ಸದನದ ಕಲಾಪವನ್ನು ಪ್ರಲಾಪಕ್ಕಾಗಿ ಬಳಸದಿರಿ ಸ್ವಾಮಿ..

assembly

ಸದನದಲ್ಲಿ ಕಲಾಪಗಳು ಯಾಕೆ ನಡೆಯುತ್ತವೆ? ಹೀಗೊಂದು ಪ್ರಶ್ನೆಯನ್ನು ರಾಜಕೀಯ ಪಕ್ಷಗಳೆದುರು, ರಾಜಕೀಯ ನಾಯಕರೆದುರು ಇಡುವ ಅನಿವಾರ್ಯತೆ ಉಂಟಾಗಿದೆ. ಜನಸಾಮಾನ್ಯರ ಆಶೋತ್ತರಗಳಿಗೆ ದನಿಯಾಗಬೇಕಾದ ಜನಪ್ರತಿನಿಧಿಗಳು ಸದನದಲ್ಲಿ ಮಾಡುತ್ತಿರುವುದಾದರೂ ಏನು? ಸುಖಾಸುಮ್ಮನೆ ಜಗಳ, ಧರಣಿ, ಗಲಾಟೆ! ಇದಕ್ಕೆ ಏನು ಜನರು ಮತ ಹಾಕಿ ತಮ್ಮ ನಾಯಕರನ್ನು ಆರಿಸಿ ಕಳುಹಿಸಿರುವುದು?

   ಸದನದ ಕಲಾಪಗಳಲ್ಲಿ ಜನಪರವಾದ ಚಿಂತನೆಗಳು ನಡೆಯಬೇಕು, ಯೋಜನೆಗಳ ಕುರಿತು ಚರ್ಚೆಯಾಗಬೇಕು, ಆಯವ್ಯಯದ ಬಗ್ಗೆ ಮಾತುಕತೆಯಾಗಬೇಕು. ಆದರೆ ಅದೆಲ್ಲವನ್ನು ಬದಿಗೊತ್ತಿ ಕೇವಲ ತಮ್ಮ ರಾಜಕೀಯ ಮೇಲಾಟಕ್ಕಾಗಿ ಸದನ ಕಲಾಪವನ್ನು ಬಲಿ ತೆಗೆದುಕೊಳ್ಳುತ್ತಿರುವ ‘ಜನಪ್ರತಿನಿಧಿ’ ಬಿರುದಾಂಕಿತರಿಗೆ ಏನನ್ನೋಣ? ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ-ಕಾರ್ಪಣ್ಯಗಳು ಇವರ ಅರಿವಿಗೇ ಬರುತ್ತಿಲ್ಲವೆ? ಮೊನ್ನೆಮೊನ್ನೆಯಷ್ಟೇ ನಡೆದ ಸದನ ಕಲಾಪವನ್ನೇ ತೆಗೆದುಕೊಳ್ಳಿ, ಪ್ರಾರಂಭವಾದಾಗಿನಿಂದ ಬಿ8ಜೆಪಿ, ಜೆಡಿಎಸ್‍ನವರ ಧರಣಿಗಳ ಗಲಾಟೆಯಲ್ಲೇ ಸಸಮಯ ವ್ಯರ್ಥವಾಗಿದ್ದು ಬಿಟ್ಟರೆ, ಯಾವುದೇ ಗಂಭೀರ ಚರ್ಚೆಗಳೇ ನಡೆಯಲಿಲ್ಲ. ಡಿವೈಎಸ್‍ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಸದನದ ಅಮೂಲ್ಯ ಸಮಯವನ್ನು ತಮ್ಮ ರಾಜಕೀಯದಾಟಕ್ಕೆ ಬಳಸಿಕೊಂಡರು.

   ನಿಜಕ್ಕೂ ಆಗಬೇಕಾದದ್ದು ಮಹತ್ವದ ವಿಧೇಯಕಗಳ ಕುರಿತಾದ ಮಾತುಕತೆ, ಒಂದು ಲಕ್ಷ ನಲವತ್ತು ಸಾವಿರ ಕೋಟಿಗೂ ಹೆಚ್ಚು ಮೊತ್ತದ ಬಜೆಟ್ ಬಗ್ಗೆ ಚರ್ಚೆ! ಏನಿಲ್ಲವೆಂದರೂ ಸದನದ ಮೊದಲ ಮೂರ್ನಾಲ್ಕು ತಾಸಾದರೂ ಕಾರ್ಯಕಲಾಪಗಳು ಸುಗಮವಾಗಿ ಸಾಗಬೇಕು. ಧರಣಿ, ಸತ್ಯಾಗ್ರಹ, ಚೀರಾಟ, ಅರಚಾಟಗಳು ಏನಿದ್ದರೂ ಆಮೇಲೆ! ಸಭಾಧ್ಯಕ್ಷರು ಮನವಿ ಮಾಡಿದರೂ ಕಿವಿಗೆ ಹಾಕಿಕೊಳ್ಳದ ರಾಜಕಾರಣಿಗಳಿಗೆ ಸ್ವಯಂಭೂ ಎನ್ನುವಂತೆ ಅರಿವಾಗಬೇಕೆ ಹೊರತು, ಯಾರೋ ಹೇಳಿಯೋ-ಇನ್ಯಾರೋ ಕೇಳಿಯೋ ಅಲ್ಲ. ಆದರೆ ಅದು ಇದುವರೆಗೆ ಆಗದೇ ಇರುವುದು ದುರಂತ.

   ಈ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕಾದ ಅವಶ್ಯಕತೆಯಿದೆ. ಸದನದ ಶಿಷ್ಟಾಚಾರಗಳ ಅಡಿಯಲ್ಲಿ ಕಡ್ಡಾಯವಾಗಿ ಪ್ರತೀ ಕಲಾಪದಲ್ಲೂ ಕನಿಷ್ಠ ಇಂತಿಷ್ಟು ಗಂಟೆ ಅರ್ಥಗರ್ಭಿತ ಚರ್ಚೆಯಾಗಬೇಕು ಎನ್ನುವ ನಿಯಮ ಜಾರಿಯಾಗಬೇಕು. ಯಾವುದೇ ಚರ್ಚೆಗೆ ಮುಂದಾಗದೇ ಕೇವಲ ಧರಣಿ, ಗಲಾಟೆ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತಹ ಕಾನೂನಿನ ಚಖಟ್ಟನ್ನು ರೂಪಿಸಬೇಕು. ಆಗಲಾದರೂ ಜನಪ್ರತಿನಿಧಿಗಳಿಗೆ ಚರ್ಚೆ ಮಾಡುವುದು ಅನಿವಾರ್ಯವಾಗಬಹುದು. ಆ ನೆಪದಲ್ಲಾದರೂ ಒಂದಷ್ಟು ಮಹತ್ವದ ವಿಷಯಗಳಿಗೆ ಸ್ಥಳಾವಕಾಶ ದೊರೆಯಬಹುದು.

   ಎಲ್ಲಕ್ಕಿಂತ ಹೆಚ್ಚಿನದಾಗಿ ಪ್ರತಿಯೊಬ್ಬ ಜನಪ್ರತಿನಿಧಿಗೂ ತಾನು ಜನರ ಪರವಾಗಿ ಇಲ್ಲಿರುವವನು ಎನ್ನುವ ಕನಿಷ್ಠ ಪ್ರಜ್ಞೆ ಇರಬೇಕು. ಆ ಒಂದು ತಿಳುವಳಿಕೆಯೇ ಸಾಕು, ಅವರವರ ಕರ್ತವ್ಯಪ್ರಜ್ಞೆಯನ್ನು ನೆನಪಿಸುತ್ತಿರಲು.

Leave a comment