ಎಸಿಬಿ ಬೇಕು, ಯಾಕೆಂದರೆ…

 

201506292230314350_Karnataka-Lokayukta-orders-halt-to-graft-probe-against-its_SECVPF

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕರ್ನಾಟಕ ರಾಜ್ಯದಲ್ಲಿ, ಅದರಲ್ಲೂ ರಾಜ್ಯ ‘ರಾಜಕಾರಣ’ದಲ್ಲಿ ದೊಡ್ಡ ಕೋಲಾಹಲವನ್ನೇ ಉಂಟುಮಾಡಿಬಿಟ್ಟಿದೆ. ಪ್ರತಿಪಕ್ಷಗಳು ‘ಎಸಿಬಿ’ಯನ್ನೇ ಅಸ್ತ್ರವನ್ನಾಗಿಸಿಕೊಂಡು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೇಲೆ ಪ್ರಹಾರ ನಡೆಸುತ್ತಿದ್ದಾರೆ. ಜನಪರವಾಗಿ ಯೋಚನೆ-ಕಾರ್ಯ ಮಾಡುವವರು ಎಂತಹ ಆಪಾದನೆಗಳಿಗೆ ಗುರಿಯಾಗಬಹುದು ಎನ್ನುವುದಕ್ಕೆ ಕಾಂಗ್ರೆಸ್ ಉದಾಹರಣೆಯಾಗಿ ನಿಂತಿದೆ. ಅಷ್ಟಕ್ಕೂ ಎಸಿಬಿ ಬೇಕಾ? ಬೇಡವಾ?

   ಅದೆಷ್ಟರ ಮಟ್ಟಿಗೆ ಎಸಿಬಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆಯೆಂದರೆ, ಗಣ್ಯ ವ್ಯಕ್ತಿಗಳೇ ಖುದ್ದಾಗಿ ‘ಎಸಿಬಿಯಿಂದ ಲೋಕಾಯುಕ್ತ ಬಲಹೀನಗೊಳ್ಳಲಿದೆ’ ಎಂಬ ತಪ್ಪುಮಾಹಿತಿಯನ್ನು ಸಾರ್ವಜನಿಕವಾಗಿ ಬಿತ್ತರಿಸುತ್ತಿದ್ದಾರೆ. ವಾಸ್ತವವೇನೆಂದರೆ ಎಸಿಬಿ ಕುರಿತು ಮಾತನಾಡುತ್ತಿರುವ ಹಲವರಿಗೆ ಎಸಿಬಿಯ ಸತ್ಯಾಸತ್ಯತೆಯ ಬಗ್ಗೆ ಅರಿವೇ ಇಲ್ಲ! ಇನ್ನು ಎಸಿಬಿಯನ್ನು ಯಾಕೆ ಸ್ಥಾಪಿಸಲಾಗುತ್ತಿದೆ ಎಂದು ಹೆಚ್ಚಿನವರಿಗೆ ತಿಳಿದೇ ಇಲ್ಲ! ವಿರೋಧಿಸುವುದರಲ್ಲೇ ಕಾಲ ಕಳೆಯುತ್ತಿರುವವರಿಗೆ ಇದನ್ನೆಲ್ಲ ತಿಳಿದುಕೊಳ್ಳುವಷ್ಟು ವ್ಯವಧಾನವೂ ಇಲ್ಲ ಬಿಡಿ.

   ಎಸಿಬಿಯ ಅಗತ್ಯತೆಯ ಬಗ್ಗೆ ತಿಳಿಯುವ ಮೊದಲು ಲೋಕಾಯುಕ್ತದ ಅಧಿಕಾರ, ಲೋಕಾಯುಕ್ತ ಪೊಲೀಸರ ಬಗ್ಗೆ ತಿಳಿದುಕೊಳ್ಳಬೇಕಾದ ಜರೂರತ್ತಿದೆ. ಆಡಳಿತ ಕ್ರಮಗಳಲ್ಲಿ ಬಂದ ಫಿರ್ಯಾದುಗಳ ಬಗ್ಗೆ ವಿಚಾರಣೆ ನಡೆಸುವ ಮೂಲಕ, ಸಾರ್ವಜನಿಕ ಆಡಳಿತ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಲೋಕಾಯುಕ್ತರಿಗೆ ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ನೀಡಲಾಗಿತ್ತೇ ವಿನಃ ಕ್ರಿಮಿನಲ್ ನ್ಯಾಯಾಲಯದ ಅಧಿಕಾರ ಕೊಟ್ಟಿರಲಿಲ್ಲ, ಈಗಲೂ ಇಲ್ಲ. ಕ್ರಿಮಿನಲ್ ಕೇಸ್‍ಗಳ ತನಿಖೆಯ ಅಧಿಕಾರ ಹೊಂದಿರುವವರು ಪೊಲೀಸರು. ಅಂದರೆ, ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸರು ಕ್ರಿಮಿನಲ್ ಕೇಸ್‍ಗಳನ್ನು ನಿರ್ವಹಿಸುತ್ತಿದ್ದರು. ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ನಿಯೋಜನೆಗೊಳ್ಳುವವರು ರಾಜ್ಯ ಪೊಲೀಸ್‍ನವರು. ಇದೇ ಇಲ್ಲಿ ಪ್ರಮುಖವಾಗಿ ಗೊಂದಲಗಳನ್ನು ಉಂಟುಮಾಡುವ ಸಂಗತಿ.

   1998ರಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗದ ಆರ್ಥಿಕ ವ್ಯವಹಾರಗಳನ್ನು ಕರ್ನಾಟಕ ಲೋಕಾಯುಕ್ತದ ನಿಬಂಧಕರಿಗೆ ನಿರ್ವಹಿಸಲು ಅಧಿಕಾರ ನೀಡಲಾಯಿತು. ಸರ್ಕಾರದ ಈ ಕ್ರಮದಿಂದಾಗಿ ಲೋಕಾಯುಕ್ತ ಪೊಲೀಸ್ ವಿಭಾಗವು ಲೋಕಾಯುಕ್ತರ ಸಂಪೂರ್ಣ ಆಡಳಿತಾತ್ಮಕ ಹಾಗೂ ಆರ್ಥಿಕ ನಿಯಂತ್ರಣದಡಿ ಬರುವಂತಾಯಿತು. ಲೋಕಾಯುಕ್ತದ ಪೊಲೀಸ್ ವಿಭಾಗವು ಲೋಕಾಯುಕ್ತಕ್ಕೆ ಸಂಬಂಧಿಸಿರುವಾಗ ಇದರಲ್ಲೇನು ತಪ್ಪು ಎಂಬ ಪ್ರಶ್ನೆ ಹುಟ್ಟಬಹುದು. ಇದಕ್ಕೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ನ ತೀರ್ಪುಗಳನ್ನು ಗಮನಿಸಬೇಕಾಗುತ್ತದೆ.

   ಬಿ.ಎಸ್ ಯಡ್ಡಿಯೂರಪ್ಪ ವಿರುದ್ಧ ಕರ್ನಾಟಕ ರಾಜ್ಯ (2016) ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಹೀಗೆ ತೀರ್ಪು ನೀಡಿದೆ:

“…As noticed above, Police Officers in our state working on deputation in Lokayukta Police Station, their identity is with the State Police not with the Lokayukta.”

   ಇಡೀ ರಾಜ್ಯಕ್ಕೆ ಒಂದೇ ಪೊಲೀಸ್ ವ್ಯವಸ್ಥೆಯಿರಬೇಕು. ಅಂದರೆ ಆ ವ್ಯವಸ್ಥೆಗೆ ಒಬ್ಬ ಮುಖ್ಯಸ್ಥ ಇರುತ್ತಾರೆ. ಮುಖ್ಯಸ್ಥರ ಆದೇಶವನ್ನು ಆ ವ್ಯವಸ್ಥೆಯ ಸಿಬ್ಬಂದಿಗಳು ಪಾಲಿಸಬೇಕಾಗುತ್ತದೆ. ಹಾಗಾದರೆ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿರುವ ನಿಯೋಜಿತ ಪೊಲೀಸ್ ಅಧಿಕಾರಿಗಳ ಪಾಡೇನು? ಯಾಕೆಂದರೆ, ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ತನಿಖೆ ಮಾಡುವ ಪೊಲೀಸ್ ಅಧಿಕಾರಿಗಳ ಮೇಲೆ ಆಡಳಿತಾತ್ಮಕ ಹಾಗೂ ಶಿಇಸ್ತಿನ ಕ್ರಮ ತೆಗೆದುಕೊಳ್ಳುವ ಅಧಿಕಾರವು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಪ್ರಕರಣ 15(1) ಸಹವಾಚನ 14(4)ರಲ್ಲಿ ಲೋಕಾಯುಕ್ತರಿಗೆ ಇದೆ!

   ಇದು ಎಂತಹ ಪರಿಸ್ಥಿತಿಯೆಂದರೆ, ಈ ವ್ಯವಸ್ಥೆಯು ಕರ್ನಾಟಕ ಪೊಲೀಸ್ ಅಧಿನಿಯಮದ ಅಧ್ಯಾಯ-2ರ ಕಲಂ 3ಕ್ಕೆ ತೀರಾ ವ್ಯತಿರಿಕ್ತವಾದುದು. ಲೋಕಾಯುಕ್ತ ಅಧಿಕಾರಿಗಳು ಲೋಕಾಯುಕ್ತ ಅಧಿನಿಯಮದಡಿ ನ್ಯಾಯಿಕ ಅಧಿಕಾರವನ್ನು ಹಾಗೂ ಪೊಲೀಸ್ ಅಧಿಕಾರಿಗಳು ಸಂಬಂಧಿತ ದಂಡನಾ ಶಾಸನಗಳನ್ವಯ ಶಾಸನಬದ್ಧ ವಿಚಾರಣಾಧಿಕಾರವನ್ನು ಹೊಂದಿರುತ್ತಾರೆ. ಹೀಗಿದ್ದಾಗ ನ್ಯಾಯಿಕ ಅಧಿಕಾರಿಗಳಿಗೆ ಅಂದರೆ ಲೋಕಾಯುಕ್ತ ಅಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸುವ ಅಧಿಕಾರ ನೀಡುವುದು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾದದ್ದು.

   ಆದ್ದರಿಂದ ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ಮತ್ತು ಭ್ರಷ್ಟಾಚಾರ ತಡೆ ಅಧಿನಿಯಮ 1988ನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯತೆಯನ್ನು ಕಾಂಗ್ರೆಸ್ ಸರ್ಕಾರ ಮನಗಂಡಿತು. ಆದ್ದರಿಂದ ಕಾಯ್ದೆಗಳ ನಡುವಿನ ತಿಕ್ಕಾಟವಾಗದಂತೆ ಎಸಿಬಿ ರಚನೆಗೆ ಮುಂದಾಗಿದೆ. ಎಸಿಬಿ ಬಂದ ಕೂಡಲೇ ಲೋಕಾಯುಕ್ತ ಬಲಹೀನಗೊಳ್ಳುತ್ತದೆ ಎನ್ನುವ ವಾದದಲ್ಲಿ ಹುರುಳೇ ಇಲ್ಲ. ಲೋಕಾಯುಕ್ತದ ಯಾವ ಅಧಿಕಾರದಲ್ಲೂ ಹಸ್ತಕ್ಷೇಪ ಮಾಡಲಾಗಿಲ್ಲ. ಲೋಕಾಯುಕ್ತಕ್ಕೆ ನೀಡುತ್ತಿರುವ ಸೌಲಭ್ಯಗಳನ್ನೂ ಕಡಿತಗೊಳಿಸಲಾಗಿಲ್ಲ. ಇನ್ನು ಲೋಕಾಯುಕ್ತ ಬಲಹೀನಗೊಳ್ಳುವುದು ಎಲ್ಲಿಯ ಮಾತು?

   ಐ.ಪಿ.ಸಿ ಮತ್ತು ಪಿ.ಸಿ ಕಾಯ್ದೆಗಳಡಿ ಕ್ರಿಮಿನಲ್ ಅಪರಾಧಗಳ ತನಿಖೆ ಮಾಡುವ ಪೊಲೀಸ್ ಏಜೆನ್ಸಿಯನ್ನು ಲೋಕಾಯುಕ್ತದಿಂದ ಬೇರ್ಪಡಿಸುವ ಮೂಲಕ ಲೋಕಾಯುಕ್ತ ಮತ್ತು ಪೊಲೀಸ್ ಏಜೆನ್ಸಿ ನಡುವಿನ ಅಂತರಕ್ಕೆ ನಿರ್ದಿಷ್ಟ ರೂಪು ನೀಡಲು ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ವಯ ಎಸಿಬಿ ರಚನೆಯಾಗಿದೆ.

   ಕೇಂದ್ರ ಸರ್ಕಾರದ ಪ್ರಧಾನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಕೇಂದ್ರೀಯ ತನಿಖಾ ದಳ ‘ಸಿಬಿಐ’ ಯಾರಿಗೆ ತಾನೆ ಗೊತ್ತಿಲ್ಲ. ಯಾವುದೇ ಪ್ರಕರಣವಾದರೂ ‘ಸಿಬಿಐಗೆ ವಹಿಸಿ, ಸಿಬಿಐಗೆ ವಹಿಸಿ’ ಎನ್ನುವ ಕೂಗು ಕೇಳಿಬರುತ್ತಿರುತ್ತದೆ. ಇದೇ ಮಾದರಿಯಲ್ಲಿ ರಾಜ್ಯಕ್ಕೆ ಎಸಿಬಿ ಇರಲಿದೆ. ಸಿಬಿಐ, ಪ್ರಧಾನ ಮಂತ್ರಿಗೆ ವರದಿ ಮಾಡುತ್ತದೆ ಹಾಗೂ ಅವರ ತನಿಖೆಯ ವ್ಯಾಪ್ತಿಯಲ್ಲಿ ಪ್ರಧಾನಿ ಒಳಪಡುವುದಿಲ್ಲ. ಆದರೆ ಎಸಿಬಿ ವಿಚಾರಕ್ಕೆ ಬಂದರೆ ಮುಖ್ಯಮಂತ್ರಿಗಳೂ ಸಹ ಅವರ ಕಾರ್ಯವ್ಯಾಪ್ತಿಗೆ ಒಳಪಡುತ್ತಾರೆ.

ಎಸಿಬಿಯ ವಿಚಾರ ಹೀಗಿರುವಾಗ ಸುಖಾಸುಮ್ಮನೆ ವಿರೋಧಿಸುವವರ ಮನಃಸ್ಥಿತಿಗೆ ಏನನ್ನೋಣ? ಎಸಿಬಿಯನ್ನು ಮುಖ್ಯಮಂತ್ರಿಗಳು ನಿಯಂತ್ರಿಸುತ್ತಾರೆ ಎನ್ನುವ ಬಾಲಿಶ ಮಾತು ಕೇಳಿಬರುತ್ತಿದೆ. ನೆನಪಿರಲಿ, ಲೋಕಾಯುಕ್ತ ಅಧಿಕಾರಿಗಳೂ ಕೂಡ ತನಿಖೆ ನಡೆಸಿ, ವರದಿ ಸಿದ್ಧಪಡಿಸಿ ಸಂಬಂಧಿಸಿದ ಇಲಾಖೆಗೆ ನೀಡುತ್ತಿದ್ದರು. ಮುಂದಿನ ಕ್ರಮ ಜರುಗಿಸುವ ಕಾರ್ಯ ಸಂಬಂಧಿಸಿದ ಇಲಾಖೆಯದ್ದಾಗಿತ್ತು. ಹಾಗಾದರೆ ಲೋಕಾಯುಕ್ತ ಯಾರದ್ದಾದರೂ ಹಂಗಿಗೆ ಬಿದ್ದು ಕೆಲಸ ಮಾಡಿತ್ತೆ? ಇಲ್ಲ. ಅದೇ ರೀತಿ ಎಸಿಬಿ ಕೂಡ ಯಾವ ಅಡೆತಡೆಯಿಲ್ಲದೆ ಕೆಲಸ ನಿರ್ವಹಿಸಲಿದೆ.

   ಸಾರ್ವಜನಿಕರಲ್ಲಿ ಎಸಿಬಿ ಬಗ್ಗೆ ತಪ್ಪುಕಲ್ಪನೆ ಮೂಡುವಂತೆ ಮಾಡಲಾಗಿದೆ. ಆದರೆ ಸತ್ಯಾಸತ್ಯತೆಯನ್ನು ತಿಳಿದವರು ಎಸಿಬಿಯ ಉದ್ದೇಶ ಹಾಗೂ ಅದರ ಸ್ಥಾಪನೆಯ ನಡೆಯನ್ನು ಮೆಚ್ಚದೇ ಇರುವುದಿಲ್ಲ.

Advertisements

One thought on “ಎಸಿಬಿ ಬೇಕು, ಯಾಕೆಂದರೆ…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s