ಕುದುರೆಯ ಒದೆತಕ್ಕೆ ಕಂಗಾಲಾದ ಬಿಜೆಪಿ

horse

ಮೋದಿ ಎಂಬ ಉತ್ಸವಮೂರ್ತಿಯನ್ನಿಟ್ಟುಕೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ, ‘ಅಚ್ಛೆ ದಿನ್ ಅಚ್ಛೆ ದಿನ್’ ಎಂದು ದೇಶದ ಜನಸಾಮಾನ್ಯರಿಗೆ ಉಂಡೆನಾಮ ತಿಕ್ಕಿದ್ದು ಗುಟ್ಟಾಗೇನೂ ಉಳಿದಿಲ್ಲ. ತಾವು ಉಂಡೆನಾಮ ತಿಕ್ಕಿಸಿಕೊಂಡಿದ್ದೇವೆ ಎಂದು ಜನರಿಗೆ ಅರಿವಾಗುವುದರೊಳಗೆ ಎಲ್ಲೆಡೆ ತನ್ನ ಹಿಡಿತ ಸಾಧಿಸಬೇಕು ಎಂದು ಹೊರಟಿದ್ದ ಬಿಜೆಪಿಗೆ, ಒಂದರ ಹಿಂದೆ ಒಂದರಂತೆ ಮುಖಭಂಗ ಎದುರಿಸುವ ಸನ್ನಿವೇಶ ಎದುರಾಗಿದೆ. ಅದಷ್ಟೇ ಅಲ್ಲದೆ, ‘ಮಾಡೋದೆಲ್ಲ ಅನಾಚಾರ, ಮನೆಮುಂದೆ ಬೃಂದಾವನ’ ಎನ್ನುವ ಮಾತಿಗೆ ಪ್ರತಿರೂಪದಂತೆ ಬಿಜೆಪಿ ಕಂಡುಬರುತ್ತಿದೆ, ಅದು ಸತ್ಯವೂ ಹೌದು.

   ವೇದ-ಪುರಾಣ, ಸಂಸ್ಕøತಿ, ಸಂಸ್ಕಾರ, ದಯೆ, ಕರುಣೆ ಎಂದೆಲ್ಲ ಜಪಿಸುತ್ತ ಜನರ ಭಾವನೆಗಳ ಗಂಟಲುಕಟ್ಟಿ ಹೇಗೆಲ್ಲ ಬೇಳೆ ಬೇಯಿಸಿಕೊಳ್ಳಬೇಕೋ ಅದೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದ, ಬರುತ್ತಿರುವ ಬಿಜೆಪಿ, ‘ಬಾಯಲ್ಲಿ ಹೇಳುವುದು ಒಂದು, ಮಾಡುವುದು ಮತ್ತೊಂದು’ ಎನ್ನುವುದನ್ನು ಉತ್ತರಾಖಂಡದ ವಿಷಯದಲ್ಲಿ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಅಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನು ಮತ್ತು ಸ್ವಲ್ಪ ದಿನಗಳ ಮುಂಚೆ ನಡೆದ ಶಕ್ತಿಮಾನ್ ಎಂಬ ಕುದುರೆಯ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಮೇಲಿನ ಮಾತು ವಿಧಿತವಾಗುತ್ತದೆ.

   ಉತ್ತರಾಖಂಡದಲ್ಲಿ ಮಾರ್ಚ್ 14ರಂದು ಬಿಜೆಪಿ ಹಿಂಸಾತ್ಮಕ ಸ್ವರೂಪದ ಪ್ರತಿಭಟನೆ ನಡೆಸಿತು. ‘ಭ್ರಷ್ಟಾಚಾರದ ವಿರುದ್ಧ’ ಎನ್ನುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಕೆಲಸಕ್ಕೆ ಅಂದು ಬಿಜೆಪಿ ಮುಂದಾಗಿತ್ತು. ಅದರ ನೇತೃತ್ವ ವಹಿಸಿದ್ದ ವ್ಯಕ್ತಿ ಬಿಜೆಪಿ ಶಾಸಕ ಗಣೇಶ್ ಜೋಶಿ. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಯನ್ನು ನಿಯಂತ್ರಿಸಲು ತೆರಳಿದ್ದ ಪೊಲೀಸ್ ದಳದಲ್ಲಿ ಸಬ್ ಇನ್ಸ್‍ಪೆಕ್ಟರ್ ದರ್ಜೆಯ ‘ಶಕ್ತಿಮಾನ್’ ಹೆಸರಿನ ಕುದುರೆಯೂ ಇತ್ತು. ಬಿಜೆಪಿ ಶಾಸಕ ಗಣೇಶ್ ಜೋಶಿ ನೇತೃತ್ವದ ಗುಂಪು ತನ್ನ ವಿಕೃತ ಮನಸ್ಸಿನ ಪರಿಚಯ ಮಾಡಿಕೊಟ್ಟಿತು. ಏನೂ ಅರಿಯದ ಶಕ್ತಿಮಾನ್ ಕುದುರೆಯ ಕಾಲಿಗೆ ಲಾಠಿಯಲ್ಲಿ ಹೊಡೆದು ಹಿಂಬದಿಯ ಕಾಲನ್ನೇ ಮುರಿದು ಹಾಕಿತು. ಮಾನವೀಯತೆಯಿಲ್ಲದ, ಕ್ರೂರ ಜನರ ವಿಕೃತ ದಾಳಿಗೆ ಒಳಗಾಗಿದ್ದ ಶಕ್ತಿಮಾನ್, ಏ.20ರಂದು ಕೊನೆಯುಸಿರೆಳೆದಿದೆ. ವಿಪರ್ಯಾಸವೆಂದರೆ, ಇದುವರೆಗೂ ಗಣೇಶ್ ಜೋಶಿಯ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗಿಲ್ಲ!

   ಭಾರತಕ್ಕಿಂತಲೂ ಸಣ್ಣ ರಾಷ್ಟ್ರಗಳಾದ ನಾರ್ವೆ-ಫಿನ್‍ಲ್ಯಾಂಡ್‍ನಂತಹ ದೇಶಗಳಲ್ಲಿ ಪ್ರಾಣಿ ಹಿಂಸೆಗೆ ಕಾರಣನಾದ ವ್ಯಕ್ತಿ ಸಾರ್ವಜನಿಕ ಸೇವೆಯಲ್ಲಿ ಮುಂದುವರೆಯುವಂತಿಲ್ಲ. ಆದರೆ ಸಬ್‍ಇನ್‍ಸ್ಪೆಕ್ಟರ್ ದರ್ಜೆಯ ಕುದುರೆಯನ್ನು ಹೊಡೆದುರುಳಿಸಿದ ಬಿಜೆಪಿಯ ಗಣೇಶ್ ಜೋಶಿ ಇನ್ನೂ ಶಾಸಕನಾಗಿ ಮೆರೆಯುತ್ತಿದ್ದಾನೆ. ಬಿಜೆಪಿಯವರೇ ಆದ ಕೇಂದ್ರ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಮನೇಕಾ ಗಾಂಧಿ, “ಶಕ್ತಿಮಾನ್ ಸಾವಿಗೆ ಕಾರಣರಾದವರನ್ನು ಶಿಕ್ಷಿಸಬೇಕು” ಎಂದು ಹೇಳುತ್ತಿದ್ದರೂ, ಕೇಂದ್ರ ಸರ್ಕಾರ ಜಾಣ ಕಿವುಡು ಪ್ರದರ್ಶಿಸುತ್ತಿದೆ. ಕೇಂದ್ರವೇಕೆ? ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿದರೆ ಬಿಜೆಪಿಯ ರಾಜಕೀಯ ದುರ್ನಡೆಯ ಬಗ್ಗೆ ಅರಿವಾಗುತ್ತದೆ.

   ಉತ್ತರಾಖಂಡದಲ್ಲಿ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆಯಷ್ಟು ತಿಂಗಳುಗಳು ಬಾಕಿ ಉಳಿದಿವೆ ಎನ್ನುವ ಸಂದರ್ಭದಲ್ಲೇ ಅಧಿಕಾರದ ದಾಹ ಬಿಜೆಪಿಯನ್ನು ಕಾಡತೊಡಗಿತು. ಅದರ ಪರಿಣಾಮವೇ ರಾಷ್ಟ್ರಪತಿ ಆಡಳಿತವೆಂಬ ಪೂರ್ವನಿರ್ಧಾರಿತ ನಾಟಕ. ಕೇಂದ್ರ ಅಂದುಕೊಂಡಂತೆ ರಾಷ್ಟ್ರಪತಿ ಆಡಳಿತವನ್ನೂ ತಂದಿತು. ಆದರೆ ಯಾವಾಗ ಉತ್ತರಾಖಂಡದ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಝಾಡಿಸಿತೋ, ಆಗ ಬಿಜೆಪಿಯ ಹಾರಾಟಕ್ಕೊಮ್ಮೆ ತಡೆಬಿತ್ತು. ಈ ನಡುವೆ ರಾಜಕೀಯ ಕಲಸುಮೇಲೋಗರದಲ್ಲಿ ಗಣೇಶ್ ಜೋಶಿಯನ್ನು ರಕ್ಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಇದೀಗ ಒಂದೊಮ್ಮೆ ಏ.29ರಂದು ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತು ಮಾಡಿದರೆ ಶಕ್ತಿಮಾನ್ ಎದ್ದು ಬಂದು ಗಣೇಶ್ ಜೋಶಿಯ ಎದೆಗೆ ಒದೆಯಲಿದ್ದಾನೆ. ಪ್ರಜಾತಂತ್ರ ವ್ಯವಸ್ಥೆಯ ಕಗ್ಗೊಲೆಗೆ ಮುಂದಾಗಿರುವ ಬಿಜೆಪಿಗೆ ಹೈಕೋರ್ಟ್ ಝಾಡಿಸಿರುವ ಬೆನ್ನಲ್ಲೇ ಶಕ್ತಿಮಾನ್ ಪ್ರಕರಣ ದೊಡ್ಡ ಆಘಾತ ನೀಡಲಿದೆ.

   ಬಿಜೆಪಿಗೆ ಇದನ್ನು ಪಾಠವಾಗಿ ಪರಿಣಮಿಸಿದರೆ ಒಳ್ಳೆಯದು. ಲಗಾಮಿಲ್ಲದ ಕುದುರೆಯಂತೆ ವರ್ತಿಸಿದರೆ ‘ಕುದುರೆ’ಯೇ ಎದ್ದು ಒದೆಯುವ ಸಾಧ್ಯತೆ ಇದೆ ಎಂದು ಉತ್ತರಾಖಾಂಡದಲ್ಲಿ ಅನುಭವಕ್ಕೆ ಬಂದಿದೆ. ಕಮಲ ಕೆಸರಿನಲ್ಲೇ ಬಿದ್ದು ಒದ್ದಾಡುವ ಬದಲು, ಅರಳಿ ನಿಲ್ಲುವ ಸಾಧ್ಯತೆಯತ್ತಲೂ ಗಮನ ಹರಿಸಬೇಕಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s