ಮೋದಿ ಬುಡಬುಡಿಕೆಯೂ, ಬಿಜೆಪಿ ಬಡಬಡಿಕೆಯೂ..

03sd4

ಇದನ್ನೇ ನೋಡಿ ‘ಬರಗಾಲದಲ್ಲಿ ಮಗ ಉಣ್ಣುವುದು ಕಲಿತ’ ಎನ್ನುವುದು! ಇತ್ತ ದೇಶದ ಹಲವೆಡೆ ಭೀಕರ ಬರಗಾಲ ತಾಂಡವವಾಡುತ್ತಿದ್ದರೆ, ಅತ್ತ ಬಿಜೆಪಿ ನಾಯಕರು, ಸರ್ಕಾರಕ್ಕೆ 2 ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದಾರೆ. ಬರಗಾಲಕ್ಕೆ ತತ್ತರಿಸಿ ಹೊತ್ತು ಊಟಕ್ಕೂ ಜನ ಕಣ್ಣೀರು ಹಾಕುತ್ತಿರುವಾಗ, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಎಲ್ಲೆಡೆ ಬಿಜೆಪಿ ಜಾಹೀರಾತು ನೀಡುತ್ತಿದೆ. ಕೆಲಸ ಮಾಡಿದ್ದಕ್ಕಿಂತ ಹೆಚ್ಚಾಗಿ ಪ್ರಚಾರಕ್ಕೆ ಪ್ರಯತ್ನಿಸಿದ್ದು ಮತ್ತು ಮಾತಿನಲ್ಲೇ ಅರಮನೆ ಕಟ್ಟಿದ್ದು ಮೋದಿ ಸರ್ಕಾರದ ಸಾಧನೆ, ಇದೇ 2 ವರ್ಷದ ಸಂಭ್ರಮಾಚರಣೆಯ ಹೂರಣ ಕೂಡ.

   ಪ್ರಧಾನಿ ಮೋದಿ ಮಾಡಿದ ಎಡವಟ್ಟು ಒಂದೆರಡಲ್ಲ. ಅಧಿಕಾರ ಸ್ವೀಕರಿಸುವ ವೇಳೆ ಇದ್ದಬದ್ದ ಎಲ್ಲರನ್ನೂ ಕರೆದು ಭಾರೀ ಪ್ರಚಾರದೊಂದಿಗೆ ಗದ್ದುಗೆಗೇರಿದ್ದಾಯಿತು. ನಂತರ ಪಾಕಿಸ್ತಾನದ ಜೊತೆ ಸಂಬಂಧ ಸರಿ ಪಡಿಸುತ್ತೇನೆ ಎನ್ನುತ್ತಾ ಅಲ್ಲಿ-ಇಲ್ಲಿ ಹಾರಾಟ ನಡೆಸಿದ ಮೋದಿ ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸುವುದು ಬಿಡಿ, ಕುಲಗೆಡಿಸಿ ಬಿಟ್ಟರು. ಕ್ಯಾಮರಾಗಳಿಗೆ ಪೋಸು ಕೊಟ್ಟು ಕೈಬೀಸುತ್ತಾ ಮುನ್ನಡೆಯುತ್ತಿದ್ದಂತೆ ಪಠಾಣ್‍ಕೋಟ್‍ಗೆ ದಾಳಿ ನಡೆಸಿದ ಉಗ್ರರು ದೀಪಾವಳಿ ಆಚರಿಸಿಬಿಟ್ಟರು. ಭಾರತದ ಆಪ್ತ ಸ್ನೇಹಿತ ಎಂದೇ ಹೇಳಲಾಗುತ್ತಿದ್ದ ನೇಪಾಳ ಮೂತಿ ಗಂಟಿಕ್ಕುವಂತೆ ಮಾಡಿದ್ದು ಇದೇ ನಮ್ಮ ಮಾತಿನ ಮಲ್ಲ. ಸಾರ್ಕ್ ರಾಷ್ಟ್ರಗಳೊಂದಿಗೆ ಸಂಬಂಧ ಸುಧಾರಣೆ ಮಾಡುತ್ತೇನೆನ್ನುತ್ತಾ ಪ್ರಪ್ರಥಮವಾಗಿ ನೇಪಾಳಕ್ಕೆ ಕಾಲಿಟ್ಟ ಮೋದಿ, ದೇಶದ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸಿ ಭಾರತದೊಟ್ಟಿಗಿನ ನೇಪಾಳದ ಸಂಬಂಧ ಹಾಳುಗೆಡವಿದ್ದು ಇದೇ ಎನ್‍ಡಿಎ ಸರ್ಕಾರ. ಈ ಕಾರಣದಿಂದ ಚೀನಾ ದೇಶವು ನೇಪಾಳವನ್ನು ಪ್ರವೇಶಿಸುವ ಆಶಯ ಸಾಧ್ಯವಾಗಿ ಭಾರತಕ್ಕೆ ಭದ್ರತೆಯ ಅಪಾಯ ಹೆಚ್ಚಾಗಿದೆ.

   ಪ್ರಗತಿ-ಪ್ರಗತಿ ಎಂದು ಬೊಂಬಡಿ ಬಜಾಯಿಸುತ್ತ ಗಿರಗಿರನೇ ಸುತ್ತುವ ಮೋದಿಯ ಭಕ್ತರು ಇದನ್ನು ಎರಡೂ ಕಿವಿ ತೆರೆದು ಕೇಳಬೇಕು, ‘ಕಳೆದ ಆರು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಉದ್ಯೋಗ ಬೆಳವಣಿಗೆ ಕಂಡ ವರ್ಷ ಮೋದಿ ಅವಧಿ! ಹಣದುಬ್ಬರದ ಪ್ರಮಾಣ ಇಳಿದಿದ್ದರೂ ಡಾಲರ್ ಎದುರು ರೂಪಾಯಿ ಅಪಮೌಲ್ಯ ನಿರಂತರವಾಗಿ ನಡೆದಿದೆ. ‘ಅಚ್ಛೆ ದಿನ್, ಅಚ್ಛೆ ದಿನ್’ ಎಂದು ಜನಸಾಮಾನ್ಯರಿಗೆ ಉಂಡೇನಾಮ ತಿಕ್ಕುತ್ತ ಅಗತ್ಯ ವಸ್ತುಗಳ, ಜನಜೀವನದ ವೆಚ್ಚವನ್ನು ದುಬಾರಿಗೊಳಿಸಲಾಗುತ್ತಿದೆ.

   ‘ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಿಬಿಡುತ್ತೇನೆ’ ಎಂದು ಕಾಗಕ್ಕ-ಗುಬ್ಬಕ್ಕನ ಕಥೆ ಹೇಳಿದ್ದ ಮೋದಿ ಕಾಣೆಯಾಗಿಬಿಟ್ಟರಾ? ಇರಬೇಕು, ಯಾಕೆಂದರೆ ಈಗಿನ ಮೋದಿಗೆ ಪಾಪ ಕಪ್ಪು ಹಣ ಎಂದರೇನು ಅಂತಲೇ ಗೊತ್ತಿಲ್ಲ ಅನ್ನುವಷ್ಟು ಜಾಣ ಮೌನ ಆವರಿಸಿಬಿಟ್ಟಿದೆ. ರೈತನ ಬೆನ್ನೆಲುಬು ಮುರಿಯಲೆಂದೇ ‘ಭೂಸ್ವಾಧೀನ ಮಸೂದೆ’ ಅಸ್ತ್ರ ಬಳಸಿಕೊಳ್ಳಲು ಮುಂದಡಿ ಇಟ್ಟಿದ್ದ ಮೋದಿ ಸರ್ಕಾರಕ್ಕೆ ಪ್ರತಿಪಕ್ಷಗಳು ತಪರಾಕಿ ಬಾರಿಸಿದ್ದು ಇವತ್ತಿಗೂ ಹಚ್ಚಹಸಿರು.

   ಇನ್ನು ‘ಕಾಂಗ್ರೆಸ್ ಮುಕ್ತ’ ಎನ್ನುತ್ತಾ ಉತ್ತರಾಖಂಡ-ಅರುಣಾಚಲ ಪ್ರದೇಶದ ವಿಷಯದಲ್ಲಿ ಮೋದಿ ಸರ್ಕಾರ ನಡೆದುಕೊಂಡ ರೀತಿಯಿದೆಯಲ್ಲ, ಶುದ್ಧಾನುಶುದ್ಧ ಕೀಳುರಾಜಕೀಯವದು. ಹರೀಶ್ ರಾವತ್ ಸರ್ಕಾರವನ್ನು ಕೆಳಗಿಳಿಸಿದಷ್ಟೇ ವೇಗದಲ್ಲಿ ರಾವತ್ ಮತ್ತೆ ಪ್ರತಿಷ್ಠಾಪಿತರಾದರು, ಮೋದಿ ಸರ್ಕಾರ ಸುಪ್ರೀಂ ಕೋರ್ಟ್‍ನಿಂದ ಕಿವಿಹಿಂಡಿಸಿಕೊಂಡು ಸುಮ್ಮನಾಯಿತು. ಇನ್ನು ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಕೋಮುಸಂಘರ್ಷಗಳು ಮಿತಿ ಮೀರುವ ಹಂತಕ್ಕೆ ಹೋಗಿದೆ ಎಂದರೆ ತಪ್ಪಿಲ್ಲ. ಕರ್ನಾಟಕದಲ್ಲಿ ಎಂ ಎಂ ಕಲಬುರ್ಗಿಯಂತವರ ಹತ್ಯೆಯಾದಾಗಲೂ ಅದನ್ನು ರಾಜ್ಯ ಭದ್ರತಾ ವೈಫಲ್ಯ ಎಂಬಂತೆ ಬಿಂಬಿಸಲಾಯಿತೇ ಹೊರತು, ಪ್ರತಿಕ್ರಿಯೆ ನೀಡಬೇಕಾಗಿದ್ದ ಮೋದಿ ಮತ್ತೆ ದಿವ್ಯ ಮೌನಕ್ಕೆ ಶರಣಾದರು. ಹಾಗಾದರೆ ಭಾ.ಜ.ಪ ಸರ್ಕಾರದ ಮಹಾರಾಷ್ಟ್ರದಲ್ಲಿ ನರೇಂದ್ರ ದಾಬೊಲ್ಕರ್ ಹಾಗೂ ಗೋವಿಂದ್ ಪನ್ಸಾರೆ ಅವರ ಹತ್ಯೆಗಳೂ ಕೂಡಾ ಆ ಸರ್ಕಾರದ ವೈಫಲ್ಯವೇ? ಉಹುಂ..ಬಹುಶಃ ಮೋದಿಯವರಿಂದ ಇದಕ್ಕೆ ಉತ್ತರ ಸಿಗಲಿಕ್ಕಿಲ್ಲ.

   ಇಷ್ಟೆಲ್ಲ ಆದರೂ ಸಹ, ಮೋದಿ ತಾನೇ ಸರಿ ಎನ್ನುತ್ತ ‘ಸರ್ವಾಧಿಕಾರಿ’ ಧೋರಣೆ ತೋರುತ್ತಿರುವುದು ದೇಶದ ಒಳಿತಿನ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲೆಗೈಯುತ್ತಿರುವುದು ದೇಶದ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಶೋಭಿಸುವಂತಹುದಲ್ಲ. ಅಷ್ಟಕ್ಕೂ ಬುದ್ಧಿ ಹೇಳಲು ಮೋದಿಯೇನು ಸಣ್ಣ ಮಗುವೇ?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s