ ಬೆಂಬಲವಾಗಿ ನಿಂತಿದ್ದರು. ಜನರ ಈ ಮೌನಕ್ಕೆ ಅತ್ಯಂತ ಮುಖ್ಯ ಕಾರಣ ದೇಶದ ಜನಸಂಖ್ಯೆಯ ಶೇ.60 ಕ್ಕಿಂತ ಹೆಚ್ಚು ಪ್ರಮಾಣದವರು ಇಂತಹಾ ಒಂದು ದೊಡ್ಡ ಬದಲಾವಣೆಯನ್ನು ಇದೇ ಮೊದಲ ಬಾರಿ ತಮ್ಮ ಜೀವಿತಾವಧಿಯಲ್ಲಿ ಕಾಣುತ್ತಿರುವುದು, ಹಾಗಾಗಿ ಇದರಿಂದ ದೊಡ್ಡ ಪವಾಡವೇ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಕಾದು ಕುಳಿತರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ನಂತರದ ಪರಿಸ್ಥಿತಿಯನ್ನು ಎದುರಿಸಲು ವಿಫಲವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಅದು ತನ್ನ ನಿಯಮಗಳನ್ನು ನಿರಂತರವಾಗಿ ಬದಲಾವಣೆ ಮಾಡುತ್ತಾ ಬಂದಿರುವುದು ಜೊತೆಗೆ ತನ್ನ ದೋಷವನ್ನು ಸರಿಪಡಿಸಿಕೊಳ್ಳಲು ಜನಸಾಮಾನ್ಯರ ಬಲಿಕೊಡಲು ಮುಂದಾಗಿರುವುದು.
ನಿರಂತರ ಬದಲಾಗುತ್ತಿರುವ ನಿಯಮಗಳು
ನೋಟು ರದ್ದತಿಯ ನಂತರ ಪ್ರಾರಂಭದಲ್ಲಿ ದಿನವೊಂದಕ್ಕೆ 4500 ರೂ.ಗಳ ಮಿತಿಯನ್ನು ವಿಧಿಸಲಾಗಿತ್ತು ಆದರೆ ಜನತೆಗೆ ಅಗತ್ಯ ಪ್ರಮಾಣದ ನೋಟು ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಆ ನಿಯಮವನ್ನು 2500 ರೂ.ಗಳಿಗೆ ಇಳಿಸುವ ಚಿಂತನೆ ನಡೆಸಿತು. ಈ ನಿಯಮಕ್ಕೆ ಜನತೆಯಿಂದ ತೀವ್ರ ವಿರೋಧವಾದ ಹಿನ್ನೆಲೆಯಲ್ಲಿ ತಕ್ಷಣ ಆ ನಿಯಮವನ್ನು ಕೈಬಿಟ್ಟಿತು. ಇದು ಆರ್‍ಬಿಐನ ಅರ್ಥರಹಿತ ನಿಯಮಗಳಿಗೆ ಒಂದು ಸ್ಪಷ್ಟ ಉದಾಹರಣೆ.
ಮೊದಲು ನೋಟು ರದ್ದತಿಯಿಂದ ಕಪ್ಪು ಹಣ ಹೊರಬರುತ್ತದೆ ಎಂದು ಜನರಿಗೆ ಸುಳ್ಳು ಭರವಸೆಯನ್ನು ನೀಡಿದ್ದ ಕೇಂದ್ರ ಸರ್ಕಾರ, ನಂತರದಲ್ಲಿ ಕಪ್ಪು ಹಣದ ವಿಚಾರವನ್ನು ಬದಿಗೊತ್ತಿ ನಗದು ರಹಿತ ವಹಿವಾಟು ವ್ಯವಸ್ಥೆಗೆ ಪ್ರೋತ್ಸಾಹ ನೀಡುವ ಕುರಿತು ತನ್ನ ಹೇಳಿಕೆಗಳನ್ನು ಬದಲಾಯಿಸಿಕೊಂಡಿತು. ಆದರೆ ಇದೀಗ ಬ್ಯಾಂಕ್‍ಗಳು ಜಾರಿಗೆ ತಂದಿರುವ ನಿಯಮವನ್ನು ನೋಡಿದರೆ ಜನಸಾಮಾನ್ಯರು ಬ್ಯಾಂಕ್ ಮೂಲಕ ವ್ಯವಹಾರ ಮಾಡಲು ಯೋಚಿಸುವಂತಾಗಿದೆ.
