ವೃತ್ತಿಧರ್ಮ ಮರೆತ ಖಾಸಗಿ ವೈದ್ಯಕೀಯ ವಲಯ

Private Hospital

ಖಾಸಗಿ ಆಸ್ಪತ್ರೆಗಳ ಮುಷ್ಕರ ತಾರಕಕ್ಕೇರುತ್ತಿದೆ. ವೈದ್ಯರು ತಮ್ಮ ವೃತ್ತಿ ಪಾವಿತ್ರ್ಯತೆಯನ್ನು ಮರೆತು ಸಮಾಜದ ಜೊತೆ ಕದನಕ್ಕಿಳಿದಿದ್ದಾರೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ ಇನ್ನೂ ಜಾರಿಯಾಗಿಲ್ಲ. ಜಾರಿಯಾದ ಮೇಲೂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿಕ್ಕೆ ಅವಕಾಶವಿದೆ. ಅಂಥಾದ್ದರಲ್ಲಿ ತಮ್ಮ ಮೂಲಭೂತ ಹಕ್ಕುಗಳಿಗೆ ಸರ್ಕಾರ ಚ್ಯುತಿ ತರುತ್ತಿದೆ ಎಂದು ಖಾಸಗಿ ವೈದ್ಯವಲಯ ಬೊಬ್ಬೆ ಹೊಡೆಯುತ್ತಿದೆ. ಆಶ್ಚರ್ಯ ಎಂದರೆ ಈ ವೈದ್ಯರಿಗೆ ಖಾಸಗಿ ಲ್ಯಾಬ್‍ನವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತಿರುವುದು. ಅಂದರೆ ಖಾಸಗಿ ವೈದ್ಯರಿಂದ ಇವರಿಗೆ ಇರುವ ಲಾಭದ ಪ್ರಮಾಣ ಎಷ್ಟು ಎನ್ನುವುದನ್ನು ಇದು ಹೇಳುತ್ತದೆಯಲ್ಲವೇ?

ಒಂದು ಆಸ್ಪತ್ರೆಯಲ್ಲಿ ರೋಗಿ ಮಾಡಿಸಿದ ಪರೀಕ್ಷಾ ಫಲಿತಾಂಶವನ್ನು ಇನ್ನೊಂದು ಆಸ್ಪತ್ರೆಯವರೇ ಒಪ್ಪುವುದಿಲ್ಲ, ನಮ್ಮಲ್ಲಿಯೂ ಇನ್ನೊಮ್ಮೆ ಮಾಡಿಸಿ ಎಂದು ಮತ್ತೆ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಅವರ ಆಸ್ಪತ್ರೆಯ ಲ್ಯಾಬ್‍ಗಳಲ್ಲಿ ಮಾಡಿಸಿದ ಪರೀಕ್ಷೆಯನ್ನು ನೀವು ಯಾಕೆ ಒಪ್ಪಲ್ಲ ಅಂತ ಅವರನ್ನು ಕೇಳಿದರೆ, ಅವರ ಯಂತ್ರೋಪಕರಣಗಳ ಬಗ್ಗೆ ನಮಗೆ ನಂಬಿಕೆ ಇಲ್ಲ ಎನ್ನುತ್ತಾರೆ. ಖಾಸಗಿ ಆಸ್ಪತ್ರೆಯಲ್ಲಿ ಬಳಸುವ ಯಂತ್ರೋಪಕರಣಗಳ ಬಗ್ಗೆ ಪರಸ್ಪರ ನಂಬಿಕೆ ಇಲ್ಲದವರು ಈಗ ಹೇಗೆ ಒಂದಾಗಿದ್ದಾರೆ? ಯಾವ ನಂಬಿಕೆಯ ಸೂತ್ರ ಇವರನ್ನು ಒಂದು ಗೂಡಿಸಿದೆ?

ವೈದ್ಯರಿಗಿರಬೇಕಾದ ನೈತಿಕ ಎಚ್ಚರವನ್ನು ಬದಿಗಿರಿಸಿ ರೋಗಿಗಳ ಜೊತೆ ನಡೆದುಕೊಳ್ಳುವ ಇವರು ತಾವು ಜೀವ ರಕ್ಷಕರು ಎನ್ನುವುದನ್ನೂ ಮರೆತು ಹಣಗಳಿಸುವ ದಂಧೆಗೆ ಇಳಿದಿರುವುದು ಶೋಚನೀಯ. ಹಲವು ಸಾವಿರಗಳಲ್ಲಿ ನಡೆಯುತ್ತಿದ್ದ ಇವರ ದಂಧೆ ವಿಮಾ ಯೋಜನೆಗಳಿಂದ ಲಕ್ಷಗಳಿಗೆ ಏರಿದ್ದು ಏನೂ ಅರಿಯದ ಮಧ್ಯಮವರ್ಗದ ಜನತೆ ಬಲಿಯಾಗುತ್ತಿದೆ. ವೈದ್ಯೋ ನಾರಾಯಣೋ ಹರಿಃ ಎಂದು ಗೌರವಿಸಿ ದೈವತ್ವವನ್ನು ಕೊಟ್ಟ ಈ ಸಮಾಜವನ್ನು ನಿರಂತರವಾಗಿ ಶೋಷಣೆ ಮಾಡುತ್ತಲೆ ಬಂದಿರುವುದಲ್ಲದೆ, ನಾವಿರುವುದೇ ಶೋಷಣೆ ಮಾಡಲಿಕ್ಕೆ, ನಮ್ಮನ್ನು ಕಾನೂನಿನ ಅಡಿ ನಿಯಂತ್ರಣಕ್ಕೆ ತರಲೇಬಾರದು ಎಂದು ಒತ್ತಾಯಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.

ಡಾಕ್ಟರ್‍ಗಳೆಲ್ಲಾ ಕೆಟ್ಟವರು ಅಂತ ಅಲ್ಲ. ಒಬ್ಬ ಡಾಕ್ಟರ್ ಆಪರೇಷನ್ ಮಾಡಿಸಿ ಅಂತ ಹೇಳಿದ್ದಕ್ಕೆ ಇನ್ನೊಬ್ಬರು ಡಾಕ್ಟರ್ ಸರಳವಾದ ವೈದ್ಯೋಪಚಾರದಿಂದ ಪರಿಹಾರ ಮಾಡಿರುವುದೂ ಇದೆ. ಆದರೆ ನಾವ್ಯಾರೂ ಈ ದೇಶದ ಕಾನೂನಿಗೆ ಉತ್ತರಿಸಬೇಕಿಲ್ಲ ಎಂದು ನಿರ್ಧರಿಸಿ ವಿಧೇಯಕ ಜಾರಿಯಾಗುವ ಮೊದಲೇ ಹೀಗೆ ಮುಷರಕ್ಕೆ ತೊಡಗಿ ತಮ್ಮ ಸೇವೆಯನ್ನೆ ಅವಮಾನಿಸುತ್ತಿರುವುದು ದುರಾದೃಷ್ಟದ ಸಂಗತಿ. ತಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಇಲ್ಲಿ ಎಲ್ಲ ವೃತ್ತಿಗಳಂತೆ ವೈದ್ಯವೃತ್ತಿಯಲ್ಲೂ ವ್ಯಾವಹಾರಿಕ ಸಂಗತಿಗಳು ಸರಳ ಮತ್ತು ಪಾರದರ್ಶಕವಾಗಿರಬೇಕು. ಇದು ತುಂಬಾ ನಿಖರವಾದ ಮತ್ತು ತಾರ್ಕಿಕವಾದ ಸಂಗತಿ. ಇದಕ್ಕೆ ಇಷ್ಟು ಉಗ್ರವಾಗಿ ಪ್ರತಿಭಟನೆ ತೋರುತ್ತಿರುವುದನ್ನು ನೋಡಿದರೆ ತಮ್ಮ ಹುಳುಕೇನಾದರೂ ಬಯಲಿಗೆ ಬಂದುಬಿಟ್ಟರೆ ಎನ್ನುವ ಭಯ ಇದೆ ಎನ್ನಿಸುತ್ತಿದೆ.

ಸಮಾಜದ ಪ್ರತಿಷ್ಠಿತ ವರ್ಗ ಮಾನವೀಯತೆಯ ಹರಿಕಾರರು ಸಾಂತ್ವಾನದಲ್ಲಿ ತಾಯಿಯ ಹಾಗೆ ಇರಬೇಕಾದವರು, ಎಲ್ಲಕ್ಕೂ ಮಿಗಿಲಾಗಿ ಓದಿನ ಸಂಸ್ಕಾರ ಪಡೆದಿರುವರು ಬಳಸುತ್ತಿರುವ ಭಾಷೆ ನೋಡಿದರೆ ಆಶ್ಚರ್ಯವೆನ್ನಿಸುತ್ತದೆ. ನಮ್ಮ ತಂಟೆಗೆ ಬಂದರೆ…  ಎಂದು ರೌಡಿಗಳಿಗಿಂತ ಮಿಗಿಲಾಗಿ ರಸ್ತೆಯಲ್ಲಿ ನಿಂತು ಆಡುತ್ತಿರುವ ಮಾತುಗಳಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಅಲ್ಪ ಸ್ವಲ್ಪ ಹಣವಲ್ಲ ಇಳಿದಿದ್ದು ಕೋಟಿ ಕೋಟಿ ವಸೂಲಿಗೆ. ಜನರ ಅಸಮಾಧಾನವಾಗಲಿ, ಗೋಳಾಗಲೀ ಯಾವುದಕ್ಕೂ ಯಾವತ್ತೂ ಖಾಸಗಿ ವೈದ್ಯ ಕ್ಷೇತ್ರ ಕಿವಿಗೊಳಲಿಲ್ಲ. ಸ್ವಲ್ಪ ಕಿವಿಗೊಟ್ಟಿದ್ದರೂ ಈ ಪರಿಸ್ಥಿತಿಗೆ ಎದುರಾಗುತ್ತಿರಲಿಲ್ಲ. ಏಕ ದರ ನೀತಿಗೆ ತಾವೇ ಬದ್ಧರಾಗಿದ್ದಿದ್ದರೆ ಬೀದಿಗಿಳಿದು ಪ್ರತಿಭಟಿಸುವ ಪ್ರಮೇಯವೂ ಬರುತ್ತಿರಲಿಲ್ಲ.

ರಾಜ್ಯದ ಜನರ ಹಿತವನ್ನು ಕಣ್ಣ ಮುಂದಿರಿಸಿಕೊಂಡು ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಇದನ್ನು ನಾಗರೀಕರು ಯಾರೂ ತಪ್ಪು ಎಂದು ಹೇಳುತ್ತಿಲ್ಲ. ಬದಲಿಗೆ ಸಂತೋಷ ಪಡುತ್ತಿದ್ದಾರೆ. ಆ ಸಂತೋಷದ ಹಿಂದೆ ತಾವು ಅನುಭವಿಸಿದ ಯಾತನಾಮಯ ಕ್ಷಣಗಳಿವೆ ಎನ್ನುವುದನ್ನು ಮರೆಯುವಂತಿಲ್ಲ. ಈ ವಿಷಯದ ಚರ್ಚೆಯಿಂದ ಖಾಸಗಿ ವಲಯದ ದೊಡ್ಡ ದೊಡ್ಡ ಆಸ್ಪತ್ರೆಗಳು ಮಾಡುತ್ತಾ ಬಂದಿರುವ ಮೋಸದ ಬಗ್ಗೆ ಮಾತಾಡುವ ಧೈರ್ಯ ಈಗ ಎಲ್ಲರಿಗೂ ಬಂದಿದೆ. ನಿರಂತರವಾಗಿ ಜನತೆಯ ಜೊತೆಗೆ  ವ್ಯವಹರಿಸುವ ಖಾಸಗಿ ವೈದ್ಯಕೀಯವಲಯ ಎಚ್ಚತ್ತು ಇನ್ನಾದರೂ ತನ್ನ ಪಟ್ಟುಗಳನ್ನು ಬಿಡದಿದ್ದರೆ ಜನತೆಯ ಆಕ್ರೋಶಕ್ಕೆ ಗುರಿಯಾಗುವುದರಲ್ಲಿ ಅನುಮಾನವಿಲ್ಲ.

