ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹೆಸರು ಮಾಡುತ್ತಲೇ ಇದೆ. ಆಡಳಿತದಿಂದ ಹಿಡಿದು ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸುವವರೆಗೆ ಎಲ್ಲದರಲ್ಲೂ ಸಹ ಕರ್ನಾಟಕ ಅಗ್ರಪಂಕ್ತಿಯಲ್ಲಿ ನಿಲ್ಲುವಂತಹುದು ಎಂಬುದನ್ನು ಸಿದ್ದರಾಮಯ್ಯನವರು ಈಗಾಗಲೇ ದೇಶದ ಜನತೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ವಿರೋಧ ಪಕ್ಷಗಳ ಕಟುಟೀಕೆಗೆ ತಮ್ಮ ಕೆಲಸದ ಮೂಲಕವೇ ಉತ್ತರ ಕೊಟ್ಟು ತೆಪ್ಪಗಿರುವಂತೆ ಮಾಡಿರುವುದು ಸಿದ್ದರಾಮಯ್ಯನವರ ಕಾರ್ಯವೈಖರಿಯನ್ನು ಬಿಂಬಿಸುತ್ತದೆ. ಇದೀಗ ಕರ್ನಾಟಕದ ಕೀರ್ತಿ ಪತಾಕೆ ಇನ್ನೊಮ್ಮೆ ಬಾನೆತ್ತರದಲ್ಲಿ ಹಾರಾಡಿದೆ. ‘ಮೇಕ್ ಇನ್ ಇಂಡಿಯಾ’ದಲ್ಲಿ ದೇಶದಲ್ಲಿಯೇ 3ನೇ ಸ್ಥಾನವನ್ನು ನಮ್ಮ ರಾಜ್ಯ ಗಳಿಸಿದೆ!
ಎನ್ಡಿಎ ಸರ್ಕಾರದ ಕನಸಿನ ಕೂಸು ‘ಮೇಕ್ ಇನ್ ಇಂಡಿಯಾ’. ಭಾರತವನ್ನು ಸದೃಢವಾಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾದದ್ದು. ‘ಮೇಕ್ ಇನ್ ಇಂಡಿಯಾ’ದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ‘ಇಂಡಸ್ಟ್ರಿಯಲ್ ಎಂಟರ್ಪ್ರನೌರ್ಶಿಪ್ ಮೆಮೊರಂಡಮ್ಸ್’ (ಐಇಎಂ) ಅನ್ನು ಸರಿಯಾಗಿ ಅರಿತ ರಾಜ್ಯ ನಮ್ಮದು. ಇದೀಗ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ಅತಿಹೆಚ್ಚು ಕೊಡುಗೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ಮೊದಲೆರಡು ಸ್ಥಾನಗಳಲ್ಲಿದ್ದರೆ, ನಮ್ಮ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಕರ್ಮಭೂಮಿಯಾಗಿದ್ದ ಗುಜರಾತ್ ಕರ್ನಾಟಕಕ್ಕಿಂತ ಕೆಳಗಿದೆ. ಅಂದರೆ, ಗುಜರಾತ್ಗೆ ಹೋಲಿಸಿದರೆ ಕರ್ನಾಟಕವು ‘ಮೇಕ್ ಇನ್ ಇಂಡಿಯಾ’ಕ್ಕೆ ಅತಿಹೆಚ್ಚಿನ ಕೊಡುಗೆ ನೀಡಿದೆ. ‘ಮೇಕ್ ಇನ್ ಇಂಡಿಯಾ’ಕ್ಕೆ ಕೊಡುಗೆ ನೀಡುವುದು ಎಂದರೇನು? ಮುಂದೆ ನೋಡೋಣ.
ಈ ಮೊದಲು ಹೇಳಿದಂತೆ ‘ಮೇಕ್ ಇನ್ ಇಂಡಿಯಾ’ದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಐಇಎಂ ಅನ್ನು ಅರಿತಿರಬೇಕು. ಅಂಕಿ ಅಂಶಗಳನ್ನು ಗಮನಿಸಿದಾಗ ಖಾಸಗಿ ಕಂಪೆನಿಗಳ ಮೂಲಕ ಕರ್ನಾಟಕ, ಜನವರಿ 1, 2015ರಿಂದ ಮಾರ್ಚ್ 31, 2016ರ ಅವಧಿಯಲ್ಲಿ ಒಟ್ಟೂ 15,581 ಕೋಟಿ ಹಣವನ್ನು ಸೆಳೆದಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ 53,438 ಕೋಟಿ ರೂ. ಹಾಗೂ ಕರ್ನಾಟಕದ ನಂತರದ ಸ್ಥಾನದಲ್ಲಿರುವ ಗುಜರಾತ್ ಕೇವಲ ರೂ.8,474 ಕೋಟಿ ಸೆಳೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಕರ್ನಾಟಕವು ‘ಮೇಕ್ ಇನ್ ಇಂಡಿಯಾ’ಕ್ಕೆ ಹೆಚ್ಚಿನ ಕೊಡುಗೆಯನ್ನೇ ನೀಡಿದೆ ಎಂದರೆ ತಪ್ಪಾಗಲಾರದು.
ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿಯ ಪಥದಲ್ಲಿ ಒಯ್ಯುತ್ತಿದೆ. ಕರ್ನಾಟಕವು ಪ್ರಕಾಶಿಸುತ್ತಿದೆ. ಖಾಸಗಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಸಿದ್ದರಾಮಯ್ಯನವರ ಸಮರ್ಥ ಆಡಳಿತ ಕರ್ನಾಕವನ್ನು ಮೇಲಿನ ಹಂತಕ್ಕೇರಿಸುತ್ತಿದೆ.