Finally, a thought for Karnataka

finally-a-thought-for-karnatakaWe hope the PM walks the talk and shows his commitment to the people of Karnataka who have been reeling under successive drought for the past few years. Drought and floods in some parts of the state have had a severe impact on agricultural crops and the farming community in general.
Waiving off loans has been a loud demand in the face of these hardships. The state government has set up cabinet sub-committees to review the on ground situation, and one hopes the demand for loan waiver receives its due. Moreover, most farmers in the state have taken loans from nationalised banks. Why doesn’t the Central Government consider waiving off these loans? Why doesn’t it use the stated gains from demonetisation for the benefits of farmers?
In any case, one hopes the upcoming meeting between the leaders results in the much sought after financial aid for Karnataka. We have been asking and asking, Modi Ji. Pleading ignorance isn’t a good look. Even for you.
Advertisements

ಎತ್ತಿನಹೊಳೆ ಯೋಜನೆಯಲ್ಲಿ ಬಿಜೆಪಿಯ ಇಬ್ಬಗೆಯ ನೀತಿ

yethinahole-blog-lk

ಎತ್ತಿನಹೊಳೆ ಯೋಜನೆ ಸಧ್ಯದ ಪರಿಸ್ಥಿತಿಯಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಯೋಜನೆಯಾಗಿದೆ. ಈ ವಿಚಾರದಲ್ಲಿ ಬಿಜೆಪಿ ಪಕ್ಷ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. 2012 ನೇ ಇಸವಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಸಮಯದಲ್ಲಿಯೇ ಈ ಯೋಜನೆಗೆ ಸಮ್ಮತಿ ಸೂಚಿಸಿ, ಅದೇ ಯೊಜನೆಯನ್ನು ಈಗ ಸರ್ಕಾರ ಕಾರ್ಯ ರೂಪಕ್ಕೆ ತರಲು ಹೊರಟಿರುವಾಗ ವಿರೋಧಿಸುತ್ತಿರುವುದು ಎಷ್ಟು ಸಮಂಜಸ? ಎಂಬ ಪ್ರಶ್ನೆ ಎದುರಾಗುತ್ತದೆ.

ಅಂದು ಈ ಯೋಜನೆ ಆರಂಭಿಸಲು ಸರ್ಕಾರ ನೀಡಿದ ವರದಿಯ ಪ್ರಕಾರ “ರಾಜ್ಯದ ಪೂರ್ವ ಭಾಗದ ಜೆಲ್ಲೆಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಇರುವ ಹಿನ್ನಲೆಯಲ್ಲಿ, ಶೀಘ್ರವಾಗಿ ನೀರು ಒದಗಿಸುವ ಹಿನ್ನಲೆಯಲ್ಲಿ ಯಾವುದೇ ಅಂತರ ರಾಜ್ಯಗಳ ವಿವಾದವಿಲ್ಲದೆ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ಪಶ್ಚಿಮ ಘಟ್ಟಗಳ ಹಳ್ಳಗಳ ಮೇಲ್ಭಾಗದ ಪ್ರವಾಹದ ನೀರನ್ನು ಪೂರ್ವ ಭಾಗದ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ಪೂರೈಸಲು ನಿರ್ಧರಿಸಲಾಗಿದೆ” ಎಂದು ತಿಳಿಸಲಾಗಿತ್ತು.

ಈ ಯೋಜನೆಯಿಂದ ವಾರ್ಷಿಕ 24.01 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಯೋಜನೆಯಿಂದ 68.35 ಲಕ್ಷ ಜನರು ಪ್ರಯೋಜನ ಪಡೆಯಲಿದ್ದಾರೆ ಎಂದು ಸರ್ಕಾರ ತಿಳಿಸಿತ್ತು. ಸುಮಾರು 274 ಕಿ.ಮೀ ಉದ್ದದ ಕಾಲುವೆಯನ್ನು ನಿರ್ಮಿಸಲು ಉದ್ದೇಶಿಲಾಗಿತ್ತು. ಕೊರಟಗೆರೆ ತಾಲೂಕಿನ ಭೈರಗೊಂಡಲು ಗ್ರಾಮದ ಬಳಿ 5.78 ಟಿ.ಎಂ.ಸಿ ಸಾಮಥ್ರ್ಯದ ಜಲಾಶಯ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಒಟ್ಟು 12,912.36 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಹೀಗೆ ಇದು ಒಂದು ಉತ್ತಮ ಯೋಜನೆಯಾಗಿ ರೂಪುಗೊಂಡಿತ್ತು.

ಈ ಯೋಜನೆಗೆ ಸಿದ್ದರಾಮಯ್ಯನವರ ಸರ್ಕಾರ ಕೈಹಾಕಲು ಮುಖ್ಯ ಕಾರಣ ರಾಜ್ಯದ ಪೂರ್ವದ ಜಿಲ್ಲೆಗಳ ಸದ್ಯದ ಪರಿಸ್ಥಿತಿ. ಹೀಗಿದೆ:

ಕೋಲಾರ, ಮುಳಬಾಗಿಲು ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ಕಂಡರೆ ಯಾವುದೇ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಲು ಮನಸ್ಸಾಗುವುದಿಲ್ಲ. ಮಳೆಯ ಅಭಾವದಿಂದ ಕೆರೆ, ಕಟ್ಟೆಗಳು. ಸಾವಿರಾರು ಕೊಳವೆ ಬಾವಿಗಳು ಬತ್ತಿ ಜನರು ನಿತ್ಯ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಮುದ್ರ ಸೇರಿ ಪೋಲಾಗುವ ನೀರನ್ನು ಜನರ ಬಳಕೆಗೆ ತರುವ ಉದ್ದೇಶದಿಂದ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ.

ಎತ್ತಿನಹೊಳೆ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಾಗಿನಿಂದಲೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಲ್ಲಿನ ಪರಿಸರವನ್ನು ನಾಶ ಮಾಡಿ ಅನುಕೂಲಸಿಂಧು ರಾಜಕಾರಣ ಮಾಡುತ್ತಿದ್ದಾರೆ ಎಂದು ಅಲ್ಲಿನ ಜನರ ಕೂಗಾಗಿದೆ. ಆದರೆ ವಾಸ್ತವದಲ್ಲಿ ರಾಜ್ಯದ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂಬುದಾಗಿದೆ. ಅಲ್ಲಿನ ಜನರ ಜೊತೆಗೆ ಬಿಜೆಪಿ ಪಕ್ಷವೂ ರಾಜಕೀಯ ಸ್ವಾರ್ಥಕ್ಕಾಗಿ ಈಗ ಕೈಜೋಡಿಸಿರುವುದು ನಿಜಕ್ಕೂ ದುಃಖದ ವಿಚಾರವಾಗಿದೆ.

ಈ ಯೋಜನೆಗೆ ಒಂದಷ್ಟು ಅರಣ್ಯ ಭೂಮಿಯ ಅಗತ್ಯತೆ ಇದೆ, ಅಲ್ಲಿರುವ ಒಂದಷ್ಟು ಮರಗಳನ್ನು ಕಡಿಯಬೇಕಾಗಬಹುದು. ಕಡಿದ ಮರಗಳ ಬದಲಾಗಿ ಬೇರೆ ಕಡೆ ಮರಗಳನ್ನು ಬೆಳೆಸಲು ಅವಕಾಶ ಮಾಡಬಹುದಾಗಿದ್ದು, ಅದೊಂದೇ ಕಾರಣಕ್ಕೆ ಇಂತಹಾ ಒಂದು ಉತ್ತಮ ಯೋಜನೆಯನ್ನು ವಿರೋಧಿಸುವುದು ಎಷ್ಟು ಸರಿ? ಎಂದು ವಿರೋಧ ಪಕ್ಷಗಳು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅವರೇ ರೂಪಿಸಿ, ಅವರೇ ಅನುಮೋದನೆ ಮಾಡಿ, ಅವರೇ ಅನುಷ್ಠಾನಗೊಳಿಸಿದ ಯೋಜನೆಯನ್ನು ಇಂದು ಸರ್ಕಾರ ಕೈಗೆತ್ತಿಕೊಂಡಿರುವುದೇ ವಿನಃ, ಹೊಸದಾಗಿ ಒಂದು ಯೋಜನೆಯನ್ನು ಹುಟ್ಟುಹಾಕಿ ಆ ಮೂಲಕ ರಾಜ್ಯದ ಜನರಿಗೆ ಯಾವುದೇ ರೀತಿಯ ಸಮಸ್ಯೆಯನ್ನು ಉಂಟುಮಾಡಲು ಅಲ್ಲ. ಆದರೂ ಕೂಡ ಒಂದು ಕಡೆ ಕೋಲಾರದಲ್ಲಿ ಬಿಜೆಪಿ ನೀರಿಗಾಗಿ ಪ್ರತಿಭಟನೆ ಮಾಡುವುದು, ಅದೇ ಪಕ್ಷದವರು ಮಂಗಳೂರಿನಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿಸಿ ಹೋರಾಟವನ್ನು ಮಾಡುವುದು, ನಿಜಕ್ಕೂ ಈ ಮೂಲಕ ಬಿಜೆಪಿಯ ಇಬ್ಬಗೆಯ ನೀತಿಯು ರಾಜ್ಯದ ಜನರ ಮುಂದೆ ಅನಾವರಣಗೊಂಡಿದೆ.