Advertisements

ದೇಶಕಂಡ ಧೀಮಂತ ನಾಯಕಿ ಇಂದಿರಾ ಗಾಂಧಿ

Indira Gandhi-1

“ನನ್ನ ದೇಹದಲ್ಲಿ ರಕ್ತದ ಕೊನೆಯ ಹನಿ ಇರುವವರೆಗೂ ಈ ದೇಶಕ್ಕೆ ಸೇವೆ ಸಲ್ಲಿಸುತ್ತೇನೆ” ಎಂದು ಘೋಷಿಸಿಕೊಂಡ ಭಾರತದ ಮೊದಲ ಮಹಿಳಾ ಪ್ರಧಾನಿ, ಭಾರತ ರತ್ನ ಶ್ರೀಮತಿ ಇಂದಿರಾಗಾಂಧಿ ಇತಿಹಾಸ ಕಂಡ ಉಜ್ವಲ ನಾಯಕಿ. ರಾಜಕೀಯ ಬದ್ಧತೆಗೆ ಒಂದು ಸಜೀವ ಉದಾಹರಣೆ.  ಅವರು ತೆಗೆದುಕೊಂಡ ನಿರ್ಣಯಗಳು ನವಭಾರತದ ಉದಯಕ್ಕೆ ಕಾರಣವಾಗಿ ವಿಶ್ವ ನಕ್ಷೆಯಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿತು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲುಗೊಂಡು ದೇಶದ ಕನಸನ್ನು ನನಸು ಮಾಡಿ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಾಂದಿ ಹಾಡಿದ ಕಾಂಗ್ರೆಸ್, ನಂತರ ಪಕ್ಷವಾಗಿ ರಾಜಕಾರಣವನ್ನು ಆರಂಭಿಸಿ ಈ ದೇಶದ ದೊಡ್ಡ ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಇಂಥ ಪರಂಪರೆಯನ್ನು ಮುನ್ನಡೆಸಲು ಸಮರ್ಥ ನಾಯಕತ್ವದ ಕೊರತೆ ಭಾರತಕ್ಕೆ ಯಾವತ್ತೂ ಬರಲಿಲ್ಲ. ಭಾರತದ ಅಭಿವೃದ್ಧಿಯ ಪರ್ವವನ್ನು ಆರಂಭಿಸಿದ ಅತ್ಯಂತ ಪ್ರಭಾವಶಾಲಿ ಪ್ರಧಾನಿ ಇಂದಿರಾ ದೇಶದ ಆಂತರಿಕ ಬೆಳವಣಿಗೆ ಕಟ್ಟಕಡೆಯ ವ್ಯಕ್ತಿಗೆ ಸಿಗಬಹುದಾದ ಪ್ರಾಧಾನ್ಯತೆಯನ್ನು ಎದುರಿಗಿರಿಸಿಕೊಂಡು ಯೋಜನೆಗಳನ್ನು ರೂಪಿಸಿದವರು.

ಭಾರತ ಕೃಷಿಯಾಧಾರಿತ ದೇಶ. ಈ ಕೃಷಿರಂಗದಲ್ಲಿ ಕ್ರಾಂತಿಯೊಂದು ಸಂಭವಿಸದೆ ಇಲ್ಲಿನ ಬದುಕುಗಳು ಹಸನಾಗಲಾರದು ಎಂದು ಭಾವಿಸಿ ಇಂದಿರಾ, ವೈಜ್ಞಾನಿಕ ಮಾದರಿಯನ್ನು ಬಳಸಿ ಬೆಳೆ ಬೆಳೆಯುವ ವಿಧಾನನವನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದವರು. 60ರ ದಶಕದಲ್ಲಿ ಸಾಮೂಹಿಕ ಕ್ಷಾಮದಿಂದ ಭಾರತ  ತತ್ತರಗೊಂಡಿತ್ತು. ದೇಶವನ್ನು ಇಂಥ ಸಂಕಷ್ಟದ ಪರಿಸ್ಥಿತಿಯಿಂದ ತಪ್ಪಿಸಲಿಕ್ಕೆ ಕೃಷಿ ಪದ್ಧತಿಯಲ್ಲೇ ಬದಲಾವಣೆ ತರುವುದರ ಬಗ್ಗೆ ಯೋಚಿಸಿ ಹಸಿರು ಕ್ರಾಂತಿಗೆ ಮುಂದಾದರು. ಆಹಾರದ ಸ್ವಾವಲಂಬನೆ ಮುಖ್ಯ ಅದ್ಯತೆಯಾಗಿ ಸ್ವೀಕರಿಸಿ, ಕೃಷಿ ನೀತಿಯನ್ನು ಪ್ರಮುಖ ನೀತಿಯನ್ನಾಗಿ ರೂಪಿಸುವುದರ ಜೊತಗೆ ಗೋಧಿ ಅಕ್ಕಿ, ಜೋಳವನ್ನು ಬೆಳೆಯಲು ಹುರಿದುಂಬಿಸಿದರು. ಕುಬ್ಜತಳಿಯ ಬೀಜಗಳನ್ನು ಇದಕ್ಕಾಗಿ ಬಳಸಲಾಯಿತು. ಇದರಿಂದ  ಸಾಂಪ್ರದಾಯಿಕ ಕೃಷಿಯಲ್ಲಿ ಸಿಗುವ ಇಳುವರಿಗಿಂತ ಹತ್ತುಪಟ್ಟು ಹೆಚ್ಚಳವಾಯಿತು. ರಸಗೊಬ್ಬರ, ಕೀಟನಾಶಕಗಳು, ಗುಣಮಟ್ಟದ ಬೀಜಪೂರೈಕೆ ಮಾಡಿ ಅನ್ನದಾತನ ಮುಖದ ಮಂದಹಾಸಕ್ಕೆ ಕಾರಣರಾದರು.  ದೇಶ ಆಹಾರ ಸಮಸ್ಯೆಯಿಂದ ಮುಕ್ತವಾಯಿತು.

‘ಗರೀಬಿ ಹಟಾವೋ ದೇಶ್ ಬಚಾವೋ’ ಅವರ ಮುಖ್ಯ ಧ್ಯೇಯವಗಿತ್ತು. ಬಡವರ ಉದ್ಧಾರವೇ ದೇಶದ ಸರ್ವತೋಮುಖ ಬೆಳವಣಿಗೆಯ ಮೊದಲ ಮೆಟ್ಟಿಲು ಎಂದು ಭಾವಿಸಿದ ಅವರು ಮನುಷ್ಯನ ಘನತೆಯನ್ನು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ರೂಪಿಸಿದರು. 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಮುಖವಾಗಿದ್ದ ಇದು ಸಾಮಾಜಿಕ ನ್ಯಾಯವನ್ನು ಗಣಿಸಿ ತಂದ ಈ ಯೋಜನೆ ಜನಪ್ರಿಯವಾಗಿದ್ದಲ್ಲದೇ ಇಂದಿರಾ ಅವರಿಗೆ ಕೀರ್ತಿ ತಂದುಕೊಟ್ಟಿತು.

ಇನ್ನು ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ಕ್ರಾಂತಿಕಾರಿ ಧೋರಣೆಯನ್ನು ಕೈಗೊಂಡಿದ್ದರಿಂದ ಭಾರತದ ಆರ್ಥಿಕನೀತಿಗೆ ಹೊಸ ಆಯಾಮ ಸಿಕ್ಕಂತಾಯಿತು. ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದ ಬ್ಯಾಂಕುಗಳಿಗೆ ಏಕರೂಪತೆಯನ್ನು ಒದಗಿಸಿಕೊಟ್ಟು, ಪಾರದರ್ಶಕ ವ್ಯವಹಾರಕ್ಕೆ ಎಡೆ ಮಾಡಿಕೊಟ್ಟಿದ್ದಲ್ಲದೇ,  ಸೇವಾವಲಯವನ್ನು ವಿಸ್ತರಿಸಿ ದೇಶವ್ಯಾಪಿ ಹೊಸ ಸಂಚಲನೆಯನ್ನು ತಂದರು. ವ್ಯವಸ್ಥಿತ ಆರ್ಥಿಕ ಅಭಿವೃದ್ಧಿಗೆ ಕಾರಣವಾದ ಬ್ಯಾಂಕುಗಳ ರಾಷ್ಟ್ರೀಕರಣ ದೇಶವ್ಯಾಪೀ ಏಕನೀತಿ ಜಾರಿ ಮಾಡಿ ವಿತ್ತವಲಯದ ಕ್ರಾಂತಿಗೆ ಕಾರಣ ಆದರು. ಇದು ಅವರ ಕಾಲದ ಬಹುದೊಡ್ಡ ಧೀರ ನಿರ್ಣಯವೂ ಆಗಿದೆ.

ಹಾಗೆಯೇ ಜನನಿಯಂತ್ರಣದ ಸಂತಾನಹರಣ ಚಿಕಿತ್ಸೆಗೂ ಯೋಜನೆ ರೂಪಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಕೇಂದ್ರಗಳನ್ನು ನಿರ್ಮಿಸಿ, ಜನಸಂಖ್ಯಾಸ್ಪೋಟ ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲಾಯಿತು. ಭಾರತ ಇಂದು ಅಭಿವೃದ್ಧಿಯ ತೊಟ್ಟಿಲಾಗಿದೆ. ಇದನ್ನು ಆಗುಮಾಡಿದ್ದು ಇಂದಿರಾ ಅವರ ದೂರದರ್ಶಿತ್ವ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಭಾರತವನ್ನು ಆಧುನಿಕಗೊಳಿಸಿ ಅಂತಾರಾಷ್ಟ್ರೀಯ ಮಟ್ತಕ್ಕೆ ಕೊಂಡೊಯ್ದ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ, ಘನತೆವೆತ್ತ ಭಾರತರತ್ನ ಶ್ರೀಮತಿ ಇಂದಿರಾ ಅವರನ್ನು, ಅವರ 100ನೇ ಹುಟ್ಟುಹಬ್ಬದಂದು ನಾಡು ಗೌರವದಿಂದ ಸ್ಮರಿಸುತ್ತದೆ.

ನವಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಇಂದಿರಾ ಗಾಂಧಿ

Indira Gandhi

ಇಂದಿರಾಗಾಂಧಿ ಆಧುನಿಕ ರಾಜಕೀಯಕ್ಕೆ ಮತ್ತೊಂದು ಹೆಸರು, ನಾಯಕತ್ವಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ, ಭಾರತಕ್ಕೆ ಮಾತ್ರವಲ್ಲ ಅಂತಾರಾಷ್ಟ್ರೀಯ ಮಹಿಳಾಲೋಕಕ್ಕೆ ಸ್ಪೂರ್ತಿದಾಯಕ ಚರಿತ್ರೆ. ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಇವರು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಜೀವನದುದ್ದಕ್ಕೂ ತೆಗೆದುಕೊಂಡ ರಾಜಕೀಯ ನಿರ್ಣಯಗಳು ಭಾರತದ ಚರಿತ್ರೆಯ ದಿಕ್ಕುಗಳನ್ನು ನಿರ್ದೇಶಿಸಿದ್ದವು. ನವ ಭಾರತದ ನಿರ್ಮಾಣದಲ್ಲಿ ಅಭಿವೃದ್ಧಿಶೀಲ ಕನಸುಗಳನ್ನು ಸಾಕಾರಗೊಳಿಸುವ ದಿಟ್ಟನಿರ್ಣಯಗಳನ್ನು ಅವರು ತೆಗೆದುಕೊಂಡಿದ್ದರು.

