2016-17ನೇ ಸಾಲಿನ ರಾಜ್ಯ ಬಜೆಟ್ 18-03-16ರಂದು ಮಂಡನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲಾರ್ಹ ತಮ್ಮ ಹನ್ನೊಂದನೆಯ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 1.63 ಲಕ್ಷ ಕೋಟಿ ರೂ.ಗಳಾಗಿದ್ದು, ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುವ ಜಾಣತನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ. ‘ಎಲ್ಲರನ್ನೂ ಒಳಗೊಳ್ಳುವಿಕೆ’ ಈ ಬಜೆಟ್ನ ಹೆಗ್ಗಳಿಕೆ.
ಪೂರ್ವಾಗ್ರಹ ಪೀಡಿತರಂತೆ ವರ್ತಿಸುವ, ಆರ್ಥಿಕ ಶಿಸ್ತಿನ ಪರಿಪಾಲನೆಯನ್ನು ಶತಾಯಗತಾಯ ಒಪ್ಪದ ಕೆಲ ರಾಜಕೀಯ ಮುಖಂಡರುಗಳು ತಮ್ಮ ಎಂದಿನ ಶೈಲಿಯಲ್ಲಿ ‘ಇದು ನಿರಾಶಾದಾಯಕ ಬಜೆಟ್’ ಎಂದು ರಾಗವೆಳೆದರೂ, ಆರ್ಥಿಕ ತಜ್ಞರು ಇದನ್ನು, ‘ವಿತ್ತೀಯ ಶಿಸ್ತು ಹಾಗೂ ವರಮಾನ ವೃದ್ಧಿಯತ್ತ ಗಮನ ಹರಿಸಲಾಗಿರುವ ಸಂತುಲಿತ ಬಜೆಟ್’ ಎಂದು ವ್ಯಾಖ್ಯಾನಿಸಿದ್ದಾರೆ. ರಾಜ್ಯದ ಆರ್ಥಿಕ ವೃದ್ಧಿದರದ ಕುಸಿತದಿಂದ ಸಂಕಷ್ಟ ಎದುರಾಗಿರುವುದು ವಾಸ್ತವ. ಆದರೆ ಇದು ಸ್ವಯಂಕೃತ ಅಪರಾಧವಲ್ಲ. ರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿಯಿಂದಾಗಿ ಕೃಷಿಕ್ಷೇತ್ರದ ಬೆಳವಣಿಗೆಯಲ್ಲಿ ಗಣನೀಯ ಕುಂಠಿತವಾಗಿದೆ. ಇದರ ಪರಿಣಾಮ ಆಹಾರ ಧಾನ್ಯ ಉತ್ಪಾದನೆಯೂ ಕಡಿಮೆಯಾಗಿದೆ. ಇದರ ನೇರ ಪರಿಣಾಮ ರಾಜ್ಯದ ಆರ್ಥಿಕ ವೃದ್ಧಿದರದ ಮೇಲಾಗಿದೆ. ಇಂತಹ ಒತ್ತಡದ ನಡುವೆಯೂ ಎಲ್ಲರಿಗೂ ಒಪ್ಪಿತವಾಗುವಂತಹ ಬಜೆಟ್ ಮಂಡಿಸಲು ಸಿದ್ದರಾಮಯ್ಯನವರು ಯಶಸ್ವಿಯಾಗಿದ್ದಾರೆ. ಸಮಾಜದ ಎಲ್ಲಾ ವರ್ಗವನ್ನು ಒಟ್ಟಿಗೆ ಕರೆದೊಯ್ಯುವ ಅವರ ಆಡಳಿತ ವೈಖರಿ ಶ್ಲಾಘನೀಯ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು, ಅದರಿಂದ ಬರುವ ರಾಜಸ್ವದಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧಾರ ಕೈಗೊಂಡಿರುವುದು ಸರ್ಕಾರದ ಲೆಕ್ಕಾಚಾರದ ನಡೆಯನ್ನು ಬಿಂಬಿಸುತ್ತದೆ. ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಜನಸಾಮಾನ್ಯರ ಮೇಲೆ ಹೊರೆ ಎನಿಸಿದರೂ, ಅನೇಕ ಸರಕುಗಳ ಮೇಲಿನ ತೆರಿಗೆಯನ್ನು ಶೇ.14.5ರಿಂದ ಶೇ.5.5ಕ್ಕೆ ಇಳಿಸಿ ಹೊರೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸಲಾಗಿದೆ. ಈ ಕ್ರಮದಿಂದಾಗಿ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜನರ ಜೀವನಮಟ್ಟ ಸುಧಾರಣೆ ಆಗಲಿರುವುದು ಸಂತಸದ ವಿಚಾರ. ಸಾಮಾಜಿಕ ನ್ಯಾಯ ಎಂದು ಹೇಳುವ ಮುಖ್ಯಮಂತ್ರಿಗಳು ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡುತ್ತಿಲ್ಲ ಎನ್ನುವ ಆರೋಪಕ್ಕೆ ಮೇಲಿನ ಕ್ರಮಗಳು ಉತ್ತರದಂತಿವೆ.
ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ವಿದ್ಯುತ್ ಕ್ಷೇತ್ರಗಳಿಗೆ ಬಜೆಟ್ನಲ್ಲಿ ಸಾಕಷ್ಟು ಆದ್ಯತೆ ನೀಡಲಾಗಿದೆ. ಸುವರ್ಣ ಕೃಷಿ ಗ್ರಾಮ ಯೋಜನೆ-ರಾಜ್ಯ ಕೃಷಿ ಮತ್ತು ರೈತರ ಸಮಿತಿ ರಚನೆ-ವಿಶೇಷ ಕೃಷಿ ವಲಯದ ರಚನೆ ಮೊದಲಾದ ಕೃಷಿಕಪರ ನಡೆಗಳು ಕಂಗಾಲಾಗಿರುವ ರೈತರಿಗೆ ನೆಮ್ಮದಿಯ ಅಭಯ ನೀಡಲಿವೆ. ನಗರಾಭಿವೃದ್ಧಿ, ಕೈಗಾರಿಕೆ ಹಾಗೂ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದು, ಉದ್ಯಮಿಗಳನ್ನು ಸೆಳೆಯುವತ್ತ ಪ್ರಮುಖ ಹೆಜ್ಜೆಯಾಗಿದೆ. ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಉಪಕ್ರಮಗಳನ್ನು ಸಿದ್ದರಾಮಯ್ಯನವರು ಮುಂದಿಟ್ಟಿದ್ದಾರೆ. ‘ಬೆಂಗಳೂರು ಬ್ರ್ಯಾಂಡ್’ ಅನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಲು 5 ಸಾವಿರ ಕೋಟಿ ನಿಗದಿ ಮಾಡಲಾಗಿದೆ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ತೆಗೆದುಕೊಂಡಿರುವ ಕ್ರಮಗಳು ಉತ್ತಮವಾದ್ದು. ‘ಜವಾಬ್ದಾರಿಯುತ ಮದ್ಯ ಸೇವನೆ’ ಮೂಲಕ ಮದ್ಯ ಸೇವನೆಯ ಬಗ್ಗೆ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾದದ್ದು.
ಸಿದ್ದರಾಮಯ್ಯನವರ ಅಪಾರ ಅನುಭವ ಹಾಗೂ ಆಡಳಿತಾತ್ಮಕ ಯೋಚನೆಗಳು ‘ಸಮತೋಲಿತ ಬಜೆಟ್’ನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರೆ ತಪ್ಪಾಗಲಾರದು. ಯಾರದೋ ಓಲೈಕೆಗೆ, ಇನ್ಯಾರದೋ ಒತ್ತಾಯಕ್ಕೆ ಮಣಿದು ಹಣ ಹರಿಬಿಡುವ ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿದೆ. ಆದರೆ ರಾಜ್ಯದ ಹಾಗೂ ಜನತೆಯ ಹಿತಾಸಕ್ತಿಗೆ ಅನುಗುಣವಾಗಿ, ಮುಂದಾಲೋಚನೆಯ ಸ್ಪಷ್ಟ ಪರಿಕಲ್ಪನೆಯೊಂದಿಗೆ ಯಶಸ್ವೀ ಬಜೆಟ್ ಮಂಡನೆ ಸಿದ್ದರಾಮಯ್ಯನವರಂತಹ ಮುತ್ಸದ್ಧಿಗೆ ಮಾತ್ರ ಸಾಧ್ಯ.