ಸಂಭ್ರಮಿಸದವರ ಮನಃಸ್ಥಿತಿಯ ಆಚೆ-ಈಚೆ

flag_of_karnataka_by_ramones1986-d7sh3g1

ಮೊನ್ನೆ ಮೊನ್ನೆಯಷ್ಟೇ ಹೊರಬಿದ್ದ ‘ಪಬ್ಲಿಕ್ ಅಫೇರ್ಸ್ ಸೆಂಟರ್’ನ ಆಡಳಿತ ಸೂಚ್ಯಂಕ ವರದಿ ಕರ್ನಾಟಕಕ್ಕೆ ಮೂರನೇ ಸ್ಥಾನ ನೀಡಿದೆ. ನಮ್ಮ ರಾಜ್ಯದ ಈ ಸಾಧನೆಯನ್ನು ಸಂಭ್ರಮಿಸುವ ಮನಃಸ್ಥಿತಿಯಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಇಲ್ಲಸಲ್ಲದ್ದನ್ನೂ ತಾವೇ ಮಾಡಿದ್ದು, ತಮ್ಮಿಂದಲೇ ಆದದ್ದು ಎಂದು ಬಡಾಯಿ ಕೊಚ್ಚಿಕೊಳ್ಳುವವರ ಎದುರು ಮಾನ-ಸಮ್ಮಾನಗಳಿಗೆ ಕಿವಿಗೊಡದೆ ಕೆಲಸದತ್ತ ಚಿತ್ತ ಹರಿಸಿರುವ ಕಾಂಗ್ರೆಸ್ ಸರ್ಕಾರವೂ ಕಾರಣವಾಗಿರಬಹುದು. ವಿರೋಧಪಕ್ಷವೆಂದರೆ ಕೇವಲ ವಿರೋಧ ಮಾಡಲೇ ಇರುವವರು ಎಂದು ನಂಬಿರುವ ಪ್ರತಿಪಕ್ಷಗಳಿಗೂ, ಆಡಳಿತ ಪಕ್ಷದ ಈ ಸಾಧನೆ ನುಂಗಲಾರದ ತುತ್ತಾಗಿರಬಹುದು.

   ಪಿಎಸಿ (ಪಬ್ಲಿಕ್ ಅಫೇರ್ಸ್ ಸೆಂಟರ್) ಒಂದು ಸರಕಾರೇತರ, ನಾಗರಿಕ ಸಮಾಜದ ನೇತೃತ್ವದಲ್ಲಿ ಸ್ಥಾಪಿತವಾಗಿ ಮುನ್ನಡೆಯುತ್ತಿರುವ ಸೇವಾ ಸಂಸ್ಥೆ. ಭಾರತದಲ್ಲಿ ಉತ್ತಮ ಆಡಳಿತಕ್ಕಾಗಿ ಬೇಡಿಕೆಯಿಟ್ಟು ಪ್ರಾರಂಭವಾದ ಪಿಎಸಿ, ಇದುವರೆಗೆ ದೇಶದ ನಾನಾ ರಾಜ್ಯಗಳ ಮೌಲ್ಯಮಾಪನ ಮಾಡಿ ನಂಬಿಕಾರ್ಹ ವರದಿ ನೀಡಿದೆ. ಈ ಅಧ್ಯಯನದ ನೇತೃತ್ವ ವಹಿಸಿದ್ದವರು ರಾಜಸ್ಥಾನದ ನಿವೃತ್ತ ಮುಖ್ಯಕಾರ್ಯದರ್ಶಿ ಸಿ.ಕೆ ಮ್ಯಾಥ್ಯುರವರು. ಇದೊಂದು ಸರಕಾರೇತರ ಸಂಸ್ಥೆಯಾದ್ದರಿಂದ ಇದರ ವರದಿಯನ್ನು ಅಲ್ಲಗಳೆದು, ರಂಪ ರಾದ್ಧಾಂತ ಮಾಡುವ ಅವಕಾಶ ‘ವಿರೋಧ’ಪಕ್ಷಗಳಿಗೆ ಸಿಕ್ಕಿರಲಿಕ್ಕಿಲ್ಲ. ಅದೇ ರೀತಿ ಇದರ ವರದಿಯನ್ನು ಮೆಚ್ಚಿ, ಖುಷಿ ಪಡುವ ಮಾತಂತೂ ದೂರವೇ ಉಳಿಯಿತು ಬಿಡಿ.

   ದೇಶದ ಬೇರೆ ಬೇರೆ ರಾಜ್ಯಗಳ ಆಡಳಿತ ವ್ಯವಸ್ಥೆಯನ್ನು ಅಧ್ಯಯನ ನಡೆಸಿದ ಪಿಎಸಿ, ಕಳೆದ ಶನಿವಾರ ‘ಸಾರ್ವಜನಿಕ ಆಡಳಿತ ಸೂಚ್ಯಂಕ’ವನ್ನು ಬಿಡುಗಡೆಗೊಳಿಸಿತು. ದೇಶದ ದೊಡ್ಡ ರಾಜ್ಯಗಳ ಪೈಕಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ಅಗ್ರಸ್ಥಾನದಲ್ಲಿರುವ ರಾಜ್ಯಗಳು ದಕ್ಷಿಣ ಭಾರತಕ್ಕೆ ಸೇರಿದವು ಎನ್ನುವುದು ವಿಶೇಷವಾಗಿ ಗುರುತಿಸಬೇಕಾದ ವಿಷಯ.