ಭಾರತದ ಮೊದಲ ಪ್ರಧಾನಿಯಾದ ಜನಹರ್‍ಲಾಲ್ ನೆಹರೂ ಅವರ ಮಗಳಾಗಿ ಹುಟ್ಟಿದ ಇಂದಿರಾ ಪ್ರಿಯದರ್ಶಿನಿ  ನೆಹರು ಅವರ  ಜೀವನವೇ ಅದ್ಭುತವಾದ ಸಾಹಸಗಾಥೆ. ದೇಶದ ಆಧುನಿಕ ಚರಿತ್ರೆಯ ಮಹತ್ವದ ಸ್ವಾತಂತ್ರ್ಯ ಸಂಗ್ರಾಮವನ್ನು ನೋಡುತ್ತಲೇ ಬೆಳೆದರು. ಆಕೆ ವಿವಾಹದ ನಂತರ ತನ್ನ ಪತಿ ಫಿರೋಜ್‍ಖಾನ್ ಗಾಂಧಿಯ ಜೊತೆ ಸಂಗ್ರಾಮದಲ್ಲಿ ಪಾಲುಗೊಂಡು ಸೆರೆಮನೆಯ ವಾಸವನ್ನೂ ಅನುಭವಿಸಿದರು. ಎದೆಯಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಕೊಂಡು ತ್ಯಾಗ ಬಲಿದಾನಗಳ ಮೂಲಕ ದೇಶವನ್ನು ಕಟ್ಟಿದ್ದನ್ನು ಕಂಡ ಯುವತಿ ಇಂದಿರಾ ಭಾರತ ಆತ್ಮಗೌರವದಿಂದ ನಿಲ್ಲುವ ಕನಸುಗಳನ್ನು ಕಂಡರು.

1959ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಇಂದಿರಾ ತಂದೆಯ ನಿಧನಾನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳ ಅಧಿಕಾರಾವಧಿಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯಾಗಿ ಜಾವಾಬ್ದಾರಿಯನ್ನು ಹೊತ್ತರು. ಶಾಸ್ತ್ರಿ ಅವರ ಮರಣಾ ನಂತರ ದೇಶ ಸಮರ್ಥ ನಾಯಕತ್ವಕ್ಕಾಗಿ ಇಂದಿರಾ ಅವರ ಕಡೆಗೆ ನೋಡಿತು. ಕಾಂಗ್ರೆಸ್ ಸರ್ವಾನುಮತದಿಂದ ಇಂದಿರಾ ಅವರನ್ನು ಆಯ್ಕೆ ಮಾಡಿ ಹೆಣ್ಣಿನ ಅಂತಃಶಕ್ತಿಗೆ ತನ್ನ ಗೌರವವನ್ನು ತೋರಿತು.

ಬಾಂಗ್ಲಾ ವಿಷಯಕ್ಕೆ ಪಾಕಿಸ್ತಾನದೊಂದಿಗೆ ನಿಷ್ಠೂರವಾಗಿ ನಡೆದುಕೊಂಡ ಇಂದಿರಾ ಪಾಕಿಸ್ತಾನದ ರಾಕ್ಷಸೀಯ ಕೃತ್ಯಗಳನ್ನು ಖಂಡಿಸಿದರು. ಆರ್ಥಿಕ, ಸೈನಿಕ ಮತ್ತು ನೈತಿಕ ಬೆಂಬಲವನ್ನು ನೀಡಿ, ಪ್ರತ್ಯೇಕ ಬಾಂಗ್ಲಾ ದೇಶದ ನಿರ್ಮಾಣಕ್ಕೆ ಕಾರಣವಾಗಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಶಕ್ತಿಯನ್ನಾಗಿಸಿ,  ಅಮೆರಿಕಾವನ್ನೇ ಎದುರಿಸಿದ ರಾಜಕೀಯ ಶಕ್ತಿಗೆ ಸಜೀವ ಉದಾಹರಣೆಯಾಗಿ ನಿಂತವರು.

ಆರ್ಥಿಕ ನೀತಿಗಳಿಂದ ಭಾರತದ ಅಭಿವೃದ್ಧಿಗೆ ಮುನ್ನುಡಿ ಬರೆದು ಎದುರಾಳಿಗಳೇ ಇಲ್ಲದ ಹಾಗೇ ಬೆಳೆದರು. ರೈತರ ಬಾಳನ್ನು ಬೆಳಗುವ ಹಸಿರುಕ್ರಾಂತಿ, ಸಮಾಜದ ಕೆಳಸ್ತರದಲ್ಲಿ ಬದುಕುತ್ತಿರುವ ಬಡವರ ಬದುಕಿಗೆ ಬೆಳಕಾಗುವ ಗರೀಬಿ ಹಠಾವೋ, ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ಭಾರತದ ಚಹರೆಯನ್ನೇ ಬದಲಿಸಿಬಿಟ್ಟರು. ಆಗ ರಾಜರಿಗೆ ಕೊಡುತ್ತಿದ್ದ ರಾಯಧನವನ್ನು ನಿಲ್ಲಿಸಿ ಪ್ರಜಾಪ್ರಭುತ್ವ ದೇಶದಲ್ಲಿ ರಾಜರಿಲ್ಲ, ಎಲ್ಲರೂ ಸಮಾನರೇ ಎಂದು ಘೋಷಿಸಿ ಪ್ರಜಾಪ್ರಭುತ್ವದ ಘನತೆ ಎತ್ತಿಹಿಡಿದರು. ಸಾಮಾನ್ಯನ ಬದುಕು ಹಸನಾಗುವ ಎಲ್ಲ ಪ್ರಯತ್ನಕ್ಕೂ ಇಂದಿರಾ ಅವರು ಮುಂದಾದರು ಎಂದರೆ ತಪ್ಪಾಗಲಾರದು.

‘ಉಳುವವನೇ ಭೂಮಿಯ ಒಡೆಯ’ ಎನ್ನುವ ಕ್ರಾಂತಿಕಾರಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ಕೋಟ್ಯಂತರ ಭೂಮಿ ಇಲ್ಲದ ಬರೀ ಗೇಣಿಯನ್ನೇ ಮಾಡಿಕೊಂಡು ಬರುತ್ತಿದ್ದ ಜನರಿಗೆ ಭೂಮಿಯ ಒಡೆತನ ಸಿಗುವ ಹಾಗೇ ಮಾಡಿ, ಸಮಸಮಾಜವನ್ನು ಆಗು ಮಾಡಿದರು.

ಬಡತನ ನಿರ್ಮೂಲನೆ, ಹಸಿರುಕ್ರಾಂತಿ, ಕುಟುಂಬ ನಿಯಂತ್ರಣ ಕಾಯಿದೆ, ಉಳುವವನೇ ಭೂಮಿಯ ಒಡೆಯ ಇಂಥ ಅನೇಕ ಯೋಜನೆಗಳ ಮೂಲಕ ಭಾರತದ ಸ್ಥಿತಿಗತಿಯನ್ನು ಮೇಲೆತ್ತಿ, ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕ್ಕಾರದ ಮೂಲಕ ಭಾರತದ ಕಡೆಗೆ ಜಗತ್ತು ಅಚ್ಚರಿಯಿಂದ ನೋಡುವ ಹಾಗೆ ಮಾಡಿದರು. ಅವರ ಈ ಸಾಧನೆಗೆ ದೇಶ ಗೌರವಿಸಿ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿದೆ.

ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ ನೂರನೇ ವರ್ಷದ ಹುಟ್ಟು ಹಬ್ಬವನ್ನು ದೇಶ ಸಂಭ್ರಮದಿಂದ ಆಚರಿಸುತ್ತಿದೆ. ಅವರು ಹಾಕಿಕೊಟ್ಟ  ಆದರ್ಶದ ಹೆಜ್ಜೆ ಜಾಡುಗಳಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿವುದರ ಮೂಲಕ ಇಂದಿರಾ ಗಾಂಧಿಯವರನ್ನು ಗೌರವಿಸುತ್ತಿದೆ.

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಮುನ್ನುಡಿ ಬರೆದ ರಾಜ್ಯ ಸರ್ಕಾರ

Childrens day

ದೇಶಾದ್ಯಂತ ನೆಹರೂ ಅವರ ಹುಟ್ಟುಹಬ್ಬದ ನೆಪದಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಮಾತ್ರ ಪ್ರತಿದಿನವೂ ಮಕ್ಕಳದಿನವನ್ನಾಗಿಸಿದ ಹೆಮ್ಮೆಯನ್ನು ತನ್ನದನ್ನಾಗಿಸಿಕೊಂಡಿದೆ.

ಹೌದು, ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿ ಅವರ ಕನಸುಗಳನ್ನು ಸಾಕಾರಗೊಳಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಡಿನ ಭವಿಷ್ಯವನ್ನು ಸುಭದ್ರಗೊಳಿಸಿದೆ. ಮಕ್ಕಳು ಭಯಮುಕ್ತ ವಾತಾವರಣದಲ್ಲಿ ಬೆಳೆಯಲು ಮತ್ತು ತಲ್ಲಣಗಳಿಗೆ ಒಳಗಾಗದಂತೆ ಭದ್ರತೆಯನ್ನು ಒದಗಿಸುವತ್ತ ರಾಜ್ಯಸರ್ಕಾರದ ಗುರಿಯಿದ್ದು, ಮಕ್ಕಳ ಹಿತಾಸಕ್ತಿಯನ್ನು ಅವರ ಮನೋದೈಹಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಿದೆ.

ಗರ್ಭಸ್ಥ ಶಿಶುಗಳನ್ನೂ ಒಳಗೊಂಡಂತೆ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಮುಂದಾಗಿದ್ದು, ಮಾತೃಪೂರ್ಣದ ಮೂಲಕ ಗರ್ಭಸ್ಥ ಮಗುವಿಗೆ ಸಲ್ಲಬೇಕಾದ ಪೌಷ್ಠಿಕ ಅಂಶಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆರೋಗ್ಯಪೂರ್ಣ ಶಿಶು ಜನನಕ್ಕೆ ಒತ್ತುಕೊಡಲಾಗಿದೆ. ಅಂಗನವಾಡಿಯಿಂದಲೇ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಈ ಯೋಜನೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಸರ್ಕಾರದ ಈ ಯೋಜನೆಗಳ ಫಲವಾಗಿ ರಾಜ್ಯದ ಒಂದು ಕೋಟಿಗೂ ಹೆಚ್ಚು ಮಕ್ಕಳು ನೆರವನ್ನು ಪಡೆಯುತ್ತಿದ್ದಾರೆ. ಪ್ರತಿಯೊಂದು ಮಗುವಿಗೂ ಸುಲಭ ಹಾಗೂ ಭಾರವಲ್ಲದ ಶಿಕ್ಷಣವನ್ನು ಕೊಡುವ ಸಲುವಾಗಿ  ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳಿಗೆ ಮುಂದಾಗಿದೆ.

  1. ಕ್ಷೀರಭಾಗ್ಯ ಯೋಜನೆಯಡಿ 1.03 ಕೋಟಿ ಶಾಲಾ ಮತ್ತು ಅಂಗನವಾಡಿ ಮಕ್ಕಳಿಗೆ ವಾರದ ಐದು ದಿನವೂ ಬಿಸಿ ಹಾಲು ವಿತರಣೆ.
  2. ಪ್ರತಿದಿನ 60 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ.
  3. ರಾಜ್ಯ ಸರ್ಕಾರ ಪ್ರತಿವರ್ಷ 63 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ.
  4. 47 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ. 10ನೇ ತರಗತಿಯ ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರವನ್ನು ಇದೇ ಮೊದಲಬಾರಿಗೆ ಕೊಡಲಾಗುತ್ತಿದೆ.
  5. ಕನ್ನಡ ಮಾಧ್ಯಮವಿದ್ದೂ, ಇಂಗ್ಲಿಷ್ ಸಂಪರ್ಕಭಾಷೆಯಾದ್ದರಿಂದ ಅದನ್ನು ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿದೆ.
  6. 5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ.
  7. ಶುಚಿ ಕಾರ್ಯಕ್ರಮದಡಿ 72.7 ಲಕ್ಷ ಹದಿಹರೆಯದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‍ಗಳ ಉಚಿತ ವಿತರಣೆ.
  8. ಅಲ್ಪ ಸಂಖ್ಯಾತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯುವ ದಾರಿಯನ್ನು ಸರಳಗೊಳಿಸಿದೆ. ಇಡೀ ಭಾರತದಲ್ಲಿ ಕರ್ನಾಟಕ ಸರ್ಕಾರ ಮಾತ್ರವೇ ಎಲ್ಲ ಅರ್ಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿರುವ ಏಕೈಕ ರಾಜ್ಯವಾಗಿದೆ.