ದುಡಿಯುವ ಮನವಿರುವ ಕನ್ನಡಿಗನಿಗೆ ಕರ್ನಾಟಕವೇ ಸ್ವರ್ಗ

blue-collar-jobs-quota-for-kannadigas-1
ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಸ್ಥಾನ ಸಿಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಇದ್ದ ಕನ್ನಡಪರ ಹೋರಾಟಗಾರರು ಮತ್ತು ಕನ್ನಡದ ಜನತೆಯ ಸಂತಸಕ್ಕಿಂದು ಪಾರವೇ ಇಲ್ಲ. ಖಾಸಗಿ ಉದ್ಯೋಗದಲ್ಲಿ ಮೀಸಲಾತಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಕನ್ನಡಿಗರಿಗೆ ಕೊನೆಗೂ ಸರ್ಕಾರ ಶುಭಸುದ್ದಿ ನೀಡಿದೆ.
ರಾಜ್ಯದ ಖಾಸಗಿ ಕಂಪೆನಿಗಳಲ್ಲಿ ‘ಸಿ ಮತ್ತು ಡಿ’ ದರ್ಜೆಯ ಹುದ್ದೆಗಳ ನೇಮಕಾತಿಯಲ್ಲಿ ಶೇ.100 ರಷ್ಟು ಮೀಸಲಾತಿ ನೀಡುವಂತೆ ಆದೇಶಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಕಾಯ್ದೆ ತಿದ್ದುಪಡಿಗೆ ಕಾನೂನು ಇಲಾಖೆಯಿಂದಲೂ ಅನುಮತಿ ದೊರೆತಿದ್ದು, ಸ್ವಲ್ಪ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ.
ಈ ಹಿಂದೆ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಕುರಿತಂತೆ ಸರೋಜಿನಿ ಮಹಿಷಿ ವರದಿಯಲ್ಲಿ ಶೇ.70 ರಷ್ಟು ‘ಎ ಮತ್ತು ಬಿ’ ದರ್ಜೆಯ ಹುದ್ದೆಗಳನ್ನು ಮೀಸಲಿಡಲು ಶಿಫಾರಸ್ಸು ಮಾಡಲಾಗಿತ್ತು. ಇದೀಗ ಸರ್ಕಾರ ‘ಸಿ ಮತ್ತು ಡಿ’ ದರ್ಜೆಯ ಹುದ್ದೆಗಳಿಗೆ ಶೇ.100 ರಷ್ಟು ಮೀಸಲಾತಿಗೆ ಒಳಪಡಿಸಿ ಕಾಯ್ದೆ ತರಲು ನಿರ್ಧರಿಸಿದೆ.
ಕನ್ನಡಿಗರಿಗೆ ಉದ್ಯೋಗ ಮೀಸಲಿಡುವ ಕಾಯ್ದೆ ರಾಜ್ಯದ ಐಟಿ ಮತ್ತು ಬಿಟಿ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ. ಸರ್ಕಾರದ ನೆರವಿನಿಂದಲೇ ಸ್ಥಾಪನೆಗೊಂಡಿರುವ ಯಾವುದೇ ಕಂಪೆನಿಗಳಿಗೆ ಇದು ಅನ್ವಯಿಸುವುದಿಲ್ಲ. ಮುಂದೆ ಇದಕ್ಕೂ ಬದಲಾವಣೆ ತರುವ ಅವಕಾಶಗಳಿದ್ದರೆ ಅದು ಕೂಡ ಸಾಧ್ಯವಲ್ಲದ ವಿಚಾರವೇನಲ್ಲ.
ಈ ಕರಡು ಅಧಿಸೂಚನೆ ಪ್ರಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ನೀತಿ ಅನ್ವಯ ರಿಯಾಯಿತಿ ದರದಲ್ಲಿ ಭೂಮಿ, ನೀರು, ವಿದ್ಯುತ್ ಸಂಪರ್ಕ ಹಾಗೂ ತೆರಿಗೆ ವಿನಾಯಿತಿ ಪಡೆದ ಎಲ್ಲಾ ಕೈಗಾರಿಕೆಗಳು ಮತ್ತು ಉದ್ಯಮಗಳು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗುತ್ತದೆ. ಒಂದು ವೇಳೆ ಖಾಸಗಿ ಕಂಪೆನಿಗಳು ಈ ನಿಯಮ ಉಲ್ಲಂಘಿಸಿದರೆ ಸರ್ಕಾರ ಕಂಪೆನಿಗೆ ನೀಡಿರುವ ಎಲ್ಲಾ ವಿನಾಯಿತಿಗಳನ್ನು ವಾಪಾಸ್ ಪಡೆದು ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.
ಕರ್ನಾಟಕ ಕೈಗಾರಿಕಾ ಉದ್ಯೋಗ ಕಾಯ್ದೆಯಡಿ ರೂಪಿಸಲಾಗಿರುವ ನೂತನ ಉದ್ಯೋಗ ಮೀಸಲಾತಿ ಅನ್ವಯ ಖಾಸಗಿ ಕಂಪೆನಿಗಳ ಸಿ ಮತ್ತು ಡಿ ದರ್ಜೆಯ ಉದ್ಯೋಗದ ನೇಮಕಾತಿಯಲ್ಲಿ ಶೇ.100 ರಷ್ಟು ಮೀಸಲಾತಿ ನೀಡುವ ವೇಳೆ ಈ ಪೈಕಿ ಶೇ.5 ರಷ್ಟು ದಿವ್ಯಾಂಗರಿಗೂ ಮೀಸಲಾತಿ ವಿಭಜಿಸಲಾಗಿದೆ. ಅಂದರೆ ಶೇ.100 ರಷ್ಟು ಕನ್ನಡಿಗರ ಪೈಕಿ ಶೇ.5 ರಷ್ಟು ಉದ್ಯೋಗಗಳನ್ನು ದಿವ್ಯಾಂಗರಿಗೂ ಅವಕಾಶ ನೀಡಬೇಕು ಎಂದು ಕರಡು ಅಧಿಸೂಚನೆ ಹೇಳುತ್ತದೆ.
ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶವನ್ನು ಕೂಡ ನೀಡಲಾಗಿದ್ದು, ಸಲ್ಲಿಸುವವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬಹುದಾಗಿದೆ. ಕಾಯ್ದೆ ಜರಿಗೆ ಹಲವಾರು ತೊಡಕುಗಳು ಎದುರಾಗಬಹುದಾಗಿದ್ದು, ನಾಡಿನ ಯುವಕರ ಹಿತದೃಷ್ಠಿಯಿಂದ ಅವೆಲ್ಲವನ್ನೂ ಪರಿಹರಿಸಿ ಇದನ್ನು ಜಾರಿಗೆ ತರಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಪ್ರಸ್ತಾವಿತ ಕರಡು ಅಧಿಸೂಚನೆಯಲ್ಲಿ ತಿಳಿಸಿದಂತೆ ಕನ್ನಡಿಗರೆಂದರೆ, ಕರ್ನಾಟಕ ರಾಜ್ಯದಲ್ಲಿ ಜನಿಸಿದವರು, ಕಳೆದ ಹದಿನೈದು ವರ್ಷಗಳಿಂದ ವಾಸವಿರುವವರು ಮತ್ತು ಕನ್ನಡ ಭಾಷೆ ಮಾತನಾಡಲು ಓದಲು ಮತ್ತು ಬರೆಯಲು ಬರುವವರನ್ನು ಕನ್ನಡಿಗರೆಂದು ವ್ಯಾಖ್ಯಾನಿಸಲಾಗಿದೆ. ಹಾಗಾಗಿ ಇವೆಲ್ಲಾ ಅರ್ಹತೆ ಹೊಂದಿರುವವರು ಈ ನಿಯಮದಡಿಯಲ್ಲಿ ಉದ್ಯೋಗ ಪಡೆಯುವ ಅರ್ಹತೆಯನ್ನು ಹೊಂದಿದವರಾಗಿರುತ್ತಾರೆ.
ಒಟ್ಟಿನಲ್ಲಿ ಕನ್ನಡಿಗರು ಕರ್ನಾಟಕದಲ್ಲೇ ಉದ್ಯೋಗ ಸಿಗದೆ ನಿತ್ಯ ಅಲೆಯುವ ಸ್ಥಿತಿ ಬರಬಾರದೆಂಬ ಉದ್ದೇಶದಿಂದ ಸರ್ಕಾರ ರಾಜ್ಯದ ಜನತೆಯ ಹಿತದೃಷ್ಠಿಯಿಂದ ಈ ಹೊಸ ಬದಲಾವಣೆಗೆ ಮುನ್ನುಡಿ ಹಾಡಿದ್ದು, ಮುಂದೆ ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗವಕಾಶಗಳ ಸ್ವರ್ಗದ ಬಾಗಿಲೇ ತೆರೆಯಲಿದೆ ಎಂದು ಆಶಿಸಲಾಗಿದೆ.
ತಾಯ್ನಾಡಿನಲ್ಲಿ ಅಲ್ಪ ದುಡಿಮೆ ನೀಡುವಷ್ಟು ಸಂತೃಪ್ತಿ ದೂರದ ಊರಿನಲ್ಲಿ ಲಕ್ಷ ದುಡಿದರೂ ಸಿಗಲಾರದು.

ನೋಟು ನಿಷೇಧದಿಂದ ಸಂಕಷ್ಟಕ್ಕೆ ಗುರಿಯಾದ ಅಡಿಕೆ ಬೆಳೆಗಾರರು

unnamed-2

ನೋಟು ನಿಷೇಧದ ಬಿಸಿ ಕಾಳ ಧನಿಕರಿಗೆ ತಟ್ಟಿದೆಯೋ ಇಲ್ಲವೋ, ಆದರೆ ರೈತರಿಗೆ, ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಮಾಧ್ಯಮ ವರ್ಗದ ಜನರಿಗೆ, ದಿನ ನಿತ್ಯದ ಕೂಲಿಯಿಂದ ಜೀವನ ಸಾಗಿಸುತ್ತಿದ್ದವರಿಗೆ ಸರಿಯಾಗಿಯೇ ತಟ್ಟಿದೆ. ಮುಟ್ಟಿ ನೋಡುಕೊಳ್ಳುವಂತೆ ಬಲವಾದ ಹೊಡೆತವನ್ನು ನೀಡಿದೆ.