   ಈ ಅಧ್ಯಯನಕ್ಕಾಗಿ ಮೂಲಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸೇರಿದಂತೆ 10 ಪ್ರಮುಖ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿತ್ತು. ಒಟ್ಟೂ 68 ಸೂಚ್ಯಂಕಗಳನ್ನು ಪರಿಗಣಿಸಲಾಗಿತ್ತು. ಇವೆಲ್ಲ ಮಾನನದಂಡದ ಮೇಲೆ ಸಿದ್ಧವಾದ ಸಮಗ್ರ ವರದಿಯು ಕಾಂಗ್ರೆಸ್ ಸರ್ಕಾರದ ಆಡಳಿತವಿರುವ ಕರ್ನಾಟಕ್ಕೆ ಮೂರನೇ ಸ್ಥಾನ ನೀಡಿದೆ. ಪ್ರತ್ಯೇಕವಾಗಿ ಸೂಚ್ಯಂಕವನ್ನು ಗಮನಿಸುವುದಾದರೆ ಸಾಮಾಜಿಕ ಭದ್ರತೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ. ಪರಿಸರ ಕಾಳಜಿ, ಉತ್ತರದಾಯಿತ್ವ, ಪಾರದರ್ಶಕತೆಗೆ ಎರಡನೇ ಸ್ಥಾನ ಪಡೆದರೆ, ಮಾನವ ಅಭಿವೃದ್ಧಿಗೆ ಮೂರನೇ ಸ್ಥಾನ ಪಡೆದಿದೆ.

   ಇಷ್ಟೆಲ್ಲ ಹೆಮ್ಮೆಯ ವಿಷಯ ನಮ್ಮದಿರುವಾಗ ನಮ್ಮಲ್ಲೇಕೆ ಸಂಭ್ರಮದ ವಾತಾವರಣವಿಲ್ಲ? ಪಕ್ಷ ರಾಜಕಾರಣದಾಚೆ ಬಂದು ‘ಇದು ನನ್ನ ರಾಜ್ಯ’ ಎನ್ನುವ ವಿಶಾಲ ಮನೋಭಾವಕ್ಕೆ ತೆರೆದುಕೊಂಡಿದ್ದರೆ ನಿಜಕ್ಕೂ ರಾಜಕೀಯ ಮುಖಂಡರು ಸಂಭ್ರಮಿಸುತ್ತಿದ್ದರು. ಆದರೆ ಈ ಸಾಧನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಅಕಸ್ಮಾತ್ ನಾವೇನಾದರೂ ಶುಭಾಷಯ ತಿಳಿಸಿಬಿಟ್ಟರೆ ಎಲ್ಲಿ ತಮ್ಮ ಪಕ್ಷದ-ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೋ ಎನ್ನುವ ಸಂಕುಚಿತತೆ ರಾಜಕೀಯ ಸಮಗ್ರತೆಗೆ ಧಕ್ಕೆ ತರುತ್ತಿದೆ.

   ‘ಕಾಂಗ್ರೆಸ್ ಸರ್ಕಾರ ಆ ಕೆಲಸ ಮಾಡಿಲ್ಲ, ಈ ಕೆಲಸದಲ್ಲಿ ವಿಫಲವಾಗಿದೆ’ ಎಂದೆಲ್ಲ ಬೊಬ್ಬಿರಿಯುವ ಪ್ರತಿಪಕ್ಷಗಳು ಕಾಂಗ್ರೆಸ್ ಸಾಧನೆ ಎಂದು ನೋಡದೆ ರಾಜ್ಯದ ಸಾಧನೆ ಎಂದಾದರೂ ಹೆಮ್ಮೆ ಪಡಬಹುದಿತ್ತು. ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಹಾಗೂ ಗುಜರಾತ್‍ಗಿಂತಲೂ ಉತ್ತಮ ಆಡಳಿತ ಕಾಂಗ್ರೆಸ್ ನೇತೃತ್ವದ ಕರ್ನಾಟಕದಲ್ಲಿದೆ ಎಂದರೆ ಕಾಂಗ್ರೆಸ್ ಆಡಳಿತದ ಗುಣಮಟ್ಟವನ್ನು ಸಾಮಾನ್ಯ ಜನರೂ ಅಂದಾಜಿಸಬಹುದು. ಕೇಂದ್ರದಲ್ಲಿ ಬಿಜೆಪಿಯ ಪ್ರತಿಯೊಂದು ನಡೆಯನ್ನೂ ಬೃಹದಾಕಾರವಾಗಿ ಚಿತ್ರಿಸಿ, ಹೊಗಳುಭಟರಂತೆ ಕಾರ್ಯನಿರ್ವಹಿಸುವವರು, ನಮ್ಮದೇ ರಾಜ್ಯದ ಸಾಧನೆಯನ್ನೇಕೆ ಪ್ರಚುರಪಡಿಸುತ್ತಿಲ್ಲ? ಆರೋಪ ಮಾಡಲು ತಮ್ಮ ಹಕ್ಕು ಚಲಾಯಿಸುವವರು ಶ್ಲಾಘನೆ ಮಾಡುವ ಗುಣವನ್ನೂ ಬೆಳೆಸಿಕೊಳ್ಳಬೇಕು. ಎಲ್ಲರ ಗುರಿ ರಾಜ್ಯದ ಅಭಿವೃದ್ಧಿ ಎಂದು ಮುನ್ನಡೆದಾಗ ಮಾತ್ರ ಅದು ಸಾಧ್ಯ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ಮಾತನಾಡದೇ ತನ್ನ ಕೆಲಸದ ಮೂಲಕ ಉತ್ತರ ನೀಡುತ್ತಿದೆ. ಈಗ ಬಂದಿರುವ ಪಿಎಸಿ ಆಡಳಿತ ಸೂಚ್ಯಂಕ ಕೂಡ ಇದನ್ನು ಪುಷ್ಠೀಕರಿಸುತ್ತದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s