ಕ್ಷೀರಭಾಗ್ಯ, ಬಿಸಿಯೂಟ, ಉಚಿತ ಪುಸ್ತಕ ಮುಂತಾದ ಕಾರ್ಯಕ್ರಮಗಳ ಮೂಲಕ ರಾಜ್ಯ ಸರ್ಕಾರ ಮಕ್ಕಳ ಸಾಧನೆಯ ಉಜ್ವಲ ಹಾದಿಯನ್ನು ತೆರೆದಿದೆ. ಆರೋಗ್ಯಪೂರ್ಣ ಮಕ್ಕಳೇ ದೇಶದ ಬಹುದೊಡ್ಡ ಆಸ್ತಿ ಎನ್ನುವುದನ್ನು ಮನಗಂಡಿರುವ ಕರ್ನಾಟಕ ಸರ್ಕಾರ, ಪ್ರೀತಿಯನ್ನು ಕೊಡುವುದರ ಜೊತೆಗೆ ಅವರ ಅರಿವಿನ ದಿಗಂತವನ್ನು ವಿಸ್ತರಿಸಿ ಸರ್ವಾಂಗೀಣ ಪ್ರಗತಿಯತ್ತ ಅವರನ್ನು ಕೊಂಡೊಯ್ಯುತ್ತಿದೆ. ಎಲ್ಲ ಮಕ್ಕಳಿಗೂ ಸಮಾನ ಮತ್ತು ಮುಕ್ತ ವಾತಾವರಣವನ್ನು ಕಲ್ಪಿಸಿಕೊಟ್ಟು ಸದೃಢ ಸಮಾಜಕ್ಕೆ ಮುನ್ನುಡಿ ಬರೆದಿದೆ.

ಸರ್ವಧರ್ಮ ಸಹಿಷ್ಣು ಟಿಪ್ಪುಸುಲ್ತಾನ್

Tipu-Religion

ಕನ್ನಡ ಧಾರ್ಮಿಕ ಕ್ಷೇತ್ರಕ್ಕೆ ಟಿಪ್ಪುಸುಲ್ತಾನ್‍ನ ಅನನ್ಯವಾದ ಕೊಡುಗೆ ಎಂದರೆ ಮರಾಠರ ಹೊಡೆತದಿಂದ ನಲುಗಿಹೋಗಿದ್ದ ಶೃಂಗೇರಿಯ ಶಾರದಾಪೀಠವನ್ನು ಪುನರುತ್ಥಾನಗೊಳಿಸಿದ್ದು.

ಶೃಂಗೇರಿ ಕರ್ನಾಟಕದ ಶಕ್ತಿಪೀಠಗಳಲ್ಲಿ ಒಂದು. ಜ್ಞಾನಕ್ಕೆ ಅಧಿದೇವತೆಯಾದ ಶಾರದಾಪೀಠವನ್ನು ಜಗದ್ಗುರು ಶಂಕರರು ಸ್ಥಾಪಿಸಿದರು ಎನ್ನುವ ಪ್ರತೀತಿ ಇದೆ. ಅತ್ಯಂತ ಮನಮೋಹಕ ಶಾರದಾದೇವಿಯ ವಿಗ್ರಹವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳುತ್ತಾರೆ. ಈ ಶಾರದಾದೇವಿಯ ವಿಗ್ರಹವನ್ನು ಮಾಡಿಸಿಕೊಟ್ಟಿದ್ದು ಟಿಪ್ಪುಸುಲ್ತಾನ್‍ಎನ್ನುವ ಸತ್ಯ ಗೊತ್ತಿರುವುದು ಮಾತ್ರ ಕಡಿಮೆ ಜನಕ್ಕೆ.

ಸುಮಾರು 1760ರ ಹೊತ್ತಿನಲ್ಲಿ ಮರಾಠರ ಪೇಶ್ವೆ ಬಾಲಾಜಿಬಾಜಿರಾವ್‍ನ ಅಧಿಕಾರಿಯಾಗಿದ್ದ ಪರುಶುರಾಂ ಬಾವು ಕರ್ನಾಟಕದ ಮೇಲೆ ದಾಳಿ ನಡೆಸಿ, ಶೃಂಗೇರಿ ಮತ್ತು ಕೆಳದಿ ಸಂಸ್ಥಾನವನ್ನು ವಶಪಡಿಸಿಕೊಳ್ಳುತ್ತಾನೆ. ಈ ಹೊತ್ತಿನಲ್ಲೇ ಶೃಂಗೇರಿ ಮತ್ತು ಇಕ್ಕೇರಿಯ ಅಘೋರನಾಥ ದೇವಾಲಯಗಳನ್ನು ಹಾಳು ಮಾಡಲಾಯಿತು. ತಾಯಿ ಶಾರದೆಯ ವಿಗ್ರಹವೂ ಸಹ ಭಿನ್ನವಾಯಿತು.

ಕರ್ನಾಟಕದ ಜನರ ಧಾರ್ಮಿಕ ಭಾವನೆಗಳನ್ನು ಆದರಿಸಿದ ಟಿಪ್ಪುಸುಲ್ತಾನ್ ಶೃಂಗೇರಿ ಸಂಸ್ಥಾನಕ್ಕೆ ಗೌರವದಿಂದ ನಡೆದುಕೊಂಡು, ಈಗಿರುವ ಶಾರದೆಯ ವಿಗ್ರಹವನ್ನು ಮಾಡಿಸಿಕೊಟ್ಟು, ತನ್ಮೂಲಕ ಆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾರಣನಾಗಿ, ಸರ್ವಮತದಲ್ಲೂ ಸಮಾನತೆಯನ್ನು ಮೆರೆದನು. ಒಬ್ಬ ಆಡಳಿತಾಧಿಕಾರಿಯಾಗಿ ಪ್ರಜಾನುರಾಗಿಯಾಗಿ ಸರ್ವಜನ ಹಿತರಕ್ಷಕನಾಗಿ ಟಿಪ್ಪುಸುಲ್ತಾನ್ ಕರ್ನಾಟಕ ಇತಿಹಾಸ ಕಂಡ ಅಪೂರ್ವ ನಾಯಕನಾಗಿದ್ದಾನೆ.

ಟಿಪ್ಪು ಮತ್ತು ಸಾಮಾಜಿಕ ನ್ಯಾಯದ ಕಲ್ಪನೆ

Tipu-Equaty

ಬ್ರಿಟೀಷ್ ಇತಿಹಾಸಕಾರ ಜೇಮ್ಸ್ ಮಿಲ್ಲರ್ ಟಿಪ್ಪುಸುಲ್ತಾನ್‍ನ ಆಡಳಿತ ವೈಖರಿಯನ್ನು ಹೀಗೆ ದಾಖಲಿಸಿದ್ದಾನೆ. ಟಿಪ್ಪುಸುಲ್ತಾನ್‍ನಿಗೆ ರೈತರ ಬಗ್ಗೆ ಕೃಷಿಯ, ಪ್ರಾಕೃತಿಕ ಪರಿಸರದ ಬಗ್ಗೆ ಅಪಾರವಾದ ಕಾಳಜಿ ಇತ್ತು. ರೈತರ ಬಳಿ ಹೆಚ್ಚು ಹಣ ಇರುತ್ತಿರಲಿಲ್ಲವಾದ್ದರಿಂದ ರೈತ ತಪ್ಪು ಮಾಡಿದರೆ ಅವನಿಗೆ ಕಡಿಮೆ ದಂಡ ಹಾಕುತ್ತಿದ್ದ ಜೊತೆಗೆ ಊರ ಮುಂದೆ ಎರಡು ನೇರಳೆ ಗಿಡಗಳನ್ನು, ಎರಡು ಮಾವಿನ ಗಿಡಗಳನ್ನೂ ನೆಟ್ಟು, ಅವು ತಾವಾಗೆ ಉಳಿದು ಬರುವ ಶಕ್ತಿಯನ್ನು ಪಡೆದುಕೊಳ್ಳುವವರೆಗೂ ಅವುಗಳನ್ನು ಆ ರೈತನೇ ಪೋಷಿಸಬೇಕಿತ್ತು. ರೈತನಿಗೆ  ಹೊರೆಯಾಗದ ಹಾಗೇ ಟಿಪ್ಪುಸುಲ್ತಾನ್ ಶಿಕ್ಷೆ ವಿಧಿಸುತ್ತಿದ್ದುದು ರೈತರ ಪರವಾದ ಅವನ ಧೋರಣೆಯನ್ನು ಹೇಳುತ್ತದೆ.

ಬಡವರ ಬಗ್ಗೆ ಟಿಪ್ಪು ಎಷ್ಟು ಅಂತಃಕರಣಪೂರಿತನಾಗಿ ನಡೆದುಕೊಳ್ಳುತ್ತಿದ್ದ ಎಂದರೆ ಸಾರ್ವಜನಿಕರಿಗಾಗಿ ಸ್ವಸಹಾಯ ಸಂಘ (ಕೋ-ಆಪರೇಟಿವ್ ಸೊಸೈಟಿ) ವೊಂದನ್ನು ಹುಟ್ಟುಹಾಕಿ, ಅದರಲ್ಲಿ ಸಾರ್ವಜನಿಕರ ಹಣವನ್ನು ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದ್ದ. ಇದರಲ್ಲಿ ಕಡಿಮೆ ಹಣ ಹೂಡಿಕೆ ಮಾಡಿದವರಿಗೆ ಶೇ.50ರಷ್ಟು ಬಡ್ಡಿಯನ್ನು ಕೊಟ್ಟರೆ, ಮಧ್ಯಮ ಗಾತ್ರದ ಹಣ ಹೂಡಿಕೆದಾರರಿಗೆ ಶೇ. 25ರಷ್ಟು ಬಡ್ಡಿಯನ್ನು, ಅತಿ ಹೆಚ್ಚು ಹಣವನ್ನು ಹೂಡಿದವರಿಗೆ ಶೇ.12ರಷ್ಟು ಬಡ್ಡಿಯನ್ನು ನೀಡುತ್ತಿದ್ದ. ಕಡಿಮೆ ಹಣ ಇಡಲು ಸಾಧ್ಯವಾಗುವುದು ಬಡವರಿಗೆ. ಅವರನ್ನು ಸಬಲರನ್ನಾಗಿಸುವ ಉದ್ದೇಶ ಹೊಂದಿದ್ದ ಟಿಪ್ಪುವಿನ ಈ ಸಾಮಾಜಿಕ ನ್ಯಾಯದ ಕಲ್ಪನೆ ಅನನ್ಯವೂ ಅನುಕರಣೀಯವು ಆಗಿದೆ.

