ಕೃಷಿಕರಿಗೆ ‘ಪಂಪ್‍ಸೆಟ್’ ಭಾಗ್ಯ!

buy-texmo-agriculture-water-pumps-online

ರಾಜ್ಯದಲ್ಲಿ ವಿದ್ಯುತ್ ಅಭಾವ ಸದ್ಯಕ್ಕಂತೂ ಇಲ್ಲ. ಆದರೆ ನಮ್ಮಲ್ಲಿರುವ ವಿದ್ಯುತ್ ಶಕ್ತಿಯನ್ನು ಮಿತವಾಗಿ ಬಳಸಿ ಮುಂಬರುವ ದಿನಗಳಿಗಾಗಿ ಕಾಪಾಡಿಕೊಳ್ಳುವ ಜರೂರತ್ತಂತೂ ಇದೆ. ಬೇರೆ ಬೇರೆ ಮೂಲಗಳಿಂದ ವಿದ್ಯುತ್ ಅನ್ನು ತಯಾರಿಸಲಾಗುತ್ತಾದರೂ, ಮಿತವ್ಯವಯದ ಅಭ್ಯಾಸವನ್ನು ರೂಢಿಸಿಕೊಂಡು ಸರ್ಕಾರಕ್ಕೆ ಹೊರೆಯಾಗದಂತೆ ಬದುಕುವ ಭಾರ ನಮ್ಮ ಮೇಲಿದೆ.! ವಿದ್ಯುತ್ ಬಳಸಿದರೆ ಸರ್ಕಾರಕ್ಕೆ ಭಾರವಾಗುತ್ತೇವೆಯೇ? ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೆ ಈ ಕೆಳಗೆ ಉತ್ತರ ನೀಡಲಾಗಿದೆ.

   ನಾವು ಬಳಸುತ್ತಿರುವ ವಿದ್ಯುತ್ತಿನ ಮೂಲ ಬೆಲೆಗಿಂತ ಕಡಿಮೆ ಬೆಲೆಗೆ ಸರ್ಕಾರ ನಮಗೆ ಸರಬರಾಜು ಮಾಡುತ್ತಿದೆ. ವಿದ್ಯುತ್ ಅಭಾವ ತಲೆದೋರಿದಾಗ ಪಕ್ಕದ ರಾಜ್ಯಗಳಿಂದ ಖರೀದಿಸಲಾಗುತ್ತದೆ. ಆಗಂತೂ ಸರ್ಕಾರದ ಬೊಕ್ಕಸಕ್ಕೆ ಭಾರ ಬೀಳುತ್ತದೆ. ಇನ್ನು ಕೃಷಿಕರಿಗೆ ಸಹಾಯಕವಾಗಲೆಂದು ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ಸರ್ಕಾರಕ್ಕೆ ಸುಮಾರು 5000 ಕೋಟಿ ರೂ.ಗಳಷ್ಟು ಹೊರೆ ಇದೆ. ಇದೆಲ್ಲ ಹಿನ್ನೆಲೆಯಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ ವಿದ್ಯುತ್ ಅನ್ನು ಉಳಿತಾಯ ಮಾಡುವತ್ತ ಪ್ರಯತ್ನ ಮಾಡುತ್ತಿದೆ.

   ವಿದ್ಯುತ್ ಉಳಿತಾಯದ ಮೊದಲ ಹಂತವೆಂದರೆ ವಿದ್ಯುತ್ ಸೋರಿಕೆಯನ್ನು ತಡೆಗಟ್ಟುವುದು. ಕೃಷಿಕರು ಬಳಸುತ್ತಿರುವ ಪಂಪ್‍ಸೆಟ್‍ಗಳು ಹಳೆಯವಾದ್ದರಿಂದ ಅವು ವಿದ್ಯುತ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತವೆ. ಆದ್ದರಿಂದ ಪಂಪ್‍ಸೆಟ್‍ಗಳನ್ನೇ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ. ಪಂಪ್‍ಸೆಟ್ ಬದಲಾವಣೆ ಮಾಡಿದರೆ ರೈತರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ, ಹೊಸ ಪಂಪ್ ಖರೀದಿಸಿ ಅಳವಡಿಸಲು ಕನಿಷ್ಠವೆಂದರೂ 20 ಸಾವಿರ ಬೇಕು ಎಂದು ಜನರು ಹೇಳಬಹುದು. ಆದರೆ ಸರ್ಕಾರ ಅದಕ್ಕೂ ಮಾರ್ಗೋಪಾಯ ಕಂಡುಹಿಡಿದಿದೆ. ರೈತರಿಂದ ಕೇವಲ 3 ಸಾವಿರ ರೂ.ಪಡೆದು, ಉಳಿದ 17 ಸಾವಿರ ರೂಪಾಯಿಗಳನ್ನು ಸರ್ಕಾರವೇ ಭರಿಸಲಿದೆ. 2.5 ಲಕ್ಷ ಪಂಪ್‍ಸೆಟ್‍ಗಳ ಬದಲಾವಣೆಗೆ ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹೆಚ್ಚು ಕಾರ್ಯಕ್ಷಮತೆ ಉಳ್ಳ ಪಂಪ್‍ಸೆಟ್ ಅಳವಡಿಸುವುದರಿಂದ ಶೇ.30ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸುವ ವಿಶ್ವಾಸವನ್ನು ಸರ್ಕಾರ ಹೊಂದಿದೆ.

   ಇನ್ನು ಎಲ್‍ಇಡಿ ಬಲ್ಬ್‍ಗಳನ್ನು ಪ್ರತಿಮನೆಗೂ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇದುವರೆಗೆ 1.18 ಕೋಟಿ ಎಲ್‍ಇಡಿ ಬಲ್ಬ್‍ಗಳನ್ನು ವಿರಿಸಲಾಗಿದ್ದು, 5 ಕೋಟಿ ಬಲ್ಬ್ ವಿತರಿಸುವ ಗುರಿ ಹೊಂದಲಾಗಿದೆ. ಜೊತೆಗೆ ಪ್ರತಿ ತಾಲೂಕಿನಲ್ಲೂ 20 ಮೆ.ವಾ. ವಿದ್ಯುತ್ ಉತ್ಪಾದಿಸುವ ಗುರಿಯನ್ನೂ ಹೊಂದಲಾಗಿದೆ. ಸೌರ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ರಾಜ್ಯದಲ್ಲಿ ವಿದ್ಯುತ್ ಮಿತವ್ಯಯಕ್ಕಾಗಿ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ ಸರ್ಕಾರದ ಮಹತ್ವದ ನಿರ್ಧಾರಕ್ಕೆ ವಿದ್ಯುತ್ ಗ್ರಾಹಕರೂ ಕೈಜೋಡಿಸಬೇಕಿದೆ.

One thought on “ಕೃಷಿಕರಿಗೆ ‘ಪಂಪ್‍ಸೆಟ್’ ಭಾಗ್ಯ!

Leave a comment