‘ಮಲಿನ ಮುಕ್ತ’ವಾಗಲಿ ಧೋರಣೆ

What-does-Amit-Shah-mean-by-his-Congress-free-India-statement

ರಾಜಕೀಯ ಪಕ್ಷಗಳು ಯಾವ ಆಧಾರದ ಮೇಲೆ ಕೆಲಸ ನಿರ್ವಹಿಸಬೇಕು? ಅವರ ಮುಖ್ಯ ಗುರಿ ಏನಾಗಿರಬೇಕು? ಹೀಗೆ ಸಾಲು ಸಾಲು ಪ್ರಶ್ನೆಗಳು ಉದ್ಭವಿಸುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ತಾವು ಜನಸೇವೆ ಮಾಡಲು ಇರುವವರು ಎನ್ನುವುದನ್ನು ಮರೆತು ವರ್ತಿಸುತ್ತಿರುವ ಕೆಲ ಪಕ್ಷಗಳನ್ನು ನೋಡಿದರೆ ಅಸಹ್ಯ ಮೂಡುತ್ತಿದೆ. ಆದರೆ, ಜನಪರವಾಗಿ ನಿಜವಾದ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿರುವ ಪಕ್ಷಗಳು ನಮ್ಮಲ್ಲಿ ಅಷ್ಟೋ ಇಷ್ಟೋ ಭರವಸೆ ಉಳಿಸುತ್ತವೆ-ಚಿಗುರಿಸುತ್ತವೆ.

   ನೇರವಾಗೇ ವಿಷಯಕ್ಕೆ ಬಂದುಬಿಡೋಣ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು, ಪ್ರಜಾಪ್ರಭುತ್ವವನ್ನು ಗೌರವಿಸುವವರು ಯಾವತ್ತಿಗೂ ಎಲ್ಲರನ್ನು ಒಳಗೊಂಡು ಮುನ್ನಡೆಯೋಣ, ಪ್ರಗತಿ ಸಾಧಿಸೋಣ ಎನ್ನುವ ಮನಃಸ್ಥಿತಿಯಲ್ಲಿ ಮುನ್ನಡೆಯುತ್ತಾರೆ. ಮಾಜಿ ಪ್ರಧಾನಿ ವಾಜಪೇಯಿಯವರು ಹಿಂದೊಮ್ಮೆ ಹೇಳಿದ ಮಾತು ನೆನಪಿಗೆ ಬರುತ್ತಿದೆ, “ಅಧಿಕಾರ ಎನ್ನುವುದು ಯಾರೊಬ್ಬರಿಗೂ ಶಾಶ್ವತವಲ್ಲ. ಇಂದು ನಮ್ಮ ಬಳಿಯಿದೆ, ನಾಳೆ ನಿಮ್ಮ ಬಳಿ ಇರುತ್ತದೆ. ನಾವೆಲ್ಲರೂ ಪರಸ್ಪರ ಸಹಕಾರ ಮನೋಭಾವದಿಂದ ಮುನ್ನಡೆಯಬೇಕಿದೆ. ಯಾಕೆಂದರೆ ನಮ್ಮೆಲ್ಲರ ಗುರಿ ದೇಶದ ಪ್ರಗತಿ”!

  ವಿಪರ್ಯಾಸ ನೋಡಿ, ಯಾವ ವಾಜಪೇಯಿ ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಂಬಿಕೆಯಿಟ್ಟಿದ್ದರೋ, ಅಂತಹ ಧೀಮಂತ ನಾಯಕನನ್ನು ಹೊಂದಿರುವ ಬಿಜೆಪಿ ಇಂದು ಅಕ್ಷರಶಃ ಪ್ರಜಾಪ್ರಭುತ್ವದ ಕಗ್ಗೊಲೆಗೈಯುವತ್ತ ದಾಪುಗಾಲಿಡುತ್ತಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ನಮ್ಮ ಗುರಿ ಎಂದು ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಾಯಕರು ಹೇಳಿದರೆ, ‘ಕಾಂಗ್ರೆಸ್ ಮುಕ್ತ ಕರ್ನಾಟಕ’ ನಮ್ಮ ಗುರಿ ಎಂದು ರಾಜ್ಯ ಬಿಜೆಪಿಯವರು ಕೂಗಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಸರಾಗವಾಗಿ-ಸುಸೂತ್ರವಾಗಿ ನಡೆಯಬೇಕಾದರೆ ಅದರಲ್ಲಿ ಒಂದೇ ಪಕ್ಷವಿದ್ದರೆ ಸಾಲದು. ಆಡಳಿತದ ಜೊತೆಜೊತೆಗೆ ಪೂರಕವಾಗಿ ಕೈಜೋಡಿಸಿಕೊಂಡು ಹೋಗಲು ಪ್ರತಿಪಕ್ಷಗಳೂ ಬೇಕಾಗುತ್ತವೆ. ಯಾವುದೋ ಒಂದು ಪಕ್ಷವನ್ನು ಕಿತ್ತೆಸೆದು ತಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವುದು ಶುದ್ಧ ಮೂರ್ಖತನ. ಜನಪರ ಆಲೋಚನೆ, ಕೆಲಸಗಳು ಅಧಿಕಾರಕ್ಕೆ ಬರಲು ಸಹಾಯಕವಾಗುತ್ತವೆಯೇ ಹೊರತು, ಎದುರು ಪಕ್ಷದವರ ಮೇಲೆ ದ್ವೇಷ ಕಾರುವುದರಿಂದಲ್ಲ.

   ಬಿಜೆಪಿ ನಾಯಕರ ‘ಮುಕ್ತ’ ಮಾತುಗಳು ಪ್ರಜಾತಂತ್ರ ವ್ಯವಸ್ಥೆಯೆಡೆ ಅವರಿಗಿರುವ ಗೌರವ ಎಷ್ಟೆಂಬುದನ್ನು ತೋರಿಸುತ್ತವೆ. ಪ್ರಜಾಪ್ರಭುತ್ವಕ್ಕೇ ಬೆಲೆಕೊಡದವರು, ಉತ್ತಮ ಆಡಳಿತ ನೀಡುತ್ತಾರೆ ಎಂದರೆ ಹೇಗೆ ನಂಬುವುದು? ಅವರ ಆಡಳಿತ ಸರ್ವಾಧಿಕಾರದ ಲಕ್ಷಣಗಳನ್ನು ಹೊಂದಿರುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ವಾಧಿಕಾರಿ ಧೋರಣೆಯ ಮನಸ್ಸುಗಳಿಂದ ಜನಪರ-ಜನರ ಆಶಯಗಳಿಗೆ ಪೂರಕವಾದ ಆಡಳಿತ ದೊರಕುತ್ತದೆಯೆಂಬುದು ಕನಸಿನ ಮಾತು.

   ಬಿಜೆಪಿ ತನ್ನ ಮನಃಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಿದೆ. ‘ಕಾಂಗ್ರೆಸ್ ಮುಕ್ತ’ ಎನ್ನುವ ಜಪ ಬಿಟ್ಟು ಜನಹಿತ ಕಾಯುವತ್ತ – ಅವರ ಆಶೋತ್ತರಗಳಿಗೆ ಕಿವಿಯಾಗುವ ಕೆಲಸ ಮಾಡಬೇಕು. ‘ಬೇರೆಯವರನ್ನು ತುಳಿದು ನಾನು ಮೇಲೆ ಬರುತ್ತೇನೆ ಎನ್ನುವುದಕ್ಕಿಂತ, ನನ್ನ ಕೆಲಸಗಳ ಮೂಲಕ ಮೇಲೆ ಬರುತ್ತೇನೆ’ ಎನ್ನುವುದು ಶ್ರೇಷ್ಠವಾದದ್ದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s