ರೇಷ್ಮೆ ಉದ್ಯಮ ಕ್ರಾಂತಿಯ ಹರಿಕಾರ ಟಿಪ್ಪುಸುಲ್ತಾನ್

Tipu-Agri

ಇವತ್ತು ಸಿರಿಕಲ್ಚರ್ ಎಂದು ಕರೆಯಲಾಗುತ್ತಿರುವ ರೇಷ್ಮೆಯನ್ನು ಬೆಳೆಯುವ ಕ್ರಮ ಕರ್ನಾಟಕಕ್ಕೆ ತಂದಿದ್ದು ಟಿಪ್ಪುಸುಲ್ತಾನ್‍ನ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ. ಕರ್ನಾಟಕದ ಸಂಸ್ಕೃತಿ ಎಂದ ತಕ್ಷಣ ಚಿನ್ನದ ಎಳೆಯ ಜೊತೆ ಬೆರೆಸಿ ಪರಂಪರಾಗತವಾಗಿ ನೇಯುತ್ತಾ ಬಂದಿರುವ ರೇಷ್ಮೆ ವಸ್ತ್ರಗಳು ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ರೇಷ್ಮೆಯನ್ನು ಭಾರತೀಯರು ಸಾಂಪ್ರದಾಯಿಕವಾಗಿ ಹಿಂದಿನಿಂದ ಬೆಳೆಯುತ್ತಿದ್ದರೂ ಇವತ್ತಿನ ವೈಜ್ಞಾನಿಕ ಮಾದರಿಯಲ್ಲಿ ಬೆಳೆಯುತ್ತಿರಲಿಲ್ಲ. ಮತ್ತು ಹಾಗೆ ಬೆಳೆಯಲ್ಲಿ ರೇಷ್ಮೆ ಬೆಳೆಗಾರರು ಅಪಾರ ನಷ್ಟವನ್ನು ಸಂಭವಿಸುತ್ತಿದ್ದು, ಪದೇ ಪದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದರು ಮತ್ತು ಈ ಸಂಗತಿಗಳು ಅದನ್ನೊಂದು ಉದ್ಯಮವನ್ನಾಗಿ ಮಾಡಲಿಕ್ಕೆ ಇದ್ದ ದೊಡ್ಡ ಅಡಚಣೆಯಿತ್ತು. ಟಿಪ್ಪುವಿನ ದೂರದರ್ಶಿತ್ವ ಇಂದು ರೇಷ್ಮೆಯನ್ನು ಕರ್ನಾಟಕದ ಬಹುದೊಡ್ದ ಉದ್ಯಮವನ್ನಾಗಿ ರೂಪಿಸಲು ಸಾಧ್ಯವಾಗಿದೆ.

ಕಲೆ, ಸಂಸ್ಕೃತಿ ಹಾಗೂ ಉದ್ಯಮಶೀಲತೆಯಲ್ಲಿ ಟಿಪ್ಪುವಿನ ಕಾಲ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಕಲಾನುರಾಗಿಯೂ, ಜನಾನುರಾಗಿಯೂ ಆಗಿದ್ದ ಟಿಪ್ಪುವಿಗೆ ಸ್ವತಃ ರೇಷ್ಮೆ ಬೆಳೆ ಮತ್ತು ಅದರ ಉತ್ಪನ್ನಗಳಲ್ಲಿ ಅಪಾರವಾದ ಆಸಕ್ತಿ ಇತ್ತು. ರೇಷ್ಮೆಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಆತ ಎಲ್ಲ ಮಾಹಿತಿಗಳನ್ನು ಕಲೆ ಹಾಕಿದ್ದ. ಚೀನಾದಲ್ಲಿ ರೇಷ್ಮೆ ಬೆಳೆಯಲ್ಲಿ ಹೆಚ್ಚು ಫಸಲನ್ನು ತೆಗೆಯುವ ಕ್ರಮ ಇದೆ ಎನ್ನುವ ಸಂಗತಿ ಗೊತ್ತು ಮಾಡಿಕೊಂಡ ಟಿಪ್ಪು ಚೀನಾದಿಂದ ಹಿಪ್ಪುನೇರಳೆ ಬೀಜವನ್ನು ತರಿಸಿದ. ಜೊತೆಗೆ ರೇಷ್ಮೆ ಮೊಟ್ಟೆಗಳನ್ನು ಚಂದ್ರಿಕೆಯಲ್ಲಿಟ್ಟು ಬೆಳೆಯುವ ತಾಂತ್ರಿಕತೆಯನ್ನು ಕರ್ನಾಟಕಕ್ಕೆ ತಂದ.

ಮೈಸೂರು ಪ್ರಾಂತ್ಯಕ್ಕೆ ಹತ್ತಿರವಿದ್ದ ಚೆನ್ನಪಟ್ಟಣದ ಸುತ್ತ ಮುತ್ತಲ ರೈತರಿಗೆ ಇದರ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸುವ ಸಲುವಾಗಿ ವಿಶೇಷ ತರಬೇತಿಯನ್ನು ನೀಡಿದ. ಅಲ್ಲದೆ ಪ್ರಾಯೋಗಿಕವಾಗಿ ಗುಣಮಟ್ಟ ಮೊಟ್ಟೆಗಳನ್ನು ಅವರಿಗೆ ಕೊಟ್ಟು ರೇಷ್ಮೆಗೂಡನ್ನು ಬೆಳೆಸುವ ಎಲ್ಲ ಅವಕಾಶವನ್ನೂ ಮಾಡಿಕೊಟ್ಟ. ಫಲಿತಾಂಶ ನೋಡಿಕೊಂಡು ಬೆಳೆದ ಬೆಳೆಗೆ ಮಾರುಕಟ್ಟೆಯನ್ನೂ ಒದಗಿಸಿಕೊಟ್ಟ. ಪರಿಣಾಮವಾಗಿ ಚೆನ್ನಪಟ್ಟಣ ರೇಷ್ಮೆಯ ನಾಡಾಗಿ ಪರಿವರ್ತನೆಗೊಂಡು, ನಾಡಿನ ರೇಷ್ಮೆ ಉದ್ಯಮದಲ್ಲಿ ಬಹುದೊಡ್ಡ ಕ್ರ್ರಾಂತಿಯೊಂದು ಸಂಭವಿಸಿತು.

ಇಂದು ರೇಷ್ಮೆ ಉದ್ಯಮದಲ್ಲಿ ಕರ್ನಾಟಕ ನೆರೆಯ ಆಂಧ್ರ ಮತ್ತು ತಮಿಳುನಾಡುಗಳು ಅಪಾರವಾದ ಪ್ರಗತಿಯನ್ನು ಸಾಧಿಸಿವೆ. ದೇಶದ ಬಹುದೊಡ್ಡ ಉದ್ಯಮ ಎನ್ನುವ ಕೀರ್ತಿ ಪಡೆದಿರುವ ರೇಷ್ಮೆ ಉದ್ಯಮದ ಕ್ರಾಂತಿಯ ಹರಿಕಾರ ನಮ್ಮ ಮೈಸೂರಿನ ಸುಲ್ತಾನ ಟಿಪ್ಪುಸುಲ್ತಾನ್ ಎನ್ನುವುದು ಕನ್ನಡಿಗರ ಹೆಮ್ಮೆಯಲ್ಲವೆ?

ಬೆಟ್ಟ ಅಗೆದು ಇಲಿಯನ್ನೂ ಹಿಡಿಯದ ಮೋದಿಯ ನೋಟು ಅಮಾನ್ಯೀಕರಣ ನೀತಿ

LK-4

ದೇಶವ್ಯಾಪೀ ಚಾಲ್ತಿಯಲ್ಲಿದ್ದ ರೂ. 1000 ಮತ್ತು ರೂ. 500ಗಳನ್ನು ಅಮಾನ್ಯ ಎಂದು ಘೋಷಿಸಿ ಇವತ್ತಿಗೆ ಸರಿಯಾಗಿ ಒಂದು ವರ್ಷ ಕಳೆದಿದೆ. ಕಪ್ಪುಹಣ, ನಕಲಿ ನೋಟುಗಳು ಮತ್ತು ಭಯೋತ್ಪಾದನೆಗೆ ಬಳಕೆಯಾಗುತ್ತಿದ್ದ ಹಣದ ವಿರುದ್ಧ ಸಾರಿದ ಸಮರವಿದು ಎಂದು ಕೇಂದ್ರ ಸರಕಾರ ಬಿಂಬಿಸಿತ್ತು. ನೋಟು ಅಮಾನ್ಯಗೊಳಿಸುವ ಪ್ರಕ್ರಿಯೆಯಲ್ಲಿ ಭಾರತದ ಉಜ್ವಲ ಭವಿಷ್ಯ ಅಡಗಿದೆ ಎಂದೂ, ಚಲಾವಣೆ ಇಲ್ಲದ ಕಪ್ಪುಹಣ ಮುಖ್ಯವಾಹಿನಿಗೆ ಬಂದು ಸೇರುವುದರಿಂದ ದೇಶದ ಆರ್ಥಿಕ ಸ್ಥಿತಿಗತಿಗಳು ಅಪೂರ್ವವಾಗಿ ಉಜ್ವಲಗೊಳ್ಳಲಿದೆ ಎಂದು ಅಂದು ಪ್ರಧಾನ ಮಂತ್ರಿಗಳು ಸಾರಿದ್ದರು.

ಇದೆಲ್ಲಾ ಆಗಿ ಒಂದು ವರ್ಷ ಕಳೆದಿದೆ. ನಿರೀಕ್ಷಿತ ಮಟ್ಟದ ಯಾವುದೇ ಪ್ರಗತಿಯೂ ಆರ್ಥಿಕ ಕ್ಷೇತ್ರದಲ್ಲಿ ಆಗದೇ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬದಲಿಗೆ ದೇಶದಲ್ಲಿ ಆರ್ಥಿಕ ಸ್ಥಿತಿ ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ. ಇದು ಬಹುಕಾಲ ಭಾರತವನ್ನು ಕಾಡಲಿರುವುದು ಖಚಿತವಾಗಿದೆ ಎಂದು ಮಾಜಿ ಪ್ರಧಾನಿ ಮತ್ತು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಭವಿಷ್ಯ ನುಡಿದಿದ್ದಾರೆ. ನೋಟು ಅಮಾನ್ಯೀಕರಣವಾದ ಸಂದರ್ಭದಲ್ಲಿ ಎಟಿಎಂಗಳ ಮುಂದೆ ಗುಂಪುಗಳಲ್ಲಿ ನಡೆದ ಘರ್ಷಣೆಯಲ್ಲಿ ಜೀವ ಹಾನಿಯಾಗಿದ್ದನ್ನು ಜನ `ಸಾವು ನೋವಿಲ್ಲದೆ ಕ್ರಾಂತಿ ಆಗಲಾರದು ಇದು ಕ್ರಾಂತಿಗೆ ಮುನ್ನುಡಿ’ ಎಂದೆ ಸ್ವೀಕರಿಸಿದರು. ಆದರೆ ಒಂದು ವರ್ಷದ ಈ ಹರಹಿನಲ್ಲಿ ಜನರ ನಿರೀಕ್ಷೆ ಹುಸಿಯಾಗಿದೆ. ಬೆಟ್ಟ ಅಗೆದು ಇಲಿಯನ್ನೂ ಹಿಡಿಯಲಿಲ್ಲ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ. ಯಾವ ಕಪ್ಪುಹಣವನ್ನು ಆರ್ಥಿಕ ಮುಖ್ಯವಾಹಿನಿಗೆ ತರುತ್ತೇವೆ ಎಂದು ನೋಟು ಅಮಾನ್ಯೀಕರಣಕ್ಕೆ ಮುಂದಾಗಿತ್ತೋ ಆ ಸರಕಾರವೇ ಇವತ್ತು ಜನರ ಪ್ರಶ್ನೆಗಳಿಗೆ ಉತ್ತರ ಹೇಳಲಿಕ್ಕಾಗದೆ ಒದ್ದಾಡುತ್ತಿದೆ.

ಅಮಾನ್ಯಗೊಳಿಸಿದ ನೋಟುಗಳ ಒಟ್ಟುಮೊತ್ತ 15,44ಲಕ್ಷ ಕೋಟಿಗಳಾಗಿದ್ದು ಇದು ದೇಶದಲ್ಲಿ ಜಾರಿಯಲ್ಲಿದ್ದ ಒಟ್ಟು ನೋಟುಗಳ ಶೇ. 86.4 ನಷ್ಟಿತ್ತು. ಸರಕಾರದ ಈ ನಿರ್ಧಾರದಿಂದ ಶೇ. 98ರಷ್ಟು ಬಿಳಿಹಣವಾಗಿ ಪರಿವರ್ತಿತವಾಗಿ ವ್ಯವಸ್ಥೆಯ ಒಳಗೆ ಸೇರಿಹೋಯ್ತು. ರೂ. 2000 ಮೌಲ್ಯದ ನೋಟು ಬಂದ ಹತ್ತೇ ದಿನಗಳಲ್ಲಿ ನಕಲಿ ನೋಟುಗಳು ಚಲಾವಣೆಗೆ ಬಂದವು. ಇವುಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಯಾವುದೇ ಕ್ರಮವನ್ನು ಪೂರ್ವಯೋಜಿತವಾಗಿ ಹಾಕಿಕೊಳ್ಳದ ಕಾರಣ ಇವುಗಳನ್ನು ತಡೆಗಟ್ಟಲು ವಿಫಲವಾಯಿತು.

