ಅದುರುತ್ತಿರುವ ಕಮಲದಳಗಳು ಉದುರುವ ಸಮಯ

yeddyeshu

ಕಮಲದಳಗಳು ಅದುರುತ್ತಿವೆ, ಇದೇ ರೀತಿ ಅದುರುತ್ತಿದ್ದರೆ ಉದುರುವ ದಿನಗಳೂ ದೂರವಿಲ್ಲ. ಆದರೆ ಉದುರದಂತೆ ನೋಡಿಕೊಂಡು ಮಾನ ಉಳಿಸಿಕೊಳ್ಳುವ ಜರೂರತ್ತು ಬಿಜೆಪಿ ಪಕ್ಷಕ್ಕಿದೆ. ಆದ್ದರಿಂದ ಅದುರುವಿಕೆಗೇ ಎಲ್ಲ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿ ಎಂದು ಬಿಜೆಪಿ ಹಿತೈಶಿಗಳು ಪ್ರಾರ್ಥಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪಕ್ಷದಲ್ಲಿ ತೊಡೆ ತಟ್ಟಿ ನಿಂತಿರುವುದು ಕೆ.ಎಸ್ ಈಶ್ವರಪ್ಪ ಎನ್ನುವ ಜಗಜಟ್ಟಿ. ಎದುರಾಳಿ ಇನ್ನೂ ಬಲಿಷ್ಠನಾಗಿದ್ದಾನೆ ಅಥವಾ ಆತನನ್ನು ಬಲಿಷ್ಠ ಮಾಡಲಾಗಿದೆ ಎಂದು ಗುಟುರು ಹಾಕುತ್ತಿದ್ದಾರವರು. ಇನ್ನು ಈಶ್ವರಪ್ಪನವರಿಗೆ ಕ್ಯಾರೇ ಎನ್ನದೆ, ಆನೆ ನಡೆದಿದ್ದೇ ಹಾದಿ ಎನ್ನುವಂತೆ ವರ್ತಿಸುತ್ತಿರುವ ಯಡಿಯೂರಪ್ಪ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

   ಈಶ್ವರಪ್ಪನವರ ದುಮುಗುಡುವಿಕೆಗೆ ಮೂಲ ಕಾರಣ ಇಲ್ಲಿದೆ ಓದಿ. ಕರ್ನಾಟಕದ ಆಗಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಭ್ರಷ್ಟಾಚಾರದ ಮೂಟೆ ಹೊತ್ತು ಕಮಲವನ್ನು ಎಸೆದು ತೆಂಗಿನಕಾಯಿ ಹಿಡಿದುಕೊಂಡರು. ಆಗ ಕೆಜೆಪಿ ಎಂಬ ತೆಂಗಿನಕಾಯಿ ವ್ಯಾಪಾರಕ್ಕೆ ಯಡಿಯೂರಪ್ಪನವರಿಗೆ ಸಾಥ್ ನೀಡಿದ್ದು ಉದ್ಯಮಿ ರುದ್ರೇಗೌಡ. ರುದ್ರೇಗೌಡರಿಗೆ ಶಿಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕೆಜೆಪಿಯಿಂದ ಟಿಕೇಟ್ ನೀಡಲಾಯಿತು. ಇತ್ತ ಬಿಜೆಪಿಯಿಂದ ಈಶ್ವರಪ್ಪ ಕಣಕ್ಕಿಳಿದರೆ, ಕಾಂಗ್ರೆಸ್‍ನಿಂದ ಪ್ರಸನ್ನಕುಮಾರ್ ಇದ್ದರು. ಕೆಜೆಪಿ ಗೆಲ್ಲಬೇಕು ಎನ್ನುವುದಕ್ಕಿಂತ ಹೆಚ್ಚಿನದಾಗಿ, ಬಿಜೆಪಿಯ ಈಶ್ವರಪ್ಪ ಸೋಲಬೇಕು ಎನ್ನುವುದೇ ಯಡಿಯೂರಪ್ಪನವರ ಪರಮೋಚ್ಛ ಗುರಿಯಾಗಿತ್ತು. ಇಂತಹ ಬಿಸಿಯಲ್ಲೇ ಚುನಾವಣೆಯೂ ಸಾಂಗವಾಗಿ ನೆರವೇರಿತು.