ಕಳೆದ ಕೆಲವು ದಿನಗಳಿಂದ ಬ್ಯಾಂಕುಗಳು ವಿಧಿಸುತ್ತಿರುವ ನಿಯಮಗಳನ್ನು ನೋಡಿದರೆ ಈ ಬ್ಯಾಂಕುಗಳ ಮೇಲೆ ಆರ್‍ಬಿಐ ಹಿಡಿತವೇ ಇಲ್ಲವೇನೊ ಎಂದು ಅನಿಸುತ್ತದೆ. ಉಳಿತಾಯ ಖಾತೆದಾರರಿಗೆ ಠೇವಣಿ ಹಾಗೂ ವಿತ್‍ಡ್ರಾ ಮೇಲೆ ಶುಲ್ಕದ ಹೊರೆ ವಿಧಿಸುತ್ತಿರುವ ಬ್ಯಾಂಕುಗಳು ಜನರ ತಾಳ್ಮೆ ಪರೀಕ್ಷೆಗೆ ಮುಂದಾಗಿರುವುದರ ಜೊತೆಗೆ ಆರ್‍ಬಿಐ ಅಧೀನ ಬ್ಯಾಂಕುಗಳಲ್ಲಿ ಏಕರೂಪದ ನಿಯಮಗಳಿಲ್ಲದೆ ಇರುವುದು ಕೂಡ ಜನರನ್ನು ಗೊಂದಲಕ್ಕೀಡುಮಾಡಿದೆ. ಕೆಲವು ಬ್ಯಾಂಕುಗಳು ಮೊದಲ ಮೂರು ವಹಿವಾಟುಗಳ ನಂತರ ರೂ. 50 ಶುಲ್ಕ ವಿಧಿಸಿದರೆ, ಕೆಲವು ಬ್ಯಾಂಕುಗಳು ರೂ. 150 ಶುಲ್ಕ ವಿಧಿಸಲು ಮುಂದಾಗಿವೆ.
ಎಸ್‍ಬಿಐ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆದಾರರು ತಿಂಗಳಿಗೆ ಮೂರು ಬಾರಿ ಹಣ ಠೇವಣಿ ಇಡಬಹುದು. ನಂತರದ ಪ್ರತೀ ವಹಿವಾಟಿಗೂ ರೂ. 50 ಶುಲ್ಕ ವಿಧಿಸುತ್ತದೆ. ಖಾತೆದಾರರು ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು ಎಂಬ ನಿಯಮವನ್ನು ರೂಪಿಸಲಾಗಿದೆ. ಮೆಟ್ರೋ ಪಾಲಿಟನ್ ನಗರಗಳಲ್ಲಿ ರೂ. 5000 ಆಗಿದ್ದು, ಅದಕ್ಕಿಂತ ಕಡಿಮೆಯಾಗಿದ್ದಲ್ಲಿ ರೂ. 100 ದಂಡವನ್ನು ವಿಧಿಸಲಾಗುತ್ತದೆ. ಎಟಿಎಂ ವಿತ್‍ಡ್ರಾಗಳ ಮೇಲೂ ಶುಲ್ಕವನ್ನು ವಿಧಿಸಲಾಗುತ್ತಿದ್ದು, 10 ಹಾಗೂ 20 ರೂ.ಗಳ ಶುಲ್ಕ ವಿಧಿಸಲಾಗುತ್ತದೆ. ಭಾರತದ ಬ್ಯಾಂಕಿಗ್ ವಲಯದ ಹಿರಿಯಣ್ಣ ಎಂದು ಕರೆಯಲ್ಪಡುವ ಎಸ್‍ಬಿಐ ಹೀಗಾದಾಗ ಉಳಿದ ಬ್ಯಾಂಕುಗಳು ಅದನ್ನೆ ಅನುಸರಿಸುವುದು ಅತಿಶಯೋಕ್ತಿಯೇನಲ್ಲ.
ಇನ್ನು ಎಚ್‍ಡಿಎಫ್‍ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್‍ಗಳು ತಿಂಗಳಿಗೆ ನಾಲ್ಕಕಿಂತ ಹೆಚ್ಚು ಬಾರಿ ನಡೆಸುವ ಪ್ರತಿ ವ್ಯವಹಾರಕ್ಕೂ ರೂ.150 ಶುಲ್ಕವನ್ನು ವಿಧಿಸಲು ಮುಂದಾಗಿವೆ. ಹೀಗೆ ಎಲ್ಲಾ ಬ್ಯಾಂಕುಗಳು ಜನರ ಸುಲಿಗೆಗೆ ಇಳಿದಿದ್ದರೂ ಇದರ ಬಗ್ಗೆ ಮಾತನಾಡಬೇಕಾಗಿದ್ದ ಆರ್‍ಬಿಐ ಮೌನವಹಿಸಿದೆ. ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ್ದು, ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಮೋದಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಒಟ್ಟಿನಲ್ಲಿ ಆರ್ಥಿಕ ವ್ಯವಹಾರಗಳ ಸುಗಮ ಪ್ರಕಿಯೆಗೆ ಇರುವ ಒಂದು ಸಂಸ್ಥೆ ಸ್ವಾತಂತ್ರ್ಯ ಬಂದ ನಂತರ ಈ ಮಟ್ಟಿಗೆ ಕುಖ್ಯಾತವಾಗಿರುವುದು ಇದೇ ಮೊದಲು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s