“ಸಂವಿಧಾನವೊಂದು ತುಂಬ ಚೆನ್ನಾಗಿರಬೇಕು. ಆದರೆ ಅದಕ್ಕೆ ಕಾರ್ಯರೂಪ ಕೊಡುವ ಜನರು ಕೆಟ್ಟವರಾದಲ್ಲಿ ಸಂವಿಧಾನವೂ ಕೆಟ್ಟದ್ದೇ ಆಗುವುದು. ತದ್ವಿರುದ್ಧವಾಗಿ ಒಂದು ಕೆಟ್ಟ ಸಂವಿಧಾನವೂ ಸಹ ಉತ್ತಮರ ಕೈಗಳಲ್ಲಿ ಜನಹಿತಕಾರಿಯೇ ಆಗಬಹುದು.”
ಹೀಗೆ ವಾಸ್ತವಿಕತೆಗೆ ಒತ್ತು ಕೊಟ್ಟು ಮಾತನಾಡಿದವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್. ಅವರ ವಿಚಾರಧಾರೆಗಳು, ಯೋಚನಾಲಹರಿಗಳು, ಬರವಣಿಗೆಗಳು, ಅಧ್ಯಯನಗಳು ಇಂದಿಗೂ ಪ್ರಸ್ತುತವಾದದ್ದು. ಅಂಬೇಡ್ಕರ್ ಅವರ ಪ್ರತಿಯೊಂದು ಮಾತಿನ ಹಿಂದೆ ಅಪಾರವಾದ ಅನುಭವವಿದೆ, ನೋವು-ನುರಿಗಳಿವೆ, ಸ್ವತಃ ಅನುಭವಿಸಿದ ಅವಮಾನಗಳಿವೆ, ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಗಳ ಕುರಿತ ಚಿಂತನೆಗಳಿವೆ.
ಜಾತಿ ವ್ಯವಸ್ಥೆಯ ಕರಾಳತೆಯನ್ನು ಅಂಬೇಡ್ಕರ್ರವರು ತಮ್ಮ ಜೀವನದಲ್ಲಿ ಅನುಭವಿಸಿದ್ದಾರೆ. ಶೋಷಿತ ವರ್ಗಗಳ ನೋವನ್ನು ಅವರಿಗಿಂತ ಹೆಚ್ಚಾಗಿ ಅರಿತವರು ಇನ್ನೊಬ್ಬರಿರಲಾರರು. ಧರ್ಮ ಎಂದರೆ ಸಮಾನತೆ, ಪ್ರೀತಿ ಮತ್ತು ಕರುಣೆಗಳನ್ನು ಆಧಾರ ಸ್ಥಂಬಗಳನ್ನಾಗಿಸಿಕೊಂಡ ವ್ಯವಸ್ಥೆ ಎನ್ನುವ ಉದಾತ್ತ ಯೋಚನೆಯನ್ನು ಹರಿಯಬಿಟ್ಟವರು ಅವರು. ಅಸ್ಪ್ರಶ್ಯತೆಯೆಂಬ ಮೌಢ್ಯ ಅಂಬೇಡ್ಕರ್ ಅವರನ್ನೂ ಕಾಡದಿರಲಿಲ್ಲ. ಈ ಎಲ್ಲಾ ಹಿನ್ನೆಯಲ್ಲಿನ ನಡೆಗಳು ಅಂಬೇಡ್ಕರ್ ಅವರನ್ನು ಮಹಾಮಾನವತಾವಾದಿಯನ್ನಾಗಿಸಿತು. ಇಂದು ಏ.14,2016 ಬಿ.ಆರ್ ಅಂಬೇಡ್ಕರ್ ಅವರ 125ನೇ ಜಯಂತ್ಯೋತ್ಸವದ ಸಂಭ್ರಮದ ದಿನ. ವಿಶ್ವಸಂಸ್ಥೆಯಲ್ಲಿಯೂ ಸಹ ‘ಅಂಬೇಡ್ಕರ್ ಜಯಂತಿ’ಯನ್ನು ಆಚರಿಸುತ್ತಿರುವುದು ಅಂಬೇಡ್ಕರ್ ಅವರ ವಿಚಾರಧಾರೆ ಜಾಗತಿಕ ಮಟ್ಟದಲ್ಲಿ ಮೂಡಿಸಿರುವ ಛಾಪಿಗೆ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಶೋಷಿತರ-ಅಸಹಾಕರ ದನಿಯಾಗಿ ನಿಂತಿದೆ. ಇದನ್ನು ಮಾತಿಗಿಂತ ಹೆಚ್ಚಾಗಿ ಕೃತಿಯಲ್ಲಿ ಮಾಡಿ ತೋರಿಸುತ್ತಿರುವುದು ಸರ್ಕಾರದ ಬದ್ಧತೆಯನ್ನು ತೋರಿಸುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಅಂಬೇಡ್ಕರ್ ಅವರ ಕನಸನ್ನು ನನಸಾಗಿಸುವತ್ತ ಪರಿಣಾಮಕಾರಿ ಹೆಜ್ಜೆಯನ್ನಿಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸೂರಿಲ್ಲದ ಪರಿಶಿಷ್ಟ ಜಾತಿ/ಪಂಗಡದವರಿಗೆ ‘ಅಂಬೇಡ್ಕರ್ ನಿವಾಸ್’ ಯೋಜನೆಯಡಿ ಮನೆಗಳನ್ನು ನಿರ್ಮಿಸಲು 2015-16ರಲ್ಲಿ 450 ಕೋಟಿ ಹಾಗೂ 2016-17ರಲ್ಲಿ 822 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವಾರ್ಪಣೆ ಸಲ್ಲಿಸಿದ್ದಾರೆ. ವರ್ಷದ ಉದ್ದಕ್ಕೂ ಅಂಬೇಡ್ಕರ್ ವಿಚಾರಧಾರೆಗಳನ್ನು ಮನನ ಮಾಡಿಕೊಡುವ ವಿಚಾರ ಸಂಕಿರಣ ಮತ್ತು ಇತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಸಮ ಸಮಾಜ ಕಟ್ಟುವತ್ತ ದೃಷ್ಟಿ ನೆಟ್ಟಿದೆ ನಮ್ಮ ಸರ್ಕಾರ.
2011ನೇ ಸಾಲಿನ ಜನಗಣತಿಯ ಆಧಾರದ ಮೇಲೆ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿಗೆ ಶೇ.17.15 ಹಾಗೂ ಪರಿಶಿಷ್ಟ ಪಂಗಡದ ಶೇ.6.95 ಸೇರಿದಂತೆ ಒಟ್ಟೂ ಶೇ.24.10ರಷ್ಟು ಯೋಜನಾ ವೆಚ್ಚದ ಪಾಲು ಈ ಜನಾಂಗಗಳಿಗೆ ಮೀಸಲಿಡಲಾಗಿದೆ. ಈ ಮೂಲಕ ಯೋಜನಾ ವೆಚ್ಚವನ್ನು ಜನಸಂಖ್ಯೆಯ ಅನುಗುಣವಾಗಿ ನಿಗದಿಪಡಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ! ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟು ಉಪಯೋಜನೆಗಳ ವಿಧೇಯಕ 2013’ ಜಾರಿಗೆ ತಂದು ಶೋಷಿತ ವರ್ಗಗಳ ಚರಿತ್ರೆಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಸಮಾಜ ಕಲ್ಯಾಣ ಇಲಾಖೆ 2343 ಆಶ್ರಮ/ವಸತಿ ಶಾಲೆ-ವಿದ್ಯಾರ್ಥಿನಿಲಯಗಳನ್ನು ತೆರೆದಿದ್ದು 2,47,967 ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಕರ್ಯ ಕಲ್ಪಿಸಿದೆ. 2015-16ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ 12,84,007 ವಿದ್ಯಾರ್ಥಿಗಳಿಗೆ 441.54 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ.
ಇವಿಷ್ಟೇ ಅಲ್ಲದೆ, ಅಂಬೇಡ್ಕರ್ ಕಂಡ ಹಲವು ಕನಸುಗಳನ್ನು ನನಸು ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ ನಮ್ಮ ಸರ್ಕಾರ. ಶೋಷಿತರ-ನಿರ್ಲಕ್ಷಿತರ ಪರವಾಗಿರುವ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ, ಸಮಾನತೆಗಾಗಿ ಕಂಕಣ ಬದ್ಧವಾಗಿದೆ.