ಸ್ವಪಕ್ಷಗಳು ಮತ್ತು ಮಿತ್ರಪಕ್ಷಗಳಿಗೆ ಮೊದಲೇ ಈ ನೋಟು ಅಮಾನ್ಯೀಕರಣದ ಬಗ್ಗೆ ಗೊತ್ತಿದ್ದರಿಂದ ತಮ್ಮಲ್ಲಿದ್ದ ಕಪ್ಪುಹಣವನ್ನು ಭೂಮಿ, ಚಿನ್ನ ಮೊದಲಾದ ವಸ್ತುಗಳ ಮೇಲೆ ಹಾಕುವುದರ ಮೂಲಕ ರಕ್ಷಿಸಿಕೊಳ್ಳಲಾಗಿದೆ ಎಂಬ ಆರೋಪಗಳು ಇನ್ನು ಕೇಳಿಬರುತ್ತಲೇ ಇವೆ. ಕೊಟ್ಟ ಸಮಯದಲ್ಲಿ ನೋಟುಗಳನ್ನು ಬದಲಿಸಿಕೊಳ್ಳಲು ಆಗದೆ ಜನಸಾಮಾನ್ಯರು ಪರದಾಡುತ್ತಿದ್ದರೆ. ನೋಟು ಬದಲಿಸುವ ಪ್ರಕ್ರಿಯೆಗೂ ಮೊದಲೇ ಸ್ವ ಪಕ್ಷದ ಕೆಲವರ ಹತ್ತಿರ ರೂ. 2000 ದ ನೋಟುಗಳಿದ್ದ ವರದಿಗಳು ವೈರಲ್ ಆಗಿದೆ. ಇದಕ್ಕಿಂತ ವ್ಯಂಗ್ಯ ಇನ್ನೊಂದು ಇರಲಿಕ್ಕೆ ಸಾಧ್ಯವೇ?

ಇನ್ನು ಹಣ ಬದಲಾಯಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಇದಕ್ಕಾಗೇ ದೇಶಾದ್ಯಂತ ಮಧ್ಯವರ್ತಿಗಳು ಹುಟ್ಟಿಕೊಂಡರು. ಅಲ್ಲೂ ಕಮೀಷನ್ ದಂಧೆ ಶುರುವಾಯಿತು. ಮನೆಯಲ್ಲಿದ್ದ ತೆಕ್ಕೆಗಟ್ಟಲೆ ಕಪ್ಪುಹಣವನ್ನು ಹೇಗೆ ಬದಲಿಸಿಕೊಳ್ಳಬೇಕು ಎನ್ನುವ ರಂಗೋಲೆಯ ಕೆಳಗೆ ತೂರುವ ಎಲ್ಲ ಪ್ರತಿತಂತ್ರಗಳೂ ಹುಟ್ಟಿಕೊಂಡವು. ಜನಸಾಮಾನ್ಯರನ್ನು, ಕೂಲಿಕಾರ್ಮಿಕರನ್ನು, ಗೃಹಿಣಿಯರನ್ನು, ಮುದುಕರನ್ನು ಬಳಸಿಕೊಂಡು ಬ್ಯಾಂಕುಗಳಲ್ಲಿ ಹಣ ಬದಲಿಸುವ ಪ್ರಕ್ರಿಯೆ ನಡೆಯಿತು. ಎಲ್ಲ ಅಲ್ಲದಿದ್ದರೂ ಕೆಲ ಬ್ಯಾಂಕ್ ಸಿಬ್ಬಂದಿಯೂ ಇವರ ಜೊತೆ ಕೈಜೋಡಿಸಿದವು. ಇನ್ನೊಂದು ಕಾಳದಂಧೆಗೆ ಸರಕಾರವೇ ರಹದಾರಿಯನ್ನು ತೆರೆದುಕೊಟ್ಟಿದ್ದು ಇತಿಹಾಸದಲ್ಲಿ ದಾಖಲಾಗೆ ಬಿಟ್ಟಿತು. ದೇಶಾದ್ಯಂತ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿ ಏರ್ಪಟ್ಟು ದೇಶ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.

ಈ ಸಂದರ್ಭದಲ್ಲಿ ಆದ ಸಾವು ನೋವುಗಳಿಗೆ ಪ್ರಧಾನಿ ಒಂದು ವಿಷಾದವನ್ನು ಕೂಡ ವ್ಯಕ್ತಪಡಿಸಲಿಲ್ಲ. ಜೊತೆಗೆ ಅಂಥ ಕುಟುಂಬಗಳಿಗೆ ನಯಾಪೈಸೆ ಪರಿಹಾರ ಕೊಡಲಿಲ್ಲ. ಸತ್ತವರ ಮನೆಯಲ್ಲಿ ಮಾತ್ರ ಸೂತಕದ ಛಾಯೆ ಉಳಿದೇ ಇದೆ. ಒಟ್ಟಾರೆಯಾಗಿ ಇದರಿಂದ ಕಷ್ಟ ಎದುರಿಸಿದವರು ಯಾವ ಬಿಲ್ಡರ್ರೋ, ರಾಜಕಾರಣಿಯೋ, ಉದ್ಯಮಿಯೋ, ರಿಯಲ್ ಎಸ್ಟೇಟ್ ಏಜೆಂಟನೋ, ನಟನೋ, ಕಾರ್ಪರೇಟ್ ಸಂಸ್ಥೆಯೋ ಅಲ್ಲ. ಬದಲಿಗೆ ಕೂಲಿ ಮಾಡುವವರು, ಗಾರೆ ಕೆಲಸಕ್ಕೆ ಹೋಗುವವರು, ಗಾರ್ಮೆಂಟ್‍ಗಳಲ್ಲಿ ದುಡಿಯುವವರು ಮತ್ತು ದಿನಗೂಲಿ ಕಾರ್ಮಿಕರಂಥ ಸಮಾಜದ ಅಂಚಿನಲ್ಲಿ ಬದುಕುತ್ತಿರುವ ಪಾಪದ ಜೀವಿಗಳು ಮಾತ್ರ! ಅಂದು ಇವರೆಲ್ಲಾ ಒಂದು ಹೊತ್ತಿನ ಊಟಕ್ಕೂ ಹಣವಿಲ್ಲದಂತಾಗಿ ಪರದಾಡಿದ್ದರು. ಆಸ್ಪತ್ರೆಗಳಲ್ಲಿ ಹಣ ಕೊಡಲಿಕ್ಕಾಗದೆ ಬಳಲಿದ್ದರು, ಬಸ್‍ಗಳಲ್ಲಿ ಓಡಾಡಲಿಕ್ಕಾಗದೆ ಕೆಲಸಕ್ಕೆ ನಡೆದು ಹೋಗಿದ್ದರು.

ಇಷ್ಟೆಲ್ಲಾ ಸಹಿಸಿಕೊಂಡÀ ಸಾಮಾನ್ಯ ನಾಗರೀಕನ ಆಸೆ ಇವತ್ತಲ್ಲಾ ನಾಳೆ ಕಾಳಸಂತೆಯ ಈ ಜನಕ್ಕೆ ಸರಿಯಾದ ಶಿಕ್ಷೆ ಆಗುತ್ತದೆ ಎಂದು. ಅದಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಬಂದರು. ಅತಿ ಹೆಚ್ಚು ಹಣ ಹೊಂದಿದವರನ್ನು ಸರಕಾರ ಶಿಕ್ಷೆಗೆ ಒಳಗು ಮಾಡುತ್ತದೆ, ತಪ್ಪು ಮಾಡುವ ಜನ ಇವತ್ತಲ್ಲ ನಾಳೆ ಪಾಠ ಕಲಿಯುತ್ತಾರೆ ಎಂದು ಕಾದರು. ಆದರೆ ಕೇಂದ್ರ ಸರಕಾರ ನೋಟು ಅಮಾನ್ಯೀಕರಣದ ಕಾಗೆಯನ್ನು ಹಾರಿಸಿ, ಅದು ಹಾರಿದ ದೂರವನ್ನು ಅಳೆಯುತ್ತಾ ಕುಳಿತುಬಿಟ್ಟಿದೆ.

ಕೇಂದ್ರ ಸರಕಾರದ ತುಘಲಕ್ ನೀತಿಯಿಂದಾಗಿ ದೇಶ ಅಪಾಯಕಾರಿ ಸನ್ನಿವೇಶದಲ್ಲಿದ್ದು ಆರ್ಥಿಕ ಕುಸಿತ ಕಂಡು ಬಂದಿದೆ. ಈಗ ಕೇಂದ್ರ ಸರಕಾರ ಹೇಳುತ್ತಿದೆ, ‘ಹೌದು ಈಗ ಇದೆಲ್ಲಾ ಆಗಿದೆ. ಆದರೆ ನಾಳೆ ಎಲ್ಲ ಸರಿಯಾಗುತ್ತದೆ. ಸುಸ್ಥಿರ ಭಾರತ ನಮ್ಮ ಗುರಿ’ ಎಂದು.

ಆದರೆ ಉತ್ಪಾದನಾ ವಲಯದಲ್ಲಿ ಹಣದ ಚಲಾವಣೆ ಸಮರ್ಪಕವಿಲ್ಲದ ಕಾರಣ ಉದ್ಯಮಗಳು ಬಳಲುತ್ತಿವೆ, ಯುವಕರಿಗೆ ಉದ್ಯೋಗವಕಾಶಗಳು ಗಣನೀಯವಾಗಿ ಕಡಿಮೆಯಾಗಿವೆ. ಒಟ್ಟಾರೆಯಾಗಿ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಭಾರೀ ಹೊಡೆತ ಬಿದ್ದಿದ್ದು, ಭಾರತದ ಅರ್ಥವ್ಯವಸ್ಥೆಯ ಇವತ್ತಿನ ಬಹುದೊಡ್ಡ ವೈಫಲ್ಯವಾಗಿದೆ.

ಖಾಸಗಿ ಆಸ್ಪತ್ರೆಗಳ ವಸೂಲಿ ದಂಧೆ

LK_PHB

ಬೆಂಗಳೂರಿನ ನಿವಾಸಿಯಾದ ಪುಷ್ಪ ಎನ್ನುವ ನಾನು ಹೊಟ್ಟೆನೋವು ಮತ್ತು ವಾಕರಿಕೆಗಳಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆ ಹೋಗಿದ್ದೆ. ನನ್ನನ್ನು ಪರೀಕ್ಷಿಸಿದ ಡಾಕ್ಟರ್ ಅಲ್ಸರ್ ಆಗಿದೆ ಎಂದು ಎಂಡೋಸ್ಕೋಪಿ ಮತ್ತಿತರ ಪರೀಕ್ಷೆಗೆ ಬರೆದುಕೊಟ್ಟರು, ಮತ್ತು ಇಂಥದ್ದೇ ಲ್ಯಾಬ್‍ನಲ್ಲಿ ಈ ಪರೀಕ್ಷೆಗಳನ್ನು ಮಾಡಿಸಬೇಕು, ಅಲ್ಲಿ ಮಾತ್ರ ಬೆಸ್ಟ್ ರಿಸಲ್ಟ್ ಇದೆ ಎಂದು ಹೇಳಿದರು. ಆ ಲ್ಯಾಬ್‍ನಲ್ಲಿ ಬೇರೆ ಕಡೆಯದಕ್ಕಿಂತ ಹೆಚ್ಚು ಬೆಲೆ. ಏನು ಮಾಡುವುದು ಒಂದಕ್ಕೆ ಎರಡು ಬೆಲೆ ತೆತ್ತು ಅವರು ಹೇಳಿದ ಕಡೆ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆ.

ಅದೆಲ್ಲವನ್ನೂ ಪರೀಕ್ಷಿಸಿದ ನಂತರ ಒಂದಿಷ್ಟು ಮಾತ್ರೆಗಳನ್ನು ಬರೆದುಕೊಟ್ಟರು. ಒಬ್ಬ ವ್ಯಕ್ತಿಗೆ ಸಂದರ್ಶನದ ವೇಳೆ ಹತ್ತು ನಿಮಿಷಗಳಾಗಿತ್ತು. ಮತ್ತು ವಾರದಲ್ಲಿ ಮೂರು ವಾರಗಳು ಮಾತ್ರ ಅವರು ಅಲ್ಲಿಗೆ ಸಂದರ್ಶನಕ್ಕಾಗಿ ಬರುತ್ತಿದ್ದರು ಇವೆಲ್ಲವನ್ನೂ ಹೇಳುವ ಹೊತ್ತಿಗೆ ನನ್ನ ಸಮಯ ಮುಗಿಯುತ್ತಾ ಬಂದಿದ್ದರಿಂದ ಮತ್ತೇನಾದರೂ ಸಮಸ್ಯೆ ಆದರೆ ಕ್ಲಿನಿಕ್‍ಗೆ ಬನ್ನಿ. ಇಲ್ಲಿ ಇದಕ್ಕಿಂತ ಕೂಲಂಕುಶವಾಗಿ ನೋಡಲು ಸಾಧ್ಯವಿಲ್ಲ ಎಂದರು.

ಮತ್ತೊಮ್ಮೆ ಹೊಟ್ಟೆನೋವು ಬಂದಾಗ ಡಾಕ್ಟರ್‍ಗೆ ಫೋನ್ ಮಾಡಿದೆ ಅವರು ಅವರದ್ದೇ ಕ್ಲಿನಿಕ್‍ನಲ್ಲಿದ್ದರು. ಹೊಟ್ಟೆ ನೋವು ಮತ್ತು ಉಸಿರಾಟದ ತೊಂದರೆ ಇದ್ದ ಕಾರಣ ತಕ್ಷಣ ಹೊರಟು ಬನ್ನಿ ಎಂದರು. ನಾನು ಅವರ ಕ್ಲಿನಿಕ್‍ಗೆ ಹೋದೆ. ಕೂಲಂಕುಶವಾಗಿ ಮಾತನಾಡಿದರು. ಅವರ ಕ್ಲಿನಿಕ್‍ನಲ್ಲಿ ಸಂದರ್ಶನದ ಸಮಯ 20 ನಿಮಿಷಗಳು.

ಕನ್ಸಲ್ಟೆನ್ಸಿ ಫೀ ಕಟ್ಟಲಿಕ್ಕೆ ಹೋದಾಗ ನನಗೆ ಆಘಾತ ಕಾದಿತ್ತು. ಮೊದಲು ನೋಡಿದ ಆಸ್ಪತ್ರೆಯಲ್ಲಿ 300 ರೂ. ಇದ್ದದ್ದು ಇಲ್ಲಿ 650 ರೂ.ಗಳಾಗಿತ್ತು. ಇದ್ಯಾಕೆ ಹೀಗೆ ಎಂದು ಕೇಳಿದರೆ ಹೇಳಲಿಕ್ಕೆ ಯಾರೂ ಇಲ್ಲ.

`ನಾನು ಇಷ್ಟು ಓದಿದ್ದೇನೆ, ನಿಮ್ಮ ಯಾವುದೇ ಸಣ್ಣ, ದೊಡ್ದ ಸಮಸ್ಯೆಗೂ ನನ್ನ ಫೀಸ್ ಇಷ್ಟು. ನಿಮಗಾಗಿ ನಾನು ಇಷ್ಟು ಸಮಯ ಕೊಡಬಲ್ಲೆ, ನನ್ನ ಫೀಸ್ ಇಷ್ಟು ಎಂಥ ವಿಚಿತ್ರ! ಎಲ್ಲಿ ಕರುಣೆ ಸ್ನೇಹ ಇರಬೇಕಿತ್ತೋ, ತನ್ನ ಸಹಾಯ ಹಸ್ತವನ್ನು ಚಾಚಿ ರೋಗಿಗಳನ್ನು ಆದರಿಸಬೇಕಿತ್ತೋ ಅಲ್ಲೆಲ್ಲಾ ಹಣದ ವಸೂಲಿ ದಂಧೆ ನಡೆಯುತ್ತಿದೆ. ಸರಕಾರ ತರಲು ಯೋಜಿಸಿರುವ ಖಾಸಗಿ ನಿಯಂತ್ರಣ ಕಾಯಿದೆಯಿಂದ ಈ ಎಲ್ಲಾ ಸಂಗತಿಗಳಿಗೂ ಪಾರದರ್ಶಕತೆ ಸಿಗುತ್ತದೆ ಎಂದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ.

ಮಾನವೀಯತೆ ಮರೆತ ಖಾಸಗಿ ಆಸ್ಪತ್ರೆಗಳು

LK_PH

ಮೂರು ವರ್ಷಗಳ ಹಿಂದೆ ನಡೆದ ಘಟನೆಯಿದು. ಅದು ರಾತ್ರಿ ಹನ್ನೊಂದುವರೆ ಸಮಯವಿದ್ದಿರಬೇಕು, ಅನಾರೋಗ್ಯಕ್ಕೆ ತುತ್ತಾಗಿದ್ದ ನನ್ನ ಮಗನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಅವನನ್ನು ಪರೀಕ್ಷಿಸಿದ ವೈದ್ಯರು, “ಈಗಲೇ ಏನೂ ಹೇಳುವ ಹಾಗಿಲ್ಲ. ಮಗುವಿನ ಪರಿಸ್ಥಿತಿ ನೋಡಿದರೆ ಪಾರ್ಶುಯಲ್ ಪೆರಾಲಿಸ್ ಕೂಡಾ ಆಗಿರಬಹುದು. ಅದಕ್ಕಾಗಿ ತೀವ್ರ ನಿಗಾ ಘಟಕದಲ್ಲಿ ಇಡಬೇಕಗುತ್ತದೆ. ಮತ್ತು 24 ಗಂಟೆಗಳ ಕಾಲ ದೇಹಸ್ಥಿತಿಯನ್ನು ಗಮನಿಸುತ್ತಲೇ ಇರಬೇಕು. ನಿಧಾನವಾಗಿ ಎಲ್ಲಾ ಅಂಗಗಳೂ ನಿಷ್ಕ್ರಿಯವಾಗುತ್ತಾ ಬರಬಹುದು. ಇಷ್ಟರ ಮೇಲೆ ನಿಮ್ಮಿಷ್ಟ ಮುಂದಿನದಕ್ಕೆ ನಾವು ಜವಾಬ್ದಾರರಲ್ಲ” ಎಂದರು. ದಿಕ್ಕುತೋಚದೆ ನಾವು ಅವರ ಮಾತುಗಳನ್ನು ಕೇಳಿಸಿಕೊಂಡೆವು ಮತ್ತು ಹಾಗೆಂದರೆ ಏನೆಂದು ವಿವರಿಸುವಂತೆ ಹೇಳಿದೆವು. ಇಂಗ್ಲಿಷ್ ಬೆರೆತ ಅರ್ಥವಾಗದ ವೈದ್ಯಕೀಯ ಪರಿಭಾಷೆಯಲ್ಲಿ ವಿವರಿಸಿದ ಅವರು, ನಮಗೆ ತುಂಬಿದ್ದು ಭರವಸೆಯನ್ನಲ್ಲ ಬದಲಿಗೆ ಭಯವನ್ನು. ಆಸ್ಪತ್ರೆಗೆ ಮುಂಗಡವಾಗಿ ಹಣವನ್ನು ತುಂಬಬೇಕು ಇಲ್ಲದಿದ್ದರೆ ಅಡ್ಮಿಟ್ ಮಾಡಿಕೊಳ್ಳುವುದಿಲ್ಲ ಕಡ್ಡಿಮುರದಂಗೆ ಹೇಳಿದರು. ಆಗ ನನ್ನ ಪರಿಚಯದವರ ಕಡೆಯಿಂದ  ಹಣವನ್ನು ತರಿಸಿಕೊಂಡು ನಲವತ್ತು ಸಾವಿರ ರೂ.ಗಳನ್ನು ತುಂಬಿದೆ. ಈಗಾಗಲೇ ವಾರದ ಹಿಂದೆ ಇನ್ನೊಂದು ಆಸ್ಪತ್ರೆಯವರು ಇದೆಲ್ಲಾ ಮಾಡಿಸಿದ್ದಾರೆ ಎಂದರೂ ಕೇಳದೆ ಮತ್ತೆ ಪೂರ್ತಿ ದೇಹದ ಸಿಟಿ ಸ್ಕ್ಯಾನ್, ಎಂ ಆರ್ ಐ, ಎಕ್ಸರೆ, ರಕ್ತ, ಮೂತ್ರಪರೀಕ್ಷೆ ಎಲ್ಲವನ್ನು ಐಸಿಯುಗೆ ಹೋಗುವ ಮೊದಲೆ ಮಾಡಿದರು. ಹಾಗಾದರೆ ಇನ್ನೊಂದು ಆಸ್ಪತ್ರೆಯ ಪರೀಕ್ಷಾ ಪರಿಕರಗಳು ಸರಿಯಿಲ್ಲವೆಂದು ಅರ್ಥವೇ? ಅಂಥ ಪರಿಕರಗಳನ್ನು ಯಾಕೆ ಬಳಸುತ್ತಾರೆ? ಇದನ್ನೆಲ್ಲಾ ಕೇಳುವವರು ಯಾರು?

ನಂತರ ರಾತ್ರಿಯೆಲ್ಲಾ ಮಗನನ್ನು ನೋಡಲೂ ಬಿಡಲಿಲ್ಲ ಮತ್ತು ಅವನಿಗೆ ಏನಾಗಿದೆ ಎಂದೂ ಹೇಳಲಿಲ್ಲ. ಐಸಿಯುನ ಎದುರು ಹಾಕಿದ್ದ ಛೇರಿನಲ್ಲಿ ಎಚ್ಚರವಾಗಿದ್ದು ಈಗ ಹೇಳುತ್ತಾರೆ, ಆಗ ಹೇಳುತ್ತಾರೆ ಎಂದು ಕಾದಿದ್ದೇ ಆಯಿತು. ಹೊರಬರುವ ನರ್ಸ್ ಮತ್ತು ಡಾಕ್ಟರ್‍ಗಳನ್ನು ರಿಪೋರ್ಟ್ ಏನಾಯಿತು ಎಂದು ಕೇಳುತ್ತಿದ್ದೆ. ಅದಕ್ಕವರು ಡಾಕ್ಟರ್‍ಗೆ ಕಳಿಸಿದ್ದೇವೆ ಅವರು ಅದನ್ನು ನೋಡಿ ಹೇಳುತ್ತಾರೆ, ಅಲ್ಲಿಯವರೆಗೂ ಕಾಯಬೇಕು ಎನ್ನುತ್ತಿದ್ದರು. ಹಾಗಾದರೆ ತುರ್ತು ಚಿಕಿತ್ಸೆ ಆಗಲೇಬೇಕು ಎಂದು ನಿರ್ಧರಿಸಿ ತಕ್ಷಣ ಆಸ್ಪತ್ರೆಗೆ ಸೇರಿಸಿಕೊಂಡರಲ್ಲ ಅವರು ನೋಡುವುದಿಲ್ಲವೇ? ಎಂದೆ. ಆದು ಅವರ ಡಿಪಾರ್ಟ್‍ಮೆಂಟ್ ಅಲ್ಲ. ಅವರದ್ದು ತುರ್ತು ಚಿಕಿತ್ಸ ಘಟಕ ಮಾತ್ರ ಎಂದರು.  ಮಗುವಿಗೆ ಏನಾಗಿದೆ ಎನ್ನುವುದನ್ನು ನೋಡಿ ಹೇಳಲಿಕ್ಕೂ ಡಾಕ್ಟರ್ ಇಲ್ಲಿಲ್ಲ ಅನ್ನುವುದಾದರೆ ಯಾರು ಚಿಕಿತ್ಸೆ ಕೊಡುತ್ತಾರೆ? ಮತ್ತು ನಿರ್ಧರಿಸುತ್ತಾರೆ? ಈಗ ಏನು ಚಿಕಿತ್ಸೆ ಕೊಡುತ್ತಿದ್ದಾರೆ? ಎಂದೆಲ್ಲಾ ಕೇಳಿದೆ. ಅದಕ್ಕವರು ಅದೆಲ್ಲ ನಮಗೆ ಗೊತ್ತಾಗಲ್ಲ ಬೆಳಗ್ಗೆ ಡಾಕ್ಟರ್ ಬರ್ತಾರೆ ನಮ್ಮದೇನಿದ್ದರೂ ಬಿಪಿ ಮತ್ತು ಪಲ್ಸ್‍ರೇಟನ್ನು ಮಾನೀಟರ್ ಮಾಡುವುದು ಮಾತ್ರ ಎಂದರು. ಅದನ್ನು ಐಸಿಯುನಲ್ಲಿ ಯಾಕೆ ಸಾಮಾನ್ಯ ವಾರ್ಡ್‍ನಲ್ಲೇ ಮಾಡಬಹುದಲ್ಲ ಎಂದು ಕೇಳಿದ್ದಕ್ಕೆ, ಸಾಮಾನ್ಯವಾರ್ಡ್‍ನಲ್ಲಿ ವಿಶೇಷ ತರಬೇತಿ ಪಡೆದ ನರ್ಸ್‍ಗಳು ಇರುವುದಿಲ್ಲ. ಅವರೇನಿದ್ದರೂ ಹೊತ್ತು ಹೊತ್ತಿಗೆ ಮಾತ್ರೆ, ಔಷಧಿ, ಇಂಜೆಕ್ಷನ್ ಮಾತ್ರ ಕೊಡುತ್ತಾರೆ ಎಂದು ಹೇಳಿ ಹೋದವರು ಮತ್ತೆ ಕಾಣಿಸಿಕೊಳ್ಳಲೇ ಇಲ್ಲ.

ಬೆಳಗ್ಗೆ ಸುಮಾರು ಏಳು ಗಂಟೆಯಿರಬಹುದು ಆಸ್ಪತ್ರೆಯ ಬಿಲ್ಲಿಂಗ್ ಸೆಕ್ಷನ್‍ನಿಂದ ಫೋನ್ ಬಂತು. ನಿಮ್ಮ ಬಿಲ್ಲ್ ನೀವು ಮುಂಗಡ ಕಟ್ಟಿದ ಹಣಕ್ಕಿಂತ ಹೆಚ್ಚಾಗಿದೆ, ದಯವಿಟ್ಟು ಬಿಲ್ಲಿಂಗ್ ಸೆಕ್ಷನ್‍ಗೆ ಬನ್ನಿ ಎಂದು ವಿನಂತಿಸಿಕೊಂಡರು. ರಾತ್ರಿ ನಲವತ್ತು ಸಾವಿರ ರೂ.ಗಳನ್ನು ಕಟ್ಟಿ ಎಲ್ಲ ಪರೀಕ್ಷೆಗಳೂ ಮಾಡಿಸಿಯಾಗಿದೆ. ಆ ಪರೀಕ್ಷೆಗಳ ಫಲಿತಾಂಶ ಏನೂಂತ ಇನ್ನು ತಿಳಿದೇ ಇಲ್ಲ, ತಿಳಿಸಿಕೊಡುವವರು ಯಾರೂ ಇಲ್ಲ. ಈಗ ಬಿಲ್ಲಿಂಗ್ ಸೆಕ್ಷನ್‍ನಿಂದ ಹೆಚ್ಚಿನ ಹಣಕ್ಕಾಗಿ ಕರೆ!

ನಾನು ಹೋಗಿ ಏನಾಗಿದೆ ಎಂದು ವಿಚಾರಿಸಿದೆ. ಇನ್ನೂ ನಾನು ಕಟ್ಟಬೇಕಿದ್ದ ಬಾಕಿ ಮೊತ್ತ ಮೂವತ್ತು ಸಾವಿರದ ಚಿಲ್ಲರೆ ಇತ್ತು. ಐಸಿಯುಗೆ ಹೋಗುವ ಮೊದಲೇ ಮಾಡಿದ ಪರೀಕ್ಷೆಗಳಿಗೆ ಅವರು ಐಸಿಯುನಲ್ಲಿ ಮಾಡುವ ಬಿಲ್ಲನ್ನೇ ಮಾಡಿದ್ದರು. ಸಾಮಾನ್ಯ ವಾರ್ಡ್‍ಗಳಲ್ಲಿ ಈ ಪರೀಕ್ಷೆಗಳಿಗೆ ಮೂರನೇ ಒಂದು ಭಾಗವಾದರೆ ಐಸಿಯೂನಲ್ಲಿ ಎರಡುಪಟ್ಟು ಜಾಸ್ತಿ. ನನಗೆ ನಿಜಕ್ಕೂ ಗಾಬರಿಯಾಯಿತು. ಬಿಲ್ಲಿಂಗ್ ಸೆಕ್ಷನಲ್ಲಿ ಇದರ ಬಗ್ಗೆ ವಿಚಾರಿಸಲು ನೋಡಿದೆ. ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಕೈಚೆಲ್ಲಿದರು. ರಿಸೆಪ್ಷನ್‍ನಲ್ಲಿ ಹೋಗಿ ವಿಚಾರಿಸಿದರೆ ಇದು ಆಡಳಿತಾತ್ಮಕ ಸಮಸ್ಯೆ ನೀವು ಆಡಳಿತಾಧಿಕಾರಿಯನ್ನೇ ವಿಚಾರಿಸಿ ಎಂದರು.

ಟಾಕುಟೀಕಾಗಿ ಸೂಟ್ ಧರಿಸಿ ಎಸಿ ಛೇಂಬರ್‍ನಲ್ಲಿ ಕುಳಿತಿದ್ದ ಆಡಳಿತಾಧಿಕಾರಿಯನ್ನು ವಿಚಾರಿಸಿದಾಗ `ಹೌದ ಹಾಗಾಗಿದೆಯಾ?’ ಎಂದು ಕೇಳಿ `ಈಗ ನೀವು ಹಣವನ್ನು ಕಟ್ಟಿ ಬಿಡಿ ಆಮೇಲೆ ಡಿಸ್ಕೌಂಟ್ ಮಾಡೋಣ’ ಎಂದರು; ನಮ್ಮ ಮೇಲೆ ಕರುಣೆ ತೋರುವವರ ಹಾಗೇ. ನನಗೆ ತುಂಬಾ ಕೋಪ ಬಂದು ಅಲ್ಲ ಸರ್ ಐಸಿಯುಗೆ ಹೋಗುವ ಮೊದಲೇ ಮಾಡಿದ ಚಿಕಿತ್ಸೆಗೆ ನೀವು ಐಸಿಯು ಛಾರ್ಜಸ್‍ಅನ್ನು ಹಾಕುವುದು ಸರಿಯಾ? ಎಂದು ಕೇಳಿದೆ. `ಅಡ್ಮೀಷನ್ ಐಸಿಯೂಗೆ ಅಂತ ಮಾಡಿಕೊಂಡ ತಕ್ಷಣ ಎಲ್ಲ ಛಾರ್ಜಸ್ ಐಸಿಯುದೇ ಆಗುತ್ತದೆ ಇದು ನಮ್ಮ ನಿಯಮ’ ಎಂದರು.

ಅಷ್ಟರಲ್ಲಿ ಬಂದ ಐಸಿಯುನ ಡಾಕ್ಟರ್ ಮಗನನ್ನು ನೋಡಿ ಏನೂ ಸಮಸ್ಯೆ ಇಲ್ಲ ಸ್ವಲ್ಪ ವೀಕ್‍ನೆಸ್ ಇದೆ ಎಂದು ಮಲ್ಟಿವಿಟಮಿನ್ ಟಾನಿಕ್ ಬರೆದುಕೊಟ್ಟರು. ಅದರ ಬೆಲೆ ಸುಮಾರು ನಾಲ್ಕು ನೂರು ರೂ.ಗಳು ಮಾತ್ರ. ಸ್ವಲ್ಪ ಸುಸ್ತು ಎಂದು ಆಸ್ಪತ್ರೆಗೆ ಹೋಗಿದ್ದಕ್ಕೆ ಎಪ್ಪತ್ತು ಸಾವಿರದ ಚಿಲ್ಲರೆ ಹಣವನ್ನು ತೆರೆಬೇಕಾಗಿತ್ತು. ನಂತರ ಮತ್ತೆ ಗಲಾಟೆ ಮಾಡಿದ್ದರಿಂದ ಬಿಲ್ಲ್‍ನ ಮೊತ್ತವನ್ನು ನಲವತ್ತು ಸಾವಿರ ರೂ.ಗಳಿಗೆ ಇಳಿಸಲಾಯಿತು ಮತ್ತು ಇದಕ್ಕಿಂತ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುವ ಸೂಚನೆಯನ್ನೂ ಜೊತೆಗೆ ಕೊಡಲಾಯಿತು. ಹಾಗಾದರೆ ನಾನು ಕೇಳದೆ ಇದ್ದಿದ್ದರೆ ಎಪ್ಪತ್ತು ಸಾವಿರವನ್ನೂ ಕೊಡಬೇಕಾಗಿತ್ತಲ್ಲವೇ? ಕೇಳದ, ಕೇಳಲು ಗೊತ್ತಿಲ್ಲದವರು ಅಷ್ಟೂ ಹಣವನ್ನು ಕಟ್ಟಲೇಬೇಕಿತ್ತಲ್ಲವೇ. ಒಂದು ಸಣ್ಣ ಸುಸ್ತಿಗೆ ಇದು ಬೃಹತ್ ಬೆಲೆಯಲ್ಲವೇ? ತಿಂಗಳೆಲ್ಲಾ ದುಡಿದರೂ ವರ್ಷದ ಕೊನೆಗೆ ನಲವತ್ತುಸಾವಿರ ರೂಪಾಯಿಗಳು ಕನಸಿನ ಗಂಟಾಗಿರುವ ಮಧ್ಯಮವರ್ಗಕ್ಕೆ ಇದೆಂಥಾ ಶಿಕ್ಷೆ?!

ನಾವು ಸಣ್ಣವರಿದ್ದಾಗ ಎಂಥಾ ಕಾಯಿಲೆ ಬಂದರೂ ಡಾಕ್ಟರುಗಳು ಈ ಔಷಧಿ ತಗೋ ಸರಿಯಾಗುತ್ತೆ ಏನೂ ಭಯವಿಲ್ಲ ಅಂತ ತುಂಬಾ ಒರಟಾಗಿ ಹೇಳುತ್ತಿದ್ದರು ಅವರ ಭರವಸೆ ತುಂಬುವ ಮಾತುಗಳಿಂದಲೋ, ಹೇಳುವ ಧಾಟಿಯಲ್ಲಿ `ಇದೇನೂ ಅಲ್ಲ’ ಅಂತ ಇರುತ್ತಿದ್ದುದರಿಂದಲೋ ಏನೋ ಕಾಯಿಲೆ ವಾಸಿಯಾಗಿಬಿಡುತ್ತಿತ್ತು.

ಜೀವ ಅಮೂಲ್ಯ ಎಂದು ಹೇಳುತ್ತಾ ನಯವಾಗಿ ನಮ್ಮ ಜೇಬಿಗೆ ಹೀಗೆ ಕತ್ತರಿ ಹಾಕುವ ಇಂಥಾ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಕಾಯಿದೆಯನ್ನು ರಾಜ್ಯ ಸರ್ಕಾರ ಜಾರಿ ಮಾಡಲಿಕ್ಕೆ ಹೊರಟಿದೆ ಎಂದರೆ ನಾನು ಮತ್ತು ನನ್ನಂಥವರು ಇದನ್ನು ಬೆಂಬಲಿಸಲೇ ಬೇಕಲ್ಲವೇ?