ನಮ್ಮ ನಾಡು ಕೃಷಿ ಆಧಾರಿತವಾದದ್ದು. ಕೃಷಿಯೇ ನಮ್ಮ ಜೀವಾಳ ಎಂದರೂ ತಪ್ಪಾಗಲಾರದು. ನಮ್ಮ ದೇಶದ ಆರ್ಥಿಕತೆಗೂ, ಕೃಷಿ ಕ್ಷೇತ್ರಕ್ಕೂ ನೇರವಾದ ಸಂಬಂಧವಿದೆ. ಈ ಎಲ್ಲ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುವ ಕಾರ್ಯ ಆಗಬೇಕಿದೆ. ಅಂತಹ ಕಾರ್ಯ ನಮ್ಮ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಅಂತಹ ಹೆಮ್ಮೆಯನ್ನು ನಮ್ಮದಾಗಿಸಿದವರು ಸಿದ್ದರಾಮಯ್ಯನವರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೃಷಿಗೆ ನೀಡಿರುವ ಒತ್ತನ್ನು ನೋಡಿದರೆ ಮೇಲಿನ ಮಾತುಗಳು ವಿಧಿತವಾಗುತ್ತವೆ.
ನಮ್ಮ ರಾಜ್ಯದಲ್ಲಿ ಶೇ.70ರಷ್ಟು ಸಾಗುವಳಿ ಪ್ರದೇಶವು ಮಳೆ ಆಶ್ರಿತ ಪ್ರದೇಶವಾಗಿದೆ. ರಾಜ್ಯದ ಶೇ.55 ಆಹಾರಧಾನ್ಯಗಳು ಮತ್ತು ಶೇ.75 ಎಣ್ಣೆಕಾಳುಗಳ ಉತ್ಪಾದನೆಯು ಮಳೆಯಾಶ್ರಿತ ಪ್ರದೇಶದ ಕೊಡುಗೆಯಾಗಿದೆ. ಸ್ವಾಬಾವಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ಸಂರಕ್ಷಣೆಯೊಂದಿಗೆ ಕೃಷಿ ಉತ್ಪಾದಕತೆ ಹಾಗೂ ರೈತರ ಮತ್ತು ಕೃಷಿಕಾರ್ಮಿಕರ ಆದಾಯ ಮಟ್ಟವನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂಬುದನ್ನು ನಮ್ಮ ಸರ್ಕಾರ ಕಂಡುಕೊಂಡಿತು. ಅದರ ಪ್ರತಿಫಲವೇ ‘ಕೃಷಿ ಭಾಗ್ಯ’! ಇದುವರೆಗೆ 70 ಸಾವಿರ ರೈತರು ಇದರ ಪ್ರಯೋಜನ ಪಡೆದಿದ್ದು, 66 ಸಾವಿರ ಕೃಷಿ ಹೊಂಡಗಳು ನಿರ್ಮಾಣಗೊಂಡಿವೆ.
ಕೃಷಿಕರ ಕಲ್ಯಾಣಕ್ಕೆ ಸಿದ್ದರಾಮಯ್ಯನವರ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಬೆಳೆದ ಬೆಳೆಗೆ ಸರಿಯಾದ-ಯೋಗ್ಯವಾದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಹತಾಶೆಯ ನುಡಿಯಾಗಿತ್ತು. ಆದರೆ ಸಿದ್ದರಾಮಯ್ಯನವರು ಕೃಷಿ ಬೆಲೆ ಆಯೋಗವನ್ನು ರಚಿಸುವ ಮೂಲಕ ರೈತರ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ರೈತರಿಗೆ ಸಕಾಲದಲ್ಲಿ ಕೃಷಿ ಸಾಲ ದೊರೆಯುವಂತಾಗಿದೆ. ಸಾಲಮನ್ನಾ ಕಾರ್ಯಕ್ರಮವು ಕೃಷಿಕರ ಭಾರ ಕಡಿಮೆ ಮಾಡಿದೆ. ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳಡಿ ಪ್ರತಿ ವರ್ಷ 7ರಿಂದ 8 ಲಕ್ಷ ರೈತರ ವಿಮಾ ಕಂತುಗಳನ್ನು ಸರ್ಕಾರ ಪಾವತಿಸುತ್ತಿದೆ.
ಇಷ್ಟೇ ಅಲ್ಲದೇ ಸಾವಯುವ ಭಾಗ್ಯ ಯೋಜನೆ, ಭೂಚೇತನ ಪ್ಲಸ್, ಕೃಷಿ ಯಾಂತ್ರೀಕರಣ ಹಾಗೂ ಲಘು ನೀರಾವರಿ ಯೋಜನೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಮೊದಲಾದ ರೈತಪರ ಯೋಜನೆಗಳು ಅನ್ನದಾತನಿಗೆ ಇನ್ನಷ್ಟು ಬಲ ನೀಡಿವೆ. ‘ರೈತನೇ ನಾಡಿನ ಬೆನ್ನೆಲುಬು’ ಎನ್ನುವ ಮಾತನ್ನು ನಮ್ಮ ಸರ್ಕಾರ ಗೌರವಿಸುತ್ತದೆ ಹಾಗೂ ರೈತನಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದೆ. ಇನ್ನು ರೈತರ ನೋವು-ಸಂಕಟಗಳನ್ನು ಆಲಿಸಲು ಟೋಲ್ ಫ್ರೀ ನಂ. 1800 425 3553 ತೆರೆಯಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರ ರೈತರ ಜೊತೆ ಸದಾ ಕಾಲವಿದ್ದು ಅವರ ನೋವು-ನಲಿವುಗಳಲ್ಲಿ ಭಾಗಿಯಾಗುತ್ತಿದೆ.
ಕೃಷಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ತೆಗೆದುಕೊಳ್ಳುತ್ತಿರುವ ಕ್ರಮಗಳು ಕ್ರಾಂತಿಕಾರಕವಾದವುಗಳು. ನಮ್ಮ ಸರ್ಕಾರ ರೈತಪರ ಸರ್ಕಾರ ಎಂದು ಹೇಳಿಕೊಳ್ಳಲು ನಾವು ಹೆಮ್ಮೆ ಪಡುವಂತೆ ಮಾಡಿದ್ದಾರೆ ಮಾನ್ಯ ಮುಖ್ಯಮಂತ್ರಿಗಳು.