ರಾಜಕಾರಣಿಗಳ ಹೋರಾಟವಲ್ಲ, ಕನ್ನಡಿಗರ ಹೋರಾಟ!

cauvery-protest
ಕಾವೇರಿಯ ಕಾವಿಗೆ ರಾಜ್ಯ ರಾಜಧಾನಿ ನಲುಗಿದೆ. ಕನ್ನಡಿಗರಿಗಾದ ಅನ್ಯಾಯದ ವಿರುದ್ಧ ಅಸಮಾಧಾನ ಭುಗಿಲೆದ್ದು, ಸದ್ಯಕ್ಕೆ ತಣ್ಣಗಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದಾಗ ರಾಜಕೀಯ ಮೇಲಾಟಗಳಿಂದಾಗಿ ಈ ಎಲ್ಲ ತೊಂದರೆಗಳು ಎದುರಾಗುತ್ತಿವೆಯೇ ಎನ್ನುವ ಅನುಮಾನ ಕಾಡದೇ ಇರುವುದಿಲ್ಲ. ಒಂದು ಮಟ್ಟಕ್ಕೆ ಅದು ಸತ್ಯವೂ ಕೂಡ.
   ಪ್ರಧಾನಿ ಮೋದಿ ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಒಂದು ಪರಿಹಾರ ಸಿಗಬಹುದೇನೋ ಎನ್ನುವ ಆಶಾವಾದವಿದೆ. ಆದರೆ ಬಿಜೆಪಿ ಬೆಂಬಲಿಗರ ವಾದವೇನೆಂದರೆ, ‘ಸಿದ್ದರಾಮಯ್ಯನವರು ನೇರವಾಗಿ ಜಯಲಲಿತರೊಂದಿಗೆ ಮಾತನಾಡಬಹುದಲ್ಲ? ಇಂತಹ ವಿಷಯಗಳಿಗೆ ಪ್ರಧಾನಿಯವರನ್ನು ಎಳೆದು ತರುವುದು ಎಷ್ಟು ಸರಿ?’ ಎಂಬುದು. ತಮಿಳುನಾಡು ಸರ್ಕಾರ ಕಾವೇರಿ ವಿಷಯವಾಗಿ ನ್ಯಾಯಾಲಯದ ಕದ ತಟ್ಟಿದೆ. ಕರ್ನಾಟಕ ಸರ್ಕಾರ ಮಾತುಕತೆಯ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಉತ್ಸುಕತೆ ತೋರಿದಾಗಲೂ ತಮಿಳುನಾಡಿನ ಕಡೆಯಿಂದ ಬಂದಿದ್ದು ನಕಾರಾತ್ಮಕ ಪ್ರತಿಕ್ರಿಯೆ. ಜಯಲಲಿತಾ ಮಾತನಾಡಲು ಸಿದ್ಧರಿಲ್ಲದಿರುವಾಗ ಹೇಗೆ ತಾನೇ ಏಕಮುಖವಾಗಿ ಮಾತನಾಡಬಹುದು? ಇದನ್ನು ಅರಿಯದಷ್ಟೂ ದಡ್ಡರಾದರೆ ಮೋದಿ ಭಕ್ತರು? ಹೋಗಲಿ, ಪ್ರಧಾನಿ ಪಟ್ಟದಲ್ಲಿರುವವರು ಇಡೀ ದೇಶದ ಹಿತ ಕಾಯುವ ಕೆಲಸ ಮಾಡಬೇಕು. ರಾಜ್ಯ ರಾಜ್ಯಗಳ ನಡುವೆ ವ್ಯಾಜ್ಯವಿದ್ದಾಗ ಮಧ್ಯಸ್ಥಿಕೆ ವಹಿಸಲು ಸೂಕ್ತ ವ್ಯಕ್ತಿಯೆಂದರೆ ದೇಶದ ಪ್ರಧಾನಿಯೇ. ಅದರಲ್ಲೂ ಕರ್ನಾಟಕ-ತಮಿಳುನಾಡಿನ ನಡುವಿನ ಸಮಸ್ಯೆ ಹಿಂಸಾತ್ಮಕ ರೂಪ ತಳೆದಿದೆ. ಇಂತಹ ಗಂಭೀರ ಪರಿಸ್ಥಿತಿಯ ಕುರಿತು ಸಿದ್ದರಾಮಯ್ಯನವರು ಪದೇ ಪದೇ ಪತ್ರ ಬರೆಯುತ್ತಲೇ ಇದ್ದಾರೆ. ಆದರೆ ಸೌಜನ್ಯಕ್ಕಾದರೂ ಉತ್ತರಿಸದಷ್ಟು ನಿಷ್ಕಾಳಜಿ ತೋರಿದ್ದಾರೆ ಮಾನ್ಯ ಪ್ರಧಾನಿಗಳು.
   ಬಂಧುಗಳೇ, ನೀವು ಬಿಜೆಪಿ ಬೆಂಬಲಿಗರೇ ಇರಬಹುದು, ಮೋದಿಯ ಪರಮ ಭಕ್ತರೇ ಇರಬಹುದು. ಆದರೆ ರಾಜ್ಯದ ಸಮಸ್ಯೆಯ ವಿಷಯ ಬಂದಾಗ ದಯವಿಟ್ಟು ನೀವು ಕನ್ನಡಿಗರು ಎಂಬುದನ್ನು ಮರೆಯಬೇಡಿ. ನಮ್ಮ ರಾಜ್ಯದಿಂದ 18 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ ನೆನಪಿರಲಿ. ಮೋದಿ ತುಟಿಬಿಚ್ಚಿದ್ದರೆ ಈಗ ಸಂಭವಿಸಿರುವ ಹಾನಿಯನ್ನು ಸ್ವಲ್ಪಮಟ್ಟಿಗಾದರೂ ತಡೆಯಬಹುದಿತ್ತು. ಬಿಜೆಪಿ ಹಾಗೂ ಮೋದಿಯ ಪರ ಮಾತನಾಡುವ ಭರದಲ್ಲಿ ನಮ್ಮ ಕಾಲ ಕೆಳಗೆ ಉರಿಯುತ್ತಿರುವ ಬೆಂಕಿಯನ್ನು ಗಮನಿಸಿ. ‘ಕಾವೇರಿ ನೀರನ್ನು ಬಿಡಬಾರದಿತ್ತು’ ಎಂದು ಬೊಬ್ಬಿರಿಯುವವರು ಬಂಗಾರಪ್ಪನವರ ನಿರ್ಧಾರವನ್ನು ಉಲ್ಲೇಖಿಸುತ್ತಾರೆ. ಬಂಗಾರಪ್ಪನವರು ನೀರು ಬಿಡದಂತೆ ನಿರ್ಧರಿಸಿದ್ದು ನಿಜ. ಆದರೆ, ಸುಪ್ರೀಂ ಆದೇಶವನ್ನು ಪಾಲಿಸದಿದ್ದರೆ ಕರ್ನಾಟಕವನ್ನು ಬ್ಲ್ಯಾಕ್ ಲಿಸ್ಟ್‍ಗೆ ಹಾಕಲಾಗುತ್ತದೆ ಎಂದು ಖಡಕ್ ನಿರ್ದೇಶನ ಬರುತ್ತಿದ್ದಂತೆ ಕಾವೇರಿ ನೀರನ್ನು ಹರಿಬಿಡಲಾಗಿತ್ತು. ಈಗಲೂ ಸಹ ಜನರ ಸಮಾಧಾನಕ್ಕಾಗಿ ‘ಕಾವೇರಿ ಬಿಡುವುದಿಲ್ಲ’ ಎಂದು ಹೇಳಿ, ನಂತರ ಬಿಡುವ ನಾಟಕವಾಡಬಹುದಿತ್ತು. ಆದರೆ ಸಿದ್ದರಾಮಯ್ಯನವರು ಜನರ ಭಾವನೆಯ ಜೊತೆ ಆಟವಾಡದೇ ವಾಸ್ತವವನ್ನು ತಿಳಿಸಿ ನೀರು ಬಿಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಈಗ ನೀರು ಬಿಟ್ಟರೆ ಅದು ಅಕ್ಟೋಬರ್‍ನಲ್ಲಿ ವಿಚಾರಣೆಗೆ ಬರಲಿರುವ ಕಾವೇರಿ ವ್ಯಾಜ್ಯಕ್ಕೆ ರಾಜ್ಯದ ಪರ ವರದಾನವಾಗಲಿದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರದ ಸಂಗತಿ.
   ಇನ್ನು ಈ ಸಂದರ್ಭದಲ್ಲಿ ಯಾರ ರಾಜಿನಾಮೆಯಿಂದಲೂ ಸುಪ್ರೀಂ ನೀಡಿರುವ ಆದೇಶವನ್ನು ಸರಿಪಡಿಸಲು ಸಾಧ್ಯವಿಲ್ಲ. ಹೀಗಿರುವಾಗ ಯಾರದೇ ರಾಜಿನಾಮೆಯನ್ನು ಕೇಳುವುದು ಅದೆಷ್ಟು ಸಮಂಜಸ? ರಾಜ್ಯ ಸರ್ಕಾರ ವೈಫಲ್ಯವಾಗಿದೆ ಎನ್ನುವ ಮೊದಲು ಬಿಜೆಪಿಯದೇ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ರಾಜ್ಯದ ಅದೆಷ್ಟು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ ಎನ್ನುವುದನ್ನು ನೋಡಬೇಕಾಗುತ್ತದೆ. ಇಲ್ಲಿ ಯಾರ ವೈಫಲ್ಯ ಎನ್ನುವುದಕ್ಕಿಂತ, ಕನ್ನಡಿಗರಿಗಾದ ಅನ್ಯಾಯಕ್ಕೆ ಹೇಗೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ಹೆಚ್ಚು ಪ್ರಸ್ತುತವಾಗುತ್ತದೆ. ಆ ಕುರಿತು ಕನ್ನಡಿಗ ನಾಯಕರ ಚಿಂತನೆ ನಡೆಯಲಿ. ಸತ್ಯಕ್ಕೆ ಸಾವಿಲ್ಲ ಎನ್ನುವ ಮಾತಿದೆ, ಕಾವೇರಿ ನಮ್ಮದು ಎನ್ನುವ ಸತ್ಯ ಎಲ್ಲರಿಗೂ ತಿಳಿದಿದೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s