ದುಡಿಯುವ ಮನವಿರುವ ಕನ್ನಡಿಗನಿಗೆ ಕರ್ನಾಟಕವೇ ಸ್ವರ್ಗ

blue-collar-jobs-quota-for-kannadigas-1
ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಸ್ಥಾನ ಸಿಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಇದ್ದ ಕನ್ನಡಪರ ಹೋರಾಟಗಾರರು ಮತ್ತು ಕನ್ನಡದ ಜನತೆಯ ಸಂತಸಕ್ಕಿಂದು ಪಾರವೇ ಇಲ್ಲ. ಖಾಸಗಿ ಉದ್ಯೋಗದಲ್ಲಿ ಮೀಸಲಾತಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಕನ್ನಡಿಗರಿಗೆ ಕೊನೆಗೂ ಸರ್ಕಾರ ಶುಭಸುದ್ದಿ ನೀಡಿದೆ.
ರಾಜ್ಯದ ಖಾಸಗಿ ಕಂಪೆನಿಗಳಲ್ಲಿ ‘ಸಿ ಮತ್ತು ಡಿ’ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಶೇ.100 ರಷ್ಟು ಮೀಸಲಾತಿ ನೀಡುವಂತೆ ಆದೇಶಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಕಾಯ್ದೆ ತಿದ್ದುಪಡಿಗೆ ಕಾನೂನು ಇಲಾಖೆಯಿಂದಲೂ ಅನುಮತಿ ದೊರೆತಿದ್ದು, ಸ್ವಲ್ಪ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ.
ಈ ಹಿಂದೆ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕುರಿತಂತೆ ಸರೋಜಿನಿ ಮಹಿಷಿ ವರದಿಯಲ್ಲಿ ಶೇ.70 ರಷ್ಟು ‘ಎ ಮತ್ತು ಬಿ’ ದರ್ಜೆಯ ಹುದ್ದೆಗಳನ್ನು ಮೀಸಲಿಡಲು ಶಿಫಾರಸ್ಸು ಮಾಡಲಾಗಿತ್ತು. ಇದೀಗ ಸರ್ಕಾರ ‘ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ ಶೇ.100 ರಷ್ಟು ಮೀಸಲಾತಿಗೆ ಒಳಪಡಿಸಿ ಕಾಯ್ದೆ ತರಲು ನಿರ್ಧರಿಸಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಕಾಯ್ದೆ ರಾಜ್ಯದ ಐಟಿ ಮತ್ತು ಬಿಟಿ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಸರ್ಕಾರದ ನೆರವಿನಿಂದಲೇ ಸ್ಥಾಪನೆಗೊಂಡಿರುವ ಯಾವುದೇ ಕಂಪೆನಿಗಳಿಗೆ ಇದು ಅನ್ವಯಿಸುವುದಿಲ್ಲ. ಮುಂದೆ ಇದಕ್ಕೂ ಬದಲಾವಣೆ ತರುವ ಅವಕಾಶಗಳಿದ್ದರೆ ಅದು ಕೂಡ ಸಾಧ್ಯವಲ್ಲದ ವಿಚಾರವೇನಲ್ಲ.
ಈ ಕರಡು ಅಧಿಸೂಚನೆ ಪ್ರಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ನೀತಿ ಅನ್ವಯ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಸಂಪರ್ಕ ಹಾಗೂ ತೆರಿಗೆ ವಿನಾಯಿತಿ ಪಡೆದ ಎಲ್ಲಾ ಕೈಗಾರಿಕೆಗಳು ಮತ್ತು ಉದ್ಯಮಗಳು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗುತ್ತದೆ. ಒಂದು ವೇಳೆ ಖಾಸಗಿ ಕಂಪೆನಿಗಳು ಈ ನಿಯಮ ಉಲ್ಲಂಘಿಸಿದರೆ ಸರ್ಕಾರ ಕಂಪೆನಿಗೆ ನೀಡಿರುವ ಎಲ್ಲಾ ವಿನಾಯಿತಿಗಳನ್ನು ವಾಪಾಸ್ ಪಡೆದು ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.
ಕರ್ನಾಟಕ ಕೈಗಾರಿಕಾ ಉದ್ಯೋಗ ಕಾಯ್ದೆಯಡಿ ರೂಪಿಸಲಾಗಿರುವ ನೂತನ ಉದ್ಯೋಗ ಮೀಸಲಾತಿ ಅನ್ವಯ ಖಾಸಗಿ ಕಂಪೆನಿಗಳ ಸಿ ಮತ್ತು ಡಿ ದರ್ಜೆಯ ಉದ್ಯೋಗದ ನೇಮಕಾತಿಯಲ್ಲಿ ಶೇ.100 ರಷ್ಟು ಮೀಸಲಾತಿ ನೀಡುವ ವೇಳೆ ಈ ಪೈಕಿ ಶೇ.5 ರಷ್ಟು ದಿವ್ಯಾಂಗರಿಗೂ ಮೀಸಲಾತಿ ವಿಭಜಿಸಲಾಗಿದೆ. ಅಂದರೆ ಶೇ.100 ರಷ್ಟು ಕನ್ನಡಿಗರ ಪೈಕಿ ಶೇ.5 ರಷ್ಟು ಉದ್ಯೋಗಗಳನ್ನು ದಿವ್ಯಾಂಗರಿಗೂ ಅವಕಾಶ ನೀಡಬೇಕು ಎಂದು ಕರಡು ಅಧಿಸೂಚನೆ ಹೇಳುತ್ತದೆ.
ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ಕೂಡ ನೀಡಲಾಗಿದ್ದು, ಸಲ್ಲಿಸುವವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿದೆ. ಕಾಯ್ದೆ ಜರಿಗೆ ಹಲವಾರು ತೊಡಕುಗಳು ಎದುರಾಗಬಹುದಾಗಿದ್ದು, ನಾಡಿನ ಯುವಕರ ಹಿತದೃಷ್ಠಿಯಿಂದ ಅವೆಲ್ಲವನ್ನೂ ಪರಿಹರಿಸಿ ಇದನ್ನು ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಪ್ರಸ್ತಾವಿತ ಕರಡು ಅಧಿಸೂಚನೆಯಲ್ಲಿ ತಿಳಿಸಿದಂತೆ ಕನ್ನಡಿಗರೆಂದರೆ, ಕರ್ನಾಟಕ ರಾಜ್ಯದಲ್ಲಿ ಜನಿಸಿದವರು, ಕಳೆದ ಹದಿನೈದು ವರ್ಷಗಳಿಂದ ವಾಸವಿರುವವರು ಮತ್ತು ಕನ್ನಡ ಭಾಷೆ ಮಾತನಾಡಲು ಓದಲು ಮತ್ತು ಬರೆಯಲು ಬರುವವರನ್ನು ಕನ್ನಡಿಗರೆಂದು ವ್ಯಾಖ್ಯಾನಿಸಲಾಗಿದೆ. ಹಾಗಾಗಿ ಇವೆಲ್ಲಾ ಅರ್ಹತೆ ಹೊಂದಿರುವವರು ಈ ನಿಯಮದಡಿಯಲ್ಲಿ ಉದ್ಯೋಗ ಪಡೆಯುವ ಅರ್ಹತೆಯನ್ನು ಹೊಂದಿದವರಾಗಿರುತ್ತಾರೆ.
ಒಟ್ಟಿನಲ್ಲಿ ಕನ್ನಡಿಗರು ಕರ್ನಾಟಕದಲ್ಲೇ ಉದ್ಯೋಗ ಸಿಗದೆ ನಿತ್ಯ ಅಲೆಯುವ ಸ್ಥಿತಿ ಬರಬಾರದೆಂಬ ಉದ್ದೇಶದಿಂದ ಸರ್ಕಾರ ರಾಜ್ಯದ ಜನತೆಯ ಹಿತದೃಷ್ಠಿಯಿಂದ ಈ ಹೊಸ ಬದಲಾವಣೆಗೆ ಮುನ್ನುಡಿ ಹಾಡಿದ್ದು, ಮುಂದೆ ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗವಕಾಶಗಳ ಸ್ವರ್ಗದ ಬಾಗಿಲೇ ತೆರೆಯಲಿದೆ ಎಂದು ಆಶಿಸಲಾಗಿದೆ.
ತಾಯ್ನಾಡಿನಲ್ಲಿ ಅಲ್ಪ ದುಡಿಮೆ ನೀಡುವಷ್ಟು ಸಂತೃಪ್ತಿ ದೂರದ ಊರಿನಲ್ಲಿ ಲಕ್ಷ ದುಡಿದರೂ ಸಿಗಲಾರದು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s