‘ಅಹಿಂದ’ ವರ್ಗಗಳ ನಾಯಕ ಎಂದು ಕರೆಯಲ್ಪಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಾವತ್ತೂ ಇತರ ವರ್ಗದವರನ್ನು ಕಡೆಗಣಿಸಿದವರಲ್ಲ. ಸಮಾಜದ ಪ್ರತಿಯೊಂದು ಸ್ಥರದವರನ್ನೂ ಏಕರೀತಿಯಲ್ಲಿ ನೋಡುವ ಅವರು, ಶೋಷಿತರ ಪರ ಧ್ವನಿಯಾಗಿ ನಿಂತವರು. ಇಂತಹ ಉದಾತ್ತ ಚಿಂತನೆ ಹಾಗೂ ಸಾಮಾಜಿಕ ನ್ಯಾಯದ ತುಡಿತಕ್ಕೆ ಸ್ಪಷ್ಟ ರೂಪು ಕೊಟ್ಟಿದ್ದು ಡಾ.ರಾಮಮನೋಹರ ಲೋಹಿಯಾ ಚಿಂತನೆ. ಸಾಮಾಜಿಕವಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಿದ್ದರಾಮಯ್ಯನವರು ವಕೀಲಿ ವೃತ್ತಿ ತ್ಯಜಿಸಿ ರಾಜಕಾರಣಕ್ಕಿಳಿದರು.
ವಕೀಲಿ ವೃತ್ತಿ ಬಿಟ್ಟ ಬಳಿಕ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಒಂದೊಂದೇ ಹೆಜ್ಜೆಯನ್ನಿಡುತ್ತ ಜನರ ವಿಶ್ವಾಸ ಗಳಿಸಿದರು. 1978ರಲ್ಲಿ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗುವ ಮೂಲಕ ಅಧಿಕೃತವಾಗಿ ರಾಜಕಾರಣಿ ಎನಿಸಿಕೊಂಡರು. ಇದೇ ವೇಳೆ ರೈತ ಚಳುವಳಿಯತ್ತ ಆಕರ್ಷಿತರಾದ ಅವರು ಪ್ರೊ ಎಂ.ಡಿ ನಂಜುಂಡ ಸ್ವಾಮಿಯವರ ಒಡನಾಡಿಗಳಾದರು. ಸಿದ್ದರಾಮಯ್ಯನವರು ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದದ್ದು 1980ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ. ಆದರೆ ಅಲ್ಲಿ ಗೆಲುವು ಕಾಣಲಾಗಲಿಲ್ಲ. ಅದನ್ನೇ ತಮ್ಮ ಯಶಸ್ಸಿನ ಮೆಟ್ಟಿಲು ಮಾಡಿಕೊಂಡ ಅವರು 1983ರ ವಿಧಾನಸಭಾ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಇಂದಿರಾ ಕಾಂಗ್ರೆಸ್ನ ಡಿ ಜಯದೇವರಾಜ ಅರಸು ಅವರನ್ನು ಸೋಲಿಸಿ ಗೆಲುವಿನ ನಗೆ ನಕ್ಕರು.
ಆ ಸಮಯದಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರವಿತ್ತು. ಸರ್ಕಾರಕ್ಕೆ ಬೆಂಬಲ ನೀಡಿದ್ದ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದರು. ನಂತರದಲ್ಲಿ ರೇಷ್ಮೆ ಸಚಿವ ಸ್ಥಾನವನ್ನೂ ನಿಭಾಯಿಸಿದರು. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಆಗ ಅವರು ನಿರ್ವಹಿಸಿದ್ದು ಪಶು ಸಂಗೋಪನೆ, ರೇಷ್ಮೆ ಇಲಾಖೆಯನ್ನು. ನಂತರ ಎಸ್.ಆರ್ ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಜವಾಬ್ದಾರಿ ನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಯಿತು. ಆಗ ಸಿದ್ದರಾಮಯ್ಯನವರು ಜನತಾದಳದೊಂದಿಗೆ ಗುರುತಿಸಿಕೊಂಡರು.
ಜನತಾದಳದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲನ್ನು ಕಂಡರು. ನಂತರ 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋಲು ಕಂಡರು. ಇದು ಸಿದ್ದರಾಮಯ್ಯನವರನ್ನು ಎಳ್ಳಷ್ಟೂ ಧೃತಿಗೆಡಿಸದೇ ಇರುವುದು ಅವರ ಮುಂದಿನ ನಡೆಯಲ್ಲಿ ಕಂಡುಬರುತ್ತದೆ. 1994ರಲ್ಲಿ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರು ಗೆಲುವಿನ ನಗೆ ಬೀರಿದರು. ಎಚ್.ಡಿ ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾದರು. ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಂಗಡಪತ್ರ ಮಂಡಿಸಲು ಸಿದ್ಧತೆ ನಡೆಸಿದ್ದಾಗ ವ್ಯಂಗ್ಯ ಮಾಡಿದವರೇ ಹೆಚ್ಚು. ಆದರೆ ಅತಿಹೆಚ್ಚು ಬಾರಿ ಮುಂಗಡ ಪತ್ರ ಮಂಡಿಸಿದ ದಾಖಲೆ ಇದೀಗ ಸಿದ್ದರಾಮಯ್ಯನವರ ಹೆಸರಿನಲ್ಲಿದೆ! ಆ ನಂತರ 1996ರಲ್ಲಿ ಜೆ.ಎಚ್ ಪಟೇಲ್ರ ಮಂತ್ರಿಮಂಡಲದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಆ ನಂತರ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲೂ ಉಪಮುಖ್ಯಮಂತ್ರಿಯಾಗಿದ್ದರು.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯನವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ 2006ರಲ್ಲಿ ಜೆಡಿಎಸ್ನಿಂದ ಹೊರನಡೆದರು. ಆ ನಂತರ ಅವರ ರಾಜಕೀಯ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಜೆಡಿಎಸ್ನಿಂದ ಹೊರಬಿದ್ದ ಸಿದ್ದರಾಮಯ್ಯ 2006 ಜುಲೈ 22ರಂದು ಸೋನಿಯಾಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಆ ನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ರೋಚಕ ಗೆಲುವು ಸಾಧಿಸಿ ಕಾಂಗ್ರೆಸ್ನಲ್ಲಿ ತಮ್ಮ ಗೆಲುವಿನ ನಡೆ ಪ್ರಾರಂಭಿಸಿದರು. ಆ ನಂತರ ವರುಣಾ ಕ್ಷೇತ್ರದಿಂದ ಗೆದ್ದು ಪ್ರತಿಪಕ್ಷದ ನಾಯಕ ಸ್ಥಾನ ಅಲಂಕರಿಸಿದರು. ಬಳ್ಳಾರಿಯ ಗಣಿಧಣಿಗಳ ವಿರುದ್ಧ ಸಿಡಿದೆದ್ದು ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ಮಾಡಿ ಸಂಚಲನ ಮೂಡಿಸಿದರು.
ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ಪ್ರತಿಯೊಂದು ರಾಜಕೀಯ ನಡೆಯೂ ರೋಚಕವಾದದ್ದು. ಹಲವಾರು ಅಡೆತಡೆಗಳನ್ನು ದಾಟಿ ಬಂದಿರುವ ಅವರು ಪ್ರತಿಯೊಂದು ತೊಂದರೆಯನ್ನೂ ಮೆಟ್ಟಿ ನಿಂತು ಗೆಲುವಿನ ಮೆಟ್ಟಿಲಾಗಿಸಿಕೊಂಡವರು. ಎಷ್ಟೇ ಮೇಲೇರಿದ್ದರೂ ಸಹ ಸ್ವಲ್ಪವೂ ಅಹಮಿಕೆ ತೋರದೇ, ಜನರ ಕಷ್ಟ-ಕಾರ್ಪಣ್ಯಗಳಿಗೆ ಕಿವಿಯಾಗುತ್ತಿರುವುದು ಸಿದ್ದರಾಮಯ್ಯನವರ ಹೆಗ್ಗಳಿಕೆಯೇ ಸರಿ.
Siddu gathu India ge gothu
LikeLike