ಕೇಂದ್ರ ಸರಕಾರ ನೋಟು ನಿಷೇಧ ಮಾಡಿದ ಹಿನ್ನಲೆಯಲ್ಲಿ ಕಾಳಧನಿಕರು ಯಾವುದೇ ತೊಂದರೆಯನ್ನು ಅನುಭವಿಸಿದಂತೆ ಕಾಣುತ್ತಿಲ್ಲ, ಆದರೆ ಜನ ಸಾಮಾನ್ಯರು ಮಾತ್ರ ಭಾರಿ ತೊಂದರೆಯನ್ನು ಎದುರಿಸುತ್ತಿದ್ದಾರೆ. ಒಂದು ಕಡೆ 2000 ರೂ ನೋಟಿಗೆ ಚಿಲ್ಲರೆ ಸಿಗುತ್ತಿಲ್ಲ, ಅಕೌಂಟ್ ನಲ್ಲಿ 2000 ರೂ ಗಿಂತ ಕಡಿಮೆ ಇದ್ದರೆ ದುಡ್ಡು ತೆಗೆಯಲು ಆಗುತ್ತಿಲ್ಲ ಕಾರಣ 500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳು ಸಿಗುತ್ತಿಲ್ಲ.

ವ್ಯಾಪಾರ ವ್ಯವಹಾರ ನೆಲ ಕಚ್ಚಿದ್ದು, ಸರಕು ಸೇವೆಗಳನ್ನು ಕೇಳುವವರಿಲ್ಲದಂತಾಗಿದೆ. ಹೋಟೆಲ್ ಉದ್ಯಮ ನಷ್ಟಕ್ಕೆ ಗುರಿಯಾದರೆ, ರಿಯಲ್ ಎಸ್ಟೆಟ್ ಮಕಾಡೆ ಮಲುಗಿದೆ. ಮಂಗಳೂರಿನಲ್ಲಿ ಮೀನು ಬೆಲೆ ಕಳೆದುಕೊಂಡರೆ, ರಾಮನಗರದ ರೇಷ್ಮೆಯನ್ನು ಕೇಳುವವರಿಲ್ಲದಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಮಾರಾಟವಾಗದೆ ಮಾರುಕಟ್ಟೆಯಲ್ಲಿಯೇ ಉಳಿದಿದೆ.

ಕೈಯಲ್ಲಿ ದುಡ್ಡಿಲ್ಲದೇ ಜನರ ಖರೀದಿಸುವ ಸಾಮಾರ್ಥ್ಯವನ್ನು ಕಡಿಮೆ ಮಾಡಿದ್ದು,  ಅಕೌಂಟ್ ನಲ್ಲಿ  ಕಾಸಿದ್ದರು ಖರ್ಚು ಮಾಡಲಾಗದೆ ಜನರು ಪರದಾಡುತ್ತಿದ್ದು, ಈ ಹಿನ್ನಲೆಯಲ್ಲೇ ಬೇರೆ ಎಲ್ಲವೂ ಮಕಾಡೆ ಮಲಗಿಕೊಂಡಿದೆ ಎಂದರೆ ತಪ್ಪಾಗುವುದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಅಡಿಕೆ ಮಾರುಕಟ್ಟೆಗಳು ನೋಟು ನಿಷೇಧದಿಂದ ಭಾರಿ ಹೊಡೆತ ತಿಂದಿವೆ. ಸದಾ ಅಡಿಕೆ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದ್ದ ಪುತ್ತೂರು ಅಡಿಕೆ ಮಾರುಕಟ್ಟೆ ಇಂದು ಬಿಕೋ ಎನ್ನುತ್ತಿದ್ದು, ಸಾಮಾನ್ಯ ದಿನದಲ್ಲಿ ಇರುತ್ತಿದ್ದ ಶೇ.10 ಮಂದಿ ಮಾತ್ರ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾರಲು ಬೆಳಗಾರರ ಬಳಿ ಅಡಿಕೆ ಇದೆ, ವ್ಯಾಪಾರಿಗಳಿಗೆ ಕೊಳ್ಳುವ ಮನಸ್ಸಿದೆ. ದಲ್ಲಾಳಿಗಳಿಗೂ ಮಾರುಕಟ್ಟೆಯಲ್ಲಿ ಭಾಗವಹಿಸುವ ಆಸಕ್ತಿಇದೆ ಆದರೆ ಇವರಬಳಿ ಹಣವಿಲ್ಲ. ಚೆಕ್ ನೀಡಿದಲು ವ್ಯಾಪರಿಗಳಿಗೆ ಮನಸ್ಸಿದರು ಅದನ್ನು ಪಡೆಯಲು ಬೆಳೆಗಾರರು ತಯಾರಿಲ್ಲ.

ಆದರೆ ಇದೇ ಸಂದರ್ಭದಲ್ಲಿ ಸರಕಾರ ಅಡಕೆಗೆ ಪ್ರತಿ ಕೆಜಿಗೆ 250 ರೂಗಳ ಬೆಂಬಲ ಬೆಲೆಯನ್ನು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಮನೆ ಮುಂದೆ ಅಡಿಕೆಯ ರಾಶಿ ಇದ್ದರು ಮಾರಾಲಾಗದೆ ಅಡಿಕೆ ಬೆಳೆಗಾರು ನೋಟು ನಿಷೇಧದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

10 ಕ್ವಿಂಟಲ್ ಖರೀದಿಸುತ್ತಿದ್ದ ವ್ಯಾಪಾರಿಗಳು ಇಂದು ಒಂದು ಕ್ವಿಂಟಲ್ ಅಡಿಕೆ ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಅಡಿಕೆ ಸಾಗಿಸಲು ಇರುತ್ತಿದ್ದ ಕೂಲಿಗಳು ಕೆಲಸವಿಲ್ಲದೇ ಕುಳಿತಿದ್ದಾರೆ. ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಪ್ರತಿ ಬಾರಿಯಂತೆ ಅಡಿಕೆ ಬೆಳೆಗೆ ಹಲವಾರು ರೋಗಗಳು ಮೇಲಿಂದ ಮೇಲೆ ದಾಳಿ ಮಾಡುತ್ತಿದ್ದು, ಅವುಗಳನ್ನು ತಡೆಯಲು ಕ್ರಿಮಿ ನಾಶಕಗಳನ್ನು ತರಲು ಕೂಡ ಬೆಳೆಗಾರರ ಬಳಿ ಬಂಡವಾಳ ವಿಲ್ಲವಾಗಿದೆ. ಸದಾ ಏರಿಳಿತಗಳಲ್ಲೇ ಅಡಿಕೆ ಬೆಳೆಗಾರರು ಜೀವನ ಸಾಗಿಸುತ್ತಿದ್ದು, ಈ ಬಾರಿ ಮಾತ್ರ ಹಳೆ ಗಾಯದ ಮೇಲೆ ಬರೆ ಎಳೆದಂತೆ ಮೋದಿ ಯಾವ ಸೂಕ್ತ ಕ್ರಮ ಕೈಗೊಳ್ಳದೆ ನೋಟು ನಿಷೇಧ ಮಾಡಿರುವುದು ಬೆಳೆಗಾರರ ತೀರದ ಸಂಕಟವಾಗಿದೆ.

 

ನೋಟು ನಿಷೇಧ ಬೆಂಬಲಿಸಲು ಕೇಂದ್ರ ಸರಕಾರದಿಂದ ಆಫರ್: ಮೋದಿ ಸರಕಾರದ ಹೊಸ ಮೋಡಿ

govt-or-pvt-company-lk

ಕೇಂದ್ರ ಸರಕಾರದ ಆನ್ ಲೈನ್ ವ್ಯವಹಾರ ನಡೆಸಿದವರಿಗೆ ಆಫರ್ ಕೊಡುತ್ತಿರುವುದನ್ನು ನೋಡಿದರೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದು ಸರಕಾರವೂ ಇಲ್ಲ ಖಾಸಗಿ ಕಂಪನಿಯೋ ಎಂಬ ಸಂಶಯ ಎದುರಾಗುತ್ತಿದೆ. ಖಾಸಗಿ ಕಂಪನಿಯೊಂದು ಗ್ರಾಹಕರನ್ನು ತನ್ನತ್ತ ಸೆಳೆಯುವ ಸಲುವಾಗಿ ಕೊಡುಗೆಗಳನ್ನು ಘೋಷಿಸಿ ಆಸೆ ಹುಟ್ಟಿಸುವಂತೆ, ಮೋದಿ ಸರಕಾರವೂ ಜನರನ್ನು ಲೇಸ್ ಕ್ಯಾಷ್ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಲು ಲಕ್ಕಿ ಗ್ರಾಹಕ ಎನ್ನುವ ಕೊಡುಗೆಯೊಂದನ್ನು ಪರಿಚಯಿಸಲು ಮುಂದಾಗಿದೆ.

ನೋಟು ನಿಷೇಧದ ನಂತರದಲ್ಲಿ ಸಾಮಾನ್ಯ ಜನರನ್ನ ಲೇಸ್ ಕ್ಯಾಷ್ ವ್ಯವಸ್ಥೆ ಕಡೆಗೆ ಬಲವಂತವಾಗಿ ದೂಡಲಾಗುತ್ತಿದ್ದು, ಅವರನ್ನು ಹೆಚ್ಚು ಹೆಚ್ಚು ಆ ಕಡೆಗೆ ಆಕರ್ಷಿಸುವ ಸಲುವಾಗಿ ಕೇಂದ್ರ ಸರಕಾರ ಲಕ್ಕಿ ಗ್ರಾಹಕ ಯೋಜನೆ ಜಾರಿಗೂಳಿಸಿದೆ. ಈ ಯೋಜನೆಯಲ್ಲಿ ಡಿಜಿಟಲ್ ವಾಹಿನಿಯನ್ನು ಬಳಸಿಕೊಂಡು ವ್ಯವಹಾರ ನಡೆಸುವ 15,000 ಗ್ರಾಹಕರಿಗೆ ನಿತ್ಯ 1000 ಬಹುಮಾನ ಗೆಲ್ಲುವ ಆಮಿಷವನ್ನು ಒಡ್ಡಲಾಗಿದೆ. ಮತ್ತೆ ವಾರಕ್ಕೆ 1 ಲಕ್ಷ, 10 ಸಾವಿರ ಮತ್ತು 5 ಸಾವಿರ ಬಹುಮಾನವನ್ನು ನೀಡಲು ಸರಕಾರ ಮುಂದಾಗಿದೆ.

ಈ ಕೊಡುಗೆಗಳು ಖಾಸಗಿ ಕಂಪನಿಯೂ ತನ್ನ ಸರಕು ಮತ್ತು ಸೇವೆಯ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ನೀಡುವ ರಿಯಾಯಿತಿ ಅಥವಾ ಬಹುಮಾನದ ಕೊಡುಗೆಯಂತಿದೆ. ಕಾರ್ಪೋರೇಟ್ ಕಂಪನಿಗಳಂತೆ ಕಾರ್ಯ ನಿರ್ವಹಿಸುತ್ತಾ, ಜನ ಸಾಮಾನ್ಯರ ಕಷ್ಟವನ್ನು ಅರಿಯದ ಕೇಂದ್ರ ಸರಕಾರ ಈ ವಿಷಯದಲ್ಲೂ ಖಾಸಗಿ ಕಂಪನಿಗಳ ಮಾದರಿಯಲ್ಲೇ ವರ್ತಿಸುತ್ತಿದೆ.

ಕೇಂದ್ರ ಸರಕಾರ ನೀಡಿರುವ ಕೊಡುಗೆಗಳನ್ನು ನೋಡುವುದ್ದಾರೆ, ಪ್ರತಿ ದಿನ ಆನ್ ಲೈನ್ ಮೂಲಕ ವ್ಯವಹಾರ ನಡೆಸಿದ 15 ಸಾವಿರ ಮಂದಿ ಗ್ರಾಹಕರಿಗೆ 1 ಸಾವಿರ ರೂ ಬಹುಮಾನ, ಅಲ್ಲದೇ ವಾರಕ್ಕೆ 1 ಲಕ್ಷ, 10 ಸಾವಿರ ಮತ್ತು 5 ಸಾವಿರ ಬಹುಮಾನವು ಇದೆ.

ಇದಲ್ಲದೆ ಮೆಗಾ ಪ್ರೈಸ್ ಎಂಬ ಬಹುಮಾನವು ಇದ್ದು, ಗ್ರಾಹಕರಿಗಾಗಿ ಮೂರು ಬಹುಮಾನಗಳನ್ನು ನಿಗದಿ ಮಾಡಿದ್ದು, 1 ಕೋಟಿ, 50 ಲಕ್ಷ ಮತ್ತು 25 ಲಕ್ಷವನ್ನು ಬಹುಮಾನವಾಗಿ ಕೊಡಲಾಗುತ್ತದೆ. ಅಲ್ಲದೇ ವರ್ತಕರು ಮತ್ತು ವ್ಯಾಪಾರಿಗಳಿಗೂ ಬೇರೆ ಬಹುಮಾನ ನಿಗದಿ ಮಾಡಿದೆ. ಮೊದಲ ಬಹುಮಾನ 50 ಲಕ್ಷ, 25 ಲಕ್ಷ ಮತ್ತು 12 ಲಕ್ಷ ನೀಡಲಿದೆಯಂತೆ. ಇದರೊಂದಿಗೆ ವ್ಯಾಪಾರಿಗಳು ಮತ್ತು ಉದ್ಯಮಿಗಳು ವಾರಕ್ಕೆ 50 ಸಾವಿರ, 5 ಸಾವಿರ ಮತ್ತು 2500 ರೂಗಳನ್ನು ಗೆಲ್ಲಬಹುದಾಗಿದೆ. 7 ಸಾವಿರ ಮಂದಿ ವ್ಯಾಪಾರಿಗಳಿಗೆ ಈ ಅವಕಾಶವನ್ನು ನೀಡಲಾಗಿದೆ.

ಆದರೆ ಈ ಸೌಲಭ್ಯಗಳು ಎಲ್ಲರಿಗೂ ಇದ್ಯಾ ಅಂತ ಕೇಳಬೇಡಿ, ಖಾಸಗಿ ಕಂಪನಿಗಳು ಹೇಳುವಂತೆ ಇಲ್ಲಿಯೂ ಷರತ್ತುಗಳು ಅನ್ವಯಿಸುತ್ತವೆ. ಯುಎಸ್ ಎಸ್ ಡಿ, ಎಇಪಿಎಸ್, ರುಪೇ ಕಾರ್ಡ್ ಮತ್ತು ಯುಪಿಐ ಮೂಲಕ ಹಣ ಪಾವತಿ ಮಾಡಿದ ಗ್ರಾಹಕರಿಗೆ ನಗದು ಬಹುಮಾನ ದೊರೆಯಲಿದೆ. ಆದರೆ ಖಾಸಗಿ ಕಾರ್ಡ್ ಮತ್ತು ಇ- ವ್ಯಾಲೆಟ್ ಗಳಿಂದ ಹಣ ಪಾವತಿ ಮಾಡಿದವರಿಗೆ ಯಾವುದೇ ಕೊಡುಗೆಗಳು ಅನ್ವಯವಾಗುವುದಿಲ್ಲ.

ಕೇಂದ್ರ ಸರಕಾರ ನೋಟು ನಿಷೇಧಗೊಳಿಸಿದ ಸಂದರ್ಭದಲ್ಲಿ ಸಾಮಾನ್ಯ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಎಟಿಎಂಗಳಲ್ಲಿ ಮತ್ತು ಬ್ಯಾಂಕಿನಲ್ಲಿ ದುಡ್ಡು ಸಿಗದೆ ಇರುವುದರಿಂದ ಜನರು ಕೇಂದ್ರ ಸರಕಾರದ ವಿರುದ್ಧ ರೋಸಿಹೋಗಿದ್ದು, ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೋದಿ ಸರಕಾರ ಸಾಮಾನ್ಯ ಜನರನ್ನು ಮೋಡಿ ಮಾಡಲು ಹೊರಟಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹೊಸ ಪಠ್ಯಕ್ರಮ ಜಾರಿ

textbookಮುಂದಿನ ವರ್ಷದಿಂದ ರಾಜ್ಯದಲ್ಲಿ ನೂತನ ಪಠ್ಯಕ್ರಮವನ್ನು ಜಾರಿಗೆ ತರಲು ರಾಜ್ಯ ಸರಕಾರ ಬದ್ದವಾಗಿದೆ. ಈ ಕುರಿತಂತೆ ಎದ್ದಿರುವ ಊಹಾಪೋಹಗಳಿಗೆ ತೆರೆಬಿದ್ದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ 1ನೇ ತರಗತಿಯಿಂದ ಹಿಡಿದು 10ನೇ ತರಗತಿಯ ವರೆಗೆ ಪರಿಷ್ಕøತ ಪಠ್ಯಕ್ರಮವನ್ನು ಅಳವಡಿಸಲು ಇರುವ ತೊಡಕುಗಳನ್ನು ಅದಷ್ಟು ಬೇಗ ನಿವಾರಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಬಂಧಪಟ್ಟ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯದೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದು, ಯಾವುದೇ ಕಾರಣವನ್ನು ನೀಡದೇ, ಇರುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಮುಂದಿನ ವರ್ಷದಿಂದಲೇ ಹೊಸ ಪಠ್ಯಕ್ರಮವನ್ನು ಯಾವುದೇ ತೊಡಕುಗಳಿಲ್ಲದಂತೆ ಸಮರ್ಪಕವಾಗಿ ಜಾರಿಗೆ ತರುವಂತೆ ಖಡಕ್ ಆದೇಶವನ್ನು ನೀಡಿದ್ದಾರೆ.

ಹೊಸ ಪಠ್ಯಕ್ರಮ ಅವಳಡಿಸುವ ಕುರಿತಂತೆ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಹೊಸ ಪಠ್ಯಕ್ರಮ ರಚನೆಯಲ್ಲಿ ಸ್ವಲ್ಪ ನಿಧಾನವಾಗುತ್ತಿದ್ದು, 2018-19ನೇ ಸಾಲಿನಿಂದ ಹೊಸ ಪಠ್ಯಕ್ರಮವನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು, ಅಲ್ಲದೇ ಈ ಕುರಿತಂತೆ ನಡೆದ ಸಭೆಯಲ್ಲಿ ಪಠ್ಯ ಪರಿಷ್ಕರಣೆ ಕಾರ್ಯ ನಡೆಯುತ್ತಿರುವುದರಿಂದ ಮುಂದಿನ ವರ್ಷವೂ ಹಳೆಯ ಪಠ್ಯವನ್ನೇ ಬೋಧಿಸುವುದು ಸೂಕ್ತ ಎನ್ನುವ ಮಾತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ಕೇಳಿ ಬಂದಿತ್ತು.

ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ದಾಖಲಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ಸಾಹಿತಿ ಬರಗೂರು ರಾಮಚಂದ್ರಪ್ಪ, ಹಳೆ ಪಠ್ಯಕ್ರಮದಲ್ಲಿ ಹಲವಾರು ದೋಷಗಳಿದ್ದು, ಅದನ್ನು ಸರಿ ಪಡಿಸದೆ ಮಕ್ಕಳಿಗೆ ಕಲಿಸುವುದು ಸರಿಯಲ್ಲ ಎಂಬ ವಾದವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ವರ್ಷವೇ ಹೊಸ ಪಠ್ಯಕ್ರಮವನ್ನು ಅಳವಡಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಬೇಕೆಂದು ಆಗ್ರಹಿಸಿದ್ದಾರೆ.

ಈಗಾಗಲೇ ಪರಿಷ್ಕರಣೆ ಕಾರ್ಯ ಮುಗಿದಿದ್ದು, ಡಿಟಿಪಿ, ಪುಟ ವಿನ್ಯಾಸ ಮತ್ತು ಚಿತ್ರಗಳ ಜೋಡನೆಯ ಕಾರ್ಯವು ನಡೆಯುತ್ತಿದ್ದು, ಮುಖ್ಯಮಂತ್ರಿಗಳ ಆಶಯದಂತೆ ಈ ತಿಂಗಳ ಅಂತ್ಯದೊಳಗೆ ಭಾಷೆಗೆ ಸಂಬಂಧಿಸಿ ಪಠ್ಯಕ್ರಮಗಳನ್ನು ಪರಿಷ್ಕರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು, ಜನವರಿ ಮಧ್ಯಭಾಗದೊಳಗೆ ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿ ಪಠ್ಯಗಳನ್ನು ಪರಿಷ್ಕರಿಸಿ ಸರಕಾರಕ್ಕೆ ನೀಡಲಾಗುವುದು ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಹೀಗಾಗಿ ಸರಕಾರಕ್ಕೆ ಮುಂದಿನ ವರ್ಷದಿಂದಲೇ ಹೊಸ ಪಠ್ಯವನ್ನು ಜಾರಿ ಮಾಡಲು ಯಾವುದೇ ತೊಡಕಾಗುವುದಿಲ್ಲ, ಈಗಾಗಲೇ ಪಠ್ಯಪುಸ್ತಕ ಮುದ್ರಣಕ್ಕೆ ಟೆಂಡರ್ ಕರೆಯುವ ಕಾರ್ಯವು ಸಹ ಪೂರ್ಣಗೊಂಡಿದೆ. ಎಲ್ಲಾ ಕಾರ್ಯಗಳು ಚುರುಕಾಗಿ ನಡೆದರೆ ಮುಂದಿನ ವರ್ಷದಿಂದಲೇ ಮಕ್ಕಳಿಗೆ ಹೊಸ ಪಠ್ಯಗಳು ಕಲಿಯಲು ದೊರೆಯಲಿದೆ.
ಸದ್ಯದ ಪಠ್ಯಕ್ರಮದಲ್ಲಿ ಸಾಕಷ್ಟು ಲೋಪದೋಷಗಳಿದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಠ್ಯಪುಸ್ತಕ ರಚನೆಯಲ್ಲಿ ಸಾಕಷ್ಟು ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಹಾಗೂ ಈ ಕಾರ್ಯಕ್ಕಾಗಿ 27 ಮಂದಿ ವಿಷಯ ಪರಿಣಿತರ ಸಮಿತಿ ರಚಿಸಲಾಗಿದ್ದು, ಇದರಲ್ಲಿ ವಿಜ್ಞಾನಿಗಳು, ಗಣಿತ ತಜ್ಞರು, ಪರಿಸರ ವಾದಿಗಳು, ಸಾಹಿತಿಗಳು, ಮಹಿಳಾವಾದಿಗಳು, ಸ್ವಾತಂತ್ರ್ಯ ಹೋರಾಟಗಾರು ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಈ ಎಲ್ಲಾರ ಅಭಿಪ್ರಾಯವನ್ನು ಪರಿಗಣಿಸಲಾಗಿದೆ.
ಒಟ್ಟಿನಲ್ಲಿ ಜಾರಿಗೆ ತರಲು ಹೊರಟಿರುವ ಹೊಸ ಪಠ್ಯಕ್ರಮವು ಎಲ್ಲ ಆಯಾಮಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಬದಲಾಗುತ್ತಿರುವ ಜಾಗತಿಕ ಸನ್ನಿವೇಶಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಇದು ಕೇಂದ್ರದ ಯಾವ ಪಠ್ಯಕ್ರಮಗಳಿಗೂ ಕೊರತೆಯಾಗದಂತೆ ಉನ್ನತ ವಿಚಾರಗಳನ್ನು ಮತ್ತು ಅಗತ್ಯ ಜ್ಞಾನವನ್ನು ಹೊಂದಿದೆ.

ಹಸಿದ ಹೊಟ್ಟೆಗೆ ತುತ್ತು ಕರುಣಿಸಿದ ‘ಅನ್ನಭಾಗ್ಯ’

anna-bhagya

ತುತ್ತು ಅನ್ನಕ್ಕೂ ಪರದಾಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ಕೂಲಿ-ನಾಲಿ ಮಾಡಿ ಬದುಕುವ ಬಹುಸಂಖ್ಯಾತ ಶ್ರಮಿಕ ವರ್ಗವನ್ನು ಗಮನದಲ್ಲಿ ಇರಿಸಿಕೊಂಡು, ‘ಹಸಿವು ಮುಕ್ತ ಕರ್ನಾಟಕ’ದ ಕನಸು ಹೊತ್ತು ಆರಂಭಗೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆಯಾದ ‘ಅನ್ನ ಭಾಗ್ಯ’ ಇಂದು ರಾಜ್ಯದಲ್ಲಿ ಹಸಿವಿನ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

ರಾಜ್ಯದಲ್ಲಿರುವ ಜನತೆ ಹಸಿವಿನಿಂದ ಬಳಲಬಾರದು ಎಂಬ ಗುರಿಯನ್ನು ಇರಿಸಿಕೊಂಡು ಆರಂಭಗೊಂಡ ಈ ಯೋಜನೆ ತನ್ನ ಆಶಯವನ್ನು ತಲುಪುವಲ್ಲಿ ಯಶಸ್ವಿಯಾಗುತ್ತಿದೆ. ಹೊತ್ತು ಊಟಕ್ಕೂ ಪರದಾಡುತ್ತಿದ್ದವರು ಇಂದು ರಾಜ್ಯ ಸರಕಾರ ನೀಡುತ್ತಿರುವ ಉಚಿತ ಅಕ್ಕಿಯಿಂದ ಮೂರು ಹೊತ್ತು ಉಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ತಮಗೆ ದೊರೆಯುತ್ತಿರುವ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯುತ್ತಿದ್ದಾರೆ.

 
ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಅಧಿಕಾರವಹಿಸಿಕೊಂಡ ದಿನವೇ ಬಡವರ ಹಿತದೃಷ್ಠಿಯಿಂದ ‘ಅನ್ನಭಾಗ್ಯ’ ಯೋಜನೆಯನ್ನು ಘೋಷಣೆ ಮಾಡಿದರು, ಅಧಿಕೃತವಾಗಿ ಈ ಯೋಜನೆ ಜುಲೈ 10 ರಿಂದ ಜಾರಿಗೆ ಬಂದಿತು. ಈ ಯೋಜನೆ ಅನ್ವಯ ಆರಂಭದಲ್ಲಿ ಒಂದು ರೂ.ಗೆ ಒಂದು ಕೆಜಿ ಅಕ್ಕಿಯನ್ನು ನೀಡಲಾಗುತಿತ್ತು, ನಂತರದಲ್ಲಿ ಈ ಯೋಜನೆಯ ಮಹತ್ವ ಅರಿತ ಸರಕಾರವು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬಡವರಿಗಾಗಿ ಉಚಿತವಾಗಿಯೇ ಅಕ್ಕಿ ವಿತರಿಸುವ ಕಾರ್ಯಕ್ಕೆ ಮುಂದಾಯಿತು.

ರಾಜ್ಯದ ಸುಮಾರು 108.98 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭವನ್ನು ಪಡೆಯುತ್ತಿವೆ. ರಾಜ್ಯದಾದ್ಯಂತ ಇರುವ 20,778 ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ಪಡಿತರವನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೇ ಇದೇ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಗೋಧಿ, ಸಕ್ಕರೆ, ತಾಳೆಎಣ್ಣೆ, ಮತ್ತು ಅಯೋಡಿನ್ ಯುಕ್ತ ಉಪ್ಪನ್ನು ಹಂಚಿಕೆ ಮಾಡಲಾಗುತ್ತಿದೆ.

ಈ ಅನ್ನ ಭಾಗ್ಯ ಯೋಜನೆ ಅನ್ವಯ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬವೊಂದಕ್ಕೆ ಪ್ರತಿ ತಿಂಗಳು ಉಚಿತವಾಗಿ 29 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಇನ್ನು ಬಿಪಿಎಲ್ ಕಾರ್ಡ್ ಇರುವ ಕುಟುಂಬದÀ ಸದಸ್ಯರ ಆಧಾರದ ಮೇಲೆ ಉಚಿತ ಅಕ್ಕಿ ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಕುಟುಂಬವೊಂದರ ಸದಸ್ಯರೊಬ್ಬರಿಗೆ 3 ಕೆ.ಜಿ ಅಕ್ಕಿ, ದಕ್ಷಿಣ ಕರ್ನಾಟಕ ಭಾಗದ ಕುಟುಂಬವೊಂದರ ಸದಸ್ಯರಿಗೆ 4 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳ ಮೂಲಕ ನಡೆಯುತ್ತಿರುವ ಪಡಿತರ ವಿತರಣೆಯಲ್ಲಿ ಇರುವಂತಹ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿಯೂ ರಾಜ್ಯ ಸರಕಾರ ಕಾರ್ಯ ಪ್ರವೃತ್ತವಾಗಿದ್ದು, ಮೊದಲ ಬಾರಿಗೆ ಭಾವಚಿತ್ರವುಳ್ಳ ರೇಷನ್ ಕಾರ್ಡ್‍ಗಳನ್ನು ವಿತರಿಸಿದೆ. ಅಲ್ಲದೇ ರೇಷನ್ ಕಾರ್ಡ್‍ಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರಳಗೊಳಿಸಿದ್ದು, ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಅಲ್ಲದೇ ಕಾರ್ಡುದಾರರ ಬೆರಳಚ್ಚು ಮತ್ತು ಆಧಾರ್ ಕಾರ್ಡುಗಳ ವಿವರವನ್ನು ಸಂಗ್ರಹಿಸಿದ್ದು, ಈ ಹಿನ್ನಲೆಯಲ್ಲಿ ನಕಲಿ ಕಾರ್ಡುಗಳ ಹಾವಳಿಗೆ ಬ್ರೇಕ್ ಹಾಕುವ ಕಾರ್ಯವನ್ನು ಮಾಡುತ್ತಿದೆ. ಸರಕಾರದ ಯೋಜನೆಗಳು ಯೋಗ್ಯ ಫಲಾನುಭವಿಗಳಿಗೆ ತಲುಪಿಸಲು ಎಲ್ಲಾ ರೀತಿಯಲ್ಲು ಸರಕಾರ ಪ್ರಯತ್ನಿಸುತ್ತಿದ್ದು, ಅದರಲ್ಲಿ ಯಶಸ್ವಿ ಸಹ ಆಗಿದೆ.

ಈ ಮೂಲಕ ರಾಜ್ಯ ಸರಕಾರ ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ‘ಹಸಿವು ಮುಕ್ತ ರಾಜ್ಯ’ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಬಹುತೇಕ ಯಶಸ್ಸು ಕಂಡಿದ್ದು, ಜನತೆ ಈ ಸೌಲಭ್ಯವನ್ನು ಸುದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಈ ಮೂಲಕ ರಾಜ್ಯದ ಸರಕಾರದ ಆಶಯವನ್ನು ಪೂರ್ಣಗೊಳಿಸಬಹುದಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಲು ಮುಂದಾದ ರಾಜ್ಯ ಸರಕಾರ

education-money-online
     ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕಪ್ಪು ಹಣದ ವ್ಯವಹಾರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಗದು ವ್ಯವಹಾರವನ್ನು ನಿಷೇಧಿಸಲು ಚಿಂತನೆ ನಡೆಸಿದೆ. ಈ ಮೂಲಕ ಡೊನೇಷನ್ ಹಾವಳಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದು, ಜನ ಸಾಮಾನ್ಯರಿಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸುವಂತೆ ಮಾಡಲು ಮುಂದಾಗಿದೆ.
     ದೇಶದ ಆರ್ಥಿಕತೆಯಲ್ಲಿ ದೊಡ್ಡ ಸಮಸ್ಯೆಯಾಗಿರುವ ಕಪ್ಪು ಹಣದ ಪ್ರಭಾವವನ್ನು ಕಡಿಮೆ ಮಾಡಲು ರಾಜ್ಯ ಸರಕಾರವು ಕೈ ಜೋಡಿಸಿದೆ. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಶಿಕ್ಷಣ ಸಂಸ್ಥೆಗಳು ಕಪ್ಪು ಹಣವನ್ನು ಬಿಳಿ ಮಾಡುವ ಕಾರ್ಯದಲ್ಲಿ ತೊಡಗಿವೆ ಎನ್ನುವ ಆರೋಪ ಕೇಳಿ ಬಂದಿರುವ ಕಾರಣ ಮುಂದಿನ ವರ್ಷದಿಂದ ರಾಜ್ಯದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ನಗದು ರಹಿತ ವ್ಯವಹಾರವನ್ನು ನಡೆಸಬೇಕು ಎಂದು ಆದೇಶವನ್ನು ಹೊರಡಿಸಲಿದೆ. ಈ ಮೂಲಕ ಕಪ್ಪು ಹಣದ ಓಡಾಟಕ್ಕೆ ಕಡಿವಾಣ ಹಾಕಲು ಯೋಜನೆಯೊಂದನ್ನು ಸಿದ್ದಪಡಿಸಿದೆ.
     ಕೇಂದ್ರ ಸರಕಾರ ಸಹ ಸಿಬಿಎಸ್‍ಇ ಶಾಲೆಗಳಲ್ಲಿ ನಗದು ವ್ಯವಹಾರವನ್ನು ನಿಷೇಧಗೊಳಿಸಿದ ಬೆನ್ನಲೇ ರಾಜ್ಯ ಸರಕಾರವು ಇಂತಹ ದಿಟ್ಟ ಕ್ರಮಕ್ಕೆ ಮುಂದಾಗಿದ್ದು, ಇದು ಜಾರಿಗೆ ಬಂದರೆ ರಾಜ್ಯದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಆನ್ ಲೈನ್ ಮೂಲಕವೇ ತಮ್ಮ ಆರ್ಥಿಕ ಚಟುವಟಿಕೆಯನ್ನು ನಡೆಸಬೇಕಾಗುತ್ತದೆ. ಅಂದರೆ ಪರೀಕ್ಷಾ ಶುಲ್ಕ, ಪ್ರವೇಶ ಶುಲ್ಕ ಸೇರಿದಂತೆ ಸಿಬ್ಬಂದಿ ವೇತನ ನೀಡುವುದನ್ನು ಆನ್ ಲೈನ್ ಮೂಲಕವೇ ನೀಡಬೇಕಾಗುತ್ತದೆ.
     ಈ ಕುರಿತು ಈಗಾಗಲೇ ರಾಜ್ಯ ಸರಕಾರ ಚಿಂತನೆ ನಡೆಸಿದ್ದು, ರಾಜ್ಯದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಮವನ್ನು ಪರಿಷ್ಕರಿಸಿ ಇನ್ನೊಂದು ತಿಂಗಳಲ್ಲಿ ಪ್ರಕಟಿಸಲಿದೆ ಎನ್ನಲಾಗಿದೆ. ಈ ನಿಯಮ ಜಾರಿಗೆ ಬಂದ ನಂತರದಲ್ಲಿ ಪಾಲಕರು ಆನ್ ಲೈನ್ ಮೂಲಕ, ಡೆಬಿಟ್ ಇಲ್ಲವೇ ಕ್ರೆಡಿಟ್ ಕಾರ್ಡ್ ಮೂಲಕ, ಚೆಕ್ ಅಥವಾ ಡಿಡಿಯಿಂದ ಶುಲ್ಕಗಳನ್ನು ಪಾವತಿ ಮಾಡಬೇಕಾಗಿರುತ್ತದೆ. ಈ ನಿಯಮವನ್ನು ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ.
   ಈ ವ್ಯವಸ್ಥೆಯನ್ನು ಜಾರಿಗೆ ತರುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಅಕ್ರಮಗಳು ಕಡಿಮೆಯಾಗಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ಹೆಸರಿನಲ್ಲಿ ಜನ ಸಾಮಾನ್ಯರ ರಕ್ತ ಹೀರುವುದು ನಿಯಂತ್ರಣಕ್ಕೆ ಸಿಗಲಿದೆ. ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಬೇಕಾಬಿಟ್ಟಿ ಶುಲ್ಕವಿಧಿಸುವುದು ತಪ್ಪಲಿದೆ, ಎಲ್ಲಾದಕ್ಕೂ ಲೆಕ್ಕ ಸಿಗಲಿದೆ. ಇದರಿಂದ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ  ಕಲಿಯುವ ಅವಕಾಶ ದೊರೆಯಲಿದೆ.
  ಶಾಲೆಗಳಲ್ಲಿ ನಗದು ವ್ಯವಹಾರವನ್ನು ನಿಷೇಧಗೊಳಿಸುರುವುದಕ್ಕೆ ಪಾಲಕರು ಪೋಷಕರು ಚಿಂತಿಸುವ ಅಗತ್ಯವಿಲ್ಲ. ಕಾರಣ ಈ ನಿಯಮವನ್ನು ಜಾರಿಗೆ ತರುವ ಮುನ್ನ ಶಾಲೆಗಳಲ್ಲಿ ಪೋಷಕರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗುತ್ತದೆ, ನಗದು ರಹಿತ ವ್ಯವಸ್ಥೆಯಿಂದ ತಮಗೆ ಮತ್ತು ಮಕ್ಕಳಿಗೆ ಯಾವ ರೀತಿಯಲ್ಲಿ ಉಪಯೋಗವಾಗಲಿದೆ ಎನ್ನುವುದನ್ನು ವಿವರಿಸಲಾಗುತ್ತದೆ.
    ಪ್ರಭಾವಿಗಳ ಹಿಡಿತದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿರುವ  ಲೋಪದೋಷ ಮತ್ತು ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಪೊಷಕರು, ಮಕ್ಕಳು ಹಾಗೂ ಜನಸಾಮಾನ್ಯರು ಸೇರಿದಂತೆ ಎಲ್ಲರು ಸರಕಾರದ ಜೊತೆ ಕೈಜೋಡಿಸಿ ಭವಿಷ್ಯದಲ್ಲಿ ಉಜ್ವಲ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕಾಗಿದೆ.

ನೋಟು ರಹಿತ ವಹಿವಾಟು ಮತ್ತು ವಾಸ್ತವ ಸ್ಥಿತಿಗತಿ

plastic-money-blog-post

ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ನಗದು ರಹಿತ ವ್ಯಾಪಾರ ವಹಿವಾಟು ನಡೆಸುವಂತೆ ಜನರಿಗೆ ಪ್ರೋತ್ಸಾಹಿಸುವ ದೃಷ್ಠಿಯಿಂದ ಹಲವಾರು ರೀತಿಯ ರಿಯಾಯಿತಿಗಳನ್ನು ಘೋಷಿಸಿದೆ. ಹಲವು ಬಗೆಯ ಸೇವೆಗಳ ಶುಲ್ಕ ಪಾವತಿಗೆ ಡೆಬಿಟ್/ಕ್ರೆಡಿಟ್ ಕಾರ್ಡ್, ಆನ್‍ಲೈನ್ ಪಾವತಿ ಮತ್ತು ಇ-ವಾಲೆಟ್‍ಗಳನ್ನು ಬಳಸಿದರೆ ಗರಿಷ್ಠ ಶೇಕಡಾ 10ರಷ್ಟು ರಿಯಾಯಿತಿ ಹಾಗೂ ಇ-ಪಾವತಿ ಮೂಲಕ ರೈಲು ಟಿಕೇಟ್ ಖರೀದಿಸಿದರೆ 10 ಲಕ್ಷದ ಅಪಘಾತ ವಿಮೆ, ಸರ್ಕಾರಿ ಕಚೇರಿ, ಸಾರ್ವಜನಿಕ ವಲಯಗಳ ಕಂಪೆನಿಗಳ ಜೊತೆಗಿನ ವಹಿವಾಟಿನಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಬಳಸಿದರೆ ವಹಿವಾಟು ಶುಲ್ಕ ಇರುವುದಿಲ್ಲ, ಹೀಗೆ ಒಂದಷ್ಟು ಆಕರ್ಷಕ ಅವಕಾಶಗಳನ್ನು ಜನತೆಯ ಮುಂದಿಟ್ಟು ಜನರ ಗಮನವನ್ನು ಇತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

ಹೀಗೆ ಕೇಂದ್ರ ಸರ್ಕಾರ ನಗದು ರಹಿತ ವ್ಯಾಪರ ಮತ್ತು ವಹಿವಾಟುಗಳಿಗೆ ಹೆಚ್ಚಿನ ಬೆಂಬಲ ನೀಡಲು ಒಂದು ಮುಖ್ಯ ಕಾರಣವೂ ಇದೆ. 500 ಮತ್ತು 1000 ರೂ ಮುಖಬೆಲೆಯ ನೋಟುಗಳ ಚಲಾವಣೆ ನಿಷೇಧಿಸಿರುವುದರಿಂದ ದೇಶದಲ್ಲಿ ಕಪ್ಪು ಹಣ ಹೊರಬರಲಿದೆ ಎಂದು ಹೇಳಿದ್ದ ಬಿಜೆಪಿ ಸರ್ಕಾರ, ದಿನ ಕಳೆದಂತೆ ತಮ್ಮ ನಿಯಮದಿಂದ ಕಪ್ಪು ಹಣ ಹೊರಬರುವುದು ಕನಸಿನ ಮಾತು ಎಂದು ಅರಿವಾಗಿ ಈಗ ಬುದ್ದಿವಂತಿಕೆಯ ಹೆಜ್ಜೆಯನ್ನಿಟ್ಟಿದೆ. ಇಷ್ಟು ದಿನ ಕಪ್ಪು ಹಣದ ಹಿಂದೆ ಬಿದ್ದಿದ್ದ ಬಿಜೆಪಿ ನಾಯಕರು ಈಗ ನೋಟು ರಹಿತ ವಹಿವಾಟಿನ ಕಡೆಗೆ ವಾಲಿದ್ದಾರೆ. ಕಪ್ಪು ಹಣ ಹೊರ ತರುವುದಾಗಿ ಹೇಳಿ ಹೋದ ಮಾನವನ್ನು ಈ ರೀತಿ ಉಳಿಸಿಕೊಳ್ಳುವ ಪ್ರಯತ್ನವಷ್ಟೆ ಇದು ಎಂದು ಮೇಲ್ನೋಟಕ್ಕೆ ತಿಳಿಯಬಹುದಾಗಿದೆ.

ನೋಟು ರದ್ದತಿ ನಿಯಮದಂತೆ ನಗದು ರಹಿತ ವಹಿವಾಟು ಯೋಜನೆ ಕೂಡ ವಿಫಲವಾಗಿ ಕೇಂದ್ರದ ದುರಾಡಳಿತ ಮತ್ತೆ ದೇಶದ ಮುಂದೆ ಬಯಲಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ಕಾರಣಗಳು ಹೀಗಿವೆ:

ದೇಶದಲ್ಲಿ ಶೇಕಡಾ 22% ರಷ್ಟು ಮಂದಿ ಮಾತ್ರ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ.

ಶೇಕಡಾ 19 ರಷ್ಟು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕೂಡ ಇಲ್ಲ.

ಒಟ್ಟು ಜನಸಂಖ್ಯೆಯಲ್ಲಿ 22 ಕೋಟಿ ಜನರು ಮಾತ್ರ ಸ್ಮಾರ್ಟ್ ಫೋನ್ ಹೊಂದಿದ್ದಾರೆ.

ದೇಶದ ಒಟ್ಟು ಜನರಲ್ಲಿ 46% ನಷ್ಟು ಜನ ಇನ್ನೂ ಕೂಡ ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ.

ಶೇಕಡಾ 85 ರಷ್ಟು ಮಂದಿಗೆ ಸಂಬಳ ಮತ್ತು ತಿಂಗಳ ಆದಾಯ ನಗದು ರೂಪದಲ್ಲೇ ದೊರೆಯುತ್ತಿದೆ.

        ಹೀಗೀರುವಾಗ ಇಡೀ ದೇಶದಲ್ಲಿ ಒಂದೇ ಬಾರಿಗೆ ನಗದು ರಹಿತ ವ್ಯಾಪಾರ ವಹಿವಾಟು ಪದ್ದತಿಯನ್ನು ಯಶಸ್ವಿಯಾಗಿಸುತ್ತೇವೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ, ಅದನ್ನು ಪ್ರೋತ್ಸಾಹಿಸುವ ಮುಂಚೆ ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಈ ಯೋಜನೆಯ ವಿಫಲತೆಗೆ ಕಾರಣವಾಗಬಹುದು. ಜನರ ಬಳಿ ಕನಿಷ್ಠ  ಡೆಬಿಟ್/ ಕ್ರೆಡಿಟ್ ಕಾರ್ಡ್‍ಗಳಿವೆಯೇ? ಆನ್‍ಲೈನ್ ಬ್ಯಾಂಕಿಗ್ ಬಳಕೆಯನ್ನು ಎಷ್ಟು ಜನ ಮಾಡುತ್ತಿದ್ದಾರೆ? ಅನಕ್ಷರಸ್ತರಿಗೆ ಅದನ್ನು ಅರ್ಥಮಾಡಿಸುವ ರೀತಿ ಹೇಗೆ? ಈ ರೀತಿಯ ವ್ಯವಹಾರ ಎಷ್ಟು ಸುರಕ್ಷವಾಗಿವೆ? ಜನ ಇದರಿಂದ ಮೋಸ ಹೋದಲ್ಲಿ ಅದನ್ನು ಬಗೆಹರಿಸುವ ಕಾನೂನುಗಳಿವೆಯೇ? ಮೋಸ ಮಾಡುವ ಇ-ಮಾರ್ಕೇಟ್‍ಗಳ ತಡೆಗೆ ಕ್ರಮ ಏನು? ರಾಷ್ಟ್ರೀಕೃತ ಬ್ಯಾಂಕುಗಳ ಅಕೌಂಟ್‍ಗಳನ್ನೆ ಹ್ಯಾಕ್ ಮಾಡುತ್ತಿರುವಾಗ ಜನಸಾಮಾನ್ಯರ ಅಕೌಂಟ್‍ಗಳ ರಕ್ಷಣೆ ಮಾಡುವ ಬಗೆ ಹೇಗೆ? ಎಂಬ ಹಲವಾರು ಪ್ರಶ್ನೆ ಉದ್ಭವಿಸುತ್ತದೆ. ಇವಗಳ ಕಡೆಗೆ ಗಮನ ಹರಿಸದೆ ತಕ್ಷಣದಲ್ಲಿ ಜನರಿಗೆ ನಗದು ರಹಿತ ವ್ಯವಹಾರ ಮಾಡಿ ಎಂದು ಹೇಳಿದರೆ ಜನತೆ ಅದಕ್ಕೆ ಹೇಗೆ ಒಗ್ಗಿಕೊಳ್ಳಲು ಸಾಧ್ಯ? ಇದಾವುದನ್ನು ಕೇಂದ್ರ ಪರಿಗಣಿಸದೇ ಇರುವುದೆ ದುರಂತ.

ಈಗಲಾದರೂ ಕೇಂದ್ರ ಸರ್ಕಾರ ಶೀಘ್ರದಲ್ಲಿ ಜನತೆಗೆ ಬೇಕಾಗುವಷ್ಟು ಹಣ ಬ್ಯಾಂಕುಗಳಲ್ಲಿ ದೊರೆಯುವಂತೆ ಮಾಡಿದರೆ ಅದಕ್ಕಿಂತ ದೊಡ್ಡ ಸಹಾಯ ಇನ್ನೊಂದಿಲ್ಲ. ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಈ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ.

ಮದುವೆಯಿಂದ ಮಸಣಕೆ..

black-money_blog-pic

ನೋಟುಗಳ ರದ್ದತಿಯ ನಂತರವೂ ಸ್ವಲ್ಪವೂ ವಿಚಲಿತರಾಗದೆ ಮಗಳ ವಿವಾಹವನ್ನು 600 ಕೋಟಿ ರೂ. ಗಳಿಗಿಂತ ಹೆಚ್ಚು ಹಣ ಖರ್ಚು ಮಾಡಿ ಅತ್ಯಂತ ವಿಜೃಂಭಣೆಯಿಂದ ಮಾಡಿದ್ದ ಜನಾರ್ಧನ ರೆಡ್ಡಿಯರಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದುದು ಸಾಮಾನ್ಯ ವಿಚಾರ. ಇದುವರೆಗೂ ಅಷ್ಟೊಂದು ಹಣ ಎಲ್ಲಿಂದ ಬಂತು ಎಂಬುದು ಯಾರಿಗೂ ತಿಳಿದಿರಲಿಲ್ಲ.

ಮಂಗಳವಾರ ಮದ್ದೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಭೀಮಾನಾಯ್ಕರವರ ಕಾರು ಚಾಲಕ ಸಿ.ಸಿ.ರಮೇಶ್ ಬರೆದಿಟ್ಟಿರುವ ಡೆತ್ ನೋಟ್‍ನಲ್ಲಿ ಒಂದಷ್ಟು ಅಚ್ಚರಿಮೂಡಿಸುವ ಸತ್ಯಗಳು ಹೊರ ಬಂದಿವೆ. ಈ ಮೂಲಕ ಬಿಜೆಪಿಯಲ್ಲಿ ಸಭ್ಯರಂತೆ ಮುಖ ಹೊತ್ತು ಬದುಕುತ್ತಿರುವವರ ನಿಜ ಮುಖ ಬಯಲಾಗಿದೆ.

ನವೆಂಬರ್ 15 ರಂದು ಸ್ರೀರಾಮುಲು ಜೊತೆ ತಾಜ್ ಹೋಟೆಲ್‍ಗೆ ಭೇಟಿ ಕೊಟ್ಟಿದ್ದ ಮಾಜಿ ಸಚಿವ ಜನಾರ್ಧನ ರೆಡ್ಡಿ 25 ಕೋಟಿ ರೂ. ವೈಟ್ ಮನಿ ಕೊಟ್ಟಿರುವುದಾಗಿ ಭೀಮನಾಯ್ಕ ಹೇಳಿದ್ದರು. ಆದರೆ ಅವರ ಬಳಿಯಿದ್ದ 100 ಕೋಟಿ ರೂ. ಹಳೆ ನೋಟುಗಳನ್ನು ಶೇ.20 ರಂತೆ ಕಮಿಷನ್ ಪಡೆದು 50, 100 ಮತ್ತು 2000 ರೂ. ಹೊಸ ನೋಟುಗಳಿಗೆ ಬದಲಾಯಿಸಿಕೊಟ್ಟಿದ್ದಾರೆ ಎಂದು ಡೆತ್‍ನೋಟ್ ನಲ್ಲಿ ಕಾರು ಚಾಲಕ ಬರೆದಿಟ್ಟಿದ್ದಾನೆ. ಇದುವರೆಗೂ ತನ್ನ ಮಗಳ ಮದುವೆಯನ್ನು ವೈಟ್ ಮನಿಯಿಂದ ಮಾಡಿದ್ದೇನೆ ಎಂದು ಹೇಳಿಕೊಂಡು ಬೀಗುತ್ತಿದ್ದ ಜನಾರ್ಧನ ರೆಡ್ಡಿಗೆ ಈ ಪ್ರಕರಣದಲ್ಲಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತುವ ಭಾಗ್ಯ ಒಲಿದರೂ ಆಶ್ಚರ್ಯವಿಲ್ಲ.

2018 ರ ಚುನಾವಣೆಯಲ್ಲಿ ಸ್ಪರ್ಧಿಸಲು ಹಗರಿಬೊಮ್ಮನಳ್ಳಿ ಕ್ಷೇತ್ರದ ಟಿಕೆಟ್‍ಗಾಗಿ 25 ಕೋಟಿ ರೂ. ಕೊಡುವುದಾಗಿದೆ ಶ್ರೀರಾಮುಲು ಮತ್ತು ರೆಡ್ಡಿಗೆ ಭೀಮಾನಾಯ್ಕರವರು ಹೇಳಿದ್ದರೆಂದು ಡೆತ್ ನೋಟ್‍ನಲ್ಲಿ ಬರೆದಿದ್ದಾನೆ. ಹೀಗೆ ಬಿಜೆಪಿ ಪಕ್ಷದಲ್ಲಿ ಕೋಟ್ಯಂತರ ರೂ. ಹಣ ಪಡೆದು ಭ್ರಷ್ಟರಿಗೆ, ಅಕ್ರಮ ಸಂಪತ್ತು ಹೊಂದುವ ದಾಹ ಇರುವವರಿಗೆ ಟಿಕೆಟ್ ಕೊಡುವ ಪದ್ದತಿ ಬೆಳೆದು ಬಂದಿರುವುದು ಇಡೀ ರಾಜ್ಯದ ಜನತೆ ಮುಂದೆ ಬಯಲಾಗಿದೆ. ಹೀಗೆ ಕೋಟಿ ಹಣ ಸುರಿದು ಚುನಾವಣೆಯಲ್ಲಿ ನಿಂತು, ಒಂದು ವೇಳೆ ಹಣಬಲದಿಂದ ಗೆದ್ದರೆ ಇವರು ಸಮಾಜ ಮತ್ತು ರಾಜ್ಯದ ಹಿತಕ್ಕಾಗಿ ದುಡಿಯುವರೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಭೀಮನಾಯ್ಕರವರ ಅಕ್ರಮ ಆಸ್ತಿಗಳ ಬಗ್ಗೆಯೂ ಡೆತ್ ನೋಟ್‍ನಲ್ಲಿ ಮಾಹಿತಿ ಸಾಕಷ್ಟು ಮಾಹಿತಿ ಇದೆ. ಅವರ ಸಹೋದರ ಕೃಷ್ಣ ನಾಯ್ಕ ಹೆಸರಲ್ಲಿ ಐಒಸಿ ಪೆಟ್ರೋಲ್ ಬಂಕ್‍ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ, ಆತನ ಹೆಸರಲ್ಲಿ ಎರಡು ಐಷಾರಾಮಿ ಕಾರು, ಮತ್ತೊಬ್ಬ ಸಹೋದರ ಅರ್ಜುನ್ ಹೆಸರಿನಲ್ಲಿ ತವೇರಾ ಕಾರು ಖರೀದಿಸಿದ್ದಾರೆ. ಕರ್ನಾಟಕ ಸವಿತಾ ಸಮಾಜದ ಆಡಳಿತಾಧಿಕಾರಿ ಹಾಗೂ ಚುನಾವಣಾಧಿಕಾರಿಯೊಂದಿಗೆ ಸೇರಿ 25 ಲಕ್ಷ ರೂ. ದೋಚಿದ್ದಾರೆ. ಕೃಷ್ಣಯ್ಯ ಶೆಟ್ಟಿ ಆಂಡ್ ಸನ್ಸ್‍ನಲ್ಲಿ 1 ಕೋಟಿ ರೂ. ಗೂ ಅಧಿಕ ಅವ್ಯವಹಾರ ಮತ್ತು 50 ರೂ. ಮೌಲ್ಯದ ವಜ್ರದ ಉಂಗುರ ಖರೀದಿ ಬಗ್ಗೆ ಉಲ್ಲೇಖಿಸಿದ್ದಾನೆ. ಈ ಎಲ್ಲಾ ವಿಚಾರಗಳು ಚಾಲಕನಿಗೆ ತಿಳಿದಿದ್ದ ಕಾರಣದಿಂದ ಆತನನ್ನು ಕೊಲೆ ಮಾಡುವುದಾಗಿ ಪದೇ ಪದೇ ಬೆದರಿಕೆಯನ್ನು ಭೀಮಾ ನಾಯ್ಕ್ ಮತ್ತು ಅವರ ವಾಹನ ಚಾಲಕ ಹಾಕಿದ್ದರು ಎಂದು ಡೆತ್ ನೋಟ್‍ನಲ್ಲಿ ತಿಳಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಭೂ ಸ್ವಾಧೀನಾಧಿಕಾರಿ ಎಲ್. ಭೀಮಾನಾಯ್ಕ್ ಹಾಗೂ ಚಾಲಕ ಮಹಮ್ಮದ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ 306 ರ ಅನ್ವಯ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆಗಾಗಿ ಪ್ರಕರಣಕ್ಕೆ ಸಂಬಂಧಿಸಿದವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಮೊದಲಿಗೆ ರೆಡ್ಡಿ ಬಿಜೆಪಿಯವರೇ ಅಲ್ಲ, ಅವರ ಈ ಪ್ರಕರಣಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ಆದರೆ ಈ ಪ್ರಕರಣದಲ್ಲಿ ಶ್ರೀರಾಮುಲು ಕೂಡ ಭಾಗಿಯಾಗಿರುವುದರಿಂದ ಬಿಜೆಪಿ ನಾಯಕರು ತಮಗೂ ಈ ಪ್ರಕರಣಕ್ಕೂ ಸಂಬಂದವೇ ಇಲ್ಲ ಎಂದು ಹೇಗೆ ಹೇಳಲು ಸಾಧ್ಯ? ಎಂದು ಅವರೇ ನಿರ್ಧರಿಸಬೇಕಾಗಿದೆ.

ಒಟ್ಟಿನಲ್ಲಿ ಈ ಪ್ರಕರಣವು ಕೇವಲ ಜನಾರ್ಧನ ರೆಡ್ಡಿಯವರಿಗೆ ಮಾತ್ರ ಸಂಬಂಧಿಸಿರದೆ ಬಿಜೆಪಿ ಪಕ್ಷದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಂದ ಕೋಟ್ಯಂತರ ರೂ. ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಅಲ್ಲದೆ ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಭ್ರಷ್ಟಾಚಾರದ ಒಂದು ಚಿತ್ರಣವನ್ನು ನಮ್ಮ ಮುಂದಿಡುತ್ತಿದೆ.