ಸಾರಿಗೆ ನೌಕರರ ಮುಷ್ಕರದ ಆಚೆ-ಈಚೆ..

bus_130912-1

ಒಬ್ಬ ವ್ಯಕ್ತಿಗೆ ಅಥವಾ ಸಮೂಹಕ್ಕೆ ಅನ್ಯಾಯವಾದಾಗ, ಹಕ್ಕನ್ನು ಕಸಿದುಕೊಂಡಾಗ, ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ನೀಡದಿದ್ದಾಗ ಅದನ್ನು ಪ್ರಶ್ನಿಸುವುದು ಅನಿವಾರ್ಯ ಹಾಗೂ ಪ್ರಶ್ನಿಸುವಿಕೆ ಹಕ್ಕು ಕೂಡ. ಆದರೆ ಪ್ರಶ್ನಿಸುವಿಕೆಗೂ ಒಂದು ರೀತಿ-ನೀತಿಗಳಿರುತ್ತವೆ. ಅದಕ್ಕೂ ವಿಧಾನಗಳಿರುತ್ತವೆ, ಹಂತಗಳಿರುತ್ತವೆ. ಆದರೆ ಅದನ್ನೆಲ್ಲ ಗಾಳಿಗೆ ತೂರಿ ಮುನ್ನಡೆದರೆ ಅದಕ್ಕೆ ಹಲವಾರು ಅಡ್ಡಪರಿಣಾಮಗಳಿರುತ್ತವೆ ಹಾಗೂ ಆ ಅಡ್ಡಪರಿಣಾಮಗಳೇ ಭವಿಷ್ಯದ ನಡೆಗೆ ಮುಳ್ಳಾಗುವ ಸಾಧ್ಯತೆಯಿರುತ್ತದೆ.

   ಕರ್ನಾಟಕ ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಮೇಲಿನ ಮಾತುಗಳನ್ನು ಹೇಳಬೇಕಾಯಿತು. ನೌಕರರ ಪ್ರಮುಖ ಬೇಡಿಕೆ ಶೇ.30ರಷ್ಟು ವೇತನ ಹೆಚ್ಚಳವಾಗಬೇಕು ಎಂಬುದು. ಆದರೆ ಸರ್ಕಾರ ಶೇ.10ರಷ್ಟನ್ನು ಮಾಡಲು ಸಿದ್ಧ ಎನ್ನುತ್ತಿದೆ. ನಾವಿಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯವೆಂದರೆ, ನಮ್ಮ ಪಕ್ಕದ ರಾಜ್ಯಗಳ ರಸ್ತೆ ಸಾರಿಗೆ ನೌಕರರ ಸಂಬಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಉತ್ತಮವಾದ ವೇತನ ಶ್ರೇಣಿಯಿದೆ, ಅಲ್ಲಿಗಿಂತಲೂ ಹೆಚ್ಚಿನ ವೇತನವನ್ನು ನಮ್ಮ ರಾಜ್ಯದಲ್ಲಿ ನೀಡಲಾಗುತ್ತಿದೆ. ಕಳೆದ ವರ್ಷ ಶೇ.10ರಷ್ಟು ವೇತನ ಏರಿಕೆ ಮಾಡಲಾಗಿತ್ತು ಹಾಗೂ ಈ ವರ್ಷವೂ ಶೇ.10ರಷ್ಟು ಹೆಚ್ಚಳ ಮಾಡಲು ಸರ್ಕಾರ ಒಪ್ಪಿದೆ. ಆದರೆ ನೌಕರರು ಶೇ.30ರಷ್ಟು ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

   ಈ ಸಂದರ್ಭದಲ್ಲಿ ಸಾರಿಗೆ ನೌಕರರು ತಮ್ಮ ಈ ಅನಿರ್ದಿಷ್ಟಾವಧಿ ಮುಷ್ಕರದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಮೊದಲನೆಯದಾಗಿ ಬೇಡಿಕೆಗಳನ್ನು ಮುಂದಿಡಲು ‘ಮುಷ್ಕರ’ ಮೊದಲ ಹೆಜ್ಜೆಯಲ್ಲ. ಮನವಿ ನೀಡಿ, ಮಾತುಕತೆ ನಡೆಸಿ ಸರ್ಕಾರವನ್ನು ಒಪ್ಪಿಸುವ ಕೆಲಸಕ್ಕೆ ಮುಂದಾಗಬೇಕಿತ್ತು. ಅದು ಕೈಗೂಡದಿದ್ದಾಗ ಮುಂದಿನ ಹಂತದ ಬಗ್ಗೆ ಯೋಚಿಸಬಹುದಿತ್ತು. ಇರಲಿ, ಈಗಾಗಲೇ ಮುಷ್ಕರ ಪ್ರಾರಂಭವಾಗಿದೆ ಹಾಗೂ ಮಾತುಕತೆ ನಡೆದಷ್ಟೂ ವಿಫಲವಾಗುತ್ತಿವೆ. ಆದರೆ ನೌಕರರ ಬೇಡಿಕೆಯ ಬಿಸಿಗೆ ನಲುಗುತ್ತಿರುವವರು ಸಾರ್ವಜನಿಕರು. ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನೇ ನಂಬಿಕೊಂಡು ಓಡಾಟ ನಡೆಸುತ್ತಿರುವವರು ಬಹುಸಂಖ್ಯೆಯಲ್ಲಿದ್ದಾರೆ. ಅವರ ಪರಿಸ್ಥಿತಿ ಈ ಸಂದರ್ಭದಲ್ಲಿ ಹೇಳತೀರದ್ದು, ಅದರಲ್ಲೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

   ಒಟ್ಟೂ 23 ಸಾವಿರ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದು, 4 ನಿಗಮಗಳಿಗೆ ಒಂದೇ ದಿನದಲ್ಲಿ ಆಗುವ ನಷ್ಟ ರೂ.21 ಕೋಟಿಯಾಗಿದೆ. ಮುಷ್ಕರ ಮಾಡುವುದು ತಪ್ಪಲ್ಲ, ಆದರೆ ಪ್ರತಿಯೊಬ್ಬರಿಗೂ ಅವರದೇ ಆದ ಸಾಮಾಜಿಕ ಬದ್ಧತೆ ಇರಬೇಕಾಗುತ್ತದೆ. ಅದಕ್ಕನುಗುಣವಾಗಿ ನಡೆದುಕೊಂಡಾಗ ಸಮಸ್ಯೆಗಳ ಪ್ರಖರತೆ ಕಡಮೆಯಾಗುತ್ತದೆ. ಇದೀಗ ಉಂಟಾಗಿರುವ ಸಮಸ್ಯೆ ಮಾತುಕತೆಯ ಮೂಲಕವೇ ಬಗೆಹರಿಯಬೇಕಾಗಿದ್ದು, ರಾಜ್ಯದ ಆರ್ಥಿಕ ಸಮಸ್ಯೆಯನ್ನೂ ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳುವ ಅನಿವಾರ್ಯತೆ ಸರ್ಕಾರಕ್ಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಸಾರಿಗೆ ನೌಕರರ ಸಮಸ್ಯೆಗೊಂದು ಪರಿಹಾರ ಸಿಗಲಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s