   ಫಲಿತಾಂಶ ಪ್ರಕಟವಾದಾಗ ಯಡಿಯೂರಪ್ಪ ನೆಲದ ಮೇಲೇ ಇರಲಿಲ್ಲ, ಯಾಕೆಂದರೆ ಈಶ್ವರಪ್ಪ ಗಿರಗಿರನೆ ತಿರುಗಿ ಮೂರನೇ ಸ್ಥಾನಕ್ಕಿಳಿದಿದ್ದರು. ಕಾಂಗ್ರೆಸ್‍ನ ಪ್ರಸನ್ನಕುಮಾರ್ 278 ಮತಗಳ ಅಂತರದಿಂದ ಕೆಜೆಪಿಯ ರುದ್ರೇಗೌಡರನ್ನು ಸೋಲಿಸಿದ್ದರು. ಪ್ರಸನ್ನಕುಮಾರ್‍ಗೆ 39,355 ಮತ, ರುದ್ರೇಗೌಡರಿಗೆ 39,077 ಮತ ದೊರೆತಿದ್ದವು. ಇಲ್ಲಿ ಈಶ್ವರಪ್ಪನವರ ಪರಿಸ್ಥಿತಿ ಹೇಳತೀರದಾಗಿತ್ತು. 33,462 ಮತ ಪಡೆದು ಮೂರನೇ ಸ್ಥಾನಕ್ಕಿಳಿದಿದ್ದ ಅವರು, ಅಕ್ಷರಶಃ ಕುಸಿದುಹೋಗಿದ್ದರು. ಕಾರಣ, 1989, 1994, 2004 ಮತ್ತು 2008ರ ಚುನಾವಣೆಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ತಾವು ಇದೀಗ ಸೋಲಿನ ರುಚಿ ಕಾಣಲು ಕೆಜೆಪಿಯ ರುದ್ರೇಗೌಡರೇ ಕಾರಣ ಎನ್ನುವುದು.

   ಅದೇ ರುದ್ರೇಗೌಡರನ್ನು ಇದೀಗ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಯಡಿಯೂರಪ್ಪ ನೇಮಿಸುತ್ತಿದ್ದಂತೆ, ಈಶ್ವರಪ್ಪ ಕೆಂಡಾಮಂಡಲರಾದರು. ಈಶ್ವರಪ್ಪ ಪ್ರಸ್ತುತ ವಿಧಾನ ಪರಿಷತ್‍ನ ಸದಸ್ಯರಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣಾ ವೇಳೆಗೂ ಅವರ ಸದಸ್ಯತ್ವ ಇರುತ್ತದೆ. ಇಂತಿರುವಾಗ ಕೆಜೆಪಿಯಿಂದ ಸ್ಪರ್ಧಿಸಿ ಕೇವಲ 278 ಮತಗಳ ಅಂತರದಲ್ಲಿ ಸೋತಿದ್ದ ರುದ್ರೇಗೌಡರಿಗೇ ಬಿಜೆಪಿಯಿಂದ ಟಿಕೇಟ್ ಸಿಗುತ್ತದೆ. ಹಾಗೇನಾದರೂ ಆದಲ್ಲಿ, ಅದರಲ್ಲೂ ರುದ್ರೇಗೌಡರು ಜಯ ಸಾಧಿಸಿಬಿಟ್ಟರೆ ಈಶ್ವರಪ್ಪ ಮೂಲೆಗುಂಪಾಗುವುದು ಗ್ಯಾರಂಟಿ ಎನ್ನುವುದು ಬಲ್ಲಮೂಲಗಳ ಮಾತು. ಈ ಆತಂಕದಿಂದ ಈಶ್ವರಪ್ಪ ಯಡಿಯೂರಪ್ಪನವರ ನಿರ್ಧಾರದ ವಿರುದ್ಧ ಸಿಡಿಮಿಡಿಗೊಂಡು, ಒಂದಷ್ಟು ಜನರನ್ನು ಒಟ್ಟು ಮಾಡಿ ಬಿಜೆಪಿ ವರಿಷ್ಠರಿಗೆ ದೂರು ನೀಡಿ ನಿರಾಳರಾಗಿದ್ದಾರೆ. ಆದರೆ ಅದರ ಫಲಿತಾಂಶ? ಇನ್ನು ಗೊತ್ತಾಗಬೇಕಷ್ಟೇ.

   ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಕಮಲದಳಗಳು ಉದುರದಂತೆ ಕಷ್ಟಪಟ್ಟು ಹಿಡಿದಿಡಲಾಗಿದೆ. ಅದು ಉದುರುವ ಸಮಯ ದೂರವಿಲ್ಲ ಎನ್ನುವುದು ಕೆರೆಯ ಏರಿಯ ಮೇಲೆ ನಡೆಯುತ್ತಿರುವವರು ಹೇಳುವ ಮಾತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s