ತಿರುಗುಬಾಣವಾದ ಯಡಿಯೂರಪ್ಪನವರ ಆರೋಪ

yadiyurappa-vs-cong-govt
ಸಾಮಾನ್ಯವಾಗಿ ಕನ್ನಡಿಗರೆಲ್ಲರೂ ಗೋವು ಮತ್ತು ಹುಲಿಯ ‘ಧರಣಿ ಮಂಡಲದ’ ಕಥೆಯನ್ನು ಕೇಳಿ, ಗೋವಿನ ತ್ಯಾಗ ಮತ್ತು ಹುಲಿಯ ಅಂತಃಕರುಣವನ್ನು ನೆನದು ಒಂದು ಕ್ಷಣವಾದರೂ ಮರುಗಿದ್ದೇವೆ. ಆ ಕರುಣಾಜನಕ ಕಥೆಯಲ್ಲಿ ಗೋವು ತ್ಯಾಗದ ಸಾಕಾರ ಮೂರ್ತಿಯಂತೆ ಕಂಡುಬಂದರೆ, ಹುಲಿ ಗೋವಿನ ವಚನ ನಿಷ್ಟತೆಗೆ ಮನಸೋತು ತಾನೇ ದ್ಯೇಹ ತ್ಯಾಗಕ್ಕೆ ಮುಂದಾಗಿ ಹೃದಯ ವೈಶಾಲ್ಯತೆ ಮೆರೆಯುತ್ತದೆ.
ಇದೇ ಸನ್ನಿವೇಶವನ್ನು ಇಂದಿನ ರಾಜಕೀಯಕ್ಕೆ ಹೋಲಿಸಿದರೆ ಒಂದು ಕಡೆ ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಸರ್ಕಾರ ಗೋವಿನ ರೂಪದಲ್ಲಿ ನಿಂತಿದ್ದರೆ, ಮತ್ತೊಂದು ಕಡೆ ಸರ್ಕಾರದ ಕಾರ್ಯವೈಖರಿಯಲ್ಲಿ ದೋಷಗಳು ಸಿಗದೆ, ಹತಾಶ ಭಾವನೆಯಿಂದ ಹುರುಳಿಲ್ಲದ ಆರೋಪಗಳನ್ನು ಮಾಡುವ ಮೂಲಕ ಬಿಜೆಪಿ ತಾನು ಹುಲಿಯಲ್ಲ ನರಿ ಎಂಬುದನ್ನು ಸಾಬೀತು ಪಡಿಸುತ್ತಿದೆ. ಇಲ್ಲಿ ನಿಜಕ್ಕೂ ಸರ್ಕಾರದ ಕಾರ್ಯವೈಖರಿಯಲ್ಲಿ ದೋಷವಿದ್ದರೆ ಅದನ್ನು ತೋರಿಸಬೇಕೇ ಹೊರತು, ಕಲ್ಪನೆಯ ಮೇಲೆ ಆರೋಪ ಮಾಡಿ, ಸರ್ಕಾರದ ತಾಳ್ಮೆ ಪರೀಕ್ಷಿಸುವುದಲ್ಲ.
ರಾಜ್ಯ ರಾಜಕಾರಣದಲ್ಲಿ ಇಂದಿನ ಮಟ್ಟಿಗೆ ತೀವ್ರ ಕುತೂಹಲ ಮೂಡಿಸಿರುವ ಪ್ರಕರಣವೆಂದರೆ ಯಡಿಯೂರಪ್ಪನವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯವರ ವಿರುದ್ಧ ಮಾಡಿರುವ ಆಧಾರ ರಹಿತ ಆರೋಪ. ಸುಮಾರು 20 ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ವ್ಯಕ್ತಿಯೊಬ್ಬರು ಕಾಂಗ್ರೆಸ್ ಹೈಕಮಾಂಡ್‍ಗೆ ಸಾವಿರ ಕೋಟಿ ಹಣ ಸಂದಾಯ ಮಾಡಲು ಮುಖ್ಯಮಂತ್ರಿಗಳಿಗೆ ಸಹಕಾರ ನೀಡಿದ್ದಾರೆ ಎಂದು ಅವರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ, ಅವರ ತೇಜೋವಧೆಗೆ ಮುಂದಾಗಿರುವುದು ದುರದೃಷ್ಟಕರ.
ಯಡಿಯೂರಪ್ಪನವರು ಇಂತಹಾ ಒಂದು ಗಂಭೀರ ಆರೋಪ ಮಾಡಿದ ನಂತರದಲ್ಲೂ ಕಾಂಗ್ರೆಸ್‍ನ ಯಾವ ನಾಯಕರು ಸ್ವಲ್ಪವೂ ವಿಚಲಿತರಾಗದೆ, ತಮ್ಮ ಪಕ್ಷದ ಸಿದ್ದಾಂತಗಳಿಗೆ ಚ್ಯುತಿಬಾರದಂತೆ ವರ್ತಿಸಿದರು. ಯಡಿಯೂರಪ್ಪನವರ ವಿರುದ್ಧ ಯಾವುದೇ ರೀತಿಯ ಕೆಳ ಮಟ್ಟದ ಹೇಳಿಕೆಗಳನ್ನ ನೀಡಲಿಲ್ಲ. ಈ ಸಂದರ್ಭದಲ್ಲಿ ಅವರಿಗೆ ತೋಚಿದ ಉತ್ತಮ ದಾರಿಯೆಂದರೆ ಕಾನೂನಿನ ಮೂಲಕ ಈ ಸಮಸ್ಯೆಗೆ ತಾರ್ಕಿಕ ಅಂತ್ಯವನ್ನು ಹಾಡುವ ಮೂಲಕ, ವಾಸ್ತವವನ್ನು ಹೊರ ಜಗತ್ತಿಗೆ ತಿಳಿಯುವಂತೆ ಮಾಡುವುದು.
ಈ ರೀತಿ ಕಾಂಗ್ರೆಸ್ ಮೇಲೆ ಆರೋಪ ಮಾಡಿದ ಕೆಲವೇ ಗಂಟೆಗಳ ನಂತರ ಯಡಿಯೂರಪ್ಪ ಮತ್ತು ಅನಂತಕುಮಾರ್ ಸಭೆಯೊಂದರಲ್ಲಿ ತಮ್ಮ ಆಡಳಿತಾವಧಿಯಲ್ಲಿ ಹೈಕಮಾಂಡ್‍ಗೆ ಹಣ ಸಂದಾಯ ಮಾಡಿದ ಅನುಭವವನ್ನು ಹಂಚಿಕೊಳ್ಳುವ ಮೂಲಕ, ತಾವು ತೋಡಿದ ಹಳ್ಳಕ್ಕೆ ತಾವಾಗಿಯೇ ಬಿದ್ದಿದ್ದಾರೆ. ಕೆಲವು ವರ್ಷದ ಹಿಂದೆ ನಡೆದ ಐಟಿ ದಾಳಿಯಲ್ಲಿ ಡೈರಿಯೊಂದು ಸಿಕ್ಕಿದೆ, ಅದರಲ್ಲಿ ಹಲವಾರು ಅಮೂಲ್ಯ ಮಾಹಿತಿಗಳಿದೆ ಎಂದು ಕಥೆ ಕಟ್ಟುವ ಮೂಲಕ ಜನರ ದಾರಿ ತಪ್ಪಿಸುವ ಪ್ರಯತ್ನಕ್ಕೆ ಕೈಹಾಕಿದ್ದು ವಿಪರ್ಯಾಸ.
ಒಂದು ವೇಳೆ ಡೈರಿ ಸಿಕ್ಕಿದೆ ಎಂದೇ ಇಟ್ಟುಕೊಳ್ಳೋಣ, ಅದರಲ್ಲಿನ ಮಾಹಿತಿಗಳು ಏನೇ ಆಗಿರಲಿ ಆ ಮಾಹಿತಿಗಳು ಯಡಿಯೂರಪ್ಪರಂತಹಾ ಸಂಸದರಿಗೆ ಸಿಗಲು ಹೇಗೆ ಸಾಧ್ಯ? ಹಾಗಾದರೆ ಐಟಿ, ಇಡಿ ಇಲಾಖೆಗಳು ಕೇಂದ್ರ ಸರ್ಕಾರದೊಂದಿಗೆ ತಮ್ಮ ಎಲ್ಲಾ ಗುಪ್ತ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆಯೇ? ಹಾಗಾದರೆ ಭ್ರಷ್ಟಾಚಾರ ತಡೆಗೆ ಎಂದು ಸ್ಥಾಪಿತವಾದ ಸ್ವತಂತ್ರ ಸಂಸ್ಥೆಯೊಂದು, ಒಂದು ನಿರ್ಧಿಷ್ಟ ಪಕ್ಷದ ರಾಜಕೀಯ ಉದ್ದೇಶಗಳ ಈಡೇರಿಕೆಗೆ ಕಾರ್ಯ ನಿರ್ವಹಿಸುತ್ತಿದೆ ಎಂದಾದರೆ ಸಂವಿಧಾನದ ಆಶಯಗಳ ಈಡೇರಿಕೆ ಹೇಗೆ ಸಾಧ್ಯ?
ಈ ಆರೋಪದಿಂದ ಹೊರಬರಲು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯವರು ಯಡಿಯೂರಪ್ಪನವರ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ಈಗಾಗಲೇ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದು, ಈ ಮೂಲಕ ವಾಸ್ತವ ಮತ್ತು ಆರೋಪದ ನಡುವಿನ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಡುವ ಕಾರ್ಯಕ್ಕೆ ಮುಂದಾಗಿರುವುದು ಸ್ವಾಗತಾರ್ಹ.
ಬಿಜೆಪಿ ಪಕ್ಷದ ನಾಯಕರು ಸುಳ್ಳು ಆರೋಪವನ್ನು ಮಾಡಿ, ಅದರ ಪರಿಣಾಮಗಳಿಗೆ ಉತ್ತರಿಸಲಾಗದೆ ಮಾಧ್ಯಮಗಳಿಂದ ದೂರ ಓಡುತ್ತಿದ್ದರೆ, ಕಾಂಗ್ರೆಸ್ ಪಕ್ಷದವರು ತಮ್ಮ ಮೇಲಿನ ಎಲ್ಲಾ ಸುಳ್ಳು ಆರೋಪಗಳಿಗೆ ಎದೆ ಕೊಟ್ಟು ನಿಂತು, ತಾವು ನುಡಿದಂತೆ ನಡೆಯುವ ನೇರ ವ್ಯಕ್ತಿತ್ವ ಮತ್ತು ಸಿದ್ದಾಂತಗಳಿಗೆ ಬದ್ಧರಾಗಿ ಬದುಕುವ ನೆಲೆಗಟ್ಟಿನಲ್ಲಿ ಬೆಳೆದವರು ಎಂಬುದನ್ನು ಎತ್ತಿಹಿಡಿಯುತ್ತಿದ್ದಾರೆ.
ಪ್ರತೀ ಬಾರಿ ಇಂತಹಾ ಪರೀಕ್ಷೆಗಳನ್ನು ಎದುರಿಸಿದಾಗಲೆಲ್ಲಾ ಕಾಂಗ್ರೆಸ್ ಹಿಂದಿಗಿಂತಲೂ ಸ್ಪುಟವಾದ ಚಿನ್ನದಂತೆ ಪ್ರಜ್ವಲಿಸುತ್ತಾ ಬಂದಿದೆ. ಈ ಬಾರಿಯೂ ಅದೇ ರೀತಿಯ ಫಲಿತಾಂಶ ಹೊರಬರುವ ನಿರೀಕ್ಷೆಯಿದೆ.
